‘ಸುವರ್ಣ ಸಂಪುಟ' (ಭಾಗ ೬೨) - ಎಚ್ ಎಸ್ ಬಿಳಿಗಿರಿ

‘ಸುವರ್ಣ ಸಂಪುಟ' (ಭಾಗ ೬೨) - ಎಚ್ ಎಸ್ ಬಿಳಿಗಿರಿ

ಹೆಮ್ಮಿಗೆ ಶ್ರೀನಿವಾಸರಂಗಾಚಾರ್ ಬಿಳಿಗಿರಿ (ಎಚ್ ಎಸ್ ಬಿಳಿಗಿರಿ) ಯವರ ಕವನಗಳನ್ನು ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದು ಕೊಂಡಿದ್ದೇವೆ. ಬಿಳಿಗಿರಿಯವರು ಪ್ರಸಿದ್ಧ ಭಾಷಾ ಶಾಸ್ತ್ರಜ್ಞರೂ, ಸೃಜನಶೀಲ ಲೇಖಕರೂ ಆಗಿದ್ದರು. ಪ್ರಾಚೀನ ಕನ್ನಡ ವ್ಯಾಕರಣ ಹಾಗೂ ಛಂದಸ್ಸುಗಳಲ್ಲಿ ಬಿಳಿಗಿರಿಯವರಿಗೆ ಬಹಳವಾದ ಆಸಕ್ತಿ ಹಾಗೂ ಹಿಡಿತವಿತ್ತು. ಇವರ ಊರು ಮೈಸೂರು ಜಿಲ್ಲೆಯ ಟಿ ನರಸೀಪುರದ ಹೆಮ್ಮಿಗೆ (ಹುಟ್ಟಿದ್ದು ೧೯೨೫). ತಂದೆ ಶ್ರೀನಿವಾಸ ರಂಗಾಚಾರ್ ಹಾಗೂ ತಾಯಿ ಅಂಡಾಳಮ್ಮ. ಇವರ ತಂದೆ ಅರಣ್ಯ ಇಲಾಖೆಯ ಉದ್ಯೋಗಿಯಾಗಿದ್ದರು.  

ತಂದೆಯವರ ಒತ್ತಾಯಕ್ಕೆ ಸುಮಾರು ನಾಲ್ಕು ವರ್ಷಗಳ ಕಾಲ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ ಬಿಳಿಗಿರಿಯವರು ಅದರಲ್ಲಿ ಯಾವುದೇ ಆಸಕ್ತಿ ಹುಟ್ಟದೇ ಇದ್ದಾಗ ಅದನ್ನು ತ್ಯಜಿಸಿ, ಕನ್ನಡ ಸಾಹಿತ್ಯದತ್ತ ಮುಖ ಮಾಡುತ್ತಾರೆ. ೧೯೫೨ರಲ್ಲಿ ಕನ್ನಡದಲ್ಲಿ ಬಿಎ ಹಾಗೂ ೧೯೫೪ರಲ್ಲಿ ಎಂ ಎ ಪದವಿಯನ್ನು ಪಡೆದುಕೊಳ್ಳುತ್ತಾರೆ. 

‘ಖಡಿಯಾ ಭಾಷೆಯ ವರ್ಣನಾತ್ಮಕ ವ್ಯಾಕರಣ' ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಪ್ರಬಂಧ ಮಂಡಿಸುತ್ತಾರೆ. ಈ ಪ್ರಬಂಧಕ್ಕೆ ೧೯೬೧ರಲ್ಲಿ ಪುಣೆಯ ಡೆಕ್ಕನ್ ಕಾಲೇಜು ಪಿ ಹೆಚ್ ಡಿ ಗೌರವವನ್ನು ನೀಡುತ್ತದೆ. ಡೆಕ್ಕನ್ ಕಾಲೇಜಿನಲ್ಲಿ ಭಾಷಾಶಾಸ್ತ್ರದ ರೀಡರ್ ಆಗಿಯೂ ಮೈಸೂರಿನ ‘ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ ಉಪ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಮುಂಬಯಿ ವಿಶ್ವವಿದ್ಯಾನಿಲಯದಲ್ಲಿ ಭಾಷಾಶಾಸ್ತ್ರದ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿದರು.  

‘ನಂದನ', ನಾಯಿಕೊಡೆ, ‘ನಿಗುರಿ ನಿಂತರೆ ನಾಲಿಗೆ’ ಇವರ ಕವನ ಸಂಕಲನಗಳು. ‘ಅಲೋಕ' ಕನ್ನಡ ಸಾಹಿತ್ಯ ಲೋಕದಲ್ಲಿ ಬಿಳಿಗಿರಿಯವರಿಗೆ ಖ್ಯಾತಿಯನ್ನು ತಂದುಕೊಟ್ಟ ಕೃತಿ. ಕೇಶಿರಾಜನ ‘ಶಬ್ದ ಮಣಿ ದರ್ಪಣ'ಕ್ಕೆ ಅವರು ಬರೆದ ವ್ಯಾಖ್ಯಾನದ ಈ ಪುಸ್ತಕ ಅವರ ಭಾಷಾ ವಿಜ್ಞಾನ, ಛಂದಶಾಸ್ತ್ರ, ವ್ಯಾಕರಣದ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿ. ‘ವರ್ಣನಾತ್ಮಕ ವ್ಯಾಕರಣದ ಮೂಲ ತತ್ವಗಳು ಮತ್ತು ವರಸೆ ಇವರ ಶಾಸ್ತ್ರೀಯ ಬರಹದ ಇನ್ನೆರಡು ಕೃತಿಗಳು. ೧೯೯೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಇವರು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಬಿಳಿಗಿರಿಯವರು ೧೯೯೬ರಲ್ಲಿ ನಿಧನಹೊಂದಿದರು.

‘ಸುವರ್ಣ ಸಂಪುಟ' ಕೃತಿಯಲ್ಲಿ ಎಚ್ ಎಸ್ ಬಿಳಿಗಿರಿಯವರ ಎರಡು ಪುಟ್ಟ ಕವನಗಳು ಪ್ರಕಟವಾಗಿವೆ. ಎರಡೂ ಕವನಗಳನ್ನು ಆರಿಸಿ ಇಲ್ಲಿ ಪ್ರಕಟಿಸಲಾಗಿದೆ. ಓದುವ ಸುಖ ನಿಮ್ಮದಾಗಲಿ…

ಕವನ ೧ 

ಕಬ್ಬು

ಒಲವಿನರಸಿಗೆ ಮುತ್ತ-

ನಿಡೆ ಪ್ರಿಯನು ಬರಲು

ತಪ್ಪಿಸಲು ನಾಣವಳ

ತನು ಬಳುಕಿಸಿರಲು

ಪ್ರಿಯನ ತುಟಿಗಾಸರೆಯ-

ನೀಯದೊಲು ಚೆನ್ನೆ

ತಲೆದೂಗುತಿರೆ ಕುರುಳು

ಹಾರುತಿಹುದೆನ್ನೆ,

ಮೃದು ಸಮೀರನು ಮುತ್ತ-

ನೊತ್ತಲ್ಕೆ ಬರಲು

ಕಬ್ಬು ಬಳುಕುವುದಹಹ

ಗರಿಯೊಲೆಯುತಿರಲು!

***

ಕವನ ೨

ಭದ್ರಾವತಿಯನ್ನು ಬಿಡುವಾಗ

ಎಂಥ ಕಲ್ಲೆದೆಯವನು ಗಂಟೆ ಬಾರಿಸಿದಾತ!

ಬಲವೆಲ್ಲ ಬಿಟ್ಟುಸಿರ ತುಂಬಿದನು ‘ಶಿಲ್ಪಿ'ಯೊಳು

(ಆ ರವಕೆ ಬೆಚ್ಚಿದವು ಸುತ್ತಲಿನ ಬಲ್ಬುಗಳು!)

ಆ ಕ್ರೂರಿ ಹಸುರು ದೀಪವನೊಮ್ಮೆ ಆಡಿಸುತ !

ಕಿವಿ ಬಿರಿಯುವಂದದೊಳು ಅಬ್ಬರಿಸುತಾ ಶಕಟ

ನಿಟ್ಟುಸಿರನು ಬಿಡುತ್ತ ನನ್ನನೆಳೆಯಿತು ಮುಂದೆ !

ಚಕ್ರ ಕಂಬಿಗಳೆರಡು ಕೂಡಿಯೊಕ್ಕೊರಲಿಂದೆ

ದುಃಖದಾವೇಗದಿಂ “ಅಕಟಕಟ ಅಕಟಕಟ"

ಎಂದು ದನಿ ಗೈಯುತಿರೆ (ಮೋಡದಿ ಮುಳುಗಿದ ಪೆರೆ!)

 

ಭದ್ರಾವತಿಯು ತನ್ನ ನೂರು ಕಣ್ಣುಗಳಿಂದ 

ನೋಡುವೊಲೆ ಮಿನುಗೆ ವಿದ್ಯುದ್ದೀಪಗಳ ತಂಡ,

ತೆರೆಯಾಗಿ ಉಕ್ಕಿಬರೆ ಕಣ್ಣಿನೊಳು ನೀರ ನೆರೆ

ಕತ್ತಲಿನ ಕಡಲಿನೊಳು ಕರಗಿಹೋಯಿತು ನನ್ನ

ಪ್ರಿಯನಗರಿ ! ಹಾ ! ಎನ್ನನಾವರಿಸಿತಲ ಬನ್ನ !

***

(‘ಸುವರ್ಣ ಸಂಪುಟ’ ಕೃತಿಯಿಂದ ಆಯ್ದ ಕವನಗಳು)