‘ಸುವರ್ಣ ಸಂಪುಟ' (ಭಾಗ ೬೩) - ಭುಜೇಂದ್ರ ಮಹಿಷವಾಡಿ

‘ಸುವರ್ಣ ಸಂಪುಟ' (ಭಾಗ ೬೩) - ಭುಜೇಂದ್ರ ಮಹಿಷವಾಡಿ

ಡಾ. ಭುಜೇಂದ್ರ ಬನಪ್ಪ ಮಹಿಷವಾಡಿ ಇವರ ಹೆಸರನ್ನು ಕೇಳಿದವರ ಸಂಖ್ಯೆ ಬಹಳ ಕಮ್ಮಿ ಇರಬಹುದು. ಎಲೆ ಮರೆಯ ಕಾಯಿಯಂತೆ ಬದುಕಿ ಬಾಳಿದ ಪ್ರತಿಭಾವಂತ ಸಾಹಿತಿ, ಕವಿ ಇವರು. ನಿಮಗೆ ನೆನಪಿರಬಹುದು, ಇತ್ತೀಚೆಗೆ ಗಾನ ಕೋಗಿಲೆ ಲತಾ ಮಂಗೇಷ್ಕರ್ ಅವರು ನಿಧನ ಹೊಂದಿದಾಗ ಎಲ್ಲಾ ಪತ್ರಿಕೆಗಳು ಲತಾ ಅವರು ಕನ್ನಡದಲ್ಲಿ ಹಾಡಿದ ಏಕೈಕ ಚಿತ್ರ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಇದರ ಎರಡು ಗೀತೆಗಳನ್ನು ಉಲ್ಲೇಖ ಮಾಡಿದ್ದರು. ಅದರಲ್ಲಿ ‘ಬೆಳ್ಳನ್ನ ಬೆಳಗಾಯಿತು...' ಹಾಡನ್ನು ಬರೆದವರು ಇನ್ಯಾರೂ ಅಲ್ಲ ಅವರು ಭುಜೇಂದ್ರ ಮಹಿಷವಾಡಿಯವರು. ಇವರ ಹಾಡು ಪಡೆದಷ್ಟು ಖ್ಯಾತಿಯನ್ನು ಇವರು ಪಡೆದುಕೊಳ್ಳಲಿಲ್ಲ. ಭುಜೇಂದ್ರ ಅವರು ಬದುಕಿದ್ದೇ ಹಾಗೆ. ಬನ್ನಿ, ಅವರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.

ಭುಜೇಂದ್ರ ಇವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹಿಷವಾಡಿ ಗ್ರಾಮದಲ್ಲಿ ಮೇ ೩, ೧೯೨೫ರಲ್ಲಿ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಥಣಿ ಹಾಗೂ ಬನಹಟ್ಟಿಯಲ್ಲಿ ಪೂರೈಸಿದರು. ನಂತರ ಬೆಳಗಾವಿಯಲ್ಲಿ ಬಿ ಎ (ಆನರ್ಸ್) ಮತ್ತು ಬಿ ಎಡ್. ಪದವಿಯನ್ನು ಪಡೆದುಕೊಂಡರು. ಸಾಂಗ್ಲಿಯಲ್ಲಿ ತಮ್ಮ ಎಂ ಎ ಪದವಿಯನ್ನು ಪೂರೈಸಿದರು. “ಕವಿ ಚಕ್ರವರ್ತಿ ಜನ್ನನ ಜೀವನ ಹಾಗೂ ಕೃತಿಗಳು : ವಿವೇಚನೆ” ಎಂಬ ಪ್ರಬಂಧವನ್ನು ಮಂಡಿಸಿ ಪಿ ಹೆಚ್ ಡಿ ಪದವಿಯನ್ನು ಪಡೆದುಕೊಂಡರು. ಪ್ರಾಥಮಿಕ ಶಾಲೆಯಿಂದ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಭುಜೇಂದ್ರ ಇವರು ಕರ್ನಾಟಕ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕರಾಗುವವರೆಗೆ ಬೆಳೆದು ನಿಂತರು. 

ಇವರ ಕಾವ್ಯಗಳಲ್ಲಿ ಕೃಷ್ಣಾ ನದಿ ಒಂದು ನದಿಯಾಗಿರದೇ ಕಾವ್ಯದ ಸೆಲೆಯಾಗಿ ನಿಂತಿದ್ದಾಳೆ. ಇವರು ಮಾಯಾಮಂದಿರ (೧೯೫೦), ಹಾಲು ಹಣ್ಣು (೧೯೫೪), ಕಟ್ಟುವ ಕೈ (೧೯೫೮), ಹಂಸ ಮಿಥುನ (೧೯೬೭), ಬೆರಕೀಮಂದಿ (೧೯೭೮) ಮೊದಲಾದ ಕವನ ಸಂಕಲನಗಳನ್ನು ರಚಿಸಿದ್ದಾರೆ. ಇವುಗಳಲ್ಲದೇ ಮೂರು ಚರಿತ್ರೆ ಗ್ರಂಥಗಳು, ೨ ಸಂಸ್ಕರಣಾ ಕೃತಿಗಳು, ೪ ನಾಟಕಗಳು ಹಾಗೂ ಸುಮಾರು ೧೪೦ಕ್ಕೂ ಅಧಿಕ ಬಿಡಿ ಬರಹಗಳನ್ನು ಬರೆದಿದ್ದಾರೆ. ಇವರು ಭುಜೇಂದ್ರ ಮತ್ತು ಭುಜಬಲಿ ಎಂಬ ಹೆಸರಿನಲ್ಲಿ ತಮ್ಮ ಬರಹಗಳನ್ನು ರಚನೆ ಮಾಡುತ್ತಿದ್ದರು. 

ಸೀತೆನೆ ಸುಲಿಗಾಯಿ, ಬೋರಂಗಿ ಎಂಬ ಶಿಶುಗೀತೆಗಳ ಸಂಕಲನ ಹಾಗೂ ‘ಛಾಯಾ ಚಂದ್ರನಾಥನ ವಚನ ಚಂದ್ರಿಕೆ' ಮತ್ತು ‘ಸಡಿಲಪ್ಪನ ಹಾವಳಿ' ಎಂಬ ನವ್ಯ ಧಾಟಿಯ ದೀರ್ಘ ಕವನಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಕೆಲವು ಪ್ರಕಟಿತವಾಗಿಲ್ಲ. ಇವುಗಳನ್ನು (ಪ್ರಕಟಿತ ಹಾಗೂ ಅಪ್ರಕಟಿತ ಎರಡೂ) ಜೊತೆಯಾಗಿ ಸೇರಿಸಿ ‘ಕೃಷ್ಣಾ ತೊರೆ’ ಎಂಬ ಹೆಸರಿನ ಸಮಗ್ರ ಕಾವ್ಯ ೨೦೦೬ರಲ್ಲಿ ಇವರ ನಿಧನಾ ನಂತರ ಪ್ರಕಟಗೊಂಡಿದೆ. ಇವರು ಮಾರ್ಚ್ ೧೫, ೧೯೮೨ರಲ್ಲಿ ನಿಧನರಾದರು.

‘ಸುವರ್ಣ ಸಂಪುಟ' ಕೃತಿಯಲ್ಲಿ ಇವರ ಎರಡು ಕವನಗಳು ಪ್ರಕಟವಾಗಿವೆ. ಕೂಸಿನ ಲೀಲೆ ಹಾಗೂ ನಾಚಬುರಕಿ. ಇವುಗಳಲ್ಲಿ ಒಂದನ್ನು ಆಯ್ದು ಪ್ರಕಟ ಮಾಡಿದ್ದೇವೆ. ಓದಿ, ಅಭಿಪ್ರಾಯ ತಿಳಿಸಿ.

ಕೂಸಿನ ಲೀಲೆ

ನೋಡಾ ತಾಯಿಯ ತೊಡೆಯ ಮ್ಯಾಲೆ

ಆಡುತಲಿರುವ ಕೂಸಿನ ಲೀಲೆ

೧.

ಬೆಳ್ಳನ ಬಿಳಿಯ ಸಿಂಪಿಯ ಒಳಗ

ಬೆಳ್ಳಿಯ ಮುತ್ತು ಹೊರಳುವ ಹಾಂಗ

ಮುಂಜಾನೊತ್ತು ಹೂವಿನ ಒಳಗ

ಮಂಜಿನ ಹನಿಯು ಉರುಳುವ ಹಾಂಗ

ನೋಡಾ ತಾಯಿಯ ತೊಡೆಯ ಮ್ಯಾಲೆ 

ಆಡುತಲಿರುವ ಕೂಸಿನ ಲೀಲೆ !

೨.

ನೀಲಿಯ ಮುಗಿಲ ನೀರಿನ ಮ್ಯಾಲೆ

ತೇಲುತ್ತಿರುವ ಚಂದಿರನಾಂಗ

ಕಣ್ಣಿನ ನಡುವೆ ಕುಣಿಯುತ್ತಿರುವ

ಸಣ್ಣನ ಗೊಂಬಿ ಸರಿಯುವ ಹಾಂಗ

ನೋಡಾ ತಾಯಿಯ ತೊಡೆಯ ಮ್ಯಾಲೆ

ಆಡುತಲಿರುವ ಕೂಸಿನ ಲೀಲೆ !

೩.

ಊರಿನ ಹಿರಿಯ ಗುಡಿಯ ಒಳಗ

ಭೇರಿಯ ನಾದ ಸುತ್ತುವ ಹಾಂಗ

ಮೌನ ಕೃಷ್ಣೆಯ ಉಡಿಯ ಒಳಗ

ಮೀನಿನ ಕ್ರಿಡೆ ನಡೆಯುವ ಹಾಂಗ

ನೋಡಾ ತಾಯಿಯ ತೊಡೆಯ ಮ್ಯಾಲೆ

ಆಡುತಲಿರುವ ಕೂಸಿನ ಲೀಲೆ !

೪.

ಮೌನ ಮುನಿಗಳ ಮನಸಿನ ಒಳಗ

‘ಓಂ’ ನುಡಿಯು ಆಡುತಲಿದ್ದಾಂಗ

ತವಸಿಯ ಮೂಗಿನ ತುದಿಯ ಮ್ಯಾಲೆ

ರವಿ ಬಂದಾಡುವ ನೋಡಿದಾಂಗ

ನೋಡಾ ತಾಯಿಯ ತೊಡೆಯ ಮ್ಯಾಲೆ

ಆಡುತಲಿರುವ ಕೂಸಿನ ಲೀಲೆ !

***

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)