‘ಸುವರ್ಣ ಸಂಪುಟ' (ಭಾಗ ೬೪) - ರಾಮಚಂದ್ರ ಶರ್ಮ

‘ಸುವರ್ಣ ಸಂಪುಟ' (ಭಾಗ ೬೪) - ರಾಮಚಂದ್ರ ಶರ್ಮ

ಬಿ.ಸಿ.ರಾಮಚಂದ್ರ ಶರ್ಮ ಅವರು ಆಧುನಿಕ ಕನ್ನಡ ಕಾವ್ಯ ಚರಿತ್ರೆಯಲ್ಲಿ ಕೇಳಿ ಬರುವ ಪ್ರಮುಖ ಹೆಸರು. ಇವರು ನವೆಂಬರ್ ೨೮, ೧೯೨೫ರಂದು ಮಂಡ್ಯ ಜಿಲ್ಲೆಯ ನಾಗಮಂಗಲದ ಸಮೀಪದ ಊರು ಬೋಗಾದಿಯಲ್ಲಿ ಜನಿಸಿದರು. ಇವರ ತಂದೆ ಬೋಗಾದಿ ಚಂದ್ರಶೇಖರ ಶರ್ಮ. ಬಾಲ್ಯದಲ್ಲೇ ತಮ್ಮ ತಂದೆಯನ್ನು ಕಳೆದುಕೊಂಡ ರಾಮಚಂದ್ರರು ಕಡು ಬಡತನದಲ್ಲೇ ತಮ್ಮ ಬಾಲ್ಯವನ್ನು ಕಳೆದರು. ಬಡತನದ ಬೇಗೆಯನ್ನು ಸಹಿಸಲಾರದೇ ಒಮ್ಮೆ ಆತ್ಮಹತ್ಯೆ ಮಾಡಬೇಕೆಂದೂ ಯೋಚನೆ ಮಾಡಿದ್ದರಂತೆ. ಆದರೆ ರಾಮಚಂದ್ರ ಶರ್ಮ ಅವರದ್ದು ಹೋರಾಟದ ಮನಸ್ಸು ಮತ್ತು ಬದುಕು.

ಬಾಲ್ಯದಲ್ಲಿ ಇವರಿಗೆ ಆಸರೆಯಾಗಿ ನಿಂತವರು ಎಂ ವಿ ಸೇತುರಾಮಯ್ಯನವರು. ಇವರ ಒಡನಾಟದಿಂದ ಶರ್ಮರಿಗೆ ಬಾಲ್ಯದಲ್ಲೇ ಪ್ರತಿಭಾವಂತ ಸಾಹಿತಿ, ಲೇಖಕರ ಸಂಗ ದೊರೆಯಿತು. ಆ ಸಮಯದಲ್ಲಿ ಬಿ ಎಂ ಶ್ರೀ ಅವರು ಮಾಡುತ್ತಿದ್ದ ಭಾಷಣಗಳು ಶರ್ಮಾರ ಮನಸ್ಸಿನ ಮೇಲೆ ತೀವ್ರ ಪರಿಣಾಮವನ್ನು ಬೀರಿದವು. ಪರಿಷತ್ತಿನ ನಿಘಂಟು ಕಚೇರಿಯಲ್ಲಿ ಸಹಾಯಕರಾಗಿ ದುಡಿಯುತ್ತಿದ್ದ ಸಮಯದಲ್ಲಿ ರಾಮಚಂದ್ರರಿಗೆ ವಿ.ಸೀ., ಎಂ ಆರ್ ಶ್ರೀ, ಕ.ವೆಂ. ರಾಘವಾಚಾರ್, ಎಲ್ ಗುಂಡಪ್ಪ ಮೊದಲಾದ ಸಾಹಿತಿಗಳ ಸಾಂಗತ್ಯ ದೊರೆಯಿತು. ಇದರಿಂದ ಇವರಿಗೂ ಸಾಹಿತ್ಯದಲ್ಲಿ ಆಸಕ್ತಿ ಬೆಳೆಯಿತು. 

ರಾಮಚಂದ್ರ ಶರ್ಮ ಇವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ. ನಂತರ ಬಿ ಎಡ್ ಪದವಿಗಳನ್ನು ಪಡೆದು ಕೆಲಕಾಲ ಬೆಂಗಳೂರಿನ ಪ್ರೌಢ ಶಾಲೆಯೊಂದರಲ್ಲಿ ಅಧ್ಯಾಪಕರಾಗಿದ್ದರು. ವಿದೇಶಕ್ಕೆ ಹೋಗುವ ಅವಕಾಶ ಸಿಕ್ಕಿದ ಕಾರಣ ಇಥಿಯೋಪಿಯಾಗೆ ತೆರಳಿ ಅಲ್ಲಿ ಉಪನ್ಯಾಸಕರಾಗಿ ದುಡಿದು ನಂತರ ಇಂಗ್ಲೆಂಡ್ ಗೆ ಹೋದರು. ಇಂಗ್ಲೆಂಡ್ ನಲ್ಲೂ ಉಪನ್ಯಾಸಕ ವೃತ್ತಿಯನ್ನು ಮುಂದುವರೆಸುತ್ತಾ ಮನಃಶಾಸ್ತ್ರದಲ್ಲಿ ಅಧ್ಯಯನ ಮಾಡಿದರು. ವಲಸೆ ಹೋದ ಮಕ್ಕಳ ಬುದ್ದಿಶಕ್ತಿಯ ಬಗ್ಗೆ ಅಧ್ಯಯನ ನಡೆಸಿ ಪಿ ಹೆಚ್ ಡಿ ಪದವಿಯನ್ನು ಗಳಿಸಿದರು. ಯುನೆಸ್ಕೋ ಪರವಾಗಿ ಕೆಲಸ ಮಾಡಿದ ಶರ್ಮಾ ಅವರು ೧೯೮೨ರಲ್ಲಿ ಭಾರತಕ್ಕೆ ಮರಳಿದರು. 

ರಾಮಚಂದ್ರ ಶರ್ಮ ಇವರ ಮೊದಲ ಕವನ ಸಂಕಲನ ‘ಹೃದಯ ಗೀತೆ' ಇದು ಪ್ರಕಟವಾಗುವಾಗ ಇವರಿಗೆ ಬರೇ ೨೭ ವರ್ಷ ವಯಸ್ಸು. ರಾಮಚಂದ್ರ ಶರ್ಮರು ಪ್ರೀತಿಸಿ ಮದುವೆಯಾದ ಪದ್ಮ ಇವರೂ ಲೇಖಕಿಯಾಗಿದ್ದರು. ಇವರ ಸಾಂಗತ್ಯದಲ್ಲಿ ಹೆಸರಾಂತ ಪೆಂಗ್ವಿನ್ ಪ್ರಕಾಶನಕ್ಕಾಗಿ ಮಾಸ್ತಿಯವರ ‘ಚಿಕ್ಕವೀರ ರಾಜೇಂದ್ರ’ ಕಾದಂಬರಿಯನ್ನು, ಯಶವಂತ ಚಿತ್ತಾಲರ ಕತೆಗಳನ್ನು ಮತ್ತು ಕುವೆಂಪು ಅವರ ‘ಕಾನೂರು ಹೆಗ್ಗಡತಿ' ಕೃತಿಯನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿದರು. ಇವರ ಈ ಸಾಧನೆಯಿಂದಾಗಿ ಸಾಗರದಾಚೆಯೂ ಕನ್ನಡದ ಕಂಫು ಹರಡಿತು.

ರಾಮಚಂದ್ರ ಶರ್ಮ ಅವರು ಬರೆದ ಕವನ ಸಂಕಲನಗಳು ‘ಏಳು ಸುತ್ತಿನ ಕೋಟೆ, ಹೇಸರಗತ್ತೆ, ಬ್ರಾಹ್ಮಣ ಹುಡುಗ, ಸಪ್ತಪದಿ, ಹೃದಯಗೀತ, ಮಾತು ಮಾಟ'. ಇವರ ನಾಟಕಗಳು- ಬಾಳಸಂಜೆ ಮತ್ತು ನೀಲಿ ಕಾಗದ, ನೆರಳು, ವೈತರಣಿ, ಸೆರಗಿನ ಕೆಂಡ (ರೇಡಿಯೋ ನಾಟಕ), ಕಥಾ ಸಂಕಲನ - ಮಂದಾರ ಕುಸುಮ, ಏಳನೆಯ ಜೀವ, ಕತೆಗಾರನ ಕತೆ, ಅನುವಾದ - ಈ ಶತಮಾನದ ನೂರು ಇಂಗ್ಲಿಷ್ ಕವನಗಳು, ಮನಶಾಸ್ತ್ರ - ಮಕ್ಕಳ ಬುದ್ಧಿಶಕ್ತಿ ಮತ್ತು ಪರಿಸರ ಇತ್ಯಾದಿ ಬರಹಗಳನ್ನು ರಚನೆ ಮಾಡಿದ್ದಾರೆ.

ಶರ್ಮರ 'ಸಪ್ತಪದಿ' ಎಂಬ ಕೃತಿಗೆ ೧೯೯೮ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 'ನೆರಳು' ನಾಟಕಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಹಾಗೂ ‘ಸೆರಗಿನ ಕೆಂಡ' ರೇಡಿಯೋ ನಾಟಕಕ್ಕೆ ಅಖಿಲ ಭಾರತ ಬಹುಮಾನ ದೊರೆತಿದೆ. ಇದಲ್ಲದೇ ಪ್ರಜಾವಾಣಿ ಪ್ರಶಸ್ತಿ, ಅನುವಾದಕ್ಕೆ ಕಥಾ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಗೋರೂರು ಪ್ರತಿಷ್ಟಾನದ ಪ್ರಶಸ್ತಿ, ಕೈಲಾಸಂ ಪ್ರಶಸ್ತಿಗಳು ಸಂದಿವೆ. ರಾಮಚಂದ್ರ ಶರ್ಮರು ಎಪ್ರಿಲ್ ೧೮, ೨೦೦೫ರಂದು ನಮ್ಮನ್ನು ಅಗಲಿದರು.

ರಾಮಚಂದ್ರ ಶರ್ಮ ಇವರ ಎರಡು ಕವನಗಳು -ಮಾಯೆ ಮಲಗಿತ್ತು ಹಾಗೂ ಏಳು ಸುತ್ತಿನ ಕೋಟೆ ‘ಸುವರ್ಣ ಸಂಪುಟ' ದಲ್ಲಿ ಪ್ರಕಟವಾಗಿದೆ. ಈ ಕೃತಿಯಿಂದ ಒಂದು ಕವನವನ್ನು ಆರಿಸಿ ಪ್ರಕಟಿಸಲಿದ್ದೇವೆ.

ಮಾಯೆ ಮಲಗಿತ್ತು

ಮಾಯೆ ಮಲಗಿತ್ತು ಪ್ರೇಮಜಾಲವನು ಬೀಸಿ ಚೆಂದುಟಿಯ ಮೇಲೆ !

ಸುಮವಾದ ಮೋಹ ಸೌರಭವ ಚೆಲ್ಲಿ ಮೆರೆದಿತ್ತು ತನ್ನ ಲೀಲೆ !

ತೋಳ ತಲೆಗಿಟ್ಟು ಮಲಗಿರಲು ಮುರಿದ

ಬಿಲ್ಲಂತೆ ಚೆಲುವೆ ಬಾಲೆ.

 

ಸುಖನಿದ್ರೆಯಲ್ಲಿ ಇರವನ್ನೆ ಮರೆತ

ಮುಗ್ದೆ ಮಾಯಾವಿಯಂತೆ,

ಮಾಯೆ ಮಲಗಿತ್ತು ಸೋತು.

 

ಡೊಂಕು ಡೊಂಕಾಗಿ ವಂಕಿ ಬಳೆಯಂತೆ ತುಟಿಗಳನೆ ತಬ್ಬಿದಂತೆ,

ಅರೆಬಿರಿದ ಮೊಗ್ಗ ಕಲ್ಪನೆಗೆ ಕರೆವ

ಆಧರಗಳ ರೂಪ ಹೊತ್ತು,

ಮಾಯೆ ಮಲಗಿತ್ತು ಸೋತು;

 

ಬಿರಿದ ತುಟಿಯಿಂದ ಕದ್ದು ಹೊರಬಂದು ಎಳೆ ಮಿಂಚ ಬೆಳ್ಳಿ ಕೋಲೆ

ಮುಗುಳು ನಗೆಯಾಗಿ ಮಿನುಗಿ ಮರೆಯಾಯ್ತು ಅರೆಘಳಿಗೆಯವಧಿಯಲ್ಲೇ.

ದುಷ್ಯಂತನಂಥ ಯಾವ ಸಿರಿಗುವರ ಎದೆಯೊಲವ ತುಂಬಿ ಮೆರೆವ

ದನಿಗೆ ಮಧುಸುರಿದು ಕರೆದ ?

 

ಕಚುಗುಳಿಯನೆದೆಗೆ ಇಡುವ ಸವಿಗನಸ ಮಹಿಮೆ ನಾನೆಂತು ಬಲ್ಲೆ ?

ಮಾಯೆ ಮಲಗಿತ್ತು ಅಲ್ಲೆ ;

ಸಿರಿಗೆಂಪು ಮರೆಯುವಲ್ಲೆ.

 

ಸಂಭೋಗದಲ್ಲಿ ಮೈಗೆ ಮೈ ಹೆಣೆದು ಮೈಮರೆತ ಕಪ್ಪುನಾಗ-

ದ್ವಯದ ಚಿತ್ರವನು ಹೆರಳ ಕಂಡ ಮನ ಬರೆಯಿತಾಗ.

ಹೆರಳ ಕಪ್ಪಿಗೂ ಮಿಗಿಲೆನ್ನ ಕಪು. ಎಂದೆಂಬ ಮತ್ತಿನಲ್ಲೆ

ಕರಿಮಣಿಯ ಮಾಲೆ

 

ಮೆರೆದಿತ್ತು ಇರಲು ಹಿನ್ನಲೆಗೆ, ತರಳೆಯೆದೆ ಕೊರಳ ಬಿಳುಪ ಲೀಲೆ !

ದಾರುಣದ ವೇದೆ ಮೊಲೆಕಟ್ಟ ಬಂಧ 

ಎಂದೆ ಮನಗಂಡ

ಮೊಲೆಯು ಹೊರಬಂತೆ ಸ್ವಚ್ಛಂದದಂದ ಚೆಂದಗಳ ಬಯಕೆಯಿಂದ ?

ಗೂಡ ತೊರೆದು ಹೊರಬರುವ ಎಳೆ ಪಾರಿವಾಳದಂತೆ,

ನೆಲದಾಳದಿಂದ ನೆಲಕೆದ್ದು ಬರುವ ಬಿಳಿಯ ಮೊಲದಂತೆ ಬಂತೆ !

ತಿರವಣ್ಣ ಚೆಲುವನುಣಬಯಸಿ ಚಿಂತೆ !

ತೂಕ ಹೊತ್ತು ಬಲು ದಣಿದ ಬಡ ನಡುವ ಹೊರೆಯನ್ನು ತಾನೆ ಹೊತ್ತು

ನಿಂತ ತೊಡೆಗಿಹುದು ಹೊಂಬಾಳೆಗಿರುವ ಸುತ್ತುಗತ್ತು.

ಮೈವೆತ್ತ ಮಾಯೆ ಮಲಗಿತ್ತು ಸೋತು.

 

ಬಯಸದೆಯೆ ಚೆಲುವ ನೋಡಿ ತಣಿದ ಜನ ವಿರಳ, ಅತಿ ವಿರಳವಲ್ಲೆ !

ಮಲಗಿರಲು ನನ್ನ ನಲ್ಲೆ

ದುರುಳ ಖಳ ನಿದ್ದೆ ತೋಳ ಸೆರೆಯಲ್ಲಿ ಮುಗುದೆಯನು ಕಾಡುತಿರಲು,

ಬಿಡಿಸದಿರಲಾನು ಸತ್ತ ಕಲ್ಲೆ !

ಇದೊ ಬಂದೆ ನಲ್ಲೆ,

ಮಾಯೆ ಮಲಗಿರಲಿ ಅಲ್ಲೆ, ಅಲ್ಲೆ !

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)