‘ಸುವರ್ಣ ಸಂಪುಟ' (ಭಾಗ ೬೫) - ಹ.ವೆಂ. ನಾಗರಾಜರಾವ್

‘ಸುವರ್ಣ ಸಂಪುಟ' (ಭಾಗ ೬೫) - ಹ.ವೆಂ. ನಾಗರಾಜರಾವ್

‘ಸುವರ್ಣ ಸಂಪುಟ' ಕೃತಿಯಿಂದ ಈ ವಾರ ನಾವು ಆಯ್ದ ಕವಿ ಹರುವೆ ವೆಂಕಟರಾವ್ ನಾಗರಾಜರಾವ್ ಇವರು. ಇವರು ಖ್ಯಾತ ಪತ್ರಿಕೋದ್ಯಮಿಯಾಗಿದ್ದರು. ಇವರು ಚಾಮರಾಜ ನಗರ ತಾಲೂಕಿನ ಹರುವೆ ಗ್ರಾಮದಲ್ಲಿ ಮೇ ೮, ೧೯೨೬ರಂದು ಜನಿಸಿದರು. ಇವರ ತಂದೆ ವೆಂಕಟರಾವ್ ಹಾಗೂ ತಾಯಿ ರಾಜಮ್ಮ. ಇವರು ಓದಿದ್ದು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ವರೆಗೆ ಮಾತ್ರ. ಆದರೆ ಇವರಿಗೆ ಬಾಲ್ಯದಿಂದಲೇ ಸಾಹಿತ್ಯದತ್ತ ಒಲವು ಇದ್ದ ಕಾರಣ ಇವರು ಪತ್ರಿಕೋದ್ಯಮವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡರು. 

‘ಜನವಾಣಿ' ಪತ್ರಿಕೆಯಿಂದ ತಮ್ಮ ವೃತ್ತಿಜೀವನ ಆರಂಭಿಸಿದ ಇವರು ೧೯೫೩ರಲ್ಲಿ ಅಂದಿನ ಖ್ಯಾತ ಪತ್ರಿಕೆ ‘ಪ್ರಜಾಮತ' ವನ್ನು ಸೇರಿಕೊಂಡ ೧೯೭೩ರಲ್ಲಿ ಇದರ ಮುಖ್ಯ ಸಂಪಾದಕರಾದರು. ಆ ಸಮಯದಲ್ಲಿ ಇವರು ರಷ್ಯಾಕ್ಕೆ ಭೇಟಿ ನೀಡಿದರು. ತಮ್ಮ ರಷ್ಯಾ ಭೇಟಿಯ ಪ್ರವಾಸ ಕಥನ ‘ನವ ರಷ್ಯಾ ನೋಟ' ಬರೆದರು. ಈ ಪ್ರವಾಸ ಕಥನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ದ್ವಿತೀಯ ಪುರಸ್ಕಾರ ದೊರೆಯಿತು. ಮುಂದೆ ಈ ಪ್ರವಾಸ ಕಥನವು ಹಿಂದಿ ಭಾಷೆಗೂ ಅನುವಾದಗೊಂಡಿತು. 

ನಾಗರಾಜರಾವ್ ಅವರ ಮೊದಲ ಕಥಾ ಸಂಕಲನ ‘ಕತ್ತಲೆ ಬೆಳಕು'. ‘ಐದು ದೀಪಗಳ ಕಂಬ’ ಇವರು ಬರೆದ ಕವನ ಸಂಕಲನ. ಇವರು ೧೯೭೯ರಲ್ಲಿ ‘ಪಶ್ಚಿಮ ಜರ್ಮನಿ ಹಾಗೂ ಇಂಗ್ಲೆಂಡ್ ಪ್ರವಾಸಕ್ಕೆ ಹೋಗಿದ್ದರು. ‘ಮನದ ತೆರೆಯ ಮೇಲೆ' ಇವರ ಪ್ರಬಂಧಗಳ ಸಂಕಲನ. ಮಹಾತ್ಮಾ ಗಾಂಧಿ ಮತ್ತು ಇತರ ಕವನಗಳು ಇವರ ಮತ್ತೊಂದು ಕವನ ಸಂಕಲನ. ‘ನವರಷ್ಯಾದ ನೋಟ' ಪ್ರವಾಸ ಸಾಹಿತ್ಯವಾಗಿ ಪ್ರಕಟಗೊಂಡಿದೆ. ಇವರು ಪ್ರಜಾಮತಗಾಗಿ ಬರೆದ ಲೇಖನಗಳು ಸಂಪುಟಗಳ ರೂಪದಲ್ಲಿ ಪ್ರಕಟವಾಗಿದೆ. ರಾಷ್ಟ್ರೋತ್ಥಾನ ಪರಿಷತ್ತಿನ ‘ಭಾರತ ಭಾರತಿ' ಪುಸ್ತಕ ಸಂಪದಕ್ಕಾಗಿ ‘ದಾದಾಭಾಯಿ ನವರೋಜಿ ಬಗ್ಗೆ ಹಾಗೂ ಮಕ್ಕಳಿಗಾಗಿ ಕಲಾವತಿ ಮತ್ತು ಅಮರಾವತಿಯ ಅರಸುಕುಮಾರ ಎಂಬ ಎರಡು ನೀಳ್ಗತೆಗಳನ್ನು ರಚಿಸಿದ್ದಾರೆ. 

ಇವರಿಗೆ ಮುಳಬಾಗಿಲು ಶ್ರೀಪಾದಮಠದ ಶ್ರೀ ಶ್ರೀ ಶ್ರೀ ವಿಜಯನಿಧಿ ತೀರ್ಥ ಶ್ರೀಪಾದಂಗಳವರು ‘ಪತ್ರಿಕಾ ಸಾಹಿತ್ಯ ರತ್ನ' ಎಂಬ ಬಿರುದನ್ನು ನೀಡಿ ಗೌರವಿಸಿದ್ದಾರೆ. ಕರ್ನಾಟಕ ಜನಸೇವಾ ಪರಿಷತ್ ಇವರಿಗೆ ‘ಸಂಪಾದಕ ಕೇಸರಿ' ಎನ್ನುವ ಪ್ರಶಸ್ತಿ ನೀಡಿ ಗೌರವಿಸಿದೆ. ನಾಗರಾಜರಾವ್ ಅವರು ಫೆಬ್ರವರಿ ೯, ೧೯೯೨ರಲ್ಲಿ ನಿಧನಹೊಂದಿದರು.

ನಾಗರಾಜರಾವ್ ಅವರ ಮೂರು ಕವನಗಳು (ಎಲ್ಲಿಗೆ ಕರೆವಿರಿ, ಐದು ದೀಪದ ಕಂಬ, ಡೊಳ್ಳು ದಿನಗಳು) ಸುವರ್ಣ ಸಂಪುಟದಲ್ಲಿ ಪ್ರಕಟವಾಗಿದೆ. ಇದರಲ್ಲಿ ಒಂದು ಕವನವನ್ನು ನಿಮ್ಮ ಓದಿಗಾಗಿ ಆಯ್ದು ಕೊಟ್ಟಿದ್ದೇವೆ. ಓದಿ, ಆನಂದಿಸಿರಿ…

ಐದು ದೀಪದ ಕಂಬ

ಐದು ದೀಪದ ಕಂಬ

ಈ ಡಿಂಬ

ತಂದು ನಟ್ಟರು ಇಲ್ಲಿ

ಮಾರುಕಟ್ಟೆಯ ಮಹಾ ಚೌಕದಲ್ಲಿ

ತಂತಿ ಸಂಪರ್ಕವೀಯುತ ಹಾಯಿಸುತ ವಿದ್ಯುಚ್ಛಕ್ತಿ 

ದಿಗ್ಗನುರಿಯಿತು ಹತ್ತಿ ಇದರ ನೆತ್ತಿ.

 

ಐದು ದೀಪದ ಕಂಬ

ಈ ಡಿಂಬ

ತಾಯಿ ಅಂಗೈಯೊಳಗೆ ಹಚ್ಚಿ ಹಿಡಿದಿರುವಂಥ ದೀಪಾರತಿ ;

ಹೊಸೆದು ಬಾಳಿನ ಬತ್ತಿ

ಬೆಳಗಿ ಪಂಚೇಂದ್ರಿಯ ;

ಇವ ನಿಶೆ ಗರ್ಭದೊಳಗಾದ ವಿಸ್ಮಯ

ಬಾಲ ಚಂದ್ರೋದಯ ;

ಕಣ್ಣ ಕುಣಿತ ; ಕೇಳಿ ಕಿವಿ ;

ಮೂಗು ಮೂಸುತ್ತ ; ನಾಲಿಗೆ ಸವಿದು ;

ಚರ್ಮ ಸ್ಪರ್ಶದಲಿ ಮಿಂಚು ಪಳಂಚಿ ಮುಡಿಯೊಳಗಾಡಿ

ಜೀವ ತುಳುಕಿ

ಕಿರ್ಯೆ ತೊಡಗಿ

ಕಾಲ ಬ್ರಹ್ಮಾಂಡದಲಿ ಭೂಮಂಡಲದಿ

ತಾನಿದ್ದ ಕಡೆಗೇ ಕೇಂದ್ರಬಿಂದುವೆನಿಸಿ

ನಡುವೆ ನಿಂತಿದೆ ಕಂಬ

ಈ ಡಿಂಬ

ನಿಶ್ಚಲದಿ

ಹತ್ತಾರು ರಸ್ತೆಗಳ ಪೂರ್ಣ ಪ್ರವಾಹ ನುಗ್ಗಿ ಬರುವೀ ಮಹಾ ಚೌಕದಲ್ಲಿ

 

ಬಾಳು ಸುಳಿ ಸುತ್ತಿ 

ಕಾಲನು ಕತ್ತಲೆ ಮೊತ್ತ ಒತ್ತೊತ್ತಿ ಮುಸುಗಿದರು

ಮಿಸುಗದಿದೆ

ಈ ಡಿಂಬ

ಐದು ದೀಪದ ಕಂಬ

ನಿಂತು ನಿಲುವಿನಲ್ಲಿ

ಒಂದೆ ನಿಟ್ಟಿನಲ್ಲಿ.

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)