‘ಸುವರ್ಣ ಸಂಪುಟ' (ಭಾಗ ೬೬) - ರಾಘವೇಂದ್ರ ಇಟಗಿ

‘ಸುವರ್ಣ ಸಂಪುಟ' (ಭಾಗ ೬೬) - ರಾಘವೇಂದ್ರ ಇಟಗಿ

“ಬೆಳಕು ಬಂದಿದೆ ಮನೆಯ ಹೊಸ್ತಿಲವರೆಗೆ ಕಿಟಕಿ ಬಾಗಿಲು ತೆರೆದು ಬರಮಾಡು ಒಳಗೆ" ಈ ಸುಮಧುರ ಹಾಡು ಒಂದು ಸಮಯದಲ್ಲಿ ಆಕಾಶವಾಣಿಯಲ್ಲಿ ಆಗಾಗ್ಗೆ ಪ್ರಸಾರವಾಗುತ್ತಿತ್ತು. ಇಂತಹ ಸುಮಧುರ ಭಾವಗೀತೆ ಹಾಗೂ ಹಲವಾರು ದೇಶಭಕ್ತಿ ಗೀತೆಗಳನ್ನು ರಚಿಸಿದ ಕವಿ ರಾಘವೇಂದ್ರ ಇಟಗಿ ಇವರು. ಇವರು ಹುಟ್ಟಿದ್ದು ಎಪ್ರಿಲ್ ೬, ೧೯೨೬ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಇಟಗಿ ಎಂಬ ಊರಿನಲ್ಲಿ. ಇವರ ತಂದೆ ಪ್ರಹ್ಲಾದಾಚಾರ್ಯ ಹಾಗೂ ತಾಯಿ ಸೀತಮ್ಮ. 

ಎಂಟನೇ ತರಗತಿಯವರೆಗೆ ಹುಟ್ಟೂರಿನಲ್ಲೇ ವಿದ್ಯಾಭ್ಯಾಸ ಮಾಡಿದ ರಾಘವೇಂದ್ರ ಇವರು, ತಮ್ಮ ಕಲಿಕೆಯ ಆಸೆಯನ್ನು ಹತ್ತಿಕ್ಕಲಾಗದೇ ಕೊಪ್ಪಳಕ್ಕೆ ತೆರಳಿ ವಿದ್ಯಾಭ್ಯಾಸವನ್ನು ಹಲವಾರು ಸಂಕಷ್ಟಗಳ ನಡುವೆಯೂ ಮುಂದುವರೆಸುತ್ತಾರೆ. ಈ ಸಮಯದಲ್ಲಿ ಅವರಿಗೆ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಮಾನ್ವಿ ನರಸಿಂಗರಾಯರ ಪರಿಚಯವಾಗುತ್ತದೆ. ಇವರ ಸಹಾಯದಿಂದ ಖಾಸಗಿಯಾಗಿ ಪರೀಕ್ಷೆಗೆ ಕುಳಿತು ಉಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಬಿ ಎ ಪದವಿ ಹಾಗೂ ಕನ್ನಡದಲ್ಲಿ ಎಂ ಎ ಪದವಿಗಳನ್ನು ಪಡೆಯುತ್ತಾರೆ. ಈ ನಡುವೆ ಕಲಿಕೆಯ ಸಮಯದಲ್ಲೇ ಹೈದರಾಬಾದ್ ಆಕಾಶವಾಣಿಯಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಜವಾಬ್ದಾರಿಯ ಹುದ್ದೆಯನ್ನೂ ನಿರ್ವಹಿಸುತ್ತಾರೆ.

ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಇವರಿಗೆ ಗುರುಗಳಾಗಿ ದೊರೆತವರು ಡಿ.ಕೆ.ಭೀಮಸೇನರಾಯರು. ಇವರ ಗರಡಿಯಲ್ಲಿ ಪಳಗಿ ಉರ್ದು ಭಾಷೆಯನ್ನು ಕಲಿತು, ಉರ್ದು ಕಾವ್ಯದ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಇದರಿಂದಾಗಿ ರಾಘವೇಂದ್ರರಿಗೆ ಭವಿಷ್ಯದಲ್ಲಿ ಕನ್ನಡ ಭಾಷೆಯಲ್ಲಿ ಕಾವ್ಯ ರಚನೆ ಸುಲಭವಾಯಿತು ಎಂದು ಅವರೇ ಹೇಳಿಕೊಂಡಿದ್ದಾರೆ. ರಾಘವೇಂದ್ರರು ಹೈದರಾಬಾದ್ ಆಕಾಶವಾಣಿ ಮಾತ್ರವಲ್ಲದೇ ಮೈಸೂರು, ಬೆಂಗಳೂರು, ಧಾರವಾಡ, ಗುಲ್ಬರ್ಗಾ, ಪಣಜಿ, ಶ್ರೀನಗರ ಮೊದಲಾದ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆಯನ್ನು ಸಲ್ಲಿಸುತ್ತಾರೆ. “ಕನ್ನಡದ ಶ್ರೀಗಂಧದಲ್ಲಿ ಕಾಶ್ಮೀರದ ಕೇಸರಿಯನ್ನು ಬೆರೆಸಿದರೆ ಭಾರತದ ಪರಿಮಳ ಕಾಂತಿ ಪ್ರಜ್ವಲಿಸುವುದು" ಈ ಮಾತನ್ನು ರಾಘವೇಂದ್ರರು ಹೊರನಾಡಿನಲ್ಲಿ ಕೆಲಸ ಮಾಡುತ್ತಿದ್ದಾಗ ಹೇಳುತ್ತಿದ್ದ ಮಾತುಗಳು.

ಆಕಾಶವಾಣಿಯಲ್ಲಿ ಇವರು ಹೊಸ ಹೊಸ ಕಲಾವಿದರಿಗೆ ಅವಕಾಶ ಮಾಡಿಕೊಟ್ಟರು. ಬೆಂಗಳೂರು ಆಕಾಶವಾಣಿಯಲ್ಲಿದ್ದಾಗ ‘ನವಸುಮ' ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದರು. ತಮ್ಮದೇ ಕವನಗಳಿಗೆ ರಾಗ ಸಂಯೋಜನೆ ಮಾಡಿಸಿ ಆಕಾಶವಾಣಿಯಲ್ಲಿ ಪ್ರಸಾರ ಮಾಡಿದರು. ಇವರು ‘ವಸುಂಧರ ಗೀತೆಗಳು' ಎಂಬ ಮಕ್ಕಳ ಪದ್ಯಗಳನ್ನು ರಚನೆ ಮಾಡಿದ್ದಾರೆ. ೧೯೬೧ರಲ್ಲಿ ಕ್ಷಿತಿಜ ಕೋದಂಡ, ೧೯೬೩ರಲ್ಲಿ ದೇಶಭಕ್ತಿ ಗೀತೆಗಳ ಸಂಕಲನ ‘ಸನ್ನದ್ಧ ಭಾರತ' ೧೯೭೯ರಲ್ಲಿ ‘ಕರುಳಿನ ಕಥೆ', ೧೯೮೬ರಲ್ಲಿ ‘ಅಗಸ ತೊಳೆದ ಹೂಗಳು' ಹಾಗೂ ‘ಬೆಳಕು ತುಂಬಿದ ಬಲ್ಬು, ಬಸವಗೀತೆ, ‘ನುಡಿ ಗೊಂಬೆ' (ಕಥನ ಕವನ), ಅಂಗುಲಿಮಾಲ ಮೊದಲಾದ ಕೃತಿಗಳು ಪ್ರಕಟವಾಗಿವೆ. 

ಚೀನಾ-ಭಾರತ ಯುದ್ಧದ ಸಮಯದಲ್ಲಿ ಕವಿ ಪ್ರದೀಪ್ ಅವರು ಬರೆದು ಲತಾ ಮಂಗೇಶ್ಕರ್ ಅವರು ಹಾಡಿದ 'ಎ ಮೇರೆ ವತನ್ ಕೆ ಲೋಗೋ...' ಹಾಡನ್ನು ಕೇಳಿ ಪ್ರಭಾವಿತರಾಗಿ ರಾಘವೇಂದ್ರ ಅವರು ‘ಓ ನನ್ನ ದೇಶ ಬಾಂಧವರೇ... ಕಣ್ಣೀರ ಹನಿಗಳ ಚಿಮ್ಮಿ...' ಎಂದು ಆ ಗೀತೆಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇದನ್ನು ಅನುರಾಧಾ ಧಾರೇಶ್ವರ ಇವರು ಹಾಡಿದ್ದು, ಧಾರವಾಡ ಆಕಾಶವಾಣಿ ಕೇಂದ್ರದಿಂದ ಮೊತ್ತ ಮೊದಲ ಬಾರಿಗೆ ಪ್ರಕಟವಾಗಿತ್ತು. 

ಇವರ ‘ಮಿನಿ ಮಿಂಚು', ‘ಬೆನ್ನ ಹಿಂದಿನ ಬೆಳಕು' ಎಂಬ ಹನಿಕವಿತಾ ಸಂಗ್ರಹಗಳು ಪ್ರಕಟವಾಗಿವೆ. ಕವೀಂದ್ರ-ರವೀಂದ್ರ (ಜೀವನ ಚರಿತ್ರೆ), ಶ್ರೀಕಾರ, ಪ್ರಬಂಧ ಮಾಲೆ (ಸಂಪಾದನೆ), ನಮ್ಮೆಲ್ಲರ ನೆಹರೂ (ಕವನ ಸಂಕಲನ), ಬಿಳಿಯ ಗಡ್ಡ ಕೆಂಪಾಯಿತು, ವಾಲ್ಮೀಕಿ, ಜಟಕಾ ಸಾಬಿ, ಬ್ರೈನ್ ಎಕ್ಸ್ ಚೇಂಜ್ (ರೇಡಿಯೋ ನಾಟಕಗಳು). ರಾಘವೇಂದ್ರ ಇಟಗಿ ಇವರು ಡಿಸೆಂಬರ್ ೮, ೧೯೯೭ರಲ್ಲಿ ನಿಧನ ಹೊಂದಿದರು.  

‘ಸುವರ್ಣ ಸಂಪುಟ' ಕೃತಿಯಲ್ಲಿ ಇವರ ಎರಡು ಕವನಗಳು ಪ್ರಕಟವಾಗಿವೆ. ಕ್ಷಿತಿಜ ಕೋದಂಡ ಹಾಗೂ ಹಾಯಾಗಿದೆ ಹೊಂಬಿಸಿಲು. ಈ ಕವನಗಳಿಂದ ಒಂದು ಕವನವನ್ನು ಆಯ್ದು ಪ್ರಕಟ ಮಾಡಲಾಗಿದೆ. ಓದಿ…

ಹಾಯಾಗಿದೆ ಹೊಂಬಿಸಿಲು

ಹಾಯಾಗಿದೆ ಹೊಂಬಿಸಿಲು

ತಾಯಾಗಿದೆ ಈ ಹಸಿರು

ಮುಗಿಲಾಗಿದೆ ಕೆಂದಾವರೆಯು

ಹಗಲಾಗಿದೆ ಹೊಂದಾವರೆಯು

ಪಾಲೊಳೆ ಆಡಿದ ಕಿರಿನೆರಳು

ಬಾನಂಚಿಗೂ ಬೆಳೆದಿಹುದು,

ಹಾಯಾಗಿದೆ ಹೊಂಬಿಸಿಲು

ತಾಯಾಗಿದೆ ಈ ಹಸಿರು.

 

ಸಿಕ್ಕಿದುದೆಲ್ಲ ಬಿಂಬಿಸಬಲ್ಲ

ನೀರಿಗೂ ನೀಲಿಗೂ ತಮ್ಮರಿವಿಲ್ಲ

ಕಣ್ಣೊಳೆ ಕಾಂಬ ಹವಣಿಕೆಯಲ್ಲ

ಉಭಯರ ಚುಂಬನ ಜಗವೆಲ್ಲ

ಹಾಯಾಗಿದೆ ಹೊಂಬಿಸಿಲು

ತಾಯಾಗಿದೆ ಈ ಹಸಿರು.

 

ನೆಲದೆದೆಯೊಳು ಹರುಷದಲಿ

ದನಕರು ಕೊರಳಲಿ ಗಂಟೆಯುಲಿ

ಪಡುವಣ ನುಂಗಿದೆ ಚಿನ್ನದ ಬೆಂಕಿ

ಮೂಡಣ ತೂಡುತಿದೆ ಬೆಳ್ಳಿಯ ವಂಕಿ

ಹಾಯಾಗಿದೆ ಹೊಂಬಿಸಿಲು

ತಾಯಾಗಿದೆ ಈ ಹಸಿರು.

 

ಈ ಸಮತೋಲನ ಸೃಷ್ಟಿಯ ಸಾಧನ

ಇದ ಸಾರಲು ಈ ನಾಟಕ ಚಿತ್ರಣ

ಹಾಯಾಗಿದೆ ಹೊಂಬಿಸಿಲು

ತಾಯಾಗಿದೆ ಈ ಹಸಿರು.

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)