‘ಸುವರ್ಣ ಸಂಪುಟ' (ಭಾಗ ೬೭) - ವಸುದೇವ ಭೂಪಾಲಂ

‘ಸುವರ್ಣ ಸಂಪುಟ' (ಭಾಗ ೬೭) - ವಸುದೇವ ಭೂಪಾಲಂ

ಸುವರ್ಣ ಸಂಪುಟ ಕೃತಿಯಿಂದ ಈ ವಾರ ನಾವು ಆಯ್ದ ಕವಿ ವಸುದೇವ ಭೂಪಾಲಂ (ಭೂಪಾಳಂ). ಇವರ ಬಗ್ಗೆ ಸಿಗುವ ಮಾಹಿತಿಗಳು ತುಂಬಾ ಕಡಿಮೆ. ಇವರ ‘ದೇವರು ಸತ್ತ' ಪುಸ್ತಕವು ಬಹಳ ಟೀಕೆಗಳಿಗೆ ಗುರಿಯಾಗಿತ್ತು. ಭೂಪಾಲಂ ಅವರು ತಮ್ಮ ವೈಚಾರಿಕತೆಯ ಅರಿವನ್ನು ಪ್ರಸ್ತುತ ಪಡಿಸಲು ಎಂದೂ ಧೈರ್ಯಗೆಡಲಿಲ್ಲ.

ವಸುದೇವ ಭೂಪಾಲಂ ಅವರು ಹುಟ್ಟಿದ್ದು ಜನವರಿ ೧, ೧೯೨೬ರಂದು. ಉಳಿದಂತೆ ಇವರ ಹೆತ್ತವರ, ಕುಟುಂಬ, ಹುಟ್ಟೂರು ಬಗ್ಗೆ ಯಾವುದೇ ಮಾಹಿತಿಗಳು ದೊರೆಯುತ್ತಿಲ್ಲ. ಇವರು ಶಿವಮೊಗ್ಗದ ಮಹಾರಾಜಾ ಕಾಲೇಜಿನಲ್ಲಿ ೧೯೪೫ರಲ್ಲಿ ಬಿ.ಎ. ಹಾಗೂ ೧೯೪೮ರಲ್ಲಿ ಎಂ.ಎ. ಪದವಿಯನ್ನು ಗಳಿಸಿದ್ದರು. ಪುಸ್ತಕ ಪ್ರಕಟಣೆ ಮತ್ತು ವ್ಯಾಪಾರ ಇವರ ಜೀವನೋಪಾಯದ ಮಾರ್ಗವಾಗಿತ್ತು. ಇವರು ಸಾಹಿತ್ಯದ ಬಹು ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ.

ಸಿಡಿಲು, ಒಲವಿನ ಉಪವನ, ಕರ್ನಾಟಕ ದೇವಿ, ಹೆಣ್ಣು (ಕಥೆ-ಕಾದಂಬರಿ), ತ್ರಿಶೂಲ, ಕಮ್ಮಟ ವಲ್ಲಭ ಹಾಗೂ ಕಾಲೇಜು ಹುಡುಗಿ (ನಾಟಕಗಳು), ಗೊಂಚಲ್ ಮಿಂಚು, ಸ್ವಾತಂತ್ರ್ಯ ವೀರರು (ಜೀವನ ಚರಿತ್ರೆ), ಹೊಸ ಹಾಡು, ಪ್ರಳಯ, ದುಂಧುಭಿ, ರಂಜನ (ಕವಿತೆಗಳು), ಹೂ, ಹಹಹ್ಹಾ, ಗುಮ್ಮ ಬಂತು (ಶಿಶು ಗೀತೆಗಳು) ಮೊದಲಾದುವುಗಳು ವಸುದೇವ ಭೂಪಾಲಂ ಅವರ ರಚನೆಗಳು. ಮಕ್ಕಳಿಗಾಗಿ ಭೂಗೋಳದ ಪಾಠಗಳನ್ನೂ ರಚನೆ ಮಾಡಿದ್ದಾರೆ. 

ಇವರ ಸರಿಯಾದ ಭಾವಚಿತ್ರವೂ ಲಭ್ಯವಿಲ್ಲ. ಇವರ ಒಂದೇ ಒಂದು ಕವನ ‘ಸುವರ್ಣ ಸಂಪುಟ' ಕೃತಿಯಲ್ಲಿ ಪ್ರಕಟವಾಗಿದೆ. ಓದುಗರಿಗೆ ವಸುದೇವ ಭೂಪಾಲಂ ಅವರ ಬಗ್ಗೆ ಮತ್ತು ಅವರ ಬರಹಗಳ ಬಗ್ಗೆ ಅಧಿಕ ಮಾಹಿತಿ ಇದ್ದರೆ ಪ್ರತಿಕ್ರಿಯೆ ವಿಭಾಗದಲ್ಲಿ ಬರೆದು ತಿಳಿಸಬೇಕಾಗಿ ವಿನಂತಿ.

ನಾಟಕದ ಹೆಣ್ಣು

ಸೀತೆಯಾದರು ಕೂಡ ಒಲಿದಿನಿನುಡಿವ ರಾಮನಿಲ್ಲ

ಅರೆಗಳಿಗೆ ಗಿರಿಜೆ ನಾ ಗೆಲಲು ಶಿವಯೋಗಿ ಕಾಣನಲ್ಲ

ರಾಜ್ಯಗಳ ರಾಣಿ ಈ ಸಂಜೆ, ನಾಳೆ ಉಣಲಶನವಿಹುದೊ

ಪಿತನುಸಿರು ಪಾಂಚಾಲಿ, ಪೊರೆವ ಪಿತನೆನಗಿಹನೊ

ರತಿಯಾಗಿ ಮೆರೆವೆ ರಂಗದಲಿ, ಕಾಳಿ ನಾ ಬಣ್ಣ ತೆಗೆಯೆ

ವಾದ್ಯಗಳ ಗದ್ದಲದಿ ಮುಳುಗುತಿದೆ ಬಡದನಿಯು, ಸಭೆಗೆ ಇಂಪು.

 

ಮಂದಿರದಿ ಮುಂದುಗಡೆ ಕುಳಿತಿಹರು ಚೆಲುವೆಯರು ಜರಿಯಧರಿಸಿ

ರತಿಯ ನೃತ್ಯವ ನೋಡಿ ಅವರೆದೆಯು ಕುಣಿಯುವುದು ಪಾದದೊಡನೆ

ಬಿನ್ನಾಣ ಬಡಿವಾರ ಉಲ್ಲಸವ ನುಸುರುವುದು ಅವರ ಮನದೊಳಗೆ

ನನ್ನೆದೆಯ ಕಾವಳವು ಕೃತ್ರಿಮದ ನಟನೆಯರಿವಿಲ್ಲವಾಯ್ತು

ನಟಿಯ ಪದವಿಯನೊಲಿದು ಕರುಬುವರು ಚೆಲುವೆಯರು

ಸಭಿಕರಲಿ ನಾ ಕುಳಿತು ನಲಿವ ಸೊಗವೆಂದೊ.

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)