‘ಸುವರ್ಣ ಸಂಪುಟ' (ಭಾಗ ೬೮) - ಜಿ.ಎಸ್.ಶಿವರುದ್ರಪ್ಪ

‘ಸುವರ್ಣ ಸಂಪುಟ' (ಭಾಗ ೬೮) - ಜಿ.ಎಸ್.ಶಿವರುದ್ರಪ್ಪ

ಜಿ.ಎಸ್. ಶಿವರುದ್ರಪ್ಪ ಅಥವಾ ಜಿ ಎಸ್ ಎಸ್ ಎಂದು ಖ್ಯಾತರಾಗಿದ್ದ ಸಾಹಿತಿ, ವಿಮರ್ಶಕ, ಸಂಶೋಧಕರಾದ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಇವರು ಕನ್ನಡದ ಖ್ಯಾತ ಕವಿಗಳಲ್ಲಿ ಓರ್ವರು. ಮಂಜೇಶ್ವರ ಗೋವಿಂದ ಪೈ, ಕುವೆಂಪು ಬಳಿಕ 'ರಾಷ್ಟ್ರಕವಿ' ಎಂಬ ಗೌರವಕ್ಕೆ ಪಾತ್ರರಾದ ಹಿರಿಮೆ ಇವರದ್ದು. ಇವರು ಹುಟ್ಟಿದ್ದು ಫೆಬ್ರವರಿ ೭, ೧೯೨೬ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಹತ್ತಿರ ಇರುವ ಈಸೂರು ಗ್ರಾಮದಲ್ಲಿ. ಇವರ ತಂದೆ ಶಾಂತವೀರಪ್ಪ ಹಾಗೂ ತಾಯಿ ವೀರಮ್ಮ. ಇವರ ತಂದೆಯವರು ಶಾಲಾ ಶಿಕ್ಷಕರಾಗಿದ್ದರು.

ತಮ್ಮ ತಂದೆಯವರಿಂದ ಸಾಹಿತ್ಯದ ಗೀಳು ಹತ್ತಿಸಿಕೊಂಡ ಶಿವರುದ್ರಪ್ಪನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹೊನ್ನಾಳಿ, ಕೋಟೆಹಾಳ ಶಾಲೆಗಳಲ್ಲಿ ಪೂರೈಸಿದರು. ಮಾಧ್ಯಮಿಕ ಶಿಕ್ಷಣವನ್ನು ರಾಮಗಿರಿ, ಬೆಲಗೂರು ಇಲ್ಲಿ ಮುಗಿಸಿ, ದಾವಣಗೆರೆ, ತುಮಕೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಪಡೆದುಕೊಂಡರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿ ಎ ಆನರ್ಸ್ ಪದವಿಯನ್ನು ೧೯೪೯ರಲ್ಲಿ ಪಡೆದುಕೊಂಡರು. ಕೆಲಕಾಲ ದಾವಣಗೆರೆಯ ಡಿ ಆರ್ ಎಮ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಾ ತಮ್ಮ ಎಂ ಎ ಪದವಿಯನ್ನು ಪೂರೈಸಿದರು. ಇವರು ಎಂ ಎ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಮೂರು ಸುವರ್ಣ ಪದಕದೊಂದಿಗೆ ಪೂರೈಸಿದ್ದು ಇವರ ಹೆಗ್ಗಳಿಕೆ. ಕುವೆಂಪು ಅವರ ಮಾರ್ಗದರ್ಶನದಲ್ಲಿ ಸರಕಾರದ ಸಂಶೋಧನಾ ಶಿಷ್ಯ ವೇತನದ ಸಹಾಯದೊಂದಿಗೆ ಸಂಶೋಧನೆ ನಡೆಸಿ ಮೈಸೂರು ವಿಶ್ವ ವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಗಳಿಸಿದರು. ಇವರ ಸಂಶೋಧನಾ ಗ್ರಂಥದ ಹೆಸರು ‘ಸೌಂದರ್ಯ ಸಮೀಕ್ಷೆ'. 

ಶಿವರುದ್ರಪ್ಪನವರು ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರೂ ಆಗಿದ್ದರು. 

ಶಿವರುದ್ರಪ್ಪನವರು ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ದೀಪದ ಹೆಜ್ಜೆ, ಕಾರ್ತಿಕ, ಅನಾವರಣ, ತೆರೆದ ದಾರಿ, ಗೋಡೆ, ಕಾಡಿನ ಕತ್ತಲಲ್ಲಿ, ಪ್ರೀತಿ ಇಲ್ಲದ ಮೇಲೆ, ಚಕ್ರಗತಿ, ವ್ಯಕ್ತಮಧ್ಯ, ಅಗ್ನಿ ಪರ್ವ, ತೀರ್ಥವಾಣಿ, ಜಾರಿದ ಹೂವು ಮೊದಲಾದ ಕವನ ಸಂಕಲನಗಳು, ಪರಿಶೀಲನ, ವಿಮರ್ಶೆಯ ಪೂರ್ವ ಪಶ್ಚಿಮ, ಸೌಂದರ್ಯ ಸಮೀಕ್ಷೆ (ಪಿಹೆಚ್ ಡಿ ಮಹಾ ಪ್ರಬಂಧ), ಗತಿಬಿಂಬ, ಅನುರಣನ, ಪ್ರತಿಕ್ರಿಯೆ, ಕನ್ನಡ ಸಾಹಿತ್ಯ ಸಮೀಕ್ಷೆ, ಕನ್ನಡ ಕವಿಗಳ ಕಾವ್ಯ ಕಲ್ಪನೆ, ಬೆಡಗು, ಕುವೆಂಪು ಪುನರವಲೋಕನ, ನವೋದಯ ಮೊದಲಾದ ವಿಮರ್ಶೆಗಳು, ಮಾಸ್ಕೋದಲ್ಲಿ ೨೨ ದಿನ, ಇಂಗ್ಲೆಂಡಿನಲ್ಲಿ ಚತುರ್ಮಾಸ, ಅಮೇರಿಕದಲ್ಲಿ ಕನ್ನಡಿಗ, ಗಂಗೆಯ ಶಿಖರಗಳಲ್ಲಿ ಮೊದಲಾದ ಪ್ರವಾಸ ಕಥನ, ಕರ್ಮಯೋಗಿ ಎಂಬ ಸಿದ್ಧರಾಮನ ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ.

ಜಿ ಎಸ್ ಶಿವರುದ್ರಪ್ಪನವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇವರ ‘ಮಾಸ್ಕೋದಲ್ಲಿ ೨೨ ದಿನ’ ಪ್ರವಾಸ ಕಥನಕ್ಕೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಹಂಪಿ ಕನ್ನಡ ವಿವಿಯಿಂದ ನಾಡೋಜ ಗೌರವ, ಮೈಸೂರು ವಿವಿಯಿಂದ ಗೌರವ ಡಿ ಲಿಟ್ ಪದವಿ, ನೃಪತುಂಗ ಪ್ರಶಸ್ತಿ, ರಾಷ್ಟ್ರಕವಿ ಪುರಸ್ಕಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಹೀಗೆ ಹತ್ತು ಹಲವಾರು ಗೌರವಗಳು ಲಭಿಸಿವೆ. ದಾವಣಗೆರೆಯಲ್ಲಿ ನಡೆದ ೬೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಶಿವರುದ್ರಪ್ಪನವರಿಗೆ ಲಭಿಸಿತ್ತು. 

ಶಿವರುದ್ರಪ್ಪನವರು ಡಿಸೆಂಬರ್ ೨೩, ೨೦೧೩ರಂದು ಬೆಂಗಳೂರಿನ ಬನಶಂಕರಿಯ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. ಇವರ ಆಶಯದಂತೆ ಮೃತದೇಹವನ್ನು ಮಣ್ಣು ಮಾಡದೇ ಸಕಲ ಸರಕಾರಿ ಗೌರವಗಳೊಂದಿಗೆ ಅಗ್ನಿದಹನ ಮಾಡಲಾಯಿತು.

ಶಿವರುದ್ರಪ್ಪನವರ ೯ ಕವನಗಳು ‘ಸುವರ್ಣ ಸಂಪುಟ’ದಲ್ಲಿ ಪ್ರಕಟವಾಗಿವೆ. ಅವುಗಳೆಂದರೆ ಮುದುಕಿ, ಕ್ರಾಂತಿಕಾರ, ಜಡೆ, ಬಂಡೆ-ಹೂವು, ಒಂದು ಚಿತ್ರ, ಮಬ್ಬಿನಿರುಳು, ಚೆಲುವಿಗೆ, ಕಂಪ್ಲೇಂಟು ಮತ್ತು ಗೊರಕೆ. ಇವುಗಳಿಂದ ಎರಡು ಕವನಗಳನ್ನು ಆಯ್ದು ಪ್ರಕಟಿಸಿದ್ದೇವೆ.

ಮುದುಕಿ

ತನುವನೊಂದು ಬಿಲ್ಲುಮಾಡಿ

ಪ್ರಾಣಬಾಣವನ್ನು ಹೂಡಿ

ಕಾಲ ಪುರುಷನೆಳೆದ ಹಾಗೆ

ದೇಹ ಬಾಗಿಹೋಗಿದೆ-

ಗಳಿತಫಲದ ತರುವಿನಲ್ಲಿ

ಶಿಶಿರ ಕುಳಿರಗಾಳಿಯಲ್ಲಿ

ಎಲೆಗಳುದುರಿ ರಸವಿಹೀನ-

ತರುವಿನಂತೆ ತನುವಿದೆ.

 

ಬೆಳ್ಳಿನವಿರ ಹೆಣ ಮುದುಕಿ

ಭಗವಂತನ ನಂಬಿ ಬದುಕಿ

ಕೈಯಕೋಲನೂರಿ ಮುಂದೆ

ಬರುತಲಿರುವಳು.

ಕಣಿವೆಯಾದ ಕೆನ್ನೆ ಮೇಲೆ

ಮುಗಿಲ ಮರೆಯತಾರೆಯೋಲೆ

ಎರಡು ಕಣ್ಣಶಾಂತಿಯಿಂದ

ಅರಳಿಸಿರುವಳು !

 

ಯಾವ ಊರೊ ಎಲ್ಲಿಯವಳೊ!

ಎಲ್ಲಿಗಿಂತು ಸಾಗುತಿಹಳೊ-

ನನಗೆ ಮಾತ್ರ ಜಗದ ಜೀವ

ನಡೆಯುವಂತೆ ತೋರಿದೆ -

ಅರಿಯದಿರುವ ಭಾವವೊಂದು

ಎದೆಯನೆಲ್ಲ ಕಲಕಿನಿಂದು

ನಿಷ್ಕಾರಣದೊಲವು ಮೂಡಿ

ಕಣ್ಣ ಹನಿಯ ತುಂಬಿದೆ.

***

ಗೊರಕೆ

ಇರುಳ ಮೌನದ ಕೊರಡ ಕೊರೆಯುವ

ಇವರ ಗೊರಕೆಯ ಗರಗಸ

ತಾರಮಂದರದಲ್ಲಿ ಏರಿಳಿ-

ದೆಂತು ಗೈದಿದೆ ಪರವಶ !

 

ಇರುಳ ನಿದ್ದೆಯ ಮರಳುಗಾಡೊಳು

ನಡೆವ ಕನಸಿನ ಕಾರವಾನ್,

ಇವರ ಗೊರಕೆಯ ಬೀಸಿನುರುಳಿಗೆ

ಸಿಲುಕಿ ನಿಂತಿತೊ ಕಾಣೆ ನಾನ್ !

 

ಏನು ಲಯ, ಓ ಏನು ತಾಳ-

ವಿದೇನು ರಾಗಾಲಾಪನೆ !

ಘೂಕ-ಗಾರ್ದಭ ಚಕಿತವಾಗಿವೆ,

ಆಹ ! ಎಂಥ ಕಸಿವಿಸಿ ಯಾತನೆ !

 

ಗಾನದೇವಿಯ ಶಿಲುಬೆಗೇನಿಸ-

ಲವಳು ನರಳುವ ದನಿಗಳೋ,

ಜಗದಪಸ್ವರಗಳನು ಭಟ್ಟಿಯ-

ನಿಳಿಪ ಗಾಣದ ಮೊರೆತವೊ,

ನಿದ್ದೆ ಬೀದಿ ರಿಪೇರಿ ರೋಡೆಂ

ಜಿನ್ನು ಉರುಳುವ ರಭಸವೋ,

ಏನು ಬಣ್ಣಿಸಲಯ್ಯ ಉಪಮಾ-

ತೀತವಾದೀ ಗಾನವ,

ಇಂಥ ಗೊರಕೆಯ ನಕ್ರಪೀಡನೆ-

ಯಿಂದ ಬಿಡಿಸೋ ಕೇಶವ.

(‘ಸುವರ್ಣ ಸಂಪುಟ'ದಿಂದ ಆಯ್ದ ಕವನಗಳು)