‘ಸುವರ್ಣ ಸಂಪುಟ' (ಭಾಗ ೬೯) - ಎಂ. ಗೋಪಾಲಕೃಷ್ಣ ಅಡಿಗ
ಮೊಗೇರಿ ಗೋಪಾಲಕೃಷ್ಣ ಅಡಿಗರು ಹುಟ್ಟಿದ್ದು ಫೆಬ್ರವರಿ ೧೮, ೧೯೧೮ರಲ್ಲಿ ಇಂದಿನ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಪುಟ್ಟ ಗ್ರಾಮದಲ್ಲಿ. ಇವರದ್ದು ಪುರೋಹಿತ ಮನೆತನ. ಇವರ ತಂದೆ ಬಹಳ ಸೊಗಸಾಗಿ ಸಂಸ್ಕೃತ ಶ್ಲೋಕಗಳನ್ನೂ, ಕನ್ನಡದಲ್ಲಿ ದೇಶಭಕ್ತಿ ಗೀತೆಗಳನ್ನೂ ರಚನೆ ಮಾಡುತ್ತಿದ್ದರಂತೆ. ಇದು ಬಾಲಕನಾದ ಗೋಪಾಲಕೃಷ್ಣರ ಮೇಲೆ ಬಹಳ ಪ್ರಭಾವವನ್ನು ಬೀರಿದವು. ಆ ಸಮಯ ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳು ಇವರನ್ನು ಬಹಳ ಸೆಳೆಯುತ್ತಿದ್ದವು. ಈ ಕಾರಣದಿಂದ ಗೋಪಾಲಕೃಷ್ಣ ಅಡಿಗರು ತಮ್ಮ ಹದಿಮೂರನೇಯ ವಯಸ್ಸಿಗೇ ಪದ್ಯವೊಂದನ್ನು ರಚನೆ ಮಾಡಿದ್ದರೆಂದು ಅವರೇ ತಮ್ಮ ಮಾತುಗಳಲ್ಲಿ ಬಣ್ಣಿಸಿದ್ದಾರೆ.
ಅಡಿಗರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೈಂದೂರಿನಲ್ಲಿ ಪೂರೈಸಿ, ಕುಂದಾಪುರದ ಪ್ರೌಢಶಾಲೆಯಲ್ಲಿ ಶಿಕ್ಷಣ ಮುಗಿಸಿದರು. ಶಾಲಾ ಜೀವನದ ಸಮಯದಲ್ಲಿ ಇವರ ಸಾಹಿತ್ಯದ ಗೀಳನ್ನು ಕಂಡ ಶಿವರಾಮ ಕಾರಂತರ ಅಣ್ಣನವರಾದ ಕೋಟ ಲಕ್ಷ್ಮೀನಾರಾಯಣ ಕಾರಂತರು ಅಡಿಗರಿಗೆ ಒಳ್ಳೆಯ ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಿದರು. ಗಾಂಧೀಜಿಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬೆಂಬಲ ನೀಡಿ ಹಲವಾರು ದೇಶಭಕ್ತಿ ಗೀತೆಗಳನ್ನು ರಚನೆ ಮಾಡಿದರು. ಇವರ ಈ ಕವನಗಳು ಬೆಂಗಳೂರಿನ ‘ಸುಬೋಧ' ಮಂಗಳೂರಿನ ‘ಬಡವರ ಬಂಧು' ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮೆಚ್ಚುಗೆಯನ್ನು ಗಳಿಸಿದವು.
ಹತ್ತನೇ ತರಗತಿಯನ್ನು ಪೂರೈಸಿದ ನಂತರ ಅಡಿಗರು ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪೂರೈಸಿದರು. ಅಲ್ಲಿ ಅವರಿಗೆ ಹೆಚ್ ವೈ ಶಾರದಾ ಪ್ರಸಾದ್, ಚದುರಂಗ, ಬಿ ಎಚ್ ಶ್ರೀಧರ್, ಮುಂತಾದ ಖ್ಯಾತನಾಮರ ಒಡನಾಟ ದೊರೆಯಿತು. ಮೈಸೂರು ವಿಶ್ವವಿದ್ಯಾನಿಲಯದಿಂದ ಆಂಗ್ಲ ಭಾಷೆಯಲ್ಲಿ ಎಂ ಎ ಪದವಿಯನ್ನು ಪಡೆದುಕೊಂಡರು. ನಂತರ ಮೈಸೂರು ಶಾರದಾ ವಿಲಾಸ, ಸೈಂಟ್ ಫಿಲೋಮಿನಾ ಕಾಲೇಜು ಹಾಗೂ ಕುಮಟಾದ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. ಉಡುಪಿಯ ಪೂರ್ಣ ಪ್ರಜ್ಞ ಕಾಲೇಜು, ಸಾಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿದ್ದರು.
ಗೋಪಾಲಕೃಷ್ಣ ಅಡಿಗರು ಕನ್ನಡ ಸಾಹಿತ್ಯದ ನವ್ಯ ಕಾವ್ಯದ ಪ್ರವರ್ತಕರೆಂದೇ ಹೆಸರಾದವರು. ಅಡಿಗರ ಮೊದಲ ಕವನ ಸಂಕಲನ ‘ಭಾವ ತರಂಗ' ಈ ಕಾವ್ಯ ಸಂಕಲನಕ್ಕೆ ವರ ಕವಿ ಬೇಂದ್ರೆಯವರು ಮುನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದರು. ೧೯೫೫ರ ನಂತರ ಸುಮಾರು ಕಾಲು ಶತಮಾನಗಳ ಕಾಲ ಅಡಿಗರು ಕನ್ನಡ ನವ್ಯ ಲೋಕದ ಮುಕುಟಪ್ರಾಯರಾಗಿದ್ದರು. ಆ ಸಮಯ ಕಾವ್ಯ ಲೋಕಕ್ಕೆ ಹೊಸಬರಾಗಿದ್ದ ಯು ಆರ್ ಅನಂತಮೂರ್ತಿ, ಎ ಕೆ ರಾಮಾನುಜನ್, ರಾಮಚಂದ್ರ ಶರ್ಮಾ, ನಿಸಾರ್ ಅಹಮದ್, ಗಿರಡ್ಡಿ ಗೋವಿಂದರಾಜು, ಸಿದ್ದಲಿಂಗ ಪಟ್ಟನಶೆಟ್ಟಿ, ಜಯಂತ ಕಾಯ್ಕಿಣಿ, ಎಂ ಎನ್ ವ್ಯಾಸರಾವ್, ಮಾಧವ ಕುಲಕರ್ಣಿ ಮೊದಲಾದವರು ಅಡಿಗರು ತೋರಿದ ಮಾರ್ಗದಲ್ಲಿ ತಮ್ಮ ನವ್ಯಪ್ರಜ್ಞೆಯ ಸಾಹಿತ್ಯವನ್ನು ರಚಿಸಿದರು.
ಅಡಿಗರು ಹಲವಾರು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಅದರಲ್ಲಿ ಭಾವ ತರಂಗ, ಕಟ್ಟುವೆವು ನಾವು, ಚಂಡೆ ಮದ್ದಳೆ, ಭೂಮಿಗೀತ, ನಡೆದು ಬಂದ ದಾರಿ, ವರ್ಧಮಾನ, ಇದನ್ನು ಬಯಸಿರಲಿಲ್ಲ, ಬತ್ತಲಾರದ ಗಂಗೆ, ಮಾವೋ ಕವನಗಳು, ಚಿಂತಾಮಣಿಯಲ್ಲಿ ಕಂಡ ಮುಖ, ಬಾ ಇತ್ತ ಇತ್ತ ಇತ್ಯಾದಿ. ಅನಾಥೆ ಮತ್ತು ಆಕಾಶದೀಪ ಎಂಬ ಎರಡು ಕಾದಂಬರಿಗಳನ್ನು ಅಡಿಗರು ಬರೆದಿದ್ದಾರೆ. ಹಲವಾರು ಅನುವಾದ ಬರಹಗಳು, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ ಸಂಬಂಧಿ ಬರಹಗಳನ್ನು ಅಡಿಗರು ಬಹಳ ಸೊಗಸಾಗಿ ಬರೆದಿದ್ದಾರೆ.
ಗೋಪಾಲಕೃಷ್ಣ ಅಡಿಗರಿಗೆ ಸಂದ ಪ್ರಶಸ್ತಿಗಳು ಹಲವಾರು. ೧೯೭೪ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೭೫ರಲ್ಲಿ ‘ವರ್ಧಮಾನ’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೭೯ರಲ್ಲಿ ಕೇರಳದ ಪ್ರತಿಷ್ಟಿತ ‘ಕುಮಾರ್ ಸನ್ಮಾನ್' ಪ್ರಶಸ್ತಿ, ೧೯೮೦ರಲ್ಲಿ ಸಮಗ್ರ ಕಾವ್ಯಕ್ಕೆ ಮೂಡಬಿದರೆಯ ‘ವರ್ಧಮಾನ' ಪ್ರಶಸ್ತಿಗಳು ದೊರೆತಿವೆ. ೧೯೮೬ರಲ್ಲಿ ಮಧ್ಯಪ್ರದೇಶ ಸರಕಾರದ ಪ್ರಥಮ ‘ಕಬೀರ್ ಸನ್ಮಾನ್' ಅಡಿಗರ ಮಡಿಲು ಸೇರಿತು. ಇದರ ಜೊತೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಡಾಕ್ಟರ್ ಆಫ್ ಲಿಟರೇಚರ್ ಮೊದಲಾದ ಪುರಸ್ಕಾರಗಳು ಅಡಿಗರಿಗೆ ದೊರೆತಿವೆ. ಕನ್ನಡದ ಮಹತ್ವದ ಕವಿಯಾಗಿದ್ದ ಅಡಿಗರು ನವೆಂಬರ್ ೪, ೧೯೯೨ರಲ್ಲಿ ನಿಧನ ಹೊಂದಿದರು.
ಇವರ ೧೪ ಕವನಗಳು ಸುವರ್ಣ ಸಂಪುಟ' ಕೃತಿಯಲ್ಲಿ ಪ್ರಕಟವಾಗಿದೆ. ಅವುಗಳೆಂದರೆ “ಅಂಧೇನೈವ ನೀಯಮಾನಾ ಯಥಾಂಧಾಃ”, ಏನಾದರೂ ಮಾಡುತಿರು ತಮ್ಮ, ಇದು ಬಾಳು!, ಸಖಿ, ಬಾ!, ಅತಿಥಿಗಳು, ಒಂದು ಸಂಜೆ, ಧೂಮ ಲೀಲೆ, ಮೋಹನ ಮುರಲಿ, ಯಾರಾದರು ನೀನಾಗಿರು, ಸಮಾಜ ಭೈರವ, ಓ ನನ್ನ ಜನವೇ!, ಹೊಸ ಗಾಳಿ, ಭೂತ ಮತ್ತು ಭೂಮಿ ಗೀತ. ಈ ಕವನಗಳಲ್ಲಿ ಕೆಲವೊಂದು ಬಹಳ ದೀರ್ಘವಾಗಿರುವ ಕಾರಣ ಅವುಗಳ ಪ್ರಕಟಣೆಯನ್ನು ಕೈಬಿಟ್ಟು, ಉಳಿದವುಗಳಲ್ಲಿ ಎರಡು ಕವನಗಳನ್ನು ಆಯ್ದು ಪ್ರಕಟ ಮಾಡಿದ್ದೇವೆ. ಅಡಿಗರ ಕವನಗಳ ಸೊಗಡನ್ನು ಸವಿಯಿರಿ…
ಮೋಹನ ಮುರಲಿ
ಯಾವ ಮೋಹನ ಮುರಲಿ ಕರೆಯಿತು ದೂರತೀರಕೆ ನಿನ್ನನು ?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ?
ಹೂವುಹಾಸಿಗೆ, ಚಂದ್ರ, ಚಂದನ, ಬಾಹುಬಂಧನ, ಚುಂಬನ ;
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ;
ಒಲಿದ ಮಿದುವೆದೆ, ರಕ್ತಮಾಂಸದ ಬಸಿದು ಸೋಂಕಿನ ಪಂಜರ ;
ಇಷ್ಟೇ ಸಾಕೆಂದಿದ್ದೆಯಲ್ಲೋ ! ಇಂದು ಏನಿದು ಬೇಸರ?
ಏನಿದೇನಿದು ಹೊರಳುಗಣ್ಣಿನ ತೇರುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯೋಚನೆ?
ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ ;
ಏನೋ ತೀಡಲು ಏನೊ ತಾಕಲು ಹತ್ತಿ ಉರಿಯುವುದು ಕಾತರ;
ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ ;
ಮೊಳೆಯದಲೆಗಳ ಮೂಕವರ್ಮರ ಇಂದು ಇಲ್ಲಿಗು ಹಾಯಿತೆ?
ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?
ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?
***
ಯಾರಾದರು ನೀನಾಗಿರು
ಯಾರಾದರು ನೀನಾಗಿರು, ಪ್ರಭುವೇ ?
ನನ್ನೆದೆಯಾಳವನಾಳುವ ವಿಭುವೇ
ನಿನ್ನಯ ಪದನಖದುನ್ಮುಖ ಮಯೂಖ
ಮಾಲೆಗೆ ಶರಣಾದೆನು ಗುರುವೇ !
ನಿನ್ನ ವಿಲಕ್ಷಣ ಕರುಣಾಘಾತಕೆ
ತಲೆಬಾಗಿದೆ ದೊರೆಯೇ !
ಹಳೆಯ ಹೆಸರು ಸೊಗಸದು ಈ ಮನಕೆ ;
ಹೆಸರೆಲ್ಲವು ಹುಸಿ ಎಂಬನು ಮಾನಕೆ
ಸಿಕ್ಕಿದಂಥ ದುಃಖಿ -ರೆಕ್ಕೆಯ-
ಬಲಕೆ ಉಕ್ಕಿ, ಸೊಕ್ಕಿ
ಹಳೆಗೂಡಿನಾಸೆ ಬಿಟ್ಟು,
ಹೊಸತನದ ಪಂಥ ತೊಟ್ಟು,
ದೂರ, ದೂರ, ದೂರ-
ಬಾನನೆಲ್ಲ ಈಜಾಡಿ ನೋಡಿ ತೊನೆದಾಡಿಯಾಡಿ ಹಾಡಿ,
ಕುಣಿದು ಕುಣಿದು ಕೊನೆಕೊನೆಗೆ ತನಗೆ ಕೊನೆಯಿರದ ದಣಿವು ಮೂಡಿ,
ರೆಕ್ಕೆ ಸೋಲುತಿರೆ, ಉಸಿರು ತೀರುತಿರೆ,
ಎಲ್ಲಿ, ಎಲ್ಲಿ, ಹಕ್ಕ?
ನಿನ್ನ ಅದೃಶ್ಯ, ಅನೂಹ್ಯ, ಸನಾತನ ವಕ್ಷವೊಂದೆ ರಕ್ಷೆ ! -ದೊರೆಯೇ
ಅದೇ ಕೊನೆಯ ಭಿಕ್ಷೆ !
ಈಜುವವನ ಕೈ ಸೋಲುವವರೆಗೂ
ಕಡಲಿನಾಳ ಬಾಯ್ದೆರೆಯುವ ವರೆಗೂ
ತಾನೆ ತನ್ನ ದೈವ-ತಾನೇ-
ತನ್ನ ಜೀವ ದೇವ.
ಕಡಲ ತೆರೆಗಳೇರಾಟಕೆ ಗೆಲುವು
ಬರಲು, ಕಳೆಯ ಕೈ ಕಾಲ್ಗಗಳ ಬಲವು,
ಮುಗಿಯೆ ತನ್ನಹಂಕಾರದ ಛಲವು.
ಏನು ಏನು ಮತ್ತೆ?
ಅಯ್ಯೋ ಸತ್ತೆ ಸತ್ತೆ ಸತ್ತೆ ;
ನೀರಿನಾಳದಿಂದೆದ್ದು ಬರದೆ ದೊರೆ ನಿನ್ನ ವರದ ಹಸ್ತ ?
ಮೇರು ವಂತೆ ಮೇಲೆದ್ದು ಬರಲಿ, ಓ ನಾನು ನಿನ್ನ ವತ್ಸ !
ಯಾರಾದರು ನೀನಾಗಿರು, ದೊರೆಯೆ ;
ಹೆಸರಿಲ್ಲದೆ, ಹೆಸರರಿಯದೆ ಕೂಗುವೆ ;
ಯಾವ ಬಿಂಬಕೋ ನಾ ತಲೆಬಾಗುವೆ.
ಪೊರೆಯೊ, ಪೊರೆಯೊ, ತಂದೆ !
ಉಳಿದುದನೆಲ್ಲ ಬಿಟ್ಟು ಬಂದೆ.
(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನಗಳು)
Comments
ಮೊಗೇರಿ ಗೋಪಾಲಕೃಷ್ಣ ಅಡಿಗರು…
ಮೊಗೇರಿ ಗೋಪಾಲಕೃಷ್ಣ ಅಡಿಗರು ಕನ್ನಡದ ನವ್ಯಕಾವ್ಯದ ಪ್ರವರ್ತಕರು ಎಂಬುದು ಎಲ್ಲರೂ ಒಪ್ಪಲೇ ಬೇಕಾದ ಸತ್ಯ. ಆದರೆ ಇದುವೇ ಕೆಲವರ ಹೊಟ್ಟೆಯುರಿಗೆ ಕಾರಣವಾಯಿತು ಎಂಬುದೂ ಸತ್ಯ. ಗೋಪಾಲಕೃಷ್ಣ ಅಡಿಗರು ಏರಿದ ಎತ್ತರಕ್ಕೆ ಏರಲಾಗಲಿಲ್ಲವೆಂಬ ಹತಾಶೆ ಮತ್ತು ಅಸೂಯೆಯಿಂದಾಗಿ ಇಂತಹ ಕೆಲವರು ಅಡಿಗರ ವಿರುದ್ಧ ವಿಷ ಕಾರಿದ್ದು, ಅಡಿಗರ ಬಗ್ಗೆ ಅಪಪ್ರಚಾರ ಮಾಡಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಸ್ಪಷ್ಟವಾಗಿ ದಾಖಲಾಗಲೇ ಇಲ್ಲ. ವಿಷಕಂಠನಂತೆ ಅವೆಲ್ಲವನ್ನೂ ನುಂಗಿಕೊಂಡು ಅಡಿಗರು ತಮ್ಮ ಸಾಹಿತ್ಯ ಸೃಷ್ಟಿ ಮುಂದುವರಿಸಿದ್ದು ಮಹಾಸಾಧನೆ. ಕೊನೆಗೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಉಳಿದದ್ದು ಮೊಗೇರಿ ಗೋಪಾಲಕೃಷ್ಣ ಅಡಿಗರು ಕನ್ನಡದ ಮೇರುಕವಿಗಳಲ್ಲಿ ಮುಂಚೂಣಿಯಲ್ಲಿ ಇರುವವರು ಎಂಬ ಸತ್ಯ.