‘ಸುವರ್ಣ ಸಂಪುಟ' (ಭಾಗ -೬) ಎಂ.ಆರ್.ಶ್ರೀನಿವಾಸಮೂರ್ತಿ

‘ಸುವರ್ಣ ಸಂಪುಟ' ಪುಸ್ತಕದಿಂದ ಈ ವಾರ ನಾವು ಆಯ್ದುಕೊಂಡ ಕವಿ ಎಂ. ಆರ್. ಶ್ರೀ ಎಂದೇ ಖ್ಯಾತಿ ಪಡೆದ ಎಂ. ಆರ್. ಶ್ರೀನಿವಾಸಮೂರ್ತಿ. ಮೈಸೂರು ರಾಮಚಂದ್ರರಾಯ ಶ್ರೀನಿವಾಸಮೂರ್ತಿ ಇವರ ಪೂರ್ತಿ ಹೆಸರು. ಇವರು ಹುಟ್ಟಿದ್ದು ಆಗಸ್ಟ್ ೨೮, ೧೮೯೨ರಲ್ಲಿ ಮೈಸೂರಿನಲ್ಲಿ. ಇವರ ತಂದೆ ರಾಮಚಂದ್ರರಾಯ ಹಾಗೂ ತಾಯಿ ಸಾವಿತ್ರಮ್ಮ. ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ೧೯೧೫ರಲ್ಲಿ ಬಿಎ ಪದವಿಯನ್ನು ಪಡೆದರು. ಇವರು ಶಿಕ್ಷಕರಾಗಿ, ಶಿಕ್ಷಣ ಇಲಾಖೆಯಲ್ಲಿ ಇನ್ಸ್ ಪೆಕ್ಟರ್ ಆಗಿ, ಜಿಲ್ಲಾ ವಿದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ೧೯೪೭ರಲ್ಲಿ ನಿವೃತ್ತಿ ಹೊಂದಿದರು. ಇವರು ಉತ್ತಮ ವಾಗ್ಮಿ, ಕವಿ, ಲೇಖಕ ಹಾಗೂ ಶಿಕ್ಷಣ ತಜ್ಞರಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್-ಕನ್ನಡ ನಿಘಂಟಿನ ಸಹ ಸಂಪಾದಕರಾಗಿ, ನಂತರ ಮುಖ್ಯ ಸಂಪಾದಕರಾಗಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿದ್ದರು. ಇವರು ೧೯೫೦ರಲ್ಲಿ ಸೊಲ್ಲಾಪುರದಲ್ಲಿ ನಡೆದ ೩೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರು ಅನೇಕ ನಾಟಕ (ಧರ್ಮ ದುರಂತ, ನಾಗರಿಕ, ಕಂಠೀರವ ವಿಜಯ ಇತ್ಯಾದಿ), ಕಾದಂಬರಿ (ಸಾವಿತ್ರಿ, ಮಹಾತ್ಯಾಗ, ರಂಗಣ್ಣನ ಕನಸಿನ ದಿನಗಳು), ಸಂಶೋಧನೆ (ಭಕ್ತಿ ಭಂಡಾರಿ ಬಸವಣ್ಣ, ವಚನ ಧರ್ಮಸಾರ), ವಿಜ್ಞಾನ ಲೇಖನಗಳು (ಉಪಾಧ್ಯಾಯರ ಆರೋಗ್ಯ ಶಾಸ್ತ್ರ, ಇಲೆಕ್ಟ್ರಿಸಿಟಿ) ಬರೆದಿದ್ದಾರೆ.
ಶ್ರೀನಿವಾಸಮೂರ್ತಿಯವರ ಎರಡು ಕಾದಂಬರಿಗಳು ಚಲನಚಿತ್ರಗಳಾಗಿವೆ.
ಇವರು ನವೆಂಬರ್ ೧೬, ೧೯೫೩ರಂದು ನಿಧನ ಹೊಂದಿದರು. ಇವರ ಒಂದು ಅಪರೂಪದ ಕವನ ‘ಒಂದು ಕಾಗದ' ನಿಮಗಾಗಿ ಆಯ್ದು ಪ್ರಕಟಿಸುತ್ತಿದ್ದೇವೆ. ಓದುವ ಸಂತೋಷ ನಿಮ್ಮದಾಗಲಿ. ಎಂದಿನಂತೆ ಪ್ರತಿಕ್ರಿಯೆಗಳಿಗೆ ಸ್ವಾಗತ.
***
ಒಂದು ಕಾಗದ
ನಿಮ್ಮ ಪತ್ರ ಬಂದು ಸೇರಿ
ಎರಡು ಮೂರು ಬಾರಿಯೋದಿ
ಎಲ್ಲ ತಿಳಿದೆನು.
ನೀವು ನನಗೆ ಗಂಡನಲ್ಲ
ನಾನು ನಿಮಗೆ ಹೆಂಡಿರಲ್ಲ
ನೀವು ತಿಳಿವುದು.
ಕುಂಟು ಕಾಲು ಬಚ್ಚು ಬಾಯಿ
ಮೆಳ್ಳಗಣ್ಣು, ನಿಮ್ಮ ಸೇವೆ
ಮಾಡಲಾರೆನು.
ಬ್ರಹ್ಮ ಹಿಂದೆ ಗಂಟು ಹಾಕಿ
ಗಂಡ ಹೆಂಡಿರಾದೆವೆಂದು
ನೀವು ಬರೆವಿರಿ.
ಬ್ರಹ್ಮ ಗಿಮ್ಮ ಹಾಕಲಿಲ್ಲ
ಅಪ್ಪ ತಂದು ನನಗೆ ನಿಮಗೆ
ಗಂಟು ಹಾಕಿದ.
ಹೆತ್ತ ತಂದೆ ಮಾರಿಕೊಂಡು
ಮೃತ್ಯುವಾಗಿ ಕೊಲ್ಲಲಿಂತು
ಮಾಡಲೇನಿದೆ.
ಶಾಸ್ತ್ರ ಗೀಸ್ತ್ರ ತಿಳಿಯೆ ನಾನು
ಬರೆದ ಜನರು ಹೆಂಡಿರಾಗಿ
ಸೇವೆ ಮಾಡಲಿ.
ನೋಟ ಬೇಟ ಗಂಡಿಗೆಂದು
ಧರ್ಮಶಾಸ್ತ್ರ ಹೆಣ್ಣಿಗೆಂದು
ನುಡಿವರೆಲ್ಲರು.
ಕೋರ್ಟು ಗೀರ್ಟು ಆಡಬೇಡ
ಜಡ್ಜಿ ಧರ್ಮವೇನು ಬಲ್ಲ
ನಾನು ತಿಳಿಸುವೆನು.
ಕುರ್ಚಿ ಮೇಲೆ ಕುಳಿತುಕೊಂಡು
ಏನೊ ಗೀಚಿ ಎದ್ದು ಬರುವ
ಮಾತಿದಲ್ಲವು.
ತನ್ನ ಮಗಳ ನಿಮಗೆ ಕೊಟ್ಟು
ತನ್ನ ಮಗನ ಎನಗೆ ಕೊಟ್ಟು
ಮದುವೆ ಮಾಡಲಿ.
ಎನ್ನ ದುಃಖ ಆರಿಗುಂಟು
ಬಾಳಬೇಕು, ಬಾಳಲಾರೆ
ಹಾಳು ಲೋಕವು.
ಬಯ್ವ ಜನರು ಜರಿವ ಜನರು
ಅವರಿಗೇನು, ಬಾಯಿ ಕೊಬ್ಬು
ನೋವು ತೆಗೆವರೆ?
ಬಲ್ಲೆನವರ ಮನದ ಭಾವ
ಇಂದು ನಾನು ಸೂಳೆಯಾಗೆ
ಸುಖಿಪರೆಲ್ಲರು.
ಭೂಮಿ ಮೇಲೆ ಇರುವಳಲ್ಲ
ಇಂದೆ ನಾನು ಕೆರೆಗೆ ಬಿದ್ದು
ಜನ್ಮ ನೀಗುವೆ.
ಶಾಸ್ತ್ರ ಧರ್ಮ ತಣ್ಣಗಾಗಿ
ಬಯ್ವ ಜನರು ಉರಿದು ಹೋಗಿ
ಲೋಕವಡಗಲಿ.
-(ಸುವರ್ಣ ಸಂಪುಟದಿಂದ ಸಂಗ್ರಹಿತ)