‘ಸುವರ್ಣ ಸಂಪುಟ' (ಭಾಗ ೭೧) - ಕಾಶಿ ವಿಶ್ವನಾಥ ಶೆಟ್ಟಿ
ಕಳೆದ ವಾರ ನಾವು ಪ್ರಕಟಿಸಿದ ಕವಿ ಸಿದ್ದಣ್ಣ ಮಸಳಿ ಅವರ ಕವನದ ಬಗ್ಗೆ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಆ ಹೆಸರಿನ ಕವಿಯೊಬ್ಬರು ಇದ್ದಾರೆ ಎಂದು ನಮಗೆ ತಿಳಿದೇ ಇರಲಿಲ್ಲ ಎನ್ನುವ ಮಾತನ್ನೂ ಹಲವರು ಆಡಿದ್ದಾರೆ. ಅಪರೂಪದ ಕವಿಗಳ ಕವನಗಳನ್ನು ಸಂಗ್ರಹಿಸಿ ಕೃತಿ ರೂಪದಲ್ಲಿ ಪ್ರಕಟಿಸಿದ್ದಕ್ಕಾಗಿ ನಾವು ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಹಾಗೂ ‘ಸುವರ್ಣ ಸಂಪುಟ' ಸಂಪಾದಕೀಯ ಮಂಡಳಿಗೆ ಧನ್ಯವಾದಗಳನ್ನು ಹೇಳಲೇ ಬೇಕು.
ಈ ವಾರ ನಾವು ಇನ್ನೊರ್ವ ಅಪರೂಪದ ಕವಿ ಕಾಶಿ ವಿಶ್ವನಾಥ ಶೆಟ್ಟಿ ಅವರ ಕವನವನ್ನು ಆಯ್ದು ತಂದಿದ್ದೇವೆ. ಕಾಶಿ ವಿಶ್ವನಾಥ ಶೆಟ್ಟಿ ಇವರು ಫೆಬ್ರವರಿ ೨೪, ೧೯೨೮ರಂದು ತುಮಕೂರಿನಲ್ಲಿ ಜನಿಸಿದರು. ಇವರ ತಂದೆ ಕೃಷ್ಣ ಶೆಟ್ಟಿ ಹಾಗೂ ತಾಯಿ ಸೀತಾಲಕ್ಷ್ಮಮ್ಮ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತುಮಕೂರಿನಲ್ಲಿ ಪೂರೈಸಿ, ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. (ಆನರ್ಸ್) ಪದವಿ ಹಾಗೂ ಎಂ ಎ ಪದವಿಗಳನ್ನು ಪಡೆದುಕೊಂಡರು. ಕಾಲೇಜು ಸಮಯದಲ್ಲೇ ಇವರು ಸಾಹಿತ್ಯಾಸಕ್ತರಾಗಿದ್ದು, ಸಾಹಿತ್ಯ ಚಟುವಟಿಕೆಗಳಿಗಾಗಿ ‘ವಿಶ್ವ ಸಂಘ' ಎಂಬ ಸಂಘವನ್ನು ಸ್ಥಾಪಿಸಿದ್ದರು. ಈ ಸಂಘವನ್ನು ಉದ್ಘಾಟನೆ ಮಾಡಿದವರು ಖ್ಯಾತ ಸಾಹಿತಿ ತಿ ತಾ ಶರ್ಮ ಇವರು.
ಎಂ ಎ ಪದವಿಯ ಬಳಿಕ ವಿಶ್ವನಾಥ ಶೆಟ್ಟಿಯವರು ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕೆಲಸ ಮಾಡಿದರು. ತಮ್ಮ ಊರಾದ ತುಮಕೂರಿನಲ್ಲೇ ಅಧ್ಯಾಪನಾ ವೃತ್ತಿಯನ್ನು ಪ್ರಾರಂಭಿಸಿದ ಇವರು ಕೆಲ ವರ್ಷಗಳ ಬಳಿಕ ಚಿಕ್ಕಮಗಳೂರು ಜಿಲ್ಲೆಗೆ ವರ್ಗವಾದರು. ಚಿಕ್ಕಮಗಳೂರಿನ ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಅಲ್ಲಿಯೇ ನಿವೃತ್ತಿ ಹೊಂದಿದರು.
‘ಕಾಶಿ ಕಾವೇರಿ' ಇವರ ಮೊದಲ ಕವನ ಸಂಕಲನ. ಈ ಕವನ ಸಂಕಲನವನ್ನು ಗಮನಿಸಿ ಖ್ಯಾತ ಸಾಹಿತಿ ತೀನಂಶ್ರೀ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಂತರ ಮಾವು-ಮಲ್ಲಿಗೆ, ರಾಗ-ಯೋಗ, ಮೇಘಮಾಲೆ, ಚಂದ್ರಿಕಾ-ಚಂದ್ರಮ, ಮುಗುಳು ಮಿಂಚು, ಸಮರ್ಪಣಾ, ದ್ರಾಕ್ಷಿ-ಮದಿರಾಕ್ಷಿ ಮುಂತಾದ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಸೀತಕ್ಕನ ಸಮರ, ಸಮಾಗಮ, ಜೀವಕ್ಕೆ ಜೀವ, ಅಭಾಗಿನಿ, ಭಗ್ನ ಹೃದಯ ಮೊದಲಾದ ಕಾದಂಬರಿಗಳನ್ನು ರಚನೆ ಮಾಡಿದ್ದಾರೆ. ಭವ್ಯ ಭಾರತ ಪರಂಪರೆ, ಧರ್ಮನಂದನ, ಉತ್ಕೃಷ್ಟ ಭಾರತ, ಸಂಘಮಿತ್ರ, ಏಕಲವ್ಯ, ಮಹಾಭೀಷ್ಕ್ರಮಣ ಮೊದಲಾದ ನಾಟಕಗಳನ್ನೂ, ಗೃಹದೇವತೆ, ಬ್ರಹ್ಮಗಂಟು, ಶರಣು ಶನಿದೇವ, ಆಚಾರದ ಬೆನ್ನಲ್ಲಿ ಮೊದಲಾದ ಕಥಾ ಸಂಕಲನಗಳನ್ನೂ, ಸ್ವಾಮಿ ಶಿವಾನಂದ ಸರಸ್ವತಿ, ಶ್ರೀ ಲಕ್ಷ್ಮೀ ನರಸಿಂಹ ಸೋಮಯಾಜಿ, ವೀರ ಸಾವರ್ಕರ್ ಮೊದಲಾದ ಜೀವ ಚರಿತ್ರೆಗಳನ್ನೂ ರಚಿಸಿದ್ದಾರೆ.
ಕಾಶಿ ವಿಶ್ವನಾಥ ಶೆಟ್ಟಿಯವರು ಉತ್ತಮ ಸಂಘಟನಾ ಚತುರರಾಗಿದ್ದರು. ಗಣೇಶೋತ್ಸವ, ರಾಮೋತ್ಸವ ಮೊದಲಾದ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿರಲಿ ಇವರು ಮುಂಚೂಣಿಯಲ್ಲಿ ನಿಂತು ಸಂಘಟನೆ ಮಾಡುತ್ತಿದ್ದರು. ಮಕ್ಕಳ ಸಾಹಿತ್ಯ ಹಾಗೂ ಅನುವಾದ ಪ್ರಕಾರಗಳಲ್ಲೂ ಇವರು ಕೈಯಾಡಿಸಿದ್ದಾರೆ. ಇವರು ಕನ್ನಡ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಸ್ಕೌಟ್ ಚಳುವಳಿಗಳಲ್ಲಿ ಸಕ್ರಿಯ ಪಾಲುದಾರಿಕೆಗಾಗಿ ಇವರಿಗೆ ‘ಮಹಾರಾಜಾ ಸ್ಕೌಟ್' ಪುರಸ್ಕಾರವನ್ನು ನೀಡಿ ಗೌರವಿಸಲಾಗಿತ್ತು. ವಿಶ್ವನಾಥ ಶೆಟ್ಟಿ ಇವರು ಆಗಸ್ಟ್ ೨೦, ೧೯೯೦ರಂದು ನಿಧನರಾದರು.
‘ಸುವರ್ಣ ಸಂಪುಟ' ಕೃತಿಯಲ್ಲಿ ಇವರ ಒಂದು ಕವನ ಪ್ರಕಟವಾಗಿದೆ. ಅದನ್ನು ಸಂಗ್ರಹಿಸಿ ಓದುಗರಿಗಾಗಿ ನೀಡಲಾಗಿದೆ.
ರಾಧೆ ಶ್ಯಾಮ
ಕಲ್ಲು ಕೊನರಿ ಕಲೆಯಾಗಿ ಅರಳಿ ಫಲವಾಗಿ ನಿಂತ ಮಾಟ
ರಾಧೆ ಶ್ಯಾಮ ಸೆಳೆಯುವರು ನಮ್ಮ ಕಣ್ಣುಗಳಿಗಿತ್ತು ಊಟ
ಕೇಳಿ ಕೊಳಲಿನುಲಿ ಕಾಲಗೆಜ್ಜೆ ಗುಲು ಕೆನಿಸಿ ಅಡಿಯ ನಿಡುತ
ಬಂದ ರಾಧೆ ಗೋವಿಂದ ನಡಿಗೆ ತುಟಿಯರಳ ನಗೆಯ ಕೊಡುತ.
ಎನಿತು ಮೋಹ ಅವನೂದುವಾಗ ಗೋಕುಲವೆ ನಾದದಲ್ಲಿ
ಮಿಂದು ಮುಳುಗೆ ಅವನಂತರಂಗದಾ ರಾಧೆ ಭಂಗಿಯಲ್ಲಿ
ಲತೆಯ ತೆರದಿ ಕಟಿ ಕಂಠ ಊರು ಮೊಣ ಕಾಲು ಪಾದ ಕೀಲು
ಬಳುಕಿ ಬಾಗಿ ಕೈಮೂಲ ಕುಲುಕಿ ಬರೆ ನೃತ್ಯ ನವಿಲಿನೋಲು.
ಕೇಳದಿಹುದೆ ಮನಸೆಳೆವ ಕೊಳಲಿನುಲಿಯಂತೆ ಕಾಲಗೆಜ್ಜೆ
ಕಂಡರಿಸೆ ಕಲ್ಲ ಬರಿ ಕಾಣ್ಕೆಯಲ್ಲ ಕವಿಯ ಅಮರ ಬಿಜ್ಜೆ
ಕೇಳ್ವೆಗಾನ ಸಿಹಿಯಿಂಪು ಕೇಳದಿಹ ಮಧುರಗಾನ ಹಿರಿದು
ಭಾವ ಬಧಿರ ಕಿವಿಯಿದ್ದರೇನು ಅಂದ ಕಿಟ್ಟಂತಿಹುದು.
ಯಾವ ಶಿಲ್ಪದೊಳ ಅಕ್ಷಿ ಕಂಡಿತೋ ಸಾಕ್ಷಾತ್ತಾಗಿ ಬೇಡಿ
ಕುಕ್ಷಿಯೊಳಗಿನಾನಂದ ಬಿಡಿಸೆ ಶಿಲೆಯಲ್ಲಿ ಬಂತು ಮೂಡಿ
ರಾಧೆಯಿಟ್ಟು ಅಡಿ ನಾಟ್ಯವಾಡೆ ರೂವಾರಿ ಗಿವಿಯಗೊಟ್ಟು
ಉಳಿಯಪೆಟ್ಟು ಶ್ರುತಿಗೊಟ್ಟು ನಡೆಸೆ ಆಲಿಸಿದನೇನೋ ಗುಟ್ಟು.
ಪ್ರಣಯ ಮಿಥುನ ಮನ ಮೋಹ ಕಥನ ಏಕಾಂತ ನೃತ್ಯಗಾನ
ಅಳಿಸದಂತೆ ಚಿರವಾಗಿ ನಿಂತು ಕಿವಿ ಕಣ್ಣಿಗೀಯ ಪಾನ
ತನ್ನ ತಪವ ಜೀವಿತದ ಶ್ರಮ ಇದು ಪುಣ್ಯ ಕಾರ್ಯವೆಂದು
ಬೆವರ ಜಲದಿ ಮೈ ಕೈಯ ತೊಳೆದು ಮನಸಾರೆ ಧಾರೆಯೆರೆದು.
ಜಡದಿ ತೃಣದಿ ಪರಿಪೂರ್ಣ ಬ್ರಹ್ಮ ತುಂಬಿರುವುದೆಂಬುದನ್ನು…
ರೂವಾರಿ ತೆರೆದು ತೋರಿಸಲು ಕಳೆಯೆ ನಮ್ಮ ಅಜ್ಞತೆಯನ್ನು
ಕೊಳಲ ಶ್ಯಾಮ ಆ ರಾಧೆ ತಮ್ಮ ನಿಜರೂಪದಿಂದ ಇಂದು -
ಎಂದೆಂದು ನಮ್ಮ ಕಣ್ ಕಿವಿಯ ತುಂಬಿ ಇಲ್ಲಿಹರು ಭಕ್ತಿಗೊಲಿದು.
(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)