‘ಸುವರ್ಣ ಸಂಪುಟ' (ಭಾಗ ೭೨) - ಚೆನ್ನವೀರ ಕಣವಿ

‘ಸುವರ್ಣ ಸಂಪುಟ' (ಭಾಗ ೭೨) - ಚೆನ್ನವೀರ ಕಣವಿ

ಜೂನ್ ೨೮, ೧೯೨೮ರಂದು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಸಕ್ಕರೆಪ್ಪ ಹಾಗೂ ಪಾರ್ವತಮ್ಮ ದಂಪತಿಗಳ ಮಗನಾಗಿ ಜನಿಸಿದವರು ಚೆನ್ನವೀರ ಕಣವಿಯವರು. ಇವರ ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ತಂದೆಯವರು ಶಿರುಂದ ಎಂಬ ಊರಿನಲ್ಲಿ ಶಿಕ್ಷಕರಾಗಿದ್ದ ಕಾರಣ ಇವರ ಬಾಲ್ಯ ಶಿರುಂದದಲ್ಲೇ ಕಳೆಯಿತು. ನಾಲ್ಕನೇ ತರಗತಿಯವರೆಗಿನ ಪ್ರಾಥಮಿಕ ಶಿಕ್ಷಣವನ್ನು ಶಿರುಂದದಲ್ಲೇ ಪೂರೈಸಿದರು. ನಂತರ ಧಾರವಾಡ ತಾಲೂಕಿನ ಗರಗ ಶಾಲೆಯಲ್ಲಿ ಏಳನೇ ತರಗತಿಯವರೆಗೆ ಶಿಕ್ಷಣ, ಬಳಿಕ ಮೂಲ್ಕಿ ಪರೀಕ್ಷೆಯನ್ನು ಬರೆದು ಧಾರವಾಡ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದರು. ಬಳಿಕ ಧಾರವಾಡದ ಮುರುಘಾಮಠದಲ್ಲಿದ್ದುಕೊಂಡೇ ಪ್ರೌಢ ಶಿಕ್ಷಣವನ್ನು ಪೂರೈಸಿದರು. 

ಕರ್ನಾಟಕ ಕಾಲೇಜಿನಲ್ಲಿ ಬಿಎ ಪದವಿಯನ್ನು ಗಳಿಸಿ, ೧೯೫೨ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಮೂಲಕ ಎಂಎ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ಕಣವಿಯವರು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಬರೆದ ಕವನವೊಂದನ್ನು ಗಮನಿಸಿ ಖ್ಯಾತ ಸಾಹಿತಿ ಡಿವಿಜಿಯವರು ಮೆಚ್ಚಿಕೊಂಡಿದ್ದರು. ಇದನ್ನು ಸ್ಪೂರ್ತಿಯಾಗಿ ತೆಗೆದುಕೊಂಡ ಕಣವಿಯವರು ನಂತರ ಕವನ ರಚನೆಯತ್ತ ಹೆಚ್ಚು ಗಮನ ಹರಿಸಿದರು. ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ಕೆಲವೇ ವರ್ಷಗಳಲ್ಲಿ ಪದೋನ್ನತಿಯನ್ನು ಹೊಂದಿ ೧೯೫೬ರಲ್ಲಿ ಇದೇ ಪ್ರಸಾರಾಂಗ ವಿಭಾಗದ ನಿರ್ದೇಶಕರಾಗಿ ೧೯೮೩ರ ವರೆಗೆ ಸೇವೆ ಸಲ್ಲಿಸಿದ್ದರು. 

ಇವರ ಪತ್ನಿ ಶಾಂತಾ ದೇವಿಯವರು ಕೂಡ ಸಾಹಿತಿ. ಇವರು ಅತ್ಯುತ್ತಮ ಎನಿಸುವ ಹಲವಾರು ಕಥೆಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕಟ್ಟಿಕೊಟ್ಟಿದ್ದಾರೆ. ಕಣವಿ ದಂಪತಿಗಳಿಗೆ ಐದು ಮಂದಿ ಮಕ್ಕಳು (ನಾಲ್ಕು ಗಂಡು, ಒಂದು ಹೆಣ್ಣು). 

ಚೆನ್ನವೀರ ಕಣವಿಯವರದ್ದು ವಿವಾದ ರಹಿತ ಕವನ ರಚನೆ. ಜನ ವಿರೋಧಿ ಕಾವ್ಯ ರಚನೆಗೆ ಎಂದೂ ಅವರು ಕೈ ಹಾಕಿದ್ದಿಲ್ಲ. ಇವರದ್ದು ಬೆಳಕಿನ ಅನ್ವೇಷಣೆ, ಆ ಬೆಳಕು ಇವರ ಕಾವ್ಯದಲ್ಲಿ ಹಲವಾರು ಆಯಾಮಗಳನ್ನು ಕಟ್ಟಿಕೊಟ್ಟಿದೆ. ಈ ಕಾರಣದಿಂದ ಇವರನ್ನು ಪ್ರೀತಿಯಿಂದ ‘ಚೆಂಬೆಳಕಿನ ಕವಿ' ಎಂದು ಕರೆಯುತ್ತಾರೆ. ‘ಜನವಿರೋಧಿ ಕಾವ್ಯ’ ಎಂಬ ಕಲ್ಪನೆಯನ್ನೂ ನಾನು ಮಾಡಲು ಸಾಧ್ಯವಿಲ್ಲ ಎಂದು ಕಣವಿಯವರು ಒಂದೆಡೆ ಬರೆಯುತ್ತಾರೆ. ನನ್ನ ಗುರಿಯೇನಿದ್ದರೂ ಜನ ಸಾಮಾನ್ಯರನ್ನು ಗೌರವದಿಂದ ಕಾಣುವುದು ಹಾಗೂ ಸಹೃದಯ ಓದುಗರ ಮನಸ್ಸನ್ನು ತಲುಪುವುದು ಎಂದು ಸದಾ ಕಾಲ ಹೇಳುತ್ತಿದ್ದರು. ಕನ್ನಡ ಸಾಹಿತ್ಯ ಸಾಗುವ ದಾರಿಯ ಬಗ್ಗೆ ಅವರಿಗೆ ಸ್ಪಷ್ಟವಾದ ಕಲ್ಪನೆ ಹಾಗೂ ಅರಿವು ಇತ್ತು. 

ಅವರು ರಚಿಸಿದ ‘ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ' ಕವನ ಅತ್ಯಂತ ಜನಪ್ರಿಯ ಕಾವ್ಯಗಳಲ್ಲಿ ಒಂದು. ಕಣವಿಯವರು ಬೇಂದ್ರೆ, ಕುವೆಂಪು ಇನ್ನಿತರ ಕವಿಗಳಿಂದ ತುಂಬಾ ಪ್ರೇರಿತರಾಗಿದ್ದರೂ, ತಮ್ಮದೇ ಆದ ವಿಭಿನ್ನ ಶೈಲಿಯನ್ನು ಅಳವಡಿಸಿಕೊಂಡು ಸಾಹಿತ್ಯ ರಚಿಸಿದ್ದಾರೆ. ೧೯೪೯ರಲ್ಲಿ ಇವರ ಮೊದಲ ಕವನ ಸಂಕಲನ ‘ಕಾವ್ಯಾಕ್ಷಿ' ಬಿಡುಗಡೆಯಾಯಿತು. ನಂತರ ಹಲವಾರು ಕವನ ಸಂಕಲನಗಳು ಹೊರಬಂದವು. ಕಣವಿಯವರ ಮನಸ್ಸನ್ನು ಸೆಳೆದದ್ದು ಸಾನೆಟ್ ಎಂಬ ಕಾವ್ಯ ರಚನಾ ಪ್ರಕಾರ. ಇವರು ಸುಮಾರು ೧೫೦ಕ್ಕೂ ಅಧಿಕ ಸಾನೆಟ್ ಗಳನ್ನು ರಚನೆ ಮಾಡಿದ್ದಾರೆ. 

ಇವರು ‘ಭಾವಜೀವಿ, ಆಕಾಶಬುಟ್ಟಿ, ಮಧುಚಂದ್ರ, ದಾರಿ ದೀಪ, ನೆಲ ಮುಗಿಲು, ಎರಡು ದಡ, ನಗರದಲ್ಲಿ ನೆರಳು, ಜೀವಧ್ವನಿ, ಮಣ್ಣಿನ ಮೆರವಣಿಗೆ, ಜೀನಿಯಾ, ಶಿಶಿರದಲ್ಲಿ ಬಂದ ಸ್ನೇಹಿತ, ಹೊಂಬೆಳಕು’ ಮುಂತಾದ ಕವನ ಸಂಕನಗಳನ್ನು ರಚನೆ ಮಾಡಿದ್ದಾರೆ. ಸಾಹಿತ್ಯ ಚಿಂತನ, ಕಾನ್ಯಾನುಸಂಧನ, ಸಮಾಹಿತ, ಮಧುರ ಚೆನ್ನ ಮೊದಲಾದುವುಗಳು ವಿಮರ್ಶಾತ್ಮಕ ಕೃತಿಗಳು. ಕಣವಿಯವರು ಮಕ್ಕಳ ಸಾಹಿತ್ಯವನ್ನೂ ಬರೆದಿದ್ದಾರೆ. ಹಕ್ಕಿ ಪುಕ್ಕ ಮತ್ತು ಚಿಣ್ಣರ ಲೋಕವ ತೆರೆಯೋಣ ಇವರ ಶಿಶು ಕವನಗಳು. 

ಕಣವಿಯವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ೧೯೮೧ರಲ್ಲಿ ‘ಜೀವ ಧ್ವನಿ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕರ್ನಾಟಕ ಕವಿ ರತ್ನ, ಪಂಪ ಪ್ರಶಸ್ತಿ, ಅನಕೃ ನಿರ್ಮಾಣ ಪ್ರಶಸ್ತಿಗಳು ಸಂದಿವೆ. ೨೦೨೦ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪುರಸ್ಕಾರ ಹಾಗೂ ಅದೇ ವರ್ಷ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ನ್ಯೂಸ್ ೧೮ ವತಿಯಿಂದ ಗೌರವ ಪ್ರಶಸ್ತಿ ನೀಡಲಾಗಿತ್ತು. ೧೯೯೬ರಲ್ಲಿ ಹಾಸನದಲ್ಲಿ ಜರುಗಿದ ೬೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹಾಗೂ ೨೦೦೮ರ ಆಳ್ವಾಸ್ ನುಡಿಸಿರಿ ಇದರ ಸಮ್ಮೇಳನಾಧ್ಯಕ್ಷರಾಗಿದ್ದರು. ತಮ್ಮ ೯೩ನೇ ವಯಸ್ಸಿನಲ್ಲಿ ಫೆಬ್ರವರಿ ೧೮, ೨೦೨೨ರಂದು ಧಾರವಾಡದಲ್ಲಿ ನಿಧನ ಹೊಂದಿದರು. 

ಚೆನ್ನವೀರ ಕಣವಿಯವರ ೫ ಕವನಗಳು ‘ಸುವರ್ಣ ಸಂಪುಟ'ದಲ್ಲಿ ಪ್ರಕಟವಾಗಿವೆ. ಸುವರ್ಣ ಸಂಪುಟದ ಸಂಪಾದಕರ ಪೈಕಿ ಚೆನ್ನವೀರ ಕಣವಿಯವರೂ ಓರ್ವರು. ಇವರ ಕವನಗಳೆಂದರೆ ತುಂಬುದಿಂಗಳು, ಉಪ್ಪು ನೀರು, ಕಾಲ ಪುರುಷನಲ್ಲಿ ಕವಿಗಳ ಕೋರಿಕೆ, ಧಾರವಾಡದಲ್ಲಿ ಮಳೆಗಾಲ, ಶತಾಯುಷಿ ವಿಶ್ವೇಶ್ವರಯ್ಯನವರು. ಈ ಕವನಗಳಿಂದ ಎರಡು ಕವನಗಳನ್ನು ಆರಿಸಿ ಪ್ರಕಟ ಮಾಡಿದ್ದೇವೆ. ಎಂದಿನಂತೆ ಓದುವ ಖುಷಿ ನಿಮ್ಮದಾಗಲಿ.

ಕವನ ೧- ಉಪ್ಪು ನೀರು

ಜಗದ ಕಡಲನು ಸುತ್ತುತಿದೆ ಹಗಲಿರುಳ ಹಡಗು

ನಿಮಿ ನಿಮಿಷದೊಂದು ತೆರೆ ತೆರೆವ ಅನಿಮಿಷ -ಮಿಣಿಕು.

ಗಾಳಿ-ಬಿರುಗಾಳಿ-ಸುಳಿ ಕರುಣೆ-ಕ್ರೌರ್ಯದ ತೊಡಕು.

(ರಟ್ಟೆ ಸೋತರು ಮತ್ತೆ ಹುಟ್ಟು ಹಾಕುವ ಬೆಡಗು !)

ಮೂಡ ಪಡುವಣ ಮುಖಕೆ ರಕ್ತ ಚಿಮ್ಮುವ ಹೊತ್ತು

ಜೀವ ಜೀವದ ನೀರು ಪುಟಿದು ಸಾಗರವರಿದು

ಒಡಲ ಕಡೆವುದು, ದಂಡೆಗಪ್ಪಳಿಸಿ ಮೊರೆಯುವುದು.

ಹಿಮಗಿರಿ ತಿಮಿಂಗಿಲಗಳಜ್ಜಗಾವಲು ಸುತ್ತು !

ಮಳಲಿನಂಚಿಗೆ ಬಾಯಿ ಬಿಡುವ ಭಾವದ ಸಿಂಪು.

ತಳೆದ ಕತ್ತಲ ಗವಿಯ ತೊಳೆದ ಜೀವದ ಮುತ್ತು,

ನಡುವೆ ಅಪರಂಪಾರ ಮುಳುಗಿ ಏಳುವ ಬದುಕು.

ಸಂತತ ಸ್ವತಂತ್ರವಿದು ಯಾರೆ ಹೂಡಲಿ ಸಂಪು-

ತಪ್ಪು ಯಾರದು ?- ಎಲ್ಲಿ ಉಪ್ಪು ನೀರಿಗೆ ಗೊತ್ತು ;

ಈ ಸರಕು ಬಂದರಿಗೆ ಒಯ್ದು ಒಗೆದರೆ ಸಾಕು.

***

ಕವನ -೨ ಶತಾಯುಷಿ ವಿಶ್ವೇಶ್ವರಯ್ಯನವರು

ಘನತೆ-ಗೌರವ-ಸಮತೆಗಿಷ್ಟಗಲ ತೆರೆದ ಕಿವಿ.

ಕ್ಷಿತಿಜದಂಚಿಗೆ ತಾಗಿ ಆಚೆ ಹೊಳೆಯುವ ದೃಷ್ಟಿ,

ಯೋಜನೆಯ ಮೇಜು ಹಣೆ, ತುಟಿ-ವಿನಯ-ಸಂತುಷ್ಟಿ.

ನೇರ ಬಾಳಿದ ಮೂಗು, ದುಡಿಮೆ-ದೀಕ್ಷಾ-ತವಸಿ.

ಶುಭ್ರ ಜರಿಪೇಟ: ಮೇಧಾಕಿರೀಟ ; ಶಾಂತರಸ.

ಓರಣಕೆ ತೋರಣ ಕಟ್ಟಿದುಡುತೊಡುಗೆ. ನಡಿಗೆ-

ನೂರು ಸಂವತ್ಸರದ ಕೊಡುಗೆ ; ಕನ್ನಡ ಗುಡಿಗೆ

ಚಂದನದ ತೇರು, ಕೋಲಾರ ಚಿನ್ನದ ಕಳಸ.

ಸಂಕಲ್ಪ ಮಾತ್ರದಲಿ ಶತಮಾನಗಳ ಕಳಸ.

ಕಡೆದು ನಿಲಿಸುವ ಶಿಲ್ಪಿ ; ಯಂತ್ರ ಗಡಗಡಗಾಲಿ

ಉಕ್ಕು-ಕಬ್ಬಿಣ-ಸೊಕ್ಕು, ವಿದ್ಯುಚ್ಛಕ್ತಿ ಮೈಲಿ !

ವೃಂದಾವನದಿ ಮತ್ತೆ ಜೀವ ಪುಟಿಯುವ ರಾಸ.

ಅಜ್ಜನದ್ಭುತ ಕಥೆಗೆ ಮೊಮ್ಮಗನ ಮೈನವಿರು

ಉಜ್ಜು ಭಾರತವಜ್ರ ! ಜಂಗುತಿಂದವರಿವರು.
***

('ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನಗಳು)