‘ಸುವರ್ಣ ಸಂಪುಟ' (ಭಾಗ ೭೭) - ಕುಸುಮಾಕರ ದೇವರಗೆಣ್ಣೂರು

ಕುಸುಮಾಕರ ದೇವರಗೆಣ್ಣೂರು ಎಂಬ ಕಾವ್ಯನಾಮದಲ್ಲಿ ತಮ್ಮ ಬರಹಗಳನ್ನು ರಚಿಸಿದವರು ವಸಂತ ಅನಂತ ದಿವಾಣಜಿ. ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವಾರು ವಿಶಿಷ್ಟ ಕಾದಂಬರಿಗಳನ್ನು ರಚನೆ ಮಾಡಿದ್ದಾರೆ. ಇವರು ಹುಟ್ಟಿದ್ದು ಫೆಬ್ರವರಿ ೧೫, ೧೯೩೦ರಲ್ಲಿ ವಿಜಯಪುರ ಜಿಲ್ಲೆಯ ದೇವರಗೆಣ್ಣೂರು ಎಂಬ ಗ್ರಾಮದಲ್ಲಿ. ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ, ಪುಣೆ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡರು. ೧೯೫೬ರಲ್ಲಿ ಸೋಲ್ಲಾಪುರದ ದಯಾನಂದ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ೩೫ ವರ್ಷಗಳವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು.
ಕನ್ನಡದ ಖ್ಯಾತ ಕವಿ ದ ರಾ ಬೇಂದ್ರೆಯವರ ಸಾಂಗತ್ಯ ಕುಸುಮಾಕರ ಅವರಿಗೆ ೧೨ ವರ್ಷಗಳ ಕಾಲ ಸೊಲ್ಲಾಪುರದಲ್ಲಿ ಲಭಿಸಿತ್ತು. ಬೇಂದ್ರೆಯವರ ನಿಕಟವರ್ತಿಯಾಗಿ ಅವರನ್ನು ಬಹಳ ಹತ್ತಿರವಾಗಿ ಕಂಡಿದ್ದಾರೆ. ಕುಸುಮಾಕರ ಇವರು ಅನೇಕ ಮರಾಠಿ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರು ಕನ್ನಡದಲ್ಲಿ ಐದು ಕಾದಂಬರಿಗಳನ್ನು ರಚಿಸಿದ್ದಾರೆ. ಮುಗಿಯದ ಕಥೆ, ನಾಲ್ಕನೆಯ ಆಯಾಮ, ನಿರೀಂದ್ರಿಯ, ಪರಿಘ, ಬಯಲು-ಬಸಿರು ಹಾಗೂ ದುರ್ದಮ್ಮ ಎಂಬ ಕಾದಂಬರಿಯನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಪುರಂದರ ದಾಸರನ್ನು ಕುರಿತ 'ಪ್ರಸಾದ ಯೋಗ' ಎಂಬ ಮಹಾ ಪ್ರಬಂಧಕ್ಕೆ ಇವರಿಗೆ ಪಿ ಎಚ್ ಡಿ ಪದವಿ ದೊರೆತಿದೆ. 'ಸಪ್ನ ನೌಕೆ' ಎಂಬುದು ಇವರ ಕವನ ಸಂಕಲನ. ಗಾಳಿ ಗೆಜ್ಜೆ ಹಿಡಿದ ಸುಗಂಧ, ನಕ್ಷೆಗೆ ಎಟುಕದ ಕಡಲು, ಕ್ರಾಂತ ದರ್ಶನ ಇವರ ಸಾಹಿತ್ಯ ವಿಮರ್ಶೆ. 'ಅವಗಾಹ' ಎಂಬ ಗೌರವ ಗ್ರಂಥವನ್ನು ರಚನೆ ಮಾಡಿದ್ದಾರೆ.
ಕುಸುಮಾಕರ ದೇವರಗೆಣ್ಣೂರು ಇವರಿಗೆ ೨೦೦೬ರಲ್ಲಿ ಸಾಹಿತ್ಯ ಸಾಧನೆಗಾಗಿ ಸತ್ಯಕಾಮ ಪ್ರಶಸ್ತಿ ದೊರೆತಿದೆ. ೨೦೦೩ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು ಮುಂಬಯಿನ ನಾರಾಯಣ ಗುರು ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಇವರು ಎಪ್ರಿಲ್ ೧೭, ೨೦೧೨ರಲ್ಲಿ ನಿಧನ ಹೊಂದಿದರು.
'ಸುವರ್ಣ ಸಂಪುಟ' ಕೃತಿಯಲ್ಲಿ ಇವರ ಮೂರು ಕವನಗಳು ಪ್ರಕಟವಾಗಿವೆ. ಅವಳ ಕಾಗದ, ಇಂತಹವೆ ನಿಮ್ಮ ಕವನ ಹಾಗೂ ಬೇರೆ ಸಿಂಗಾರಗಳು. ಇವುಗಳಿಂದ ಒಂದು ಕವನವನ್ನು ಆರಿಸಿ ಪ್ರಕಟಿಸಿದ್ದೇವೆ. ಓದಿ ಪ್ರತಿಕ್ರಿಯಿಸಲು ಮರೆಯದಿರಿ.
ಬೇರೆ ಸಿಂಗಾರಗಳು
"ನೆರೆಮನೆಯ ಸಾವಿತ್ರಿ ಹಬ್ಬ ಬಂದಿತು ಎಂದು
ಬಂಗಾರ ಕೊಂಡಿರುವಳೆಂದು ನಾನು
ಕೊರಗಬೇಕೆ? ಹೇಳಿ ಏನು ಮಾತಿದು ಹುಚ್ಚು
ಬಂಗಾರ ತಂದರೆಯೆ ಹಬ್ಬವೇನು?"
"ಮನೆಯಲ್ಲಿ ನಿಮಗಾನು ಕರಕರೆಯ ಮಾಡಿದೆನೆ?
ಹೊಸ ಬಟ್ಟೆಗೆಂದಾರೆ ಪೀಡಿಸಿದೆನೆ?
ನಿಮ್ಮ ಕುಲುಕುಲು ಮೊಗವು ಮಾತ್ರ ಒಂದೇ ಸಾಕು
ಬಂಗಾರ ಬೇಕೆಂದು ಕಾಡಿರುವನೆ?"
"ನನ್ನ ಸುಖದೊಳಗಿಡಲು ಹಗಲಿರುಳು ನೀವಿನ್ನು
ತಲೆ ಒಡೆದುಕೊಳ್ಳುವದು ಬೇಡ ನೋಡಿ.
ಮೊದಲಿನಂತೆಯೇ ಮತ್ತೆ ವೇಗದಲಿ ಗೆಲುವಾಗಿ,
ಹೇಳುವೆನು ಈ ಮಾತು ಎದೆಯ ತೋಡಿ."
" ಸಂಜೆಯಲಿ ದಣಿದವರು ಕಾಸು ಬರುವದು ಎಂದು
ಹತ್ತು ಹುಡುಗರ ತಂದು ಕಲಿಸಲೇಕೆ?
ಬೆಳಗಿನಲು ಅದೆ ಹಾಡು ! ನೀವಿಂತು ಬಡವಾಗಿ
ನಮಗೆ ಕಣ್ಣೀರನು ಉಣಿಸಬೇಕೆ? "
ವಿಜಯ ದಶಮಿಯು ಬರಲು ನಾನಿಂತು ಕೊರಗಿರಲು
ಪ್ರತಿಭೆ ತಿಳಿಹೇಳಿದಳು ಇಂತು ನನಗೆ !
ಇಲ್ಲವಳಿಗೆಳ್ಳಷ್ಟು ಹೊನ್ನಾಸೆ ! ಹೇಳಿದಳು
ಬೇರೆ ಸಿಂಗಾರಗಳು ಬೇಡ ತನಗೆ.
ಬೇರೆ ಸಿಂಗಾರಗಳು ಬೇಕು ನಮಗೇತಕ್ಕೆ?
ಬಾಳಿನಲಿ ನಮಗೇನು ಕೊರತೆಯುಂಟು?
ಪ್ರೇಮ ನಂದಾದೀಪ ಸವಿಮಾತೆ ಪಕ್ವಾನ್ನ
ಪ್ರೀತಿದಶೆ ಇಹ ಬಾಳ್ಗೆ ಭಾಗ್ಯವುಂಟು .
ನಾನವಳಿಗಾಭರಣ ! ನನಗವಳು ಭೂಷಣವು
ಹಸುಳೆಗಳು ಇಬ್ಬರಿಗು ರನ್ನದೊಡವು
ನಮ್ಮ ಮನೆಯೊಳಗಿಹುದು ಬೆಲೆಯ ಕಟ್ಟಲು ಬರದ
ಒಲವು ಹೊನ್ ತುಂಬಿರುವ ರನ್ನಗೊಡವು.
ಪಾರಿಜಾತಕೆ ಮತ್ತೆ ಬೇರೆ ಬಣ್ಣವು ಬೇಕೆ?
ಸಂಪಗೆಗೆ ಸೌರಭದ ಸಾಲ ಬೇಕೆ?
ಒಲವು ಮಲ್ಲಿಗೆ ಮುಡಿದ ಬಾಳಹೆಣ್ಣಿನ ಮುಡಿಗೆ
ಇನ್ನುಳಿದ ಹೂವುಗಳ ಆಸೆಯೇಕೆ?
***
ಬಾನ ಕೆಚ್ಚಲು ಕರೆಯುತ್ತಿತ್ತು ಬೆಳದಿಂಗಳವ
ಇಳೆಯು ಹಾಲ್ಗಡಲಿನಲ್ಲಿ ತೇಲುತ್ತಿತ್ತು.
ಶಾರದ ವಿಭಾವರೀ ಸೌಭಾಗ್ಯ ಮೌನದಲಿ
ಪ್ರೇಮ ಸೂತ್ರಕೆ ಭಾಷ್ಯ ಬರೆಯುತ್ತಿತ್ತು.
('ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)