‘ಸುವರ್ಣ ಸಂಪುಟ' (ಭಾಗ ೮೪) - ಎಚ್ ಎಂ ಮರುಳಸಿದ್ಧಯ್ಯ

‘ಸುವರ್ಣ ಸಂಪುಟ' (ಭಾಗ ೮೪) - ಎಚ್ ಎಂ ಮರುಳಸಿದ್ಧಯ್ಯ

ಸಾಹಿತಿ ಎಚ್ ಎಂ ಮರುಳಸಿದ್ಧಯ್ಯ ಇವರು ಹುಟ್ಟಿದ್ದು ಜುಲೈ ೨೯, ೧೯೩೧ರಲ್ಲಿ. ಇವರ ತಮ್ಮ ಸ್ನಾತಕೋತ್ತರ ಶಿಕ್ಷಣವನ್ನು ಮೈಸೂರು ವಿ ವಿಯಲ್ಲಿ ಪೂರೈಸಿದರು. ಸಮಾಜಶಾಸ್ತ್ರದಲ್ಲಿ ಎಂ ಎ ಗಳಿಸಿದ ಇವರು ನಂತರ ದಿಲ್ಲಿ ವಿಶ್ವವಿದ್ಯಾನಿಲಯದಿಂದ ಸಮಾಜಕಾರ್ಯದಲ್ಲಿ ಎಂ ಎ ಪದವಿಯನ್ನು ಪೂರೈಸಿದ್ದಾರೆ. ಸಮಾಜಕಾರ್ಯದಲ್ಲಿ ವಾರಣಾಸಿಯ ಮಹಾತ್ಮಾ ಗಾಂಧಿ ಕಾಶಿ ಪೀಠ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಗಳಿಸಿದ್ದಾರೆ. 

ಡಾ. ಎಚ್ ಎಂ ಮರುಳಸಿದ್ಧಯ್ಯನವರು ಸಮಾಜಕಾರ್ಯ, ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರ ಇವುಗಳ ಅಧ್ಯಾಪನವನ್ನು ಮದ್ರಾಸ್, ಕರ್ನಾಟಕ, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಾಡಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಗೌರವ ಸಂದರ್ಶಕ ಅಧ್ಯಾಪಕರಾಗಿದ್ದರು. ತಮ್ಮ ಬೋಧನಾ ವೃತ್ತಿಯಿಂದ ೧೯೯೪ರಲ್ಲಿ ನಿವೃತ್ತರಾದರು. ವಿದೇಶಗಳಲ್ಲಿ ಹಲವಾರು ವಿಶ್ವವಿದ್ಯಾನಿಲಯಗಳಿಗೆ ತೆರಳಿ ಉಪನ್ಯಾಸಗಳನ್ನೂ ನೀಡಿದ್ದಾರೆ. ಹಲವಾರು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ತಮ್ಮ ಮೌಲ್ಯಯುತವಾದ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವರಿಗೆ ಆಂಗ್ಲ ಹಾಗೂ ಕನ್ನಡ ಭಾಷೆಗಳಲ್ಲಿ ಉತ್ತಮ ಹಿಡಿತವಿತ್ತು. ಈ ಭಾಷೆಗಳಲ್ಲಿ ಸುಮಾರು ನಲವತ್ತು ಕೃತಿಗಳನ್ನು ಹೊರತಂದಿದ್ದಾರೆ. 

ಇವರ ಪ್ರಮುಖ ಕೃತಿಗಳು: ಪಾಶ್ಚಾತ್ಯ ಚಿಂತಕರ ದೃಷ್ಟಿಯಲ್ಲಿ ಭಾರತೀಯ ಸಮಾಜ, ಧಿಗ್ಭ್ರಾಂತ ಸಮಾಜಕ್ಕೆ ಬೆಳಕಿನ ದಾರಿ, ಸಮಾಜ ಶಾಸ್ತ್ರ-ಕೆಲವು ಒಳನೋಟಗಳು, ಬಿದ್ದುದ್ದು ಗರಿಯಲ್ಲ, ಹಕ್ಕಿಯೇ, ಪಂಚಮುಖಿ ಅಭ್ಯುದಯ ಮಾರ್ಗ, ನಿರ್ಮಲ ಕರ್ನಾಟಕ, ವಚನಗಳಲ್ಲಿ ಅಂತರಂಗ ಬಹಿರಂಗ ಸುದ್ದಿ, ಕಪ್ಪು ಮೋಡದಲ್ಲೊಂದು ಬೆಳ್ಳಿ ರೇಖೆ ಇತ್ಯಾದಿ.

ಮರುಳಸಿದ್ಧಯ್ಯನವರ ಹೆತ್ತವರ ಬಗ್ಗೆ, ಅವರ ಪ್ರಾಥಮಿಕ ಶಿಕ್ಷಣದ ಬಗ್ಗೆ ಅಧಿಕ ಮಾಹಿತಿಗಳು ದೊರೆಯುತ್ತಿಲ್ಲ. ಮರುಳಸಿದ್ಧಯ್ಯನವರು ತಮ್ಮ ೮೭ರ ಹರೆಯದಲ್ಲಿ ಅಕ್ಟೋಬರ್ ೨೮, ೨೦೧೮ರಲ್ಲಿ ನಮ್ಮನ್ನು ಅಗಲಿದರು. ಅವರ ಎರಡು ಕವನಗಳು 'ಸುವರ್ಣ ಸಂಪುಟ' ಕೃತಿಯಲ್ಲಿ ಪ್ರಕಟವಾಗಿದೆ. ಪ್ರವಾಸ ಹಾಗೂ ನಾಗಕನ್ಯೆಯರು. ಇವುಗಳಿಂದ ಒಂದು ಕವನವನ್ನು ಆಯ್ದು ಪ್ರಕಟಿಸಲಾಗಿದೆ.

ನಾಗಕನ್ಯೆಯರು

ಚಳಿಯ ಗಾಳಿಯ ನವುರಾದ ಸುಳಿವು

ಹಣ್ಣಾದ ಗೋದಿ ಬಣ್ಣದ ಹುಲ್ಲ ಬಾಗು, ಬಳುಕು, 

ಹದವಾದ ಹೂಬಿಸಿಲು.

 

ಒಳಗೊಳಗೆ ಸತ್ತು, ಸಾಯಿಸಿ, ಬೇಸತ್ತು

ಬಂದಿರಬೇಕು ಮೈದಾನಕೆ

ಹತ್ತಾರು ನಾಗಕನ್ಯೆಯರು

ಮಿಂಚು ಮೈ ಕಣ್ಣು ಕೈಯವರು.

 

ಸಳಸಳನೆ ಹರಿದಾಡಿ

ಮೈ ಮುರಿದು, ನೆಟಿಕೆ ಮುರಿದು

ತಂಗುಳನೆ ತಿರುತಿರುವಿ ಮೆಲುಕಾಡಿ

ಬಾಯಿಯಲೆ ಅವರಿವರ ಹಲ್ಲು ಮುರಿದು

ಹೆಡೆಯ ತೂಗುವ ಸೊಗಸು

(ಬಿಡುಗಡೆಯ ಹೊಚ್ಚ ಹೊಸತು)

ಕದ್ದಾದರೂ ಹತ್ತಿರವೆ ನೋಡಬೇಕು.

 

ನಾನತ್ತ ಸುಳಿದೆ

ಅದಕೆಂದೆ;

ಅಡಗಿಬಿಟ್ಟರು ಸರಿದು ಸರಸರನೆ

ಅಲ್ಲಲ್ಲೆ ಕಂಡ, ಕಂಡುಂಡ ಬಿಲಗಳಲೆ

ಶರಣು ಶರಣಾಗಿ ಸಂಪ್ರದಾಯಕ್ಕೆ.

 

ನಾನು ಬಲ್ಲೆನು ಅವರ ಕುಲವನ್ನು

ಮತ್ತವರ ವೃತ್ತಿಯನ್ನು;

ನನ್ನಂಥ ನೂರಾರು ಜನರನ್ನು

ಕಚ್ಚಿ ಹೀರಿದ ಚರಿತೆಯನ್ನು.

 

ಆದರೂ ಅಂಜಿದರು

ನನ್ನ ಕಣ್ಣಲಿ

ಗರುಡಗೆರೆಯನು ಕಂಡರೇನು?

('ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)