‘ಸುವರ್ಣ ಸಂಪುಟ' (ಭಾಗ ೮೬) - ಕೆ ವಿ ಸುಬ್ಬಣ್ಣ

‘ಸುವರ್ಣ ಸಂಪುಟ' (ಭಾಗ ೮೬) - ಕೆ ವಿ ಸುಬ್ಬಣ್ಣ

ಕುಂಟಗೋಡು ವಿಭೂತಿ ಸುಬ್ಬಣ್ಣ (ಕೆ ವಿ ಸುಬ್ಬಣ್ಣ) ಇವರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡು. ಫೆಬ್ರವರಿ ೨೦, ೧೯೩೨ರಲ್ಲಿ ಜನಿಸಿದ ಇವರು ಹೆಗ್ಗೋಡುನಂತಹ ಪುಟ್ಟ ಊರಿನಲ್ಲಿ ಇದ್ದುಕೊಂಡೇ ಸಾಧನೆಯ ಉತ್ತುಂಗಕ್ಕೆ ಏರಿದರು. ಹೆಗ್ಗೋಡಿನಲ್ಲಿ ಇವರು ಸ್ಥಾಪಿಸಿದ 'ನೀನಾಸಂ' (ನೀಲಕಂಠೇಶ್ವರ ನಾಟ್ಯ ಸೇವಾ ಸಂಘ) ಎಂಬ ರಂಗ ಸಂಸ್ಥೆಯು ಈಗಲೂ ಪ್ರಗತಿಯ ಉತ್ತುಂಗದಲ್ಲಿದೆ. ಕನ್ನಡ ನಾಡಿನ ಬಹುತೇಕ ಕಲಾವಿದರು 'ನೀನಾಸಂ' ಶಿಷ್ಯರು. ಅಂತರಾಷ್ಟ್ರೀಯ ಹಾಗೂ ಗ್ರಾಮೀಣ ಮಟ್ಟದಲ್ಲೂ ಈ ರಂಗ ಸಂಸ್ಥೆ ಕನ್ನಡ ನಾಡಿಗೆ ಹಲವಾರು ಕೊಡುಗೆಗಳನ್ನು ನೀಡಿ ಹೆಸರುವಾಸಿಯಾಗಿದೆ. 'ನೀನಾಸಂ' ನಡೆಸುವ ತಿರುಗಾಟವು ಕನ್ನಡ ರಂಗ ಭೂಮಿಯ ಒಂದು ಅವಿಭಾಜ್ಯ ಅಂಗವಾಗಿದೆ. ತಮ್ಮ ಊರಿಗೆ ನೀನಾಸಂ ಬಂದಾಗ ಅವರು ಪ್ರದರ್ಶಿಸುವ ನಾಟಕವನ್ನು ನೋಡಲು ಹಲವಾರು ಕಲಾಸಕ್ತರು ಕಾದು ಕುಳಿತಿರುತ್ತಾರೆ ಎಂಬುದು ಸುಳ್ಳಲ್ಲ. 

ಕೆ ವಿ ಸುಬ್ಬಣ್ಣ ಇವರು ಕೇವಲ ರಂಗಕರ್ಮಿ ಮಾತ್ರವಲ್ಲ. ಉತ್ತಮ ಸಾಹಿತಿಯೂ ಹೌದು. ತಮ್ಮದೇ ಆದ 'ಅಕ್ಷರ ಪ್ರಕಾಶನ' ಎಂಬ ಸಂಸ್ಥೆಯನ್ನು ಹೆಗ್ಗೋಡಿನಲ್ಲಿ ಪ್ರಾರಂಭಿಸಿದರು. ಇವರು ಉತ್ತಮ ನಾಟಕಕಾರ ಮಾತ್ರವಲ್ಲ ಅನುವಾದಕ, ನಿರ್ಮಾಪಕರೂ ಆಗಿದ್ದರು. ಸಾಹಿತ್ಯ ಕ್ಷೇತ್ರಕ್ಕೆ 'ಅಕ್ಷರ ಪ್ರಕಾಶನ' ೫೦೦ ಕ್ಕೂ ಅಧಿಕ ಕೃತಿಗಳನ್ನು ನೀಡುವುದರ ಮೂಲಕ ಅಮೂಲ್ಯ ಸೇವೆ ಸಲ್ಲಿಸಿದೆ.

ಸುಬ್ಬಣ್ಣನವರು ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು ಎಂಬ ಕೃತಿಯನ್ನು ರಚಿಸಿದ್ದಾರೆ. ಇದರ ಜೊತೆಯಲ್ಲಿ ಗಾರ್ಗಿಯ ಕಥೆಗಳು, ರಾಜಕೀಯದ ಮಧ್ಯೆ ಬಿಡುವು, ಅಭಿಜ್ಞಾನ ಶಾಕುಂತಲೆ, ಸೂಳೆ ಸನ್ಯಾಸಿ ಎಂಬ ನಾಟಕಗಳನ್ನು ಬರೆದಿದ್ದಾರೆ. ಹೂವು ಚೆಲ್ಲಿದ ಹಾದಿಯಲ್ಲಿ (ಕವಿತಾ ಸಂಕಲನ), ಅಭಿಸಾರ (ರೇಡಿಯೋ ನಾಟಕ), ಅವರು ನೀಡಿದ ದೀಪ (ಜಾನಪದ ಸಾಹಿತ್ಯ) ಮೊದಲಾದ ಕೃತಿಗಳನ್ನೂ ರಚಿಸಿದ್ದಾರೆ.

ಕೆ ವಿ ಸುಬ್ಬಣ್ಣ ಇವರಿಗೆ ೧೯೯೧ರಲ್ಲಿ ಫಿಲಿಫೈನ್ಸ್ ಸರಕಾರ ರಾಮನ್ ಮ್ಯಾಗ್ಸಸೇ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ೨೦೦೧ರಲ್ಲಿ ಕಾಳಿದಾಸ ಸನ್ಮಾನ, ೨೦೦೩ರಲ್ಲಿ ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಭಾರತದ ಸರಕಾರದಿಂದ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ಸುಬ್ಬಣ್ಣರು ತಿರಸ್ಕರಿಸಿದ್ದರು. ಇವರು ಜುಲೈ ೧೬, ೨೦೦೫ರಂದು ನಿಧನರಾದರು.

'ಸುವರ್ಣ ಸಂಪುಟ'ದಲ್ಲಿ ಇವರ ಎರಡು ಕವನಗಳು ಪ್ರಕಟವಾಗಿವೆ. ಎನ್ನ ಮುದ್ದಿನದಲ್ಲದಿನ್ನಾರವು ಹಾಗೂ ಬ್ಯಾರಲ್ಲ ಇದು ಒಲವಿನ ಭಾವಗಣಿತ. ಈ ಕವನಗಳಿಂದ ಒಂದನ್ನು ಆಯ್ದು ಪ್ರಕಟಿಸಿದ್ದೇವೆ. ಓದಿ ಎಂದಿನಂತೆ ಅಭಿಪ್ರಾಯ ತಿಳಿಸಿ.

ಎನ್ನ ಮುದ್ದಿನದಲ್ಲದಿನ್ನಾರವು

ಹಿಂದಿನಿಂದಲೆ ಬಂದು ಕಣ್ಣಿಗೊತ್ತಿದ ಕೈಯಿ-

ದೆನ್ನ ಮುದ್ದಿನದಲ್ಲದಿನ್ನಾರವು?

 

ಮೂಕ ವೀಣೆಯ ಮಿಡಿದು ಕೊರಡ ಕುಡಿಯೊಡೆಸಿರುವ

ವೀಣಾಪ್ರವೀಣೆ, ನಿಡು ಬೆರಳುಗಳಿವು.

ನುಡಿಯಿಸಿದ ತಾನತಾನದ ಗುಂಗು ಮೆಯ್ ದುಂಬಿ

ಬೆರಳ ನಾಡಿಯ ರಕ್ತವದರ ಸರಿಗಮಪದನಿ-

ಯನು ಗುಣಿಸಿ ಗುಣುಗುಣಿಸಿ ಸಾಗಿನಡೆದಿರಲು

ಹಿಂದಿನಿಂದಲೆ ಬಂದು ಕಣ್ಣಿಗೊತ್ತಿದ ಕೈಯಿ-

ದೆನ್ನ ಮುದ್ದಿನದಲ್ಲದಿನ್ನಾರವು?

 

ನಿನ್ನ ದೇಹದ ಚೆಲುವ ಮುತ್ತಿಡುವ ಕಣ್ಣುಗಳ-

ನೊತ್ತಿ ಅಲ್ಲಿಯು ಮತ್ತೆ ಚೆಲುವ ಕೈಗಳನು

ಮುಚ್ಚುಗಣ್ಣಿಗೆ ಹಚ್ಚಿ ಮೆಯ್ ರಕ್ತ ಜಂಗುಟ್ಟ-

ಲದರ ಬಿಸಿ ತಾಕಿಹುದು ; ಹರಳುಂಗುರದ ಬೆರಳು

ಪುಳಕಗೊಂಡದಿರುತಿರೆ ಮಿಲನಕಾತರದಿ

ಹಿಂದಿನಿಂದಲೆ ಬಂದು ಕಣ್ಣಿಗೊತ್ತಿದ ಕೈಯಿ-

ದೆನ್ನ ಮುದ್ದಿನದಲ್ಲದಿನ್ನಾರವು?

 

ಕೆನ್ನೆ ತಾಕಿರುವ ಕೈಬಳೆಗಳುಸಿರಿವೆ ಕಿವಿಗೆ

ತನಗೆ ಸೌಂದರ್ಯಚೇತನವನಿತ್ತ

ತನ್ನ ಒಡತಿಯ ಹೆಸರ ; ಅಬ್ಬಬ್ಬ, ಎಲೆ ಜಾಣೆ !

ಗಾಳಿ ತಡೆದೀತೇನೆ ಹೆರಳ ಮಲ್ಲಿಗೆ ಮುಗುಳ-

ಗಂಪನೆನ್ನೆಡೆತರದೆ? ಇದು ಹೊಸದೆ ನನಗೆ?

ಹಿಂದಿನಿಂದಲೆ ಬಂದು ಕಣ್ಣಿಗೊತ್ತಿದ ಕೈಯಿ-

ದೆನ್ನ ಮುದ್ದಿನದಲ್ಲದಿನ್ನಾರವು?

 

ಹಹ್ಹಹಹ ! ಹೇಗಾಯ್ತು? ನೀನೆ ಸೋತುದು ಮೊದಲು !

ಕೈಜಾರಿ ಕೊರಳಿನಲಿ ಮಾಲೆಯಾಯ್ತೇಕೆ?

ಹೂಗಲ್ಲವೆನ್ನ ಭುಜವೇರಲೆಂದಪ್ಪಣೆಯ

ನಾನು ಕೊಟ್ಟೆನೆ ನಿನಗೆ? ಎಲ್ಲಿ ಕೈ, ಇಲ್ಲಿ ತಾ …

ಕೆಂಪು ಚಿಮ್ಮುವ ಹೂವಿದೆಷ್ಟು ಕೋಮಲವೆ !

('ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)