‘ಸುವರ್ಣ ಸಂಪುಟ' (ಭಾಗ ೮೯) - ಬಿ ಎ ಸನದಿ

‘ಸುವರ್ಣ ಸಂಪುಟ' (ಭಾಗ ೮೯) - ಬಿ ಎ ಸನದಿ

ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಓರ್ವರಾದ ಬಾಬಾ ಸಾಹೇಬ ಅಹಮದ್ ಸಾಹೇಬ ಸನದಿ (ಬಿ ಎ ಸನದಿ) ಇವರು ಹುಟ್ಟಿದ್ದು ಆಗಸ್ಟ್ ೧೮, ೧೯೩೩ರಲ್ಲಿ. ಇವರ ಹುಟ್ಟೂರು ಬೆಳಗಾವಿ ಜಿಲ್ಲೆಯ ಶಿಂದೊಳ್ಳಿ ಗ್ರಾಮ. ಇವರ ತಂದೆ ಅಹಮದ್ ಸಾಹೇಬ ಹಾಗೂ ತಾಯಿ ಆಯಿಶಾಬಿ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟೂರಾದ ಶಿಂದೊಳ್ಳಿಯಲ್ಲಿ ಪೂರೈಸಿದರು. ಮಾಧ್ಯಮಿಕ ಹಾಗೂ ಎಸ್ ಎಸ್ ಎಲ್ ಸಿ ಶಿಕ್ಷಣವನ್ನು ಬೆಳಗಾವಿಯ ಜಿ ಎ ಹೈಸ್ಕೂಲ್ ನಲ್ಲಿ ಮುಗಿಸಿ, ಲಿಂಗರಾಜ ಕಾಲೇಜಿನಲ್ಲಿ ಬಿ ಎ ಪದವಿಯನ್ನು ಪಡೆದುಕೊಂಡರು. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಅರ್ಥ ಶಾಸ್ತ್ರದ ಪದವಿಯನ್ನು ಪಡೆದು, ಬೆಡಕೀಹಾಳ್ -ಶಮನೇವಾಡಿ ಹೊಸ ಹೈಸ್ಕೂಲ್ ನಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. 

ನಂತರ ಬಿ ಎಡ್ ಪದವಿಯನ್ನು ಪೂರೈಸಿ, ೧೯೫೭ರಲ್ಲಿ ಕರ್ನಾಟಕ ಸರಕಾರದ ಸಮಾಜ ವಿಕಾಸ ಇಲಾಖೆಯಲ್ಲಿ ಸಮಾಜ ಶಿಕ್ಷಣಾಧಿಕಾರಿಯಾಗಿ ಆಯ್ಕೆಯಾಗಿ ಅಥಣಿಯಲ್ಲಿ ತಮ್ಮ ಸರಕಾರಿ ನೌಕರಿಯನ್ನು ಪ್ರಾರಂಭಿಸಿದರು. ೧೯೬೪ರಲ್ಲಿ ರಾಜ್ಯ ಸರಕಾರದಿಂದ ಭಾರತ ಸರಕಾರದ ವಾರ್ತಾ ಇಲಾಖೆಗೆ ಭಡ್ತಿಯನ್ನು ಪಡೆದು ವರ್ಗಾವಣೆ ಹೊಂದಿ ಕ್ಷೇತ್ರ ಪ್ರಚಾರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ೧೯೭೨ರಲ್ಲಿ ಶಿವಾಜಿ ವಿಶ್ವವಿದ್ಯಾನಿಲಯದಿಂದ ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಹೆಗ್ಗಳಿಕೆ ಸನದಿಯವರದ್ದು. ನಂತರದ ದಿನಗಳಲ್ಲಿ ಇವರು ಆಕಾಶವಾಣಿಯ ಕಾರ್ಯಕ್ರಮಾಧಿಕಾರಿಯಾಗಿ ಪದೋನ್ನತಿಯನ್ನು ಹೊಂದಿ ೧೯೯೧ರಲ್ಲಿ ಆಕಾಶವಾಣಿಯ ಸೇವೆಯಿಂದ ನಿವೃತ್ತಿಯನ್ನು ಹೊಂದುತ್ತಾರೆ.

ಬಿ ಎ ಸನದಿಯವರ ಪ್ರಥಮ ಕವನ ‘ಜಯ ಕರ್ನಾಟಕ' ವು ನವಯುಗ ಪತ್ರಿಕೆಯಲ್ಲಿ ೧೯೪೯ರಲ್ಲಿ ಪ್ರಕಟವಾಯಿತು. ಐವರು ಕವಿಗಳನ್ನು ಸೇರಿಸಿಕೊಂಡು ಸ್ನೇಹ ಪ್ರಕಾಶನವನ್ನು ಪ್ರಾರಂಭಿಸಿ ‘ಐದಳ ಮಲ್ಲಿಗೆ' ಎಂಬ ಕೃತಿಯನ್ನು ಪ್ರಕಟಿಸಿದರು. ನಂತರ ಇದೇ ಪ್ರಕಾಶನದಿಂದ ಹಲವಾರು ಪುಸ್ತಕಗಳನ್ನು ಪ್ರಕಟಿಸಿದರು. ೧೯೬೨ರಲ್ಲಿ ಬೆಳಗಾವಿಯ ‘ವಿಕಾಸ' ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಸನದಿಯವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರೂ ಆಗಿದ್ದರು. ಇವರು ತಾಜ್ ಮಹಲ್, ಪ್ರತಿಬಿಂಬ, ಧ್ರುವಬಿಂದು ಮೊದಲಾದ ಕವನ ಸಂಕಲನಗಳನ್ನು ರಚಿಸಿದ್ದಾರೆ. ಇಲ್ಲಿ ಸಲ್ಲುವರು ಇವರ ವಚನಾ ವಿಮರ್ಶಾ ಕೃತಿ. ಇವರ ಹಲವಾರು ಕೃತಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ಪ್ರಶಸ್ತಿಗಳು ಲಭಿಸಿವೆ. ಇವರ ಸಮಗ್ರ ಸಾಹಿತ್ಯ ಕೃಷಿಗೆ ರಾಜ್ಯೋತ್ಸವ ಪ್ರಶಸ್ತಿಯೂ ದೊರೆತಿದೆ. ಮುಂಬಯಿಯ ನಾರಾಯಣ ಗುರು ಪ್ರಶಸ್ತಿ, ಗೊರೂರು ಪ್ರತಿಷ್ಟಾನ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್, ೨೦೧೫ರಲ್ಲಿ ಪಂಪ ಪ್ರಶಸ್ತಿ. ಹೀಗೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಬಿ ಎ ಸನದಿ ಇವರು ಭಾಜನರಾಗಿದ್ದರು. ಇವರು ಮಾರ್ಚ್ ೩೧, ೨೦೧೯ರಲ್ಲಿ ಕುಮಟಾದ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.

ಬಿ ಎ ಸನದಿಯವರ ಮೂರು ಪುಟ್ಟ ಕವನಗಳು (ಇಬ್ಬನಿಯ ಹಾಡು, ಬಂದು ಹೋದ ಬೆಳಕು, ಮಣ್ಣು) ‘ಸುವರ್ಣ ಸಂಪುಟ' ಕೃತಿಯಲ್ಲಿ ಪ್ರಕಟವಾಗಿವೆ. ಇವುಗಳಿಂದ ಎರಡು ಕವನಗಳನ್ನು ಆರಿಸಿ ಪ್ರಕಟಿಸಿದ್ದೇವೆ. ಓದುವ ಸಂತಸ ನಿಮ್ಮದಾಗಲಿ.

ಇಬ್ಬನಿಯ ಹಾಡು

ಹೊತ್ತು ಏರುವ ಮೊದಲೆ 

ಹಸಿರು ಹುಲ್ಲಿನ ಮೇಲೆ

ಕಂಡಿರುವಿರಾ ನೀವು ನನ್ನ ಲೀಲೆ?

ಎಸಳು ಎಸಳಿನ ಬೆರಳು

ಹರಳಿನುಂಗುರವಿಟ್ಟು

ಮರೆವಂತೆ ಕಾಣುವುದು ನನ್ನಿಂದಲೆ !

 

ಮೂಗು ಬೊಟ್ಟಿನ ಹರಳು

ನನ್ನ ಹೊಳಪನು ಕಂಡು

ಮೂಗು ಮುರಿದರು ನನಗೆ ಕೋಪವಿಲ್ಲ ;

ಬಿಸಿಲು ಸುರಿಯುವ ರವಿಯೆ

ನನ್ನೆದೆಯೊಳಾಶ್ರಯವ

ಪಡೆಯಬಂದರು ನನಗೆ ತಾಪವಿಲ್ಲ !

 

ನನಗೆ ಬಣ್ಣದ ಬದುಕು

ಬೇಡವೆಂದರು ಕೂಡ

ಇಂದ್ರಚಾಪವೆ ನನಗೆ ಶರಣಾಗತ !

ಮುಗಿಲೊಲವೆ ಮಧುವಾಗಿ

ಇಳೆಗಿಳಿದು ಬಂದಿರಲು

ರಸಿಕರೆದೆ ತುಂಬಿಸುವುದೆನಗಿಹವೃತ !

 

ಕಿರಿಯ ಆಕಾರದೊಳೆ

ಆಕಾಶವಡಗಿಸುವ

ಮಹದಾಸೆಯೆನ್ನೆದೆಯ ಉಸಿರಾಗಿದೆ !

ಇರುವುದೊಂದೆಗಳಿಗೆಯೊಳು

ರಸಸಿದ್ಧಿ ಪಡೆಯುವೊಲು

ನಾನಿರಲು ನೆಲದೆದೆಯು ಹಸಿರಾಗಿದೆ !

***

ಬಂದು ಹೋದ ಬೆಳಕು

ಬರುವನೆಂದಿತು ಬೆಳಕು

ಬಾ ಎಂದೆ ನಾನೂ;

ಬಂದಂತೆಯೇ ಹೋಯ್ತು

ಸುಮ್ಮನಿರೆ ಬಾನೂ !

 

ಮನ ಸುಮನವಾಗಿತ್ತು

ಒಂದೆರಡು ಗಳಿಗೆ ;

ಮಾತು ಮಧುರವಾಗಿತ್ತು

ಕಿವಿದುಂಬಿಗಳಿಗೆ !

 

ಮಳೆಯಾಗು ಸುರಿದಿತ್ತು

ಮೇಲಿಂದ ಬೆಳಕೇ

ಕೊಚ್ಚಿ ಒಯ್ದಿತು ಹೊಳೆಯು

ಬದಿಯೆಲ್ಲ ಮೊಳಕೇ !

 

ಬೆಳಕು ಕತ್ತಲೆಯಾಯ್ತು

ಸುಮ್ಮನಿರೆ ಬಾನೂ !

ಮುನ್ನೆಲೆಯನರಸುತಿಹೆ

ಮರಗುತಲೆ ನಾನೂ !

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನಗಳು)