‘ಸುವರ್ಣ ಸಂಪುಟ (ಭಾಗ ೮) - ಶ್ರೀಧರ ಖಾನೋಳ್ಕರ

‘ಸುವರ್ಣ ಸಂಪುಟ (ಭಾಗ ೮) - ಶ್ರೀಧರ ಖಾನೋಳ್ಕರ

ದ.ರಾ.ಬೇಂದ್ರೆಯವರ ಎರಡು ಕವನಗಳನ್ನು ಆಯ್ದು ಕಳೆದ ವಾರ ಪ್ರಕಟಿಸಿದ್ದೆವು. ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಆ ಸಂಪುಟದಲ್ಲಿ ಪುಟ್ಟ ವಿಧವೆ, ಬೆಳಕು ಮುಂತಾದ ಕವನಗಳು ಇವೆಯೇ? ಇದ್ದರೆ ಅವುಗಳನ್ನೂ ಪ್ರಕಟಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅದು ಅಸಾಧ್ಯ. ಮುಂದಿನ ದಿನಗಳಲ್ಲಿ ಅನುಕೂಲವಾದರೆ ಬೇಂದ್ರೆಯವರ ಉಳಿದ ಕವನಗಳನ್ನೂ ಪ್ರಕಟಿಸುತ್ತೇವೆ. ಈ ಪುಸ್ತಕದಲ್ಲಿರುವ ಬೇಂದ್ರೆಯವರ ಕವನಗಳ ಹೆಸರನ್ನಾದರೂ ತಿಳಿಸಿ ಎಂದಿದ್ದಾರೆ ಕೆಲವರು. ಅವರಿಗಾಗಿ ಈ ಮಾಹಿತಿ. 

ಬೆಳಕು, ಹಕ್ಕಿ ಹಾರುತಿದೆ ನೋಡಿದಿರಾ?, ಜನುಮದ ಜಾತ್ರಿ, ಪುಟ್ಟ ವಿಧವೆ, ಹುಬ್ಬಳ್ಳಿಯಾಂವಾ, ಹೂತದ ಹುಣಸಿ, ಅರ್ಧನಾರಿ -ನಟೇಶ್ವರ, ಕಂಬನಿ, ದಶಾವತಾರ, ಬೆಳದಿಂಗಳ ನೋಡ, ಮೊದಲಗಿತ್ತಿ, ಜೀವಲೋಕದಲ್ಲಿ ಕಾಮ, ಅನ್ನಯಜ್ಞ, ಗಮಗಮಾ ಗಮಾಡಸತಾವ ಮಲ್ಲಿಗಿ, ಮೌನ, ಟೊಂಕದ ಮೇಲೆ ಕೈಇಟ್ಟುಗೊಂಡು, ಕರಡಿ ಕುಣಿತ, ಬೀದಿ ನಾಯಿ ರಾಧೆ, ಸಪ್ತಕಲಾ, ಓ ತಾಯಿ - ಮಾಯಿ, ಚೈತ್ಯಾಲಯ, ಕಥೆಯಾದಳು -ಹುಡುಗಿ, ‘ಇಳೆ' ಎಂದರೆ ಬರಿ ಮಣ್ಣಲ್ಲ, ಬದುಕಬೇಕು, ಭಾವದೀಪ, ಶಿವಕರುಣೆ, ಕೇಳಿ ನುಡಿ ಕಂಡು ನಡೆ ಓ ಕನ್ನಡ ಕಂದಾ, ಕಲ್ಪವೃಕ್ಷ ವೃಂದಾವನಂಗಳಲಿ, ದವನದ ಹುಣ್ಣಿಮೆಯ ಜಾತ್ರೆಯ ರಾತ್ರಿ, ನಾವು ಬರತೇವಿನ್ನ, ಎದೆಯ ಒಕ್ಕಲಿಗನ ಹಾಡು, ಸಣ್ಣ - ಸೋಮವಾರ ಇವಿಷ್ಟು ಬೇಂದ್ರೆಯವರ ಕವನಗಳು ಸುವರ್ಣ ಸಂಪುಟದಲ್ಲಿವೆ.

ಈ ವಾರ ನಾವು ಆಯ್ದ ಕವಿ ಶ್ರೀಧರ ಖಾನೋಳ್ಕರ (ಖಾನೋಳಕರ) ಇವರು ೧೮೯೬ರಲ್ಲಿ ಜನಿಸಿದರು. ೧೯೧೯ರಲ್ಲಿ ಬಿ ಎ ಪದವಿಯನ್ನು ಪಡೆದು ಧಾರವಾಡದ ರಾಷ್ಟ್ರೀಯ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ೧೯೪೧ರಲ್ಲಿ ನಿವೃತ್ತರಾದರು. ಇವರ ಮುಖ್ಯ ಕೃತಿಗಳು ನೌಕಾ ಕ್ರೀಡನ, ಸಮರ ಸನ್ಯಾಸ ಮತ್ತು ಹೂಗೆಂಪು. ಶ್ರೀಧರ ಎಂಬ ಹೆಸರಿನಲ್ಲಿ ಕವನಗಳನ್ನು ಬರೆಯುತ್ತಿದ್ದರು. ಇವರು ದ ರಾ ಬೇಂದ್ರೆಯವರ ಸಮಕಾಲೀನರೂ, ಆಪ್ತರೂ ಆಗಿದ್ದರು. ಜಾನಪದ ಸಾಹಿತ್ಯದಲ್ಲಿ ಅಪಾರ ಒಲವುಳ್ಳವರಾಗಿದ್ದರು. ಸೊಗಸಾದ ಕವಾಲಿಗಳನ್ನು ರಚಿಸಿಸುತ್ತಿದ್ದರು. ಖಾನೋಳ್ಕರರ ಬಗ್ಗೆ ಅಧಿಕ ಮಾಹಿತಿ, ಭಾವಚಿತ್ರ ಲಭ್ಯವಿಲ್ಲ. ಓದುಗರಿಗೆ ಮಾಹಿತಿ ಇದ್ದರೆ ನಮ್ಮ ಗಮನಕ್ಕೆ ತರಬಹುದು. 

ಶ್ರೀಧರ ಖಾನೋಳ್ಕರರ ಆಯ್ದ ಕವನ:

ನನ್ನ ಕರ್ನಾಟಕ

ಕರ್ನಾಟಕವೆಂದೊಮ್ಮೆ ಕೂಗು, ಜಯ ಕರ್ನಾಟ

ಕರ್ನಾಟವೆಂದೊಮ್ಮೆ ಕೂಗು।

ಕರ್ನಾಟ ಶಬ್ದಗಳ ದಿವ್ಯ ಸಂಗೀತಕ್ಕೆ

ನೂರು ಸಲ ತಲೆಯ ತೂಗು

 

ಕರ್ನಾಟವೆಂಬುದು ಮಂತ್ರ ; ಸಿಂಹನ ಧೈರ್ಯ

ತುಂಬುವರು ಮೈಯಸೇರಿ !

ಭೋರಿಡುವ ಸಾಗರದ ತೆರೆಗಳೊಲು ತುಂಬುವದು

ಶಕ್ತಿತೆರೆ ಮೇರೆ ಮೀರಿ

 

ಕರ್ನಾಟವೆಂಬುದಿದು ಗುಡುಗು ; ಮುಗಿಲಿನ ಮಿಂಚು

ಹರವುವದು ವಿಶ್ವದೊಳಗೆ !

ಬೆಳಕು ಬೆಳಕಾಗುವದು, ಜಗವೆಲ್ಲ ಬೆಳಗುವದು,

ಸಾಟಿ ರವಿ ಕಿರಣಗಳಿಗೆ

 

ಕರ್ನಾಟವೆಂಬುದಿದು ಹಲಗೆ,- ರಣಹಲಗೆಯಿದು,

ಬೀಸುವುದು ವೀರವೃತ್ತಿ !

ಕಣಕಣಿಪ ರವವನ್ನು ಕೇಳಿದೊಡೆ ಮೂಡುವದು

ಜನರೊಳಗೆ ದಿವ್ಯಶಕ್ತಿ

 

ಕರ್ನಾಟವೆಂಬುದಿದು ಕಾಳಿ -ರಣಗಾಳಿಯಿದು, 

ಭೋಂಕಾರ ರವವ ಕೇಳಿ!

ಮಡಿವ ರಣ ಹೇಡಿಗಳ ಹೃದಯದಲಿ ತುಂಬುವಳು

ಕಡದಾದ ವೀರ್ಯ ಕಾಳಿ

 

ಭೋರ್ಗರೆಯುತಿರುವಂಥ ಕರ್ನಾಟಭೇರಿಯಿಂ ಹೊರ

ಹೊಮ್ಮುವಂಥ ಸ್ವರವ

ಕೇಳುತಲಿ ಮೈನವಿರು ಮುಳ್ಳಿನಂತಾಗುವುದು 

ತುಂಡರಿಸುತೆಲ್ಲ ಭಯವ

 

ಕರ್ನಾಟವಿದು ವೀಣೆ । ಸಕಲ ಕರ್ನಾಟಕದ

ಜನಮನವ ಹಿಡಿದು ಹೊಸೆದು !

ವಿಶ್ವಸಂಗೀತದೊಳು ಬೆರೆಸಿ ಒಂದಾಗುವದು

ಶ್ರೀಧರನ ಕವನ ನೆನೆದು

***

(‘ಸುವರ್ಣ ಸಂಪುಟ' ದಿಂದ ಸಂಗ್ರಹಿತ)