‘ಸುವರ್ಣ ಸಂಪುಟ' (ಭಾಗ ೯೦) - ಎಲ್ ಜಿ ಸುಮಿತ್ರ

‘ಸುವರ್ಣ ಸಂಪುಟ' (ಭಾಗ ೯೦) - ಎಲ್ ಜಿ ಸುಮಿತ್ರ

‘ಸುವರ್ಣ ಸಂಪುಟ' ಕೃತಿಯಲ್ಲಿ ಸುಮಾರು ೧೦೦ ಕ್ಕೂ ಅಧಿಕ ಕವನಗಳು ಇವೆ. ಇವುಗಳಲ್ಲಿ ೯೯% ಕವನಗಳನ್ನು ಬರೆದದ್ದು ಪುರುಷ ಸಾಹಿತಿಗಳೇ. ಇದರಲ್ಲಿ ಅಡಕವಾಗಿರುವ ಏಕೈಕ ಮಹಿಳಾ ಸಾಹಿತಿ ಎಂದರೆ ಅದು ಎಲ್ ಜಿ ಸುಮಿತ್ರ ಇವರು. ಈ ಕೃತಿ ಪ್ರಕಟವಾದದ್ದು ೧೯೮೦ರಲ್ಲಿ. ಆ ಸಮಯದಲ್ಲಿ ಹಲವಾರು ಮಂದಿ ಮಹಿಳಾ ಕವಯತ್ರಿಗಳು ಇದ್ದರೂ ಬಹುಷಃ ತಮ್ಮ ಬರಹಗಳನ್ನು ಮುದ್ರಿಸಿ, ಪ್ರಕಟ ಮಾಡಿದವರ ಸಂಖ್ಯೆ ಕಡಿಮೆ ಇರಬಹುದು. ಈ ಕೃತಿಯ ಸಂಪಾದಕರುಗಳು ಆ ಸಮಯದ ಕವಯತ್ರಿಯರ ಪಟ್ಟಿಯಿಂದ ಆಯ್ಕೆ ಮಾಡಿದ್ದು ಎಲ್ ಜಿ ಸುಮಿತ್ರ ಅವರನ್ನು ಮಾತ್ರ. 

ಎಲ್ ಜಿ ಸುಮಿತ್ರ ಅವರು ಹುಟ್ಟಿದ್ದು ಮಾರ್ಚ್ ೧೪, ೧೯೩೪ರಂದು ಬೆಂಗಳೂರಿನಲ್ಲಿ. ಇವತ್ರ ತಂದೆ ಗುಂಡಪ್ಪ ಹಾಗೂ ತಾಯಿ ಶಾರದಮ್ಮ. ಇವರ ವಿದ್ಯಾಭ್ಯಾಸ ಹಾಗೂ ಕೃತಿಗಳ ಬಗ್ಗೆ ಅಧಿಕ ಮಾಹಿತಿಗಳು ಎಲ್ಲೂ ದೊರೆಯುತ್ತಿಲ್ಲ. ಇವರು ಉಪನ್ಯಾಸಕಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಆಕಾಶವಾಣಿಯಲ್ಲೂ ಇವರು ಕಾರ್ಯನಿರ್ವಹಣೆ ಮಾಡಿದ್ದಾರೆ. ಕಾವ್ಯ ಕಾವೇರಿ, ಸ್ಪರ್ಶರೇಖೆ, ಕರ್ನಾಟಕ ವೃತ್ತಿಗಾಯಕರು, ಭಾರತದ ಸಂಗೀತ ವಾದ್ಯಗಳು ಇವುಗಳು ಇವರ ಪ್ರಮುಖ ಕೃತಿಗಳು. ಏಷ್ಯನ್ ಬ್ರಾಡ್ ಕಾಸ್ಟಿಂಗ್ ಯೂನಿಯನ್ ನ ಹೊಸ ಬಂಕ ಫೌಂಡೇಶನ್ ಪ್ರಶಸ್ತಿ, ಕರ್ನಾಟಕ ಸರಕಾರದ ಬಹುಮಾನವು ‘ಕಾವ್ಯಕಾವೇರಿ' ಕೃತಿಗೆ ದೊರೆತಿದೆ. ಇವುಗಳಲ್ಲದೇ ಜಾನಪದ ಲೋಕ ಹಾಗೂ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ‘ಜಾನಪದ ತಜ್ಞೆ’ ಪ್ರಶಸ್ತಿ, ಎಂಟನೆಯ ಸಂಗೀತ ಸಮ್ಮೇಳನ ಪ್ರಶಸ್ತಿಗಳು ಇವರಿಗೆ ದೊರೆತಿವೆ. 

ಎಲ್ ಜಿ ಸುಮಿತ್ರ ಅವರ ಮೂರು ಸೊಗಸಾದ ಕವನಗಳು ‘ಸುವರ್ಣ ಸಂಪುಟ' ಕೃತಿಯಲ್ಲಿ ಪ್ರಕಟವಾಗಿವೆ. ಅವುಗಳೆಂದರೆ ಚಿತ್ರದುರ್ಗ, ನಮ್ಮೂರು ಮತ್ತು ಪುಟ್ಟ ಬಾಲೆ. ಈ ಮೂರು ಕವನಗಳಿಂದ ಒಂದು ಕವನವನ್ನು ಆರಿಸಿ ಪ್ರಕಟಿಸಲಾಗಿದೆ.

ಪುಟ್ಟ ಬಾಲೆ

ಬಂದಳು ಆ ಬಾಲೆ ನೀರ ತಡಿಗೆ,

ನೋಡೆನಿತು, ಚೆಲುವವಳ ಕುರುಳ ತೊಡಿಗೆ,

 

ತಂದಿತ್ತು ಜಲಸಿರಿಯ ಮಳೆಯು ಹೊಳೆಗೆ.

ಜಾರು ಹೊಳೆ ಚಿಮ್ಮುತ್ತ ಬಡಿದು ಕರೆಗೆ

ಜಳಜಳನೆ ದನಿಗೈಯ ಒಳಗೆ ಹೊರಗೆ

ಕಳಕಳಿಸಿ ಹೊಳೆದಿತ್ತು ಬೆಳ್ಳಿ ಹಲಗೆ.

 

ಕೊಡವನತ್ತಲೆ ಬಿಟ್ಟು ದಡದ ಮೇಲೆ

ಉಟ್ಟ ಲಂಗದ ನಿರಿಗೆ ಬಳುಕಿ ಜೋಲೆ

ಹುಡುಗು ಮನದುಲ್ಲಸಕೆ ಮನವು ಸೋಲೆ

ಆಟಕ್ಕೆ ತೊಡಗಿದಳು ಪುಟ್ಟ ಬಾಲೆ.

 

ಎಳೆ ಮನವ ಸೆರೆಹಿಡಿಯೆ ಹೊಳೆಯ ಮೋಡಿ

ಪುಟ್ಟ ಬಾಲೆಯು ನಿಂತು ನಲಿದು ನೋಡಿ

ದುಂಡುಗಣ್ಣಿನ ಚಪಲದಿಟ್ಟಿಯಾಡಿ

ನಿಂತಾಗ ಅಲ್ಲಾಯ್ತು ಸೊಗದ ಜೋಡಿ

 

ನೆರಿಗೆಯಂಚಾಗಿತ್ತು ಅಲೆಗೆ ಜೋಡಿ.

ಕುರುಳು ನರ್ತಿಸುತಿತ್ತು ಗಾಳಿ ಗಾಡಿ.

ಅಲೆಯ ಹೊಳಪಿಗೆ ಸಾಟಿ ಕಣ್ಣ ಗಾಡಿ.

ಆರ ಮಗಳಿವಳಾರ ಬಾಳ ಬಾನಾಡಿ?

 

ಎಳನಗೆಯ ಕೇಳು ಮೈಯ್ಯ ಚಿಕ್ಕ ಹುಡುಗಿ

ಆಟವನು ತೊರೆದಿಂತು ನೀರಿಗಾಗಿ

ಬರಬಹುದೆ ಕೊಡ ಹೊತ್ತು ದೊಡ್ಡದಾಗಿ?

ಈ ಬವಣೆಯೇಕಮ್ಮ? ಹೇಳು ನನಗಾಗಿ.

 

ಹೊಳೆಯ ದಡದಲಿ ನಿಂತು ನಲಿದ ಆ ಬಾಲೆ

ತೆರಳುತಿರೆ ಸೊಗಕೆಂಥ ಬಲು ಭಾರಿ ಸೋಲೆ !

ಹೊರೆ ಭಾರ ಹೊರಿಸುತ್ತ ಮಗುಮನದ ಮೇಲೆ

ತಾಯೆ ನೀ ತೆರಳಿದೆಯ ಹರಿದೊಲುಮೆ ಮಾಲೆ?

(‘ಸುವರ್ಣ ಸಂಪುಟ’ ಕೃತಿಯಿಂದ ಆಯ್ದ ಕವನ)