‘ಸುವರ್ಣ ಸಂಪುಟ' (ಭಾಗ ೯೧) - ಎಚ್ ಎಂ ಚನ್ನಯ್ಯ

ಕಾವ್ಯ ಮೀಮಾಂಸೆ ಮತ್ತು ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಗೆ ಹೆಸರುವಾಸಿಯಾಗಿದ್ದ ಸಾಹಿತಿ ಎಚ್ ಎಂ ಚನ್ನಯ್ಯ ಇವರು ಹುಟ್ಟಿದ್ದು ಫೆಬ್ರವರಿ ೨೩, ೧೯೩೫ರಂದು. ಇವರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಗ್ರಾಮ. ತಂದೆ ಎಚ್ ಜಿ ಮಹದೇವಯ್ಯ ಹಾಗೂ ತಾಯಿ ಗಂಗಮ್ಮ. ಇವರ ಪ್ರಾಥಮಿಕ ವಿದ್ಯಾಭ್ಯಾಸವು ಸೊರಬ ತಾಲೂಕಿನ ಜಡೆ ಮತ್ತು ತೀರ್ಥಹಳ್ಳಿಯ ಶಾಲೆಗಳಲ್ಲಿ ನಡೆಯಿತು. ಮಾಧ್ಯಮಿಕ ವಿದ್ಯಾಭ್ಯಾಸವನ್ನು ಸಂತೆಬೆನ್ನೂರು ಹಾಗೂ ಹೊನ್ನಾಳಿಯ ಶಾಲೆಗಳಲ್ಲಿ ಪೂರೈಸಿದರು. ಪ್ರೌಢ ಶಾಲೆಯನ್ನು ಶಿರಾಳಕೊಪ್ಪದಲ್ಲಿ ಮುಗಿಸಿದರು. ಆ ಸಮಯದಲ್ಲಿ ಕವಿ ಸುಮತೀಂದ್ರ ನಾಡಿಗ್ ಅವರು ಚನ್ನಯ್ಯನವರ ಸಹಪಾಠಿಗಳಾಗಿದ್ದರು. ಪ್ರೌಢ ಶಾಲೆಯಲ್ಲಿದ್ದ ಸಂದರ್ಭದಲ್ಲೇ ಚನ್ನಯ್ಯನವರಿಗೆ ಕವನಗಳನ್ನು ರಚಿಸುವ ಹುಮ್ಮಸ್ಸು ಪ್ರಾರಂಭವಾಯಿತು.
ಕಾಲೇಜಿನಲ್ಲಿ ವಿಜ್ಞಾನದ ವಿದ್ಯಾರ್ಥಿಯಾಗಿದ್ದರೂ ಸಾಹಿತ್ಯದಲ್ಲಿ ಇವರ ಆಸಕ್ತಿ ಕುಂದಲಿಲ್ಲ. ಸಾಹಿತ್ಯ ಆಸಕ್ತಿಯನ್ನು ಗಮನಿಸಿದ ಇವರ ಸ್ನೇಹಿತರು ಇವರಿಗೆ ಬಿ ಎ (ಆನರ್ಸ್) ಪದವಿಯನ್ನು ಪಡೆಯಲು ಒತ್ತಾಯ ಮಾಡಿದರು. ಈ ಕಾರಣದಿಂದ ಇವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ ಎ ಪದವಿಯನ್ನು ಪೂರೈಸಿದರು. ನಂತರ ಎಂ ಎ ಸ್ನಾತಕೋತ್ತರ ಪದವಿಯನ್ನೂ ಗಳಿಸಿದರು. ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದ ಸಮಯದಲ್ಲಿ ಇವರಿಗೆ ಸಾಹಿತಿಗಳಾದ ತೀನಂಶ್ರೀ, ಜಿ.ಎಸ್. ಶಿವರುದ್ರಪ್ಪ, ಸುಜನಾ ಮೊದಲಾದವರು ಗುರುಗಳಾಗಿದ್ದರು. ಮಹಾರಾಜಾ ಕಾಲೇಜಿನಲ್ಲಿ ಉಪನ್ಯಾಸ ವೃತ್ತಿಯನ್ನು ಆರಂಭಿಸಿ ಅದೇ ಕಾಲೇಜಿನಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ನಿವೃತ್ತರಾಗುವವರೆಗೆ ವಿವಿಧ ಹುದ್ದೆಗಳನ್ನು ಅಲಂಕರಿಸಿದರು.
ಚನ್ನಯ್ಯನವರ ಹಲವಾರು ಕವಿತೆಗಳು ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ‘ಸಾಕ್ಷಿ' ಪತ್ರಿಕೆಯಲ್ಲಿ ಪ್ರಕಟವಾದುವು. ಇವರ ಪ್ರಥಮ ಕವನ ಸಂಕಲನ ‘ಕಾಮಿ'. ನಂತರ ಪ್ರಕಟವಾದದ್ದು ‘ಆಮೆ' ಎಂಬ ಕವನ ಸಂಕಲನ. ಪಾಶ್ಚಾತ್ಯ ವಿಮರ್ಶೆಯ ಪ್ರಭಾವಕ್ಕೆ ಒಳಗಾಗಿ ರಚನೆ ಮಾಡಿದ್ದು ‘ಜಿಜ್ಞಾಸೆ' ಮತ್ತು ‘ಪ್ರಾಸಂಗಿಕ' ಎಂಬ ಎರಡು ವಿಮರ್ಶಾ ಗ್ರಂಥಗಳು. ಕಾವ್ಯದ ಹೊರತಾಗಿ ಇವರನ್ನು ಆಕರ್ಷಿಸಿದ ಕ್ಷೇತ್ರ ನಾಟಕ ಹಾಗೂ ನಟನೆ. ಸಮಾನ ಮನಸ್ಕ ಗೆಳೆಯರ ಜೊತೆಗೂಡಿ ಇವರು ಕಟ್ಟಿದ ನಾಟಕ ಸಂಸ್ಥೆ ‘ಸಮತೆಂತೋ’. ಇವರು ‘ಎಲ್ಲರಂತಲ್ಲ ನನ್ನ ಗಂಡ' ನಾಟಕವನ್ನು ರಚನೆ ಮಾಡಿ ತಾವೇ ಅದನ್ನು ನಿರ್ದೇಶಿಸಿದರು. ಸುಮಾರು ೩೦-೪೦ ನಾಟಕಗಳಲ್ಲಿ ಚನ್ನಯ್ಯನವರು ನಟಿಸಿದ್ದಾರೆ.
೧೯೬೮ರಲ್ಲಿ ಕವಿ ಗೋಪಾಲಕೃಷ್ಣ ಅಡಿಗರಿಗೆ ೫೦ ವರ್ಷ ತುಂಬಿದಾಗ ಅವರಿಗೆ ಅರ್ಪಿಸಿದ ಗೌರವ ಗ್ರಂಥ ‘ಸಂವೇದನೆ' ಇದಕ್ಕೆ ಜಿ ಎಚ್ ನಾಯಕರ ಜೊತೆ ಸಂಪಾದಕರಾಗಿದ್ದರು. ಇವರು ಪಿ ಲಂಕೇಶ್ ಅವರ ‘ಎಲ್ಲಿಂದಲೋ ಬಂದವರು' ಚಲನ ಚಿತ್ರದಲ್ಲೂ ನಟಿಸಿದ್ದಾರೆ. ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ಪ್ರಭುತ್ವವನ್ನು ಹೊಂದಿದ್ದ ಚನ್ನಯ್ಯನವರು ಈ ಎರಡೂ ಭಾಷೆಗಳಲ್ಲಿ ಮಹತ್ವದ ಲೇಖನಗಳನ್ನು ಬರೆದಿದ್ದಾರೆ. ೧೯೯೪ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಚನ್ನಯ್ಯನವರು ಸೆಪ್ಟೆಂಬರ್ ೨೨, ೨೦೦೪ರಲ್ಲಿ ಇಹಲೋಕವನ್ನು ತ್ಯಜಿಸಿದರು.
‘ಸುವರ್ಣ ಸಂಪುಟ' ಕೃತಿಯಲ್ಲಿ ಚನ್ನಯ್ಯನವರ ಎರಡು ಕವನಗಳು (ಆಮೆ ಮತ್ತು ಕೆಂಪು ಕತ್ತಲು) ಪ್ರಕಟವಾಗಿವೆ. ಈ ಕವನಗಳಿಂದ ಒಂದು ಕವನವನ್ನು ಆರಿಸಿ ಪ್ರಕಟಿಸಿದ್ದೇವೆ. ಓದುವ ಖುಷಿ ನಿಮ್ಮದಾಗಲಿ…
ಆಮೆ
ಹೊರಲಾರದ ಹೊರೆಹೊತ್ತು, ಕತ್ತನ್ನು ನಿಧಾನ
ಹೊರಚಾಚಿ, ಗಾಳಿಯನ್ನು ಮೂಸುತ್ತಾ
ಹೊಟ್ಟೆ ಹೊಸೆದು ಜೀಕಿ, ಗರಿಕೆ ಒಂದೊಂದನ್ನೇ
ಕಿತ್ತು ಜಿಗಿದು ಮೆಲುಕಾಡಿಸುತ್ತೇನೆ ;
ತೆವಳಿ ಧೂಳಲ್ಲಿ, ನನ್ನ ಮಲದಲ್ಲೇ ಜೀಕಿ
ನಾಲ್ಕೂ ಕಾಲೂರಿ, ಉಸಿರೆಳೆದು ಕುಂಭಿಸಿ, ಸೆಟೆದು
ದೇಹವನ್ನೆತ್ತಿ ಒಂದಿಂಚು ಜರಗಿಸುತ್ತೇನೆ;
ವಿಶಾಲವಾಗಿದೆ ನನ್ನ ಜಗತ್ತು ; ಸುತ್ತುವರಿದಿರುವ
ತಂತಿಯ ಮುಳ್ಳುಬೇಲಿ. ನಾಲ್ಕೇ ಹೆಜ್ಜೆ ದೂರದದೆಲ್ಲಿ
ಕೃತಕ ಕೊಳದ ನೀರು; ತೆವಳುತ್ತೇನೆ.
ಧೂಳಲ್ಲಿ; ಮೇಲಿನಿಂದ ಸೂರ್ಯನೆಸೆದ ಬಿಸಿಲಿನ ಭರ್ಜಿ
ತಲೆ ಚುಚ್ಚಿದಾಗ ಕತ್ತಿನಲ್ಲಿ
ನಗುವ ಮಗು ಬೀಸಿ ಬಿದ್ದ ಕಲ್ಲೇಟಿನ ಯಾತನೆ.
ಕೃತಕ ಕೊಳದ ನೀರಿಗೆ ಬಾಯಾರಿ,
ಬೇಯುತ್ತಿದ್ದೇನೆ ; ಅತ್ತ ತೆವಳಲೆತ್ನಿಸಿದರೆ ಸಾಕು
ಅಳೆಯಲಾರ ದಾಳದಿಂದ ಹೆಸರರಿಯದದು ಬಂದು
ನಾಲ್ಕು ಬದಿಯಿಂದ ತನ್ನ ನಳಿಗೆಗಳ ವಿಧಾನ
ತೂರಿ, ಆಲಂಗಿಸಿ ಹಿಡಿತ ಬಿಗಿಮಾಡಿ,
ಬಂದಿಸುತ್ತದೆ. ಬಂಧನದಲ್ಲಿ ಸಿಕ್ಕ ನಾನು
ಒದ್ದಾಡಲೂ ಆರದೆ ನಿಶ್ಯಕ್ತನಾಗಿ ಮೈಮುದುಡಿ
ತರಗು ಕೈಕಾಲು ಮುಖಕತ್ತನ್ನೆಲ್ಲಾ
ಚಿಪ್ಪೊಳಕ್ಕೆಳೆದು ಬಿದ್ದುಕೊಳ್ಳುತ್ತೇನೆ ; ಬಿರಿಯಲಾರದ
ಕವಚ ಸಿಡಿವಂತೆ ಅವಚುತ್ತದೆ. ನಾನು ಚಿಪ್ಪೊಳಗೇ
ಬದುಕು ಸಾವಿನ ಕೂದಲೆಳೆಗಡಿಯಲ್ಲಿ
ಕೃತಕ ಕೊಳದ ನೀರಿಗಾಗಿ ಕನಸ ಕಾಣುತ್ತೇನೆ.
(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)