‘ಸುವರ್ಣ ಸಂಪುಟ' (ಭಾಗ ೯೨) - ಅಬ್ದುಲ್ ಮಜೀದ್ ಖಾನ್

‘ಸುವರ್ಣ ಸಂಪುಟ' (ಭಾಗ ೯೨) - ಅಬ್ದುಲ್ ಮಜೀದ್ ಖಾನ್

ಕಳೆದ ವಾರ ನಾವು ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದು ಪ್ರಕಟಿಸಿದ ಎಚ್ ಎಂ ಚನ್ನಯ್ಯ ಅವರ ‘ಆಮೆ' ಕವನದ ಬಗ್ಗೆ ಬಹಳಷ್ಟು ಮೆಚ್ಚುಗೆಯ ಪ್ರತಿಕ್ರಿಯೆಗಳು ಬಂದಿವೆ. ಹಲವಾರು ಮಂದಿ ನಾವು ಚನ್ನಯ್ಯ ಅವರ ಹೆಸರನ್ನೇ ಕೇಳಿರಲಿಲ್ಲ ಎಂಬ ಮಾತನ್ನೂ ಆಡಿರುವರು. ಕನ್ನಡನಾಡಿನ ಬಹಳ ಕವಿ, ಸಾಹಿತಿಗಳು ಎಲೆ ಮರೆಯ ಕಾಯಿಗಳಾಗಿಯೇ ಉಳಿದಿರುವರು. ಅವರನ್ನು ಒಬ್ಬೊಬ್ಬರಾಗಿ ಪರಿಚಯಿಸುವ ಕಿರು ಪ್ರಯತ್ನ ಇದು.

ಈ ವಾರ ನಾವು ಆಯ್ದುಕೊಂಡ ಕವಿ ಅಬ್ದುಲ್ ಮಜೀದ್. ಇವರ ಬಗ್ಗೆ ನಮಗೆ ಸಿಗುವ ಮಾಹಿತಿಗಳು ಬಹಳ ಕಡಿಮೆ. ಇವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ಇವರ ಜನ್ಮ ದಿನಾಂಕ, ಹೆತ್ತವರ ಬಗ್ಗೆ, ಪ್ರಾಥಮಿಕ ಶಿಕ್ಷಣದ ಬಗ್ಗೆ ಮಾಹಿತಿ ದೊರೆಯುತ್ತಿಲ್ಲ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ೧೯೬೧ರಲ್ಲಿ ಎಂ ಎ ಪದವಿಯನ್ನು ಪಡೆದುಕೊಂಡಿದ್ದಾರೆ. ಕೆ ಎಲ್ ಇ ಸಂಜೆ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 

ಇವರ ಕೆಲವು ಕೃತಿಗಳು : ದಾರಿ, ಗುರುತು, ಉತ್ತರ, ಆಳು, ದಿಗಂತ, ಅಂಧೇರಿ ನಗರ, ತಲೆಯಿಲ್ಲದ ಗೌತಮ, ಮಿರ್ಜಾ ಗಾಲೀಬ್ ಇತ್ಯಾದಿ. ಇವರು ಹಲವಾರು ಹಿಂದಿ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಸಾಹಿತ್ಯ ಸೇವೆಯನ್ನು ಗಮನಿಸಿ ೧೯೯೧ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಗೌರವ ಪ್ರಶಸ್ತಿ ನೀಡಿದೆ.  

‘ಸುವರ್ಣ ಸಂಪುಟ' ಕೃತಿಯಲ್ಲಿ ಇವರ ಎರಡು ಕವನಗಳು ಪ್ರಕಟವಾಗಿವೆ. ಒಂದು ನವ್ಯ ಚಿತ್ರ ಹಾಗೂ ದಾರಿ. ಈ ಕವನಗಳಿಂದ ಒಂದನ್ನು ಆಯ್ದು ಪ್ರಕಟ ಮಾಡಿದ್ದೇವೆ.

ಒಂದು ನವ್ಯ ಚಿತ್ರ

ನೆತ್ತಿಯಲಿ ಕಣ್ಣಿ, ಕಿವಿಯ ಬಳಿ ಮೂಗು

ಸುರುಟಿಕೊಂಡಿಹ ತುಟಿ ಅದುಮಿ ಹಿಡಿದಿದೆ

ಯೂಲಿಸಿಸ್ಸನು ಮೊಳಗಲೆಳಸಿಹ ಕೂಗು

ಕಿವಿ ಮೂಸಿ ನೋಡುತಿವೆ

ಮೂಗು ಕೇಳುತಿದೆ ಕಣ್ಣಿ?...

... ಮಣ್ಣಿ.

 

ಮೇಲ್ದುಟಿಯ ಮೇಲೆ ಎಡಕೊಂದು

ಬಲಕೊಂದು ಕೊಂಬು. ಅವು ಮೀಸೆಗಳು,

ಚಿತ್ರದಲಿ ಇಲ್ಲದಿರುವ ತಲೆ -ಬೋಳು

ಹುಬ್ಬು -ಕುರುಚಲು ಗಿಡ ದಿಕ್ಕು ದಿಕ್ಕಿಗೆ

ಚದುರಿಸಿಹ ಮುಳ್ಳುಗಳು

ಹಣೆ-ಗುರಾಣಿಯ ಹಿಂದೆ

ನಾಚಿ ನಿಂತಿಹ ಮೆದುಳು ನೂರು ಹೋಳು.

ಮುಖಕ್ಕೆ ಚರ್ಮವಿಲ್ಲ; ಒಳ ಪದರಗಳು

ಮೇಲೆ ಕಾಣಿತಿವೆ-ಸ್ನಾಯು ನರಗಳು ;

ಬೇರುಗಟ್ಟಿವೆ ಒಳಗೆಲ್ಲ. ಭಯ

ನೋವು, ಚಿಂತೆ, ಜ್ವರಗಳು.

 

ಪುಣೆ-ಬೆಂಗಳೂರು ದಾರಿಯಲ್ಲಿ

ಸರದರಾಜೀಯ ಭಾರೀ ಟ್ರಕ್ಕಿಗೆ ಸಿಕ್ಕು 

ಗಬಿ ಬಿಜಿಯಾದ ದೇಹವೊಂದಕ್ಕೆ

ಹಿಂದಿರುಗಿದಂತೆ ಪ್ರಾಣ.

ಕುಂಚ ತಿರುವಿದ ಕೈಗೆ ಗೊತ್ತು ಪ್ರಮಾಣ

 

ಇದು ಕಲೆಯಲ್ಲ ವಾಸ್ತವತೆ

(ಅದರ ತಲೆ ಬರಹವೇ ಹಾಗೆ ಇದೆ)

ಇದು ನವ ಮಾನವನ ಮಾನಸಿಕ ರೂಪ

ಭವ್ಯ ನಾಗರೀಕತೆಯ ತದ್ರೂಪ.

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)