‘ಸುವರ್ಣ ಸಂಪುಟ' (ಭಾಗ ೯೩) - ಪಿ.ಲಂಕೇಶ್
ಪಾಳ್ಯದ ಲಂಕೇಶಪ್ಪ ಅಥವಾ ಪಿ ಲಂಕೇಶ್ ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಓರ್ವರು. ಲಂಕೇಶ್ ಅವರು ತಮ್ಮ ‘ಲಂಕೇಶ್ ಪತ್ರಿಕೆ' ಎಂಬ ಪತ್ರಿಕೆಯಿಂದ ಬಹಳ ಖ್ಯಾತಿಯನ್ನು ಪಡೆದವರು. ಟ್ಯಾಬಲಾಯ್ಡ್ ಪತ್ರಿಕೋದ್ಯಮದಲ್ಲಿ ಹೊಸ ಶಕೆಯನ್ನು ಪ್ರಾರಂಭಿಸಿದ ಕೀರ್ತಿ ಲಂಕೇಶ್ ಅವರಿಗೆ ಸಲ್ಲುತ್ತದೆ. ಲಂಕೇಶ್ ಅವರು ಪತ್ರಿಕೋದ್ಯಮಿಯ ಜೊತೆಗೆ ಉತ್ತಮ ಕಥೆಗಾರ, ಕವಿ, ನಾಟಕಕಾರ, ಅಂಕಣಕಾರ, ಸಿನೆಮಾ ನಿರ್ದೇಶಕರೂ ಆಗಿದ್ದರು. ಇವರೊಬ್ಬ ಬಹುಮುಖ ಪ್ರತಿಭೆ.
ಲಂಕೇಶ್ ಅವರು ಹುಟ್ಟಿದ್ದು ಮಾರ್ಚ್ ೮, ೧೯೩೫ರಲ್ಲಿ ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ ಗ್ರಾಮದಲ್ಲಿ. ಇವರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ತಮ್ಮ ಪ್ರೌಢಶಾಲೆ ಹಾಗೂ ಇಂಟರ್ ಮೀಡಿಯೇಟ್ ಶಿಕ್ಷಣವನ್ನು ಪೂರೈಸಿದರು. ನಂತರ ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ ಎ (ಆನರ್ಸ್) ಪದವಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ ಎ (ಇಂಗ್ಲಿಷ್) ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು.
ಲಂಕೇಶ್ ತಮ್ಮ ವೃತ್ತಿ ಜೀವನವನ್ನು ಸಹ್ಯಾದ್ರಿ ಕಾಲೇಜಿನಲ್ಲಿ ಆಂಗ್ಲಭಾಷೆಯ ಪ್ರಾಧ್ಯಾಪಕರಾಗಿ ೧೯೫೯ರಲ್ಲಿ ಪ್ರಾರಂಭಿಸಿದರು. ನಂತರದ ದಿನಗಳಲ್ಲಿ ಹಲವಾರು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದರು. ೧೯೭೯ರ ಸುಮಾರಿಗೆ ಲಂಕೇಶರು ಅಧ್ಯಾಪನಾ ವೃತ್ತಿಯನ್ನು ತ್ಯಜಿಸಿ ತಮ್ಮದೇ ಆದ ‘ಲಂಕೇಶ್ ಪತ್ರಿಕೆ' ಎಂಬ ಪತ್ರಿಕೆಯನ್ನು ಹುಟ್ಟು ಹಾಕಿದರು. ನಂತರದ ದಿನಗಳಲ್ಲಿ ಖ್ಯಾತ ಪತ್ರಿಕೋದ್ಯಮಿಯಾಗಿಯೂ, ಜೊತೆಗೆ ನಾಟಕಕಾರರಾಗಿಯೂ ಹೆಸರುವಾಸಿಯಾದರು. ನಾಟಕ ಕ್ಷೇತ್ರಕ್ಕೆ ಇವರು ಕೊಟ್ಟಿರುವ ಕಾಣಿಕೆಗಳು ಅನೇಕ. ಗ್ರೀಕ್ ರಂಗಭೂಮಿಯ ರುದ್ರ ನಾಟಕ ‘ಈಡಿಪಸ್' ಕಲಾಕ್ಷೇತ್ರದ ಬಯಲು ರಂಗಭೂಮಿಯಲ್ಲಿ ಯಶಸ್ಸು ಕಂಡದ್ದಕ್ಕೆ ಲಂಕೇಶ್ ಅವರ ಸಮರ್ಥ ಭಾಷಾಂತರವೂ ಕಾರಣ.
ರಾಜಕೀಯ ಸುದ್ದಿಗಳು, ಕಟು ವಿಮರ್ಶೆಗಳು, ರೋಚಕ ಅಂಕಣಗಳಿಗೆ ಹೆಸರಾದ ಲಂಕೇಶ್ ಪತ್ರಿಕೆಯು ಇವರ ಸಂಪಾದಕತ್ವದಲ್ಲಿದಕತ್ವದಲ್ಲಿ ಪ್ರತೀ ವಾರ ಹೊರಬರುತ್ತಿತ್ತು. ಕರ್ನಾಟಕದ ಈಗಿನ ಹಲವಾರು ಲೇಖಕರು ಲಂಕೇಶ್ ಪತ್ರಿಕೆಗೆ ಬರಹಗಾರರಾಗಿ ಅಥವಾ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಲಂಕೇಶರ ಮೊದಲ ಕಥಾ ಸಂಕಲನ ‘ಕೆರೆಯ ನೀರನ್ನು ಕೆರೆಗೆ ಚೆಲ್ಲಿ' ೧೯೬೩ರಲ್ಲಿ ಪ್ರಕಟವಾಯಿತು.
ಇವರು ಹಲವಾರು ನಾಟಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಬಿರುಕು, ಈಡಿಪಸ್ ಮತ್ತು ಅಂತಿಗೊನೆ, ಗುಣಮುಖ, ತೆರೆಗಳು, ಕ್ರಾಂತಿ ಬಂತು ಕ್ರಾಂತಿ, ಸಂಕ್ರಾಂತಿ ಪ್ರಮುಖವಾದುವುಗಳು. ನಾನಲ್ಲ, ಉಮಾಪತಿಯ ಸ್ಕಾಲರ್ ಶಿಪ್ ಯಾತ್ರೆ, ಕಲ್ಲು ಕರಗುವ ಸಮಯ, ಉಲ್ಲಂಘನೆ, ಸಮಗ್ರ ಕಥೆಗಳು ಇವರ ಕಥಾ ಸಂಕಲನಗಳು. ಬಿರುಕು, ಮುಸ್ಸಂಜೆಯ ಕಥಾ ಪ್ರಸಂಗ, ಅಕ್ಕ - ಕಾದಂಬರಿಗಳು. ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಅಂಕಣ ಬರಹಗಳೂ ಪುಸ್ತಕ ರೂಪದಲ್ಲಿ ಹೊರಬಂದಿವೆ. ಅವುಗಳಲ್ಲಿ ಪ್ರಸ್ತುತ, ಕಂಡದ್ದು ಕಂಡಹಾಗೆ, ಟೀಕೆ ಟಿಪ್ಪಣಿ ಪ್ರಮುಖವಾದವುಗಳು. ಇವರ ಕೆಲವು ಕವನ ಸಂಕಲನಗಳು- ಬಿಚ್ಚು, ನೀಲು (೧-೩), ತಲೆಮಾರು, ಪಾಪದ ಹೂಗಳು, ಅಕ್ಷರ ಹೊಸ ಕಾವ್ಯ ಇತ್ಯಾದಿ. 'ಹುಳಿ ಮಾವಿನ ಮರ' ಲಂಕೇಶರ ಆತ್ಮ ಕಥೆ.
ಲಂಕೇಶ್ ಇವರು ಚಿತ್ರರಂಗದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇವರು ನಿರ್ದೇಶಿಸಿದ ‘ಪಲ್ಲವಿ’ ಚಲನಚಿತ್ರಕ್ಕೆ ಕೇಂದ್ರ ಸರಕಾರದ ‘ಅತ್ಯುತ್ತಮ ನಿರ್ದೇಶಕ' ಪ್ರಶಸ್ತಿ ಲಭಿಸಿದೆ. ಇದಲ್ಲದೇ ಅನುರೂಪ, ಖಂಡವಿದೆಕೊ ಮಾಂಸವಿದೆಕೊ, ಎಲ್ಲಿಂದಲೋ ಬಂದವರು, ಮುಸ್ಸಂಜೆಯ ಕಥಾ ಪ್ರಸಂಗ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಲಂಕೇಶ್ ಅವರು ‘ಸಂಸ್ಕಾರ’ ಎಂಬ ಚಿತ್ರದಲ್ಲಿ ಒಂದು ಪಾತ್ರ ಮಾಡುವ ಮೂಲಕ ನಟನೆಗೂ ಸೈ ಎಂದಿದ್ದಾರೆ.
ಲಂಕೇಶ್ ಅವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸಂದಿವೆ. ಲಂಕೇಶ್ ಇವರು ಜನವರಿ ೨೫, ೨೦೦೦ರಲ್ಲಿ ಬೆಂಗಳೂರಿನಲ್ಲಿ ತಮ್ಮ ೬೪ನೇ ವಯಸ್ಸಿನಲ್ಲಿ ನಿಧನ ಹೊಂದಿದರು.
‘ಸುವರ್ಣ ಸಂಪುಟ' ಕೃತಿಯಲ್ಲಿ ಲಂಕೇಶರ ಒಂದು ಕವನ ಪ್ರಕಟವಾಗಿದೆ. ‘ಅವ್ವ' ಎಂಬ ಹೆಸರಿನ ಈ ಕವಿತೆಯು ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಈ ಕವನವನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಓದುವ ಸುಖ ನಿಮ್ಮದಾಗಲಿ.
ಅವ್ವ
ನನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ ;
ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣಿ
ಮಕ್ಕೊಳೊದ್ದರೆ ಅವಳ ಅಂಗಾಂಗ ಪುಲಕ ;
ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ.
ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳಬಂದಿಯ ಗೆದ್ದು,
ಹೆಂಟೆಗೊಂದು ಮೊಗೆ ನೀರು ಹಿಗ್ಗಿ ;
ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು,
ಹೂವಲ್ಲಿ ಹೂವಾಗಿ ಕಾಯಲ್ಲಿ ಕಾಯಾಗಿ
ಹೆಸರು ಗದ್ದೆಯ ನೋಡಿಕೊಂಡು,
ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.
ಸತ್ತಳು ಈಕೆ;
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟು ಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ ?
ಎಷ್ಟು ಸಲ ಈ ಮುದುಕಿ ಅತ್ತಳು
ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ ;
ಎಷ್ಟು ಸಲ ಹುಡುಕುತ್ತ ಊರೂರು ಅಲೆದಳು
ತಪ್ಪಿಸಿಕೊಂಡ ಮುದಿಯ ಎಮ್ಮೆಗೆ ?
ಸತಿ ಸಾವಿತ್ರಿ, ಜಾನಕಿ, ಉರ್ಮಿಳೆಯಲ್ಲ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ;
ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ;
ದೇವರ ಪೂಜಿಸಲಿಲ್ಲ; ಹರಿಕತೆ ಕೇಳಲಿಲ್ಲ ;
ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ.
ಬನದ ಕರಡಿಯ ಹಾಗೆ
ಚಿಕ್ಕಮಕ್ಕಳ ಹೊತ್ತು
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು.
ನೊಂದ ನಾಯಿಯ ಹಾಗೆ ಬೈದು, ಗೊಣಗಿ, ಗುದ್ದಾಡಿದಳು;
ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ;
ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.
ಈಕೆ ಉರೆದೆದ್ದಾಳು
ಮಗ ಕೆಟ್ಟರೆ, ಗಂಡ ಬೇರೆ ಕಡೆ ಹೋದಾಗ ಮಾತ್ರ.
ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ;
ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;
ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.
ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು ;
ಹೆತ್ತದ್ದಕ್ಕೆ ಸಾಕಿದ್ದಕ್ಕೆ ; ಮಣ್ಣಲ್ಲಿ ಬದುಕಿ,
ಮನೆಯಿಂದ ಹೊಲಕ್ಕೆ ಹೋದಂತೆ
ತಣ್ಣಗೆ ಮಾತಾಡುತ್ತಲೇ ಹೊರಟು ಹೋದದ್ದಕ್ಕೆ.
(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)