‘ಸುವರ್ಣ ಸಂಪುಟ' (ಭಾಗ ೯೬) - ಗುಂಡ್ಮಿ ಚಂದ್ರಶೇಖರ ಐತಾಳ

‘ಸುವರ್ಣ ಸಂಪುಟ' (ಭಾಗ ೯೬) - ಗುಂಡ್ಮಿ ಚಂದ್ರಶೇಖರ ಐತಾಳ

‘ಸುವರ್ಣ ಸಂಪುಟ’ ಕೃತಿಯಿಂದ ನಾವು ಈ ವಾರ ಆಯ್ದ ಕವಿ ಚಂದ್ರಶೇಖರ ಐತಾಳ ಇವರು. ಐತಾಳರು ಹುಟ್ಟಿದ್ದು ಉಡುಪಿ ಜಿಲ್ಲೆಯ ಗುಂಡ್ಮಿಯಲ್ಲಿ ಜನವರಿ ೨೦, ೧೯೩೬ರಲ್ಲಿ. ಇವರ ತಂದೆ ರಾಮಚಂದ್ರ ಐತಾಳರು ಹಾಗೂ ತಾಯಿ ಸತ್ಯಮ್ಮ. ಚಂದ್ರಶೇಖರ ಐತಾಳರು ಬಾಲ್ಯದಿಂದಲೇ ಶಿಕ್ಷಣಿಕವಾಗಿ ಮುಂದೆ ಇದ್ದ ಕಾರಣದಿಂದಲೇ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ ಎ ಪದವಿಯನ್ನು ಪಡೆದುಕೊಳ್ಳುತ್ತಾರೆ. ಇವರು ಡಿವಿಜಿಯವರ ಸಾಹಿತ್ಯದ ಬಗ್ಗೆ ಬರೆದ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಗೌರವವನ್ನೂ ಪಡೆದುಕೊಳ್ಳುತ್ತಾರೆ. 

ಐತಾಳರು ತಮ್ಮ ವೃತ್ತಿ ಜೀವನವನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ (ಅಂದು ಮೈಸೂರು ವಿವಿಗೆ ಸೇರಿತ್ತು) ಉಪನ್ಯಾಸಕರಾಗಿ ಪ್ರಾರಂಭಿಸುತ್ತಾರೆ. ಎಳೆಯ ವಯಸ್ಸಿನಿಂದಲೂ ಸಾಹಿತ್ಯದ ತುಡಿತವನ್ನು ಹೊಂದಿದ್ದ ಇವರು ಪ್ರಾರಂಭದಲ್ಲಿ ಕಿರು ಪದ್ಯಗಳನ್ನು ರಚಿಸಿ ಪತ್ರಿಕೆಗಳಿಗೆ ಕಳುಹಿಸುತ್ತಾರೆ. ಇದೇ ಮುಂದುವರೆದು ಭವಿಷ್ಯದಲ್ಲಿ ಉತ್ತಮ ಪ್ರೌಢ ಬರಹಗಳನ್ನು ರಚನೆ ಮಾಡಲು ಸಹಕಾರಿಯಾಯಿತು. ನಂತರದ ದಿನಗಳಲ್ಲಿ ಐತಾಳರು ಜಾನಪದ ಶೈಲಿಯ ‘ಕೈಲಿಯ ಕರೆದ ನೊರೆ ಹಾಲು' ಮತ್ತು ‘ಮದ್ದುಂಟೆ ಜನನ ಮರಣಕ್ಕೆ' ಎಂಬ ಕೃತಿಗಳನ್ನು ರಚಿಸುತ್ತಾರೆ. ಗುಂಡ್ಮಿಯವರ ‘ಮಾತೃ ಸಂಹಿತೆ' ಒಂದು ಉತ್ತಮ ಕವಿತೆಗಳ ಸಂಗ್ರಹ ಎಂದು ಹೆಸರುವಾಸಿಯಾಗಿದೆ. ಇದು ತಾಯಿಯನ್ನು ಕುರಿತು ಬರೆದ ವಚನಗಳು. ಇದನ್ನು ಮೆಚ್ಚಿ ಅಮೇರಿಕಾದ ವರ್ಲ್ಡ್ ಯೂನಿವರ್ಸಿಟಿ ಐತಾಳರಿಗೆ ಡಾಕ್ಟರ್ ಆಫ್ ಲಿಟರೇಚರ್ ಪುರಸ್ಕಾರವನ್ನು ನೀಡಿ ಗೌರವಿಸಿದೆ. ಈ ಕೃತಿಯು ‘ಹಿಮ್ ಟು ಮದರ್' ಎಂಬ ಹೆಸರಿನಲ್ಲಿ ಆಂಗ್ಲ ಭಾಷೆಗೂ ಅನುವಾದಗೊಂಡಿದೆ.

ಐತಾಳರು ರಚಿಸಿದ ಕೃತಿಗಳ ಸಂಖ್ಯೆ ಕಡಿಮೆ ಎಂದು ಅನಿಸಿದರೂ ಅವರ ಬರಹಗಳ ಮೌಲ್ಯ ತುಂಬ ದೊಡ್ದದು. ಇವರ ಕವನ ಸಂಕಲನಗಳು : ಗುಂಡು ಸೂಜಿ, ಮಾತೃ ಸಂಹಿತೆ, ಬೆಳಗಾಯಿತು, ಹೂವಿನ ಕೋಲು, ಪಟಾಚಾರ, ಸ್ತ್ರೀ ಮತ್ತು ಇತರ ಕವನಗಳು, ಸೀಯಾಳ, ಬ್ರಾಹ್ಮಣ ಬಂಡಾಯ ಇತ್ಯಾದಿ. ‘ಸೌಂದರ್ಯದ ಸನ್ನಿಧಿಯಲ್ಲಿ' ಒಂದು ಐತಿಹಾಸಿಕ ಕೃತಿ. 'ಚೆಲುವು ಚೆಲ್ಲಿದಲ್ಲಿ' ಒಂದು ಪ್ರವಾಸ ಕಥನ, ಮೂರು ಜನಪದ ಗೀತೆಗಳ ಸಂಗ್ರಹವನ್ನೂ ರಚಿಸಿದ್ದಾರೆ. ರುದ್ರಭಟ್ಟ, ಸಾಂತ್ಯಾರು ವೆಂಕಟರಾಜ, ವ್ಯಾಸರಾಯರು, ಕನಕದಾಸರು, ಸನ್ಮಾರ್ಗ ಸಾಧಕ ಎಂಬ ಐದು ವ್ಯಕ್ತಿ ಚಿತ್ರದ ಕೃತಿಗಳನ್ನು ಬರೆದಿದ್ದಾರೆ. 

ಇವರ ‘ಪಟಾಚಾರ’ ಕೃತಿಗೆ ಬಿ ಎಂ ಶ್ರೀ ಸುವರ್ಣ ಪದಕ, ‘ಸೌಂದರ್ಯದ ಸಾನಿಧ್ಯದಲ್ಲಿ' ಕೃತಿಗೆ ದೇವರಾಜ ಬಹಾದ್ದೂರ್ ಪ್ರಶಸ್ತಿ, ‘ಕೈಲಿಯ ಕರೆದ ನೊರೆಹಾಲು' ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಮದ್ದುಂಟೇ ಜನನ ಮರಣಕ್ಕೆ' ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವ ಪ್ರಶಸ್ತಿಗಳು ಲಭಿಸಿವೆ. 

ಚಂದ್ರಶೇಖರ ಐತಾಳರ ಒಂದು ಕವನ ‘ಸುವರ್ಣ ಸಂಪುಟ' ಕೃತಿಯಲ್ಲಿ ಪ್ರಕಟವಾಗಿದೆ. ಇದನ್ನು ಓದುವ ಖುಷಿ ನಿಮ್ಮದಾಗಲಿ.

ಬೆಳಗಾಯಿತು

‘ಏಳು ಮಗುವೆ' ಎಂಬ ಉದಯರಾಗವನಜ್ಜ

ಹಾಡಿ ಆಕಳಿಪಾಗ ಬೆಳಗಾಯಿತು

ಮನೆಯ ಹೆಂಗುಸರೆಲ್ಲ ನಡುಬಾಗಿ ನೀರಿಟ್ಟು

ಹೊಸ್ತಿಲಿಗೆ ಹೂವಿಟ್ಟು ಬೆಳಗಾಯಿತು.

 

ಮನೆಯಾಕೆ ದರಬರನೆ ಮೊಸರನ್ನು ಕಡೆವಾಗ

ಕಂಕಣದ ಕಿಂಕಿಣಿಗೆ ಬೆಳಗಾಯಿತು

ಹೂ ತುಂಬ ಮಧು ತುಂಬಿ ತುಂಬಿಗರ್ಪಿಸಲೆಂದು

ಹೂವು ‘ಹೂಂ' ಎಂದಾಗ ಬೆಳಗಾಯಿತು.

 

ಹಸುವು ‘ಅಂಬಾ’ ಎಂದು ಕೋಳಿ ‘ಕೊಕ್ಕೋ’ಎಂದು

ನಾಯಿ ‘ಬಕ್ ಬವ್' ಎಂದು ಬೆಳಗಾಯಿತು

ಹಕ್ಕಿ ಚಿಲಿಪಿಲಿಗುಟ್ಟಿ ಮಕ್ಕಳಮ್ಮನ ಕರೆದು

ನೂರಾರು ರಾಗದಲಿ ಬೆಳಗಾಯಿತು.

 

ಅಳುವ ಕಂದನ ತಾಯಿ ಮಗನ ಮೀಯಿಸಿದಾಗ

ತೊಳೆದ ನಡು ಹೊಳೆಹೊಳೆದು ಬೆಳಗಾಯಿತು

ದೃಷ್ಟಿತಾಗುವುದೆಂದು ಮುದ್ದಿಟ್ಟು ಬೊಟ್ಟಿಟ್ಟು

ಕಿಲಕಿಲನೆ ನಕ್ಕಾಗ ಬೆಳಗಾಯಿತು.

 

ನೇಗಿಲ ಯೋಗಿ ತಾ ಹೊಲದ ಹೊತ್ತಗೆಯಲ್ಲಿ

ನೂರಾರು ಗೀರೆಳೆದು ಬೆಳಗಾಯಿತು

ಸಾಲು ಸಾವಿರ ಕಾವ್ಯ ಕರ್ಮಯೋಗವ ಹಾಡಿ

‘ಓ, ಓ’ ರಾಗದಲಿ ಬೆಳಗಾಯಿತು.

 

ಇಬ್ಬನಿಗಳೊಬ್ಬುಳಿಯು ತಿರೆಯ ತಾರೆಗಳಂತೆ

ಮಿನುಗಿ ಮಾತನಾಡಿದವು; ‘ಬೆಳಗಾಯಿತು'

ತಂಬೆಲರ ಬೀಸಣಿಗೆ ‘ಬನ್ನಿ, ಬನ್ನೀ’ ಎಂದು 

ಹೂವುಗಳನುಪಚರಿಸಿ ಬೆಳಗಾಯಿತು.

 

ಬಾನುಲಿಯ ಸುಪ್ರಭಾತವನು ಸಾರುವ ಮೊದಲೆ

ಜಗಕ್ಕೆಲ್ಲ ಬೆಳ್ಳನೆಯ ಬೆಳಗಾಯಿತು

ವೃತ್ತಪತ್ರಿಕೆಯೆಲ್ಲ ದಿನವಾರ ಪಂಚಾಂಗ

ಹೊತ್ತು ಹೇಳುವ ಮೊದಲೆ ಬೆಳಗಾಯಿತು.

 

ಎನಿತು ಜನ ಎನಿತು ಮನ ಎನಿತೆನಿತು ಇನಿದನಿ

ಎನಿತು ವೈಭವ ! ಈ ‘ಬೆಳಗಾಯಿತು' !

ದಿನದಿನವು ಬೆಳಕೊಂದೆ, ದಿನದಿನವು ಇನನೊಂದೆ

ಎನಿತು ತರತರದ ಈ ‘ಬೆಳಗಾಯಿತು' !

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)