‘ಸುವರ್ಣ ಸಂಪುಟ' (ಭಾಗ ೯೯) - ಕೆ.ವಿರೂಪಾಕ್ಷ ಗೌಡ
ಹಿಂದೂ ಕುಟುಂಬದಲ್ಲಿ ಹುಟ್ಟಿ ಮುಸ್ಲಿಂ ಮಹಿಳೆಯ ಎದೆ ಹಾಲು ಕುಡಿದು ಬೆಳೆದು, ಕನ್ನಡ ಸಾರಸ್ವತ ಲೋಕವನ್ನು ಬೆಳಗಿದವರು ಕೆ.ವಿರೂಪಾಕ್ಷ ಗೌಡರು. ಇವರು ‘ಬಳ್ಳಾರಿ ಗಾಂಧಿ’ ಎಂದೇ ಖ್ಯಾತಿ ಪಡೆದಿದ್ದ ಪ್ರಾಮಾಣಿಕ, ಸಜ್ಜನ ರಾಜಕಾರಣಿ ಕೆ. ಚೆನ್ನಬಸವನ ಗೌಡ್ರು ಹಾಗೂ ಕಳಕಮ್ಮನವರ ಸುಪುತ್ರರಾಗಿ ಜುಲೈ ೧, ೧೯೩೫ರಲ್ಲಿ ಜನಿಸಿದರು. ವಿರೂಪಾಕ್ಷ ಗೌಡರು ಹುಟ್ಟಿದ ಕೆಲವೇ ಸಮಯದಲ್ಲಿ ಅವರ ತಾಯಿ ಕಳಕಮ್ಮನವರು ತೀವ್ರ ರಕ್ತಸ್ರಾವದಿಂದ ನಿಧನ ಹೊಂದಿದರು. ಹಾಲು ಕುಡಿಯುವ ಮಗುವನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಚೆನ್ನ ಬಸವನಗೌಡ್ರು ಖಾಜಮ್ಮ ಎಂಬ ಮುಸ್ಲಿಂ ಮಹಿಳೆಗೆ ಒಪ್ಪಿಸಿದರು. ಆಕೆ ಅದೇ ಸಮಯಕ್ಕೆ ಬಾಣಂತಿಯಾಗಿದ್ದುದರಿಂದ ಅವರ ಎದೆಹಾಲು ಕುಡಿದು ಬೆಳೆದವರು ವಿರೂಪಾಕ್ಷ ಗೌಡರು.
ಕೆ. ವಿರೂಪಾಕ್ಷ ಗೌಡರ ಊರು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಗೊಂಡನಹಳ್ಳಿ. ತಮ್ಮ ಹುಟ್ಟೂರಾದ ಬಾಚಿಗೊಂಡನಹಳ್ಳಿಯಲ್ಲೇ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ವಿರೂಪಾಕ್ಷಗೌಡರು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ವಾಣಿಜ್ಯ ಪದವಿಯನ್ನು ಪಡೆದುಕೊಂಡರು. ಬಾಲ್ಯದಿಂದಲೇ ಬಯಲಾಟ, ತೊಗಲು ಗೊಂಬೆಯಾಟ, ವೀರಗಾಸೆ, ನಂದಿಕೋಲು, ಸೋಬಾನೆ ಪದ, ಜಾನಪದ ಹಾಡುಗಳಲ್ಲಿ ಬಹಳ ಒಲವು ಉಳ್ಳವರಾಗಿದ್ದರು. ಅವರ ಮೊದಲ ಕವನ ಸಂಕಲನ ‘ಸುಗ್ಗಿಯ ಕಣ' ಕೃತಿಯು ೧೯೫೮ರಲ್ಲಿ ಪ್ರಕಟಣೆ ಕಂಡಿತು. ನಂತರ ಚಂದ್ರಶೇಖರ ಪಾಟೀಲರ ಜೊತೆ ಸೇರಿ ಪ್ರಕಟಿಸಿದ ಪ್ರಬಂಧ ಸಂಕಲನ ‘ಹೊಸ ಪ್ರವಾಹ'. ಆಕಾಶ ಮಲ್ಲಿಗೆ, ಹೂಗೊಂಚಲು, ಬಿಳಿಯ ಹಾಳೆಯ ಮೇಲೆ, ದರ್ಶನ, ಸಾಕ್ಷಿ ಇವು ವಿರೂಪಾಕ್ಷ ಗೌಡರ ಕೆಲವು ಕವನ ಸಂಕಲನಗಳು. ಹಳ್ಳಿ ಪದಗಳು, ಹೊಲಮನಿಯ ಪದಗಳು ಇವರ ಸಂಪಾದಿತ ಕೃತಿಗಳು.
ವಿರೂಪಾಕ್ಷ ಗೌಡರು ಕಿರಿಯ ಕವಿಗಳನ್ನು ಬೆಳೆಸುವ ನಿಟ್ಟಿನಲ್ಲಿ ‘ಕವಿ ಸೈನ್ಯ' ವನ್ನು ಕಟ್ಟಿದ್ದರು. ಈ ಕಾರಣದಿಂದಾಗಿ ಹಲವಾರು ಮಂದಿ ಉದಯೋನ್ಮುಖ ಕವಿಗಳು ಇವರ ಗರಡಿಯಲ್ಲಿ ಪಳಗಿದರು. ಇವರು ತಮ್ಮದೇ ಆದ ಕೊಟ್ಟೂರೇಶ್ವರ ಪ್ರಕಾಶನವನ್ನು ಸ್ಥಾಪಿಸಿದರು. ಹಲವಾರು ಉದಯೋನ್ಮುಖರ ಕೃತಿಗಳನ್ನು ಈ ಮೂಲಕ ಬೆಳಕಿಗೆ ತಂದರು. ವಿರೂಪಾಕ್ಷ ಗೌಡರು ಡಿಸೆಂಬರ್ ೧೨, ೨೦೦೭ರಂದು ಈ ಲೋಕದಿಂದ ಕಣ್ಮರೆಯಾದರು.
‘ಸುವರ್ಣ ಸಂಪುಟ’ದಲ್ಲಿ ಇವರ ಎರಡು ಕವನಗಳು ಪ್ರಕಟವಾಗಿವೆ. ಈ ಯುದ್ಧ ಮತ್ತು ಸ್ವಾಹಾಕಾರಿ. ಇವುಗಳಿಂದ ಒಂದು ಕವನವನ್ನು ಆರಿಸಿ ನಿಮ್ಮ ಓದಿಗಾಗಿ ನೀಡಲಾಗಿದೆ.
ಈ ಯುದ್ಧ
ಒಳ್ಳೆಣ್ಣೆ, ಡಾಲ್ಡಾ ಹಾಕಿ ಅಡಿಗೆ ಮಾಡಿದರೂ
ಈ ತರದ ಸೊಡರು ಬರಲಿಕ್ಕಿಲ್ಲ
ನಳರಾಜ ಹುಟ್ಟಿ ಮಾಣಿ ಭಟ್ಟನಾದರೂ
ಕರಿದು ಈ ಸುವಾಸನೆಯ ತರಲಿಕ್ಕಿಲ್ಲ.
ಹೊಡೆಯುತ್ತಿದೆ ಘಮ ಘಮನೆ ಹೊಡೆ ಹೊತ್ತ ಜೊಳ
ಹೆಸರು-ಮಡಿಕೆಯ ಬಳ್ಳಿ ಬೂಟು ಹೊದಿಕೆ
ಬಯೊನಟ್ ಸಹಿತ ಬಂದೂಕ ಹೊತ್ತಂತೆ ಸಾಲು
ಡಿವಿಜನ್ನಿಗೊಬ್ಬೊಬ್ಬ ತೆನೆಯ ಕಮಾಂಡರು
ಅಲ್ಲೊಂದು ಇಲ್ಲೊಂದು ನಿಶಾನೆ ಹಿಡಿದಿದೆ ತೈರು
ಕೋಟೆಯನು ಕಟ್ಟಿದೊಲು ನಾಲ್ಕು ಕಡೆ ವಡ್ಡು
ಕಂದಕವ ಕಡಿದಂತೆ ಬಳಿಯೆ ಬದುವು
ಕರಿಕೆ ಹೂ ಬಿಟ್ಟಿಹುದು ಗರಿ ಮೇಲೆ ಮಂಜು
ಮಕಮಲ್ಲು ಬಟ್ಟೆಯೊಲು ಮಿದುವು ಮಿಂಚು
ಗುಬ್ಬಿ ಕಾಯುವ ಕವಣೆ
ಎತ್ತರದ ಛಾವಣಿ ಪ್ಯಾಟೆನ್ ಟ್ಯಾಂಕು
ದೇಶದ ಆಹಾರ ಸಮಸ್ಯೆ ಜೊತೆ ಯುದ್ಧ ಸಾರಿ
ಹೊಲಗದ್ದೆಯಲ್ಲಿರುವ ಬಾಕಿ ಡ್ರೆಸ್ಸಿನ ಸೈನ್ಯ
ಹಗಲಿರುಳು ದುಡಿಯುತಿದೆ. ಮದ್ದು, ಗುಂಡು
ಹಿಟ್ಟು, ಬಟ್ಟೆ, ಉತ್ಪತ್ತಿಸುವ ಜಿನ್ನಿನಂತೆ
ವಿಶ್ರಾಂತಿ ಪಡೆದೀತು ಮುಂದಾರು ತಿಂಗಳು
ಈಗಂತು ಶಿಸ್ತಿನಲಿ ಅಣಿಯಾಗಿದೆ
ಚೈನ ಪಾಕಿಸ್ತಾನಕ್ಕಿಟ್ಟು ಭಟ್ಟಂಗಿ
ಜಯತು ಜಯ ಹಾಡಿದೆ
ಗಿಡ ಮರದ ರೇಡಿಯೋ
(ಗುಬ್ಬಿ ಗಿಣಿಗಳೆ ಬ್ಯಾಂಡು)
ಬಯಕೆ ಬಾಳುವೆಯಲ್ಲಿ ಮೈಗೊಡಲಿ
ಹೊಲಗದ್ದೆಯಲ್ಲಿರುವ ಈ ಯುದ್ಧ
ಸದ್ದು, ಗದ್ದಲ ಮುಗಿಸಿ ಸಂತೃಪ್ತಿ ತರಲಿ.
(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)