‘ಸುವರ್ಣ ಸಂಪುಟ' (ಭಾಗ ೯) - ನಾ.ಕಸ್ತೂರಿ

‘ಸುವರ್ಣ ಸಂಪುಟ' (ಭಾಗ ೯) - ನಾ.ಕಸ್ತೂರಿ

ಶ್ರೀಧರ ಖಾನೋಳ್ಕರರ ಕವನ ‘ನನ್ನ ಕರ್ನಾಟಕ'ವನ್ನು ನಾವು ಕಳೆದ ವಾರ ‘ಸುವರ್ಣ ಸಂಪುಟ' ದಿಂದ ಆಯ್ದು ಪ್ರಕಟ ಮಾಡಿದ್ದೆವು. ಶ್ರೀಧರರ ಬಗ್ಗೆ ಅಧಿಕ ಮಾಹಿತಿಯನ್ನು ಕೊಡಲು ಸಾಧ್ಯವೇ? ಎಂದು ಹಲವಾರು ಓದುಗರು ಕೇಳಿದ್ದಾರೆ. ನಾವು ಕಳೆದ ವಾರವೇ ತಿಳಿಸಿದಂತೆ ಅವರ ಬಗ್ಗೆ ನಮಗೆ ಲಭ್ಯವಿರುವ ಮಾಹಿತಿಗಳನ್ನು ನಾವು ನಿಮ್ಮ ಜೊತೆ ಹಂಚಿಕೊಂಡಿದ್ದೇವೆ. ನಮಗೆ ಅವರ ಭಾವಚಿತ್ರ ಹಾಗೂ ಅಧಿಕ ಮಾಹಿತಿ ದೊರೆತರೆ ಮುಂಬರುವ ದಿನಗಳಲ್ಲಿ ಖಂಡಿತವಾಗಿಯೂ ನಿಮ್ಮ ಜೊತೆ ಹಂಚಿಕೊಳ್ಳುತ್ತೇವೆ. ಓದುಗರೂ ಈ ನಿಟ್ಟಿನಲ್ಲಿ ನಮಗೆ ಸಹಾಯ ಮಾಡಬಹುದು. 

ಈ ವಾರ ನಾವು ಕವಿ, ಹಾಸ್ಯ ಸಾಹಿತಿ ನಾ.ಕಸ್ತೂರಿ ಇವರ ಕವನವನ್ನು ಆಯ್ದುಕೊಂಡಿದ್ದೇವೆ. ಇವರ ಕಿರು ಪರಿಚಯ ಇಲ್ಲಿದೆ.

ನಾ.ಕಸ್ತೂರಿ: ಇವರ ಪೂರ್ಣ ಹೆಸರು ನಾರಾಯಣ ಕಸ್ತೂರಿ ರಂಗನಾಥ ಶರ್ಮ. ಬರವಣಿಗೆಯ ಸಮಯದಲ್ಲಿ ಇದು ನಾ.ಕಸ್ತೂರಿ. ಇವರು ಡಿಸೆಂಬರ್ ೨೫, ೧೮೯೭ರಲ್ಲಿ ಕೇರಳ ರಾಜ್ಯದ ಎರ್ನಾಕುಲಂನ ತ್ರಿಪುನಿತ್ತರ ಎಂಬ ಊರಿನಲ್ಲಿ ಜನಿಸಿದರು. ಇವರಿಗೆ ಹುಟ್ಟುವಾಗ ಎರಡೂ ಕೈಯಲ್ಲಿ ಆರು ಬೆರಳುಗಳಿದ್ದುವಂತೆ. ಇವರ ಅಜ್ಜಿ ಇದು ಅನಿಷ್ಟ ಎಂದು ಕತ್ತರಿಯಿಂದ ಕತ್ತರಿಸಿ ತೆಗೆದರಂತೆ. ಮೊದಲೇ ಮಗು ಬಲಹೀನವಾಗಿತ್ತು. ಈ ಕಾರ್ಯದಿಂದ ಇನ್ನಷ್ಟು ತೊಂದರೆಗೊಳಗಾದರೂ ಮಗು ಬದುಕಿ ಉಳಿಯಿತು. ಕನ್ನಡಮ್ಮನ ಸೇವೆ ಮಾಡುವ ಋಣ ಇತ್ತೆಂದು ತೋರುತ್ತದೆ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಕಸ್ತೂರಿ ತಮ್ಮ ತಾಯಿಯ ಆರೈಕೆಯಲ್ಲಿ ಬೆಳೆದರು. 

ಎರ್ನಾಕುಲಂನ ಮಹಾರಾಜಾ ಕಾಲೇಜಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಹಾಗೂ ತಿರುವನಂತಪುರಂ ಇಲ್ಲಿಯ ಮಹಾರಾಜಾ ಕಾಲೇಜಿನಲ್ಲಿ ಎಂ.ಎ. ಹಾಗೂ ಬಿ.ಎಲ್ ಶಿಕ್ಷಣವನ್ನು ಪಡೆದುಕೊಂಡರು. ವಕೀಲ ವೃತ್ತಿ ಮಾಡುವ ಹುಮ್ಮಸ್ಸು ಕಸ್ತೂರಿಯವರಲ್ಲಿ ಇರಲಿಲ್ಲ. ಆಮೇಲೆ ಕಸ್ತೂರಿಯವರು ಮೈಸೂರಿನತ್ತ ಆಕರ್ಷಿತರಾದರು. ಮೈಸೂರಿನ ಡಿ.ಬಿ.ಸಿ. ಪ್ರೌಢ ಶಾಲೆಯಲ್ಲಿ ಅಧ್ಯಾಪಕರಾಗಿ ತಮ್ಮ ಕೆಲಸವನ್ನು ಪ್ರಾರಂಭಿಸಿದ ಇವರು ನಂತರ ಡಿ.ಬನುಮಯ್ಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡತೊಡಗಿದರು. ಈ ಸಮಯದಲ್ಲಿ ಇವರು ಕಾಲೇಜು ಪತ್ರಿಕೆ ತಯಾರಿಕೆ, ನಾಟಕ ಬರಹ ಮತ್ತು ನಟನೆಯನ್ನೆಲ್ಲಾ ಮಾಡುತ್ತಿದ್ದರು.
ಮೈಸೂರಿನಲ್ಲಿ ರಾಮಕೃಷ್ಣಾಶ್ರಮ ಸ್ಥಾಪನೆಗಾಗಿ ಅಹೋರಾತ್ರಿ ಶ್ರಮಿಸಿದರು. ಆಧ್ಯಾತ್ಮಿಕ ಶಿಬಿರ ಮತ್ತು ಉಪನ್ಯಾಸಗಳನ್ನು ಹಮ್ಮಿಕೊಂಡರು. ವಯಸ್ಕರ ಶಿಕ್ಷಣಕ್ಕಾಗಿ ಶ್ರಮಿಸಿದರು. ಹಾಸ್ಯ ಸಾಹಿತಿ ರಾ.ಶಿ. (ಶಿವರಾಂ) ಇವರ ಸಂಪರ್ಕವಾದ ಬಳಿಕ ಅವರ ‘ಕೊರವಂಜಿ' ಪತ್ರಿಕೆಗಾಗಿ ಹಲವಾರು ಲೇಖನಗಳನ್ನು ಬರೆದರು. ನಾಕ, ತಾರಕ, ರುದ್ರಮ್ಮ, ಪಾಟಾಳಿ ಎಂಬೆಲ್ಲಾ ಕಾವ್ಯನಾಮಗಳಲ್ಲಿ ಸಾಹಿತ್ಯವನ್ನು ರಚಿಸಿದರು. ಇವರು ರಚಿಸಿದ ‘ಅನರ್ಥ ಕೋಶ' ಎಂಬ ವಿಭಿನ್ನ ಪ್ರಕಾರ ಈಗಲೂ ಎಲ್ಲರ ಮನೆಮಾತಾಗಿದೆ. ‘ಆಕಾಶವಾಣಿ’ ಪ್ರಾರಂಭವಾದಾಗ ಆ ಹೆಸರು ಸೂಚಿಸಿದವರೇ ನಾ.ಕಸ್ತೂರಿಯವರು. ಆಕಾಶವಾಣಿಯಲ್ಲೂ ಕೆಲಕಾಲ ಸೇವೆ ಸಲ್ಲಿಸಿದರು. 

ಇವರು ಗಾಳಿಗೋಪುರ, ರಂಗನಾಯಕಿ, ಚಕ್ರದೃಷ್ಟಿ, ಶಂಖವಾದ್ಯ, ಶಹಜಹಾನ್ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಕೆಂಪು ಮೀನು ಇವರ ಅನುವಾದ ಬರಹ, ಅಶೋಕ ಎಂಬುವುದು ಐತಿಹಾಸಿಕ ಗ್ರಂಥ. ತಮ್ಮ ಕೊನೆಯ ಮಗನ ಅಕಾಲ ಸಾವಿನ (೧೯೪೭) ಬಳಿಕ ಇವರು ಅಧ್ಯಾತ್ಮದತ್ತ ತಮ್ಮ ಒಲವನ್ನು ಬೆಳೆಸಿಕೊಂಡರು. ೧೯೮೭, ಆಗಸ್ಟ್ ೧೪ರಂದು ನಾ.ಕಸ್ತೂರಿಯವರು ನಮ್ಮನ್ನು ಅಗಲಿದರು. 

ನಾ. ಕಸ್ತೂರಿಯವರ ಕವನ:

ನಗೆಗಾರರು

ಸಿಹಿ ನುಡಿಯ ನಗೆ ಗುಡಿಯ

ಕಟ್ಟುವವರು ನಾವು!

 

ಜಂಭಿಗರ ಬಿಗಿಮುಡಿಯ

ಬಿಚ್ಚುವರು ನಾವು !

 

ತಾರೆ ಮರಿ ಮಿಂಚುಗಳ

ತಂಪು ಬೆಳದಿಂಗಳಿನ

ಒಳಗುಟ್ಟುಗಳು ನಾವು !

 

ಪೊಡವಿಯನು ಗಲಿರೆನಿಪ

ಸೊಟ್ಟುಗಳು ನಾವು !

 

ಸೊನ್ನೆಯಲಿ ಚೆಕ್ಕುಗಳು

ಕುಕ್ಕು (Cook)ವರು ನಾವು !

 

ಸಾಲದಲಿ ಶಾಲ್ಯಾನ್ನ

ಮುಕ್ಕುವರು ನಾವು !

 

ನಿಮ್ಮ ಚಂದದ ತಳಕು

ನಮ್ಮ ಇಂದಿನ ಅಣಕು

ನಿಮ್ಮ ಹೆಮ್ಮೆಯ ಕೆಚ್ಚು 

ನಮ್ಮ ಕಣ್ಣಿಗೆ ಪೆಚ್ಚು !

 

ಹಬ್ಬಿಗರು ॥ ಹಾಸ್ಯೇಂದ್ರ

ಜಾಲಿಗರು ನಾವು 

ನಮ್ಮ ಮಿದು ಬಾಮಿ (Balm) ನಿಂ

ತೊಲಗುವುದು ನೋವು !

 

ತಾರೆಯರ ನೃತ್ಯಗಳ

ಮಾರಕರ ಕೃತ್ಯಗಳ

ಒಳಚುಚ್ಚುಗಳು ನಾವು!

 

ಓರೆಗಣ್ಣುಗಳನ್ನೆ 

ಬೀರುವೆವು ನಾವು !

 

ಅಷ್ಟತರ ವಕ್ರತೆಯೆ

ದೃಷ್ಟಿಪಥವೆಮಗೆ !

 

ಹುಳಿಮೋರೆಗೆಮ್ಮನುಡಿ

ಅಲ್ ಕಲಿ (Alkali) ಯು ! ನೋಡ !

 

ನಮ್ಮ ಲೇಖನಿಗಿಂತ 

ಚೂರಸಿ*ಯ ಕಾಣೆ !

 

ನಮ್ಮ ಮಸಿಯೇ ತೀರ್ಥ

ಶುಂಡಲಿಗನಾಣೆ !

***

*ಚೂರಾದ ಅಸಿ

 

(‘ಸುವರ್ಣ ಸಂಪುಟ’ ಸಂಗ್ರಹ)

 ಚಿತ್ರ ಕೃಪೆ : ಅಂತರ್ಜಾಲ ತಾಣ