‘ಸುವರ್ಣ ಸಂಪುಟ (೭) - ದ.ರಾ.ಬೇಂದ್ರೆ

‘ಸುವರ್ಣ ಸಂಪುಟ (೭) - ದ.ರಾ.ಬೇಂದ್ರೆ

ಎಂ. ಆರ್.ಶ್ರೀನಿವಾಸಮೂರ್ತಿಯವರ ‘ಒಂದು ಕಾಗದ' ಎಂಬ ಕವನವನ್ನು ನಾವು ಕಳೆದ ವಾರ ‘ಸುವರ್ಣ ಸಂಪುಟ' ಪುಸ್ತಕದಿಂದ ಆಯ್ದು ಪ್ರಕಟ ಮಾಡಿದ್ದೆವು. ಈ ಪುಸ್ತಕದಲ್ಲಿ ಅವರ ಇದೊಂದೇ ಕವನ ಅಚ್ಚಾಗಿದೆ. ಅವರು ಬರೆದ ಬೇರೆ ಕವನಗಳ ಬಗ್ಗೆ ಮಾಹಿತಿ ಇರುವ ಓದುಗರು ಪ್ರತಿಕ್ರಿಯೆಯಲ್ಲಿ ತಿಳಿಸಬಹುದು. ಈ ಕವನವನ್ನು ಬಹಳಷ್ಟು ಓದುಗರು ಮೆಚ್ಚಿದ್ದಾರೆ. ಒಂದು ಹೆಣ್ಣಿನ ನೋವನ್ನು ಸರಳವಾಗಿ ಕವನದ ಮೂಲಕ ಕವಿಗಳು ವ್ಯಕ್ತ ಪಡಿಸಿದ್ದಾರೆ ಎಂಬುದು ಹಲವರ ಅಭಿಮತ. ಈ ವಾರ ನಾವು ಖ್ಯಾತ ಕವಿ ದ.ರಾ.ಬೇಂದ್ರೆಯವರ ಎರಡು ಕವನಗಳನ್ನು ಆಯ್ಕೆ ಮಾಡಿದ್ದೇವೆ. ದ.ರಾ.ಬೇಂದ್ರೆಯವರ ಸುಮಾರು ೧೦ಕ್ಕೂ ಅಧಿಕ ಕವನಗಳು ಈ ಸಂಪುಟದಲ್ಲಿವೆ. ಮುಂದಿನ ದಿನಗಳಲ್ಲಿ ಉಳಿದ ಕವನಗಳನ್ನೂ ಪ್ರಕಟಿಸುವ ಯೋಚನೆ ಇದೆ.

ದ.ರಾ.ಬೇಂದ್ರೆ: ಇವರ ಪೂರ್ತಿ ಹೆಸರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಕಾವ್ಯನಾಮ ಅಂಬಿಕಾತನಯದತ್ತ. ಧಾರವಾಡದಲ್ಲಿ ಜನವರಿ ೩೧, ೧೮೯೬ರಲ್ಲಿ ಜನನ. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ (ಅಂಬವ್ವ), ತಮ್ಮ ತಾಯಿಯ ಹೆಸರು ಅಂಬಿಕೆಯ ತನಯ (ಮಗ) ದತ್ತ ಎಂದು ಅವರು ತಮ್ಮ ಕಾವ್ಯನಾಮವನ್ನು ಅಂಬಿಕಾತನಯದತ್ತ ಎಂದು ಇರಿಸಿದ್ದಾರೆ. ತಮ್ಮ ೧೧ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರು. ಬಿ ಎ ಪದವಿಯನ್ನು ಮುಗಿಸಿ ಅಧ್ಯಾಪನಾ ವೃತ್ತಿಯನ್ನು ಪ್ರಾರಂಭಿಸಿದರು. ನಂತರ ಎಂ.ಎ. ಪದವಿಯನ್ನು ಪಡೆದು ಸೋಲಾಪುರದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ. ಇವರ ‘ನಾಕು ತಂತಿ' ಕೃತಿಗೆ ೧೯೭೪ರಲ್ಲಿ ಜ್ಞಾನಪೀಠ ಪುರಸ್ಕಾರ ದೊರೆತಿದೆ. ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳು ಇವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ. ‘ಅರಳು ಮರಳು’ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ೧೯೬೮ರಲ್ಲಿ ಕೇಂದ್ರ ಸರಕಾರದಿಂದ ಪದ್ಮಶ್ರೀ ಗೌರವ ಲಭಿಸಿದೆ. ಇವರು ಸುಪ್ರಸಿದ್ಧ ಕವಿಗಳೂ, ನಾಟಕಕಾರರೂ ಆಗಿದ್ದರು. ಸುಮಾರು ೫೦ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ೧೯೪೨ರಲ್ಲಿ ಶಿವಮೊಗ್ಗದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ ವಹಿಸಿದ್ದರು. ಬೇಂದ್ರೆಯವರು ೧೯೮೧ ಅಕ್ಟೋಬರ್ ೨೬ರಂದು ಮುಂಬಯಿಯಲ್ಲಿ ನಿಧನ ಹೊಂದಿದರು. ಇವರನ್ನು ವರಕವಿ ಎಂದೂ ಕರೆಯುತ್ತಾರೆ.

***

ಕವನ ೧ - ಪಾತರಗಿತ್ತಿ ಪಕ್ಕ

ಪಾತರಗಿತ್ತೀ ಪಕ್ಕಾ

ನೋಡಿದೇನ ಅಕ್ಕಾ!

 

ಹಸಿರು ಹಚ್ಚಿ ಚುಚ್ಚಿ 

ಮೇಲ ಕರಿಸಿಣ ಹಚ್ಚಿ,

 

ಹೊನ್ನ ಚಿಕ್ಕಿ ಚಿಕ್ಕಿ

ಇಟ್ಟು ಬೆಳ್ಳಿ ಅಕ್ಕಿ,

 

ಸುತ್ತೂ ಕುಂಕುಮದೆಳಿ

ಎಳೆದು ಕಾಡಿಗೆ ಸುಳಿ,

 

ಗಾಳೀ ಕೇನೀಲೇನ

ಮಾಡಿದ್ದಾರ ತಾನ!

 

ನೂರು ಆರು ಪಾರು

ಯಾರು ಮಾಡಿದ್ದಾರು!

 

ಏನು ಬಣ್ಣ ಬಣ್ಣ

ನಡುವೆ ನವಿಲಣ್ಣ!

 

ರೇಶಿಮೆ ಪಕ್ಕ ನಯ

ಮುಟ್ಟಲಾರೆ ಭಯ !

 

ಹೂವಿನ ಪಕಳೆಗಿಂತ

ತಿಳಿವು ತಿಳಿವು ಅಂತ ?

 

ಹೂವಿಗೆ ಹೋಗಿ ತಾವ

ಗಲ್ಲಾ ತಿವಿತಾವ

 

ಬನ ಬನದಾಗ ಆಡಿ

ಪಕ್ಕಾ ಹುಡಿ ಹುಡಿ ;

 

ಹುಲ್ಲುಗಾವುಲದಾಗ

ಹಳ್ಳಿ ಹುಡುಗೀ ಹಾಂಗ-

 

ಹುಡದೀ ಹುಡದೀ ಭಾಳ

ಆಟಕ್ಕಿಲ್ಲ ತಾಳ,

 

ಕಿರೇ ಸೊರೇ ಪಾನ-

ದಲ್ಲಿ ಧೂಳಿಸ್ನಾನ.

 

ತುರುಬಿ ತುಂಬಿ ತೋಟ

ದಲ್ಲಿ ದಿನದ ಊಟ.

 

ಕಳ್ಳಿ ಹೂವ ಕಡಿದು

ಹೂತುಟಿನೀರ ಕುಡಿದು;

 

ನಾಯಿ ಛತ್ತರಿಗ್ಯಾಗ

ಕೂತು ಮೋಜಿನಾಗ.

 

ರುದ್ರಗಂಟೆ ಮೂಸಿ

ವಿಷ್ಣುಗಂಟೆ ಹಾಸಿ,

 

ಹೇಸಿಗೆ ಹೂವ ಬಳಿಗೆ

ಹೋಗಿ ಒಂದ ಗಳಿಗೆ.

 

ಮದಗುಣಿಕಿಯ ಮದ್ದು

ಹುರುಪಿಗಿಷ್ಟು ಮೆದ್ದು,

 

ಕಾಡ ಗಿಡ ಗಂಟಿ

ಅಂಚಿಗಂಟಿ ಗಿಂಟಿ,

 

ನೀಗಿ ಬಳ್ಳಿ ತಾಗಿ

ಪಕ್ಕಾ ಬೆಳ್ಳಗಾಗಿ,

 

ಗೊರಟಿಗೆಗೆ ಶರಣ

ಮಾಡಿ ದೂರಿಂದ ನ

 

ಮಾಲಿಂಗನ ಬಳ್ಳಿ

ತೂಗೂ ಮಂಚದಲ್ಲಿ.

 

ತೂಗಿ ತೂಗಿ ತೂಗಿ

ದಣಿದಾಂಗ ಆಗಿ,

 

ಬೇಲೀ ಬಳ್ಳಿಯೊಳಗ

ಅದರ ನೆರಳ ತೆಳಗ

 

ನಿದ್ದಿಗುಳ್ಯಾಡಿ

ಪಗಡಿ ಪಕ್ಕಾ ಆಡಿ,

 

ಗುಲಬಾಕ್ಷಿಯ ಹೂವ

ಕುಶಲ ಕೇಳತಾವ;

 

ಹುಡಿಯ ನೀರಿನ್ಯಾಗ

ತುಳುಕಿಸುತ್ತ ಬ್ಯಾಗ

 

ಹಡಿಯೆ ಬೀಜ ಗಂಡು

ಹಾರ ಹರಿಕಿ ಅಂದು,

 

ಅಡವಿ ಮಲ್ಲಿಗಿ ಕಂಡು

ಅದರ ಕಂಪನುಂಡು;

 

ಹುಲ್ಲು ಹೊಲಕ ಬಂದು

ಗುಬ್ಬಿ ಬೆಳೆಸಿರೆಂದು,

 

ಇಷ್ಟು ಎಲ್ಲಾ ಮಾಡಿ

ಸಪ್ಪಳಿಲ್ಲದಾಡಿ,

 

ತಾಳ ಚವ್ವ ಚಕ್ಕ

ಕುಣಿತ ತಕ್ಕ ತಕ್ಕ;

 

ಆಸಿ ಹಚ್ಚಿ ಹ್ಯಾಂಗ

ಕಂಡು ಸಿಕ್ಕಧಾಂಗ

 

ಸಿಕ್ಕಲ್ಲೊಡತಾವ

ಅಲ್ಯೂ ಇಲ್ಯೂ ಆವ

ಕಾಣದೆಲ್ಲೊ ಮೂಡಿ

ಬಂದು ಗಾಳಿಗೂಡಿ

 

ಇನ್ನು ಎಲ್ಲಿಗೋಟ?

ನಂದನದ ತೋಟ!

***

ಕವನ -೨- ನಾನು ಬಡವಿ

ನಾನು ಬಡವಿ ಆತ ಬಡವ

ಒಲವೆ ನಮ್ಮ ಬದುಕು

ಬಳಸಿಕೊಂಡೆವದನೆ ನಾವು

ಅದಕು ಇದಕು ಎದಕು.

 

ಹತ್ತಿರಿರಲಿ ದೂರವಿರಲಿ

ಅವನೆ ರಂಗಸಾಲೆ

ಕಣ್ಣುಕಟ್ಟುವಂಥ ಮೂರ್ತಿ

ಕಿವಿಗೆ ಮೆಚ್ಚಿನೋಲೆ.

 

ಚಳಿಗೆ ಬಿಸಿಲಿನೊಂದು ಹದನ

ಅವನ ಮೈಯ ಮುಟ್ಟೆ

ಅದೇ ಗಳಿಗೆ ಮೈಯ ತುಂಬ

ನನಗೆ ನವಿರು ಬಟ್ಟೆ.

 

ಆತ ಕೊಟ್ತ ವಸ್ತು ಒಡವೆ

ನನಗೆ ಅವಗೆ ಗೊತ್ತು

ತೋಳುಗಳೀಗೆ ತೋಳಬಂದಿ

ಕೆನ್ನೆ ತುಂಬಾ ಮುತ್ತು.

 

ಕುಂದು ಕೊರತೆ ತೋರಲಿಲ್ಲ

ಬೇಕು ಹೆಚ್ಚಿಗೇನು?

ಹೊಟ್ಟೆಗಿತ್ತ ಜೀವ ಫಲವ

ತುಟಿಗೆ ಹಾಲು ಜೇನು.

***

(‘ಸುವರ್ಣ ಸಂಪುಟ’ದಿಂದ ಸಂಗ್ರಹಿತ)