‘ಹಣ್ಣೆಲೆ ಚಿಗುರಿದಾಗ' ಚಿತ್ರದಲ್ಲಿ ಎಲ್ಲವೂ ಅದಲು ಬದಲು !

‘ಹಣ್ಣೆಲೆ ಚಿಗುರಿದಾಗ' ಚಿತ್ರದಲ್ಲಿ ಎಲ್ಲವೂ ಅದಲು ಬದಲು !

ನಾವು ಬಹಳಷ್ಟು ಸಲ ಯೋಚಿಸುವುದೊಂದು ಆದರೆ ಆಗುವುದು ಮತ್ತೊಂದು. ಈ ಮಾತು ಸರಿಯಾಗಿ ಅನ್ವಯಿಸುವುದು ೧೯೬೮ರಲ್ಲಿ ತೆರೆಕಂಡ ‘ಹಣ್ಣೆಲೆ ಚಿಗುರಿದಾಗ' ಎಂಬ ಕನ್ನಡ ಚಿತ್ರಕ್ಕೆ. ಈ ಚಿತ್ರ ನಿರ್ದೇಶಿಸಲು ಬಯಸಿದ್ದು ಒಬ್ಬರು, ಆದರೆ ನಿರ್ದೇಶನ ಮಾಡಿದ್ದು ಬೇರೆ ಯಾರೋ, ನಿರ್ದೇಶಕನಾಗಬೇಕೆಂದು ಬಯಸಿದ್ದ ವ್ಯಕ್ತಿ ತನ್ನ ೭೮ನೇ ವಯಸ್ಸಿನಲ್ಲಿ ಆ ಚಿತ್ರದಲ್ಲಿ ನಾಯಕನಾಗಿ ನಟಿಸಬೇಕಾಗಿ ಬಂತು. ನಿರ್ಮಾಪಕನಾಗೋ ಕನಸು ಕಂಡದ್ದು ಯಾರೋ, ಆದರೆ ಆದದ್ದು ಯಾರೋ.. ಹೀಗೆ ಹತ್ತು ಹಲವಾರು ಅದಲು ಬದಲುಗಳು ಈ ಚಿತ್ರದಲ್ಲಿ ಕಂಡು ಬಂದವು. ಬನ್ನಿ ಒಂದೊಂದಾಗಿ ನೋಡಿಕೊಂಡು ಬರುವ.

೧೯೬೮ರಲ್ಲಿ ತೆರೆಕಂಡ ‘ಹಣ್ಣೆಲೆ ಚಿಗುರಿದಾಗ' ಚಿತ್ರಕ್ಕೆ ಈಗ ಬರೋಬ್ಬರಿ ೫೫ ವರ್ಷ ವಯಸ್ಸಾಯಿತು. ಖ್ಯಾತ ಕಾದಂಬರಿಕಾರ್ತಿ ತ್ರಿವೇಣಿ ಅವರ ಕಾದಂಬರಿ ಆಧಾರಿತ ಈ ಚಿತ್ರವನ್ನು ನಿರ್ಮಿಸಬೇಕೆಂದು ಬಯಸಿದ್ದು ಕನ್ನಡ ಚಿತ್ರರಂಗದ ಪಿತಾಮಹ ಎಂಬ ಖ್ಯಾತಿಯನ್ನು ಪಡೆದಿದ್ದ ಆರ್ ನಾಗೇಂದ್ರರಾಯರು. ಆದರೆ ವಿಧಿಯ ಆಟವೋ ಏನೋ, ಅವರಿಗೆ ಹಣಕಾಸು ಹೊಂದಾಣಿಕೆಯಾಗದೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಶ್ರೀಕಾಂತ್ & ಶ್ರೀಕಾಂತ್ ಎಂಟರ್ ಪ್ರೈಸಸ್ ಸಂಸ್ಥೆಯ ಶ್ರೀಕಾಂತ್ ನಹತಾ (ನಟಿ ಜಯಪ್ರದಾ ಪತಿ) ಮತ್ತು ಶ್ರೀಕಾಂತ್ ಪಟೇಲ್. 

ಕಾದಂಬರಿ ಆಧಾರಿತ ಚಿತ್ರಗಳನ್ನು ಮಾಡುವಲ್ಲಿ ಮುತುವರ್ಜಿಯನ್ನು ತೋರಿಸುತ್ತಿದ್ದ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ತ್ರಿವೇಣಿ ಅವರ ‘ಬೆಳ್ಳಿ ಮೋಡ’ ಕಾದಂಬರಿಯ ಹಕ್ಕುಗಳನ್ನು ಪಡೆದುಕೊಂಡಿದ್ದರು. ಅದರಂತೆ ಆ ಕಾದಂಬರಿಗೆ ಸಂಭಾಷಣೆ ಬರೆಯುವ ಕೆಲಸವನ್ನು ಸಾಹಿತಿ ಆರ್ ಎನ್ ಜಯಗೋಪಾಲ್ ಅವರಿಗೆ ವಹಿಸಿದ್ದರು. ತಮಗೆ ಒಪ್ಪಿಸಿದ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುವ ಜಯಗೋಪಾಲ್ ತ್ರಿವೇಣಿಯವರ ‘ಬೆಳ್ಳಿ ಮೋಡ’ ಕಾದಂಬರಿಯ ಜೊತೆಗೆ ಇನ್ನೂ ಕೆಲವು ತ್ರಿವೇಣಿಯವರ ಕಾದಂಬರಿಗಳನ್ನು ಓದಿ ಮುಗಿಸಿದ್ದರು. ಅದರಲ್ಲಿ ಆರ್ ಎನ್ ಜಯಗೋಪಾಲ್ ಅವರನ್ನು ಆಕರ್ಷಿಸಿದ್ದು ‘ಹಣ್ಣೆಲೆ ಚಿಗುರಿದಾಗ' ಎನ್ನುವ ಕಾದಂಬರಿ. ಈ ಕೃತಿಯನ್ನು ಓದಿ ಮುಗಿಸಿದಾಗ ಅವರಿಗೆ ಇದನ್ನು ಚಲನ ಚಿತ್ರವನ್ನಾಗಿ ಮಾಡಲೇ ಬೇಕು ಎನ್ನುವ ಆಸೆ ಚಿಗುರಿತು. 

ಈ ಕಾದಂಬರಿಯನ್ನು ಚಲನಚಿತ್ರವನ್ನಾಗಿ ಮಾಡುವಾಗ ತಮ್ಮ ತಂದೆ ನಾಗೇಂದ್ರರಾಯರೇ ಇದನ್ನು ನಿರ್ಮಿಸಿ ನಿರ್ದೇಶಿಸಬೇಕು ಎನ್ನುವುದು ಮಗನಾದ ಆರ್ ಎನ್ ಜಯಗೋಪಾಲ್ ಅವರ ಆಸೆಯಾಗಿತ್ತು. ಅದಕ್ಕಾಗಿ ಅವರು ಈ ಚಿತ್ರ ಕಥೆಯ ಬಗ್ಗೆ ತಮ್ಮ ತಂದೆಯವರಲ್ಲಿ ಚರ್ಚಿಸಿದಾಗ ಅವರು ಸಂತೋಷದಿಂದ ಒಪ್ಪಿಕೊಂಡರು. ಆದರೆ ಅವರಲ್ಲಿ ಹಣಕಾಸಿನ ಅಭಾವ ಬಹಳ ಇತ್ತು. ಆಗ ಅವರಿಗೆ ಕಂಡದ್ದು ಫೈನಾನ್ಶಿಯರ್ ಸುಂದರಲಾಲ್ ಮೆಹ್ತಾ. ಇವರು ಅದಾಗಲೇ ‘ಮನಸ್ಸಿದ್ದರೆ ಮಾರ್ಗ' ಎನ್ನುವ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಎಂ ಆರ್ ವಿಠಲ್ ಅವರು. ವಿಠಲ್ ಅವರಿಗೆ ಕಾದಂಬರಿ ಆಧಾರಿತ ಚಿತ್ರಗಳನ್ನು ತಯಾರಿಸುವಲ್ಲಿ ವಿಪರೀತ ಒಲವು. ಈ ಕಾರಣದಿಂದ ಅವರು ಸುಂದರಲಾಲ್ ಮೆಹ್ತಾ ಅವರಲ್ಲಿ ಮುಂದಿನ ಚಿತ್ರವನ್ನು ಕಾದಂಬರಿ ಆಧಾರಿತ ಚಿತ್ರವನ್ನಾಗಿ ಮಾಡುವ ಎಂದು ಹಠ ಹಿಡಿದರು. ಇದೇ ಸಮಯ ನಾಗೇಂದ್ರರಾಯರು ‘ಹಣ್ಣೆಲೆ ಚಿಗುರಿದಾಗ' ಚಿತ್ರಕ್ಕೆ ಹಣಕಾಸಿನ ಸಹಕಾರ ನೀಡುವಂತೆ ಮೆಹ್ತಾ ಅವರನ್ನು ಸಂಪರ್ಕಿಸಿದರು. ಮೆಹ್ತಾ ಅವರೂ ನಿರ್ದೇಶಕ ವಿಠಲ್ ಅವರಿಗಾಗಿ ಕಾದಂಬರಿ ಆಧಾರಿತ ಚಿತ್ರ ನಿರ್ಮಿಸಬೇಕೆಂದು ಬಯಸಿದ್ದರು. ಈ ಕಾರಣದಿಂದ ಅವರು ನಾಗೇಂದ್ರರಾಯರ ಮನವಿಗೆ ಕೂಡಲೇ ಸಮ್ಮತಿಯನ್ನು ಸೂಚಿಸಿದರು. ಆದರೆ ಚಿತ್ರದ ನಿರ್ದೇಶನ ಮಾತ್ರ ನಾಗೇಂದ್ರರಾಯರ ಕೈಯಿಂದ ಜಾರಿ ಎಂ ಆರ್ ವಿಠಲ್ ಅವರ ಹೆಗಲಿಗೆ ಬಿತ್ತು. ಮೃದು ಮನಸ್ಸಿನ ನಾಗೇಂದ್ರರಾಯರು ಈ ಚಿತ್ರದ ನಿರ್ದೇಶಕ, ನಿರ್ಮಾಪಕರಾಗುವ ಬದಲು ಪ್ರಮುಖ ಹಿರಿಯ ನಟರಾಗಲು ಒಪ್ಪಿಗೆ ಸೂಚಿಸಿದರು. ಅಪ್ಪ ಒಪ್ಪಿದ ಮೇಲೆ ಮಗನದ್ದೇನು? ಆರ್ ಎನ್ ಜಯಗೋಪಾಲ್ ಕೂಡಾ ಒಪ್ಪಿಗೆ ಸೂಚಿಸಿದರು. ಹೀಗೆ ಒಂದು ಚಿತ್ರದ ನಿರ್ಮಾಪಕ, ನಿರ್ದೇಶಕ ಆಗಬೇಕೆಂದು ಬಯಸಿದವರು ನಟನಾದರು. ಚಿತ್ರದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಲು ಬಯಸಿದ್ದ ಜಯಗೋಪಾಲ್ ಸಂಭಾಷಣೆ ಮತ್ತು ಚಿತ್ರಕಥೆ ಬರೆಯಲು ಸೀಮಿತವಾದರು. ಯಾವುದೋ ಕಾದಂಬರಿ ಆಧಾರಿತ ಚಿತ್ರ ಮಾಡಲು ಹೊರಟ ಎಂ ಆರ್ ವಿಠಲ್ ಅನಿರೀಕ್ಷಿತವಾಗಿ ನಾಗೇಂದ್ರರಾಯರ ಚಿತ್ರಕ್ಕೆ ನಿರ್ದೇಶಕರಾದರು. 

ಎಂ ರಂಗರಾವ್ ಅವರು ಅದ್ಭುತವಾದ ಸಂಗೀತವನ್ನು ನೀಡಿ ‘ಹಣ್ಣೆಲೆ ಚಿಗುರಿದಾಗ' ಚಿತ್ರವನ್ನು ಗೆಲ್ಲಿಸಲು ಇನ್ನಷ್ಟು ಸಹಕಾರ ನೀಡಿದರು. ಅವರ ಸಂಗೀತದಲ್ಲಿ ಖ್ಯಾತ ಗಾಯಕ ಬಾಲಮುರಳಿ ಕೃಷ್ಣ ಅವರು ಹಾಡಿದ ‘ಹಾಲಲಿ ಮಿಂದವಳೋ, ದಂತದ ಮೈಯವಳೋ...' ಮತ್ತು ಹೂವು ಚೆಲುವೆಲ್ಲಾ... ಹಾಡುಗಳು ಸೂಪರ್ ಹಿಟ್ ಆಗಿದ್ದವು. 

ಬಹುಮಂದಿಗೆ ಗೊತ್ತಿಲ್ಲದ ಸಂಗತಿ ಎಂದರೆ ‘ಹಣ್ಣೆಲೆ ಚಿಗುರಿದಾಗ’ ಚಿತ್ರವೇ ಡಾ ರಾಜಕುಮಾರ್ ಅವರ ನೂರನೇ ಚಿತ್ರ. ಆದರೆ ರಾಜಕುಮಾರ್ ಅವರು ಈ ಚಿತ್ರದಲ್ಲಿ ಪೂರ್ಣವಾಗಿ ನಟಿಸದೇ ಕೆಲವೇ ದೃಶ್ಯಗಳಿಗೆ ಸೀಮಿತರಾಗಿದ್ದರು. ಈ ಕಾರಣದಿಂದ ಈ ಚಿತ್ರವನ್ನು ರಾಜಕುಮಾರ್ ಅವರ ನೂರನೇ ಚಿತ್ರವಾಗಿ ಪರಿಗಣಿಸದೇ ‘ಭಾಗ್ಯದ ಬಾಗಿಲು' ಚಿತ್ರವನ್ನು ನೂರನೇ ಚಿತ್ರವಾಗಿ ಘೋಷಿಸಲಾಯಿತು. ಆದರೆ ತಾಂತ್ರಿಕವಾಗಿ ‘ಹಣ್ಣೆಲೆ ಚಿಗುರಿದಾಗ' ಚಿತ್ರವೇ ಡಾ ರಾಜ್ ಅವರ ನೂರನೇ ಚಿತ್ರ. ದೊಡ್ಡ ನಟನೆಂಬ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಡಾ ರಾಜ್ ತಮ್ಮ ಪಾಲಿಗೆ ಬಂದ ಪುಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಈ ಚಿತ್ರದ ನಿಜವಾದ ನಾಯಕನೆಂದರೆ ನಾಗೇಂದ್ರರಾಯರು. ತಮ್ಮ ೭೮ರ ವಯಸ್ಸಿನಲ್ಲೂ ಬಹಳ ಲವಲವಿಕೆಯಿಂದ ಅದ್ಭುತವಾಗಿ ನಟಿಸಿದ್ದರು. ಉಳಿದ ತಾರಾಗಣದಲ್ಲಿ ಕಲ್ಪನಾ, ಅರುಣ್ ಕುಮಾರ್, ಪಾಪಮ್ಮ, ಬಿ ವಿ ರಾಧಾ, ದಿನೇಶ್, ಜಯಶ್ರೀ, ಬೇಬಿ ರಾಣಿ, ಇಂದಿರಾ ಮೊದಲಾದವರು ನಟಿಸಿದ್ದರು. 

ತ್ರಿವೇಣಿಯವರಿಂದ ಕಾದಂಬರಿಯ ಹಕ್ಕುಗಳನ್ನು ಪಡೆದುಕೊಂಡದ್ದು ನಾಗೇಂದ್ರರಾಯರೇ ಆದರೂ ಅವರು ಆ ಹಕ್ಕುಗಳನ್ನು ಶ್ರೀಕಂತ್ ಅವರ ಸಂಸ್ಥೆಗೆ ನೀಡಿ ದೊಡ್ಡ ಮನಸ್ಸಿನ ವ್ಯಕ್ತಿಯಾದರು. ಈ ಕಾರಣದಿಂದ ಚಿತ್ರ ನಿರ್ಮಾಣ ಮಾಡುವ ಕನಸು ಹೊತ್ತಿದ್ದ ಸುಂದರಲಾಲ್ ಮೆಹ್ತಾ ಕೇವಲ ಫೈನಾನ್ಶಿಯರ್ ಆಗಿ ತೃಪ್ತಿ ಪಡಬೇಕಾಯಿತು. ‘ಹಣ್ಣೆಲೆ ಚಿಗುರಿದಾಗ' ಚಿತ್ರಕ್ಕೆ ಆ ವರ್ಷದ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ದೊರೆಯಿತು. ನಿರ್ದೇಶಕರಾಗ ಹೊರಟ ನಾಗೇಂದ್ರರಾಯರು ನಟನೆಗೂ ಸೈ ಎಂದು ನಟಿಸಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡರು. ಅತ್ಯುತ್ತಮ ನಟಿಯಾಗಿ ಕಲ್ಪನಾ, ಅತ್ಯುತ್ತಮ ಸಂಗೀತಗಾರರಾಗಿ ರಂಗಾ ರಾವ್ ಪ್ರಶಸ್ತಿಗಳನ್ನು ಪಡೆದುಕೊಂಡರು. ಅಂದಿನ ಸಮಯದಲ್ಲಿ ವಿಧವಾ ವಿವಾಹ ಮತ್ತು ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಕಾದಂಬರಿಯನ್ನು ರಚಿಸಿದ ತ್ರಿವೇಣಿ ಅವರಿಗೂ ಅತ್ಯುತ್ತಮ ಕಥಾ ಲೇಖಕಿ ಎಂಬ ಪ್ರಶಸ್ತಿ ದೊರಕಿತು. ‘ಹಣ್ಣೆಲೆ ಚಿಗುರಿದಾಗ' ಚಿತ್ರದ ಹಿಂದಿನ ಪಾತ್ರಗಳು ಎಲ್ಲಾ ಅದಲು ಬದಲಾದರೂ ಚಿತ್ರ ಮಾತ್ರ ಸೂಪರ್ ಹಿಟ್ ಆಯಿತು. ಈ ಚಿತ್ರವನ್ನು ಈಗ ನೋಡಿದರೂ ಇಂದಿನ ಕಾಲಕ್ಕೆ ಪೂರಕವಾಗಿಯೇ ಇರುವುದು ಅದರ ವೈಶಿಷ್ಟ್ಯ ಎಂದರೆ ತಪ್ಪಾಗಲಾರದು.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ