‘ಹಸಿರು ತೋರಣ' ಸಿನೆಮಾ ಗೆದ್ದರೂ ನಿರ್ಮಾಪಕರು ಸೋತದ್ದು ಏಕೆ?


ಯಾವುದೇ ಸಿನೆಮಾ ಗೆದ್ದರೆ ಅದರ ನಿರ್ಮಾಪಕರು ಹಣದ ಹೊಳೆಯಲ್ಲಿ ತೇಲಾಡುತ್ತಿರುತ್ತಾರೆ. ಇದು ಹಲವಾರು ದಶಕಗಳಿಂದ ಮೂಡಿ ಬಂದ ರೂಢಿ. ಅದೂ ಎಪ್ಪತ್ತರ ದಶಕದಲ್ಲಿ ಬಿಡುಗಡೆಯಾಗುತ್ತಿದ್ದ ಚಿತ್ರಗಳೂ ಬಹು ಕಡಿಮೆ. ಖ್ಯಾತನಾಮರಾದ ನಟ ನಟಿಯರು ಇದ್ದರಂತೂ ಆ ಚಿತ್ರ ಖಂಡಿತವಾಗಿಯೂ ಗೆಲ್ಲುತ್ತಿತ್ತು. ಹಾಗೇ ಗೆದ್ದ ಒಂದು ಚಿತ್ರ “ಹಸಿರು ತೋರಣ". ಇದರ ನಾಯಕ-ನಾಯಕಿಯರಾಗಿದ್ದವರು ಡಾ ರಾಜಕುಮಾರ್ ಮತ್ತು ಭಾರತಿ. ಚಿತ್ರವೇನೋ ಗೆದ್ದಿತು. ನೂರು ದಿನವೂ ನಡೆಯಿತು. ಆದರೆ ನಿರ್ಮಾಪಕರಿಗೆ ಲಾಭ ಹೆಚ್ಚು ದಿನ ಉಳಿಯಲಿಲ್ಲ. ಯಾರು ಆ ನಿರ್ಮಾಪಕ ಮತ್ತು ಅವರಿಗೆ ನಷ್ಟವಾದ ಕಾರಣಗಳೇನು? ಬನ್ನಿ ಒಂದೊಂದಾಗಿ ಗಮನಿಸುತ್ತಾ ಹೋಗುವ.
ಆ ನತದೃಷ್ಟ ನಿರ್ಮಾಪಕ ವೈ. ಅನಂತರಾಮರಾವ್. ಅವರು ನಿರ್ಮಿಸಿದ್ದು ಇದೊಂದೇ ಚಿತ್ರವಲ್ಲ. ಕೆಲವು ಚಿತ್ರಗಳನ್ನು ನಿರ್ಮಿಸಿದರು. ಚಿತ್ರಗಳು ಗೆದ್ದರೂ ಇವರಿಗೆ ಹಣ ಮಾಡಲು ಆಗಲಿಲ್ಲ. ಕೊನೆಗೆ ಮದ್ರಾಸು (ಇಂದಿನ ಚೆನ್ನೈ) ನಲ್ಲಿ ಒಂದು ಹೋಟೇಲ್ ನಡೆಸುತ್ತಾ ಹೊಟ್ಟೆಪಾಡು ನೋಡಿಕೊಂಡರು. ಅನಂತರಾಮರಾವ್ ಅವರು ಚಿತ್ರರಂಗದ ಸಂಪರ್ಕಕ್ಕೆ ಬಂದದ್ದು ೧೯೫೩ರಲ್ಲಿ. ಅವರ ಊರು ಕುಂದಾಪುರ. ಚಿತ್ರರಂಗಕ್ಕೆ ಸೇರಬೇಕು, ನಟರಾಗಬೇಕೆಂಬ ಆಸೆಯಿಂದ ಕುಂದಾಪುರದಿಂದ ಓಡಿ ಹೋಗಿ ಮದ್ರಾಸು ಸೇರಿಕೊಂಡ ಅನಂತರಾಮರು ೧೯೫೪ರಲ್ಲಿ ಕಲ್ಯಾಣ್ ಕುಮಾರ್ ನಾಯಕತ್ವದ ‘ನಟಶೇಖರ' ಎಂಬ ಚಿತ್ರದಲ್ಲಿ ಪುಟ್ಟದಾದ ಒಂದು ಪಾತ್ರದಲ್ಲಿ ನಟಿಸುತ್ತಾರೆ. ನಂತರ ರಾಜಕುಮಾರ್ ಅವರ ನಟನೆಯ ‘ಭಕ್ತ ಮಲ್ಲಿಕಾರ್ಜುನ’ ಚಿತ್ರದಲ್ಲಿ ಪುಟ್ಟ ಪಾತ್ರವೊಂದರಲ್ಲಿ ನಟಿಸುವಾಗ ವರನಟನ ಸಂಪರ್ಕಕ್ಕೆ ಬಂದು ಅವರ ಆತ್ಮೀಯರಾಗುತ್ತಾರೆ. ಆದರೆ ಅನಂತರಾಮರಿಗೆ ಏಕೋ ನಟನೆ ಬೋರ್ ಹೊಡೆಸಿತು. ಅದಕ್ಕಾಗಿ ಅವರು ಅಭಿನಯ ಬಿಟ್ಟು ನಿರ್ಮಾಪಕರಾಗುತ್ತಾರೆ. ಒಂದು ರೀತಿಯಲ್ಲಿ ಇದು ಅವರ ಜೀವನದ ದೊಡ್ಡ ಟರ್ನಿಂಗ್ ಪಾಯಿಂಟ್ ಮತ್ತು ದೊಡ್ಡ ಎಡವಟ್ಟು ಎಂದು ಹೇಳಿದರೂ ತಪ್ಪಾಗಲಾರದು. ಏಕೆಂದರೆ ನಿರ್ಮಾಪಕರಾದವರಿಗೆ ಹಣಕಾಸಿನ ನಿರ್ವಹಣೆಯ ಸಮರ್ಥ ಜ್ಞಾನ ಇರಬೇಕು. ಆದರೆ ಅನಂತರಾಮರಿಗೆ ಈ ವಿಷಯದಲ್ಲಿ ಅಷ್ಟು ಚುರುಕು ಇರಲಿಲ್ಲ.
ಡಾ ರಾಜಕುಮಾರ್ ಅವರ ಆತ್ಮೀಯರಾಗಿದ್ದುದರಿಂದ ಅವರ ಕಾಲ್ ಶೀಟ್ ಯಾವಾಗ ಬೇಕಾದರೂ ಅನಂತರಾಮರಿಗೆ ಸಿಗುತ್ತಿತ್ತು. ಆ ಸಮಯ ಕೈಯಲ್ಲಿ ಸ್ವಲ್ಪ ದುಡ್ಡೂ ಇತ್ತು. ‘ಒಂದು ಸಿನೆಮಾ ಮಾಡೋಣವೇ’ ಎಂದು ರಾಜಕುಮಾರ್ ಬಳಿ ಕೇಳಿದಾಗ ಅವರು ಕೂಡಲೇ ಒಪ್ಪಿಕೊಂಡು ಬಿಟ್ಟರು. ಭಾರತಿಯವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡರು. ನಿರ್ದೇಶನಕ್ಕೆ ಇವರು ಆಯ್ಕೆ ಮಾಡಿದ್ದು ಜಿ ವಿ ಅಯ್ಯರ್ ಅವರನ್ನು. ರಾಜಕುಮಾರ್ ಅವರಿಗೆ ಅಯ್ಯರ್ ಅವರು ಆತ್ಮೀಯರಾಗಿದ್ದುದರಿಂದ ಚಿತ್ರೀಕರಣ ಸರಾಗವಾಗಿ ನಡೆದು, ಬೇಗನೇ ತೆರೆ ಕಾಣಿಸಬಹುದೆಂಬ ಅನಿಸಿಕೆ ಅನಂತರಾಮರಿಗೆ ಇತ್ತು. ಆದರೆ ಅವರು ಅಂದುಕೊಂಡಂತೆ ಆಗದೇ ‘ಹಸಿರು ತೋರಣ' ಚಿತ್ರದ ಚಿತ್ರೀಕರಣ ಕುಂಟುತ್ತಲೇ ಸಾಗುತ್ತಿತ್ತು. ಕಡೆಗೆ ವಾಸ್ತವಾಂಶ ತಿಳಿದಾಗ ಅನಂತರಾಮರಿಗೆ ಶಾಕ್ ಆಗುವುದೊಂದು ಬಾಕಿ. ನಿರ್ದೇಶಕರಾಗಿದ್ದ ಅಯ್ಯರ್ ಅವರು ಅನಂತರಾಮರ ಜೊತೆ ಚರ್ಚಿಸದೇ ‘ಹಸಿರು ತೋರಣ' ಚಿತ್ರವನ್ನು ಕನ್ನಡದಲ್ಲಿ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ಈ ವಿಚಾರ ಒಳ್ಳೆಯದೇ ಆಗಿದ್ದರೂ ನಿರ್ಮಾಪಕರಾಗಿದ್ದ ತಮ್ಮ ಅನುಮತಿ ಕೇಳದೇ ಮಾಡಿದ್ದು ಅನಂತರಾಮರಿಗೆ ಬಹಳ ಕೋಪ ತಂದಿತು. ನಿರ್ಮಾಪಕರಾಗಿ ತಮಗೇ ಹೀಗೆ ಮೋಸ ಮಾಡಿದರೆ ಹೇಗೆ? ಎಂದು ಚಿತ್ರೀಕರಣವನ್ನು ನಿಲ್ಲಿಸಿ ಬಿಟ್ಟರು. ಅಯ್ಯರ್ ಅವರಿಗೆ ಆ ಸಮಯ ಬೇರೆ ಚಿತ್ರ ತಂಡದಿಂದ ಕರೆ ಬಂದುದರಿಂದ ಅವರು ಅಲ್ಲಿಗೆ ಹೊರಟು ಹೋದರು. ಅನಂತರಾಮ್ ಅವರ ಕೈಯಲ್ಲಿದ್ದ ಹಣವೂ ಖಾಲಿಯಾಗುತ್ತಾ ಬಂದಿತ್ತು. ಆದರೆ ಚಿತ್ರವನ್ನು ಅವರು ಪೂರ್ತಿಗೊಳಿಸಲೇ ಬೇಕಿತ್ತು.
ಅನಂತರಾಮ್ ಅವರು ಮತ್ತೆ ‘ಹಸಿರು ತೋರಣ’ವನ್ನು ಕೈಗೆತ್ತಿಕೊಂಡರು. ಈ ಬಾರಿ ಅವರು ನಿರ್ದೇಶಕರನ್ನಾಗಿ ಟಿ ವಿ ಸಿಂಗ್ ಠಾಕೂರ್ ಅವರನ್ನು ಆಯ್ಕೆ ಮಾಡಿದರು. ಅಯ್ಯರ್ ಅವರು ಚಿತ್ರೀಕರಿಸಿದ ಭಾಗಗಳನ್ನು ಉಳಿಸಿಕೊಳ್ಳುವುದೋ ಅಥವಾ ಹೊಸದಾಗಿ ಇಡೀ ಚಿತ್ರವನ್ನು ಚಿತ್ರೀಕರಿಸಿಕೊಳ್ಳುವುದೋ ಎಂದ ದ್ವಂದ್ವ ಅನಂತರಾಮರಿಗೆ ಕಾಡತೊಡಗಿತು. ಕೊನೆಗೊಮ್ಮೆ ಅಯ್ಯರ್ ಮಾಡಿದ ಕೆಲಸವನ್ನು ಕಸದ ಬುಟ್ಟಿಗೆ ಹಾಕಿ ಹೊಸದಾಗಿ ಚಿತ್ರಕಥೆ ಬರೆಯುವ ಮನಸ್ಸು ಮಾಡಿದರು. ಚಿತ್ರ ಕಥೆ ಬರೆಯುವುದು ಅನಂತರಾಮ್ ಅವರಿಗೆ ಕಬ್ಬಿಣದ ಕಡಲೇ ಕಾಯಿಯಾಗಿತ್ತು. ಅವರು ಅದಕ್ಕೆ ಮಾಡಿದ ಉಪಾಯವೆಂದರೆ ನಾಲ್ಕೈದು ಬೇರೆ ಬೇರೆ ಭಾಷೆಯ ಚಿತ್ರಗಳನ್ನು ನೋಡಿ, ಕಥೆಗಾರನೊಬ್ಬನನ್ನು ಹಿಡಿದು ಅವನಿಗೆ ತಾವು ನೋಡಿದ ಚಿತ್ರಕಥೆಯ ಸಾರಾಂಶ ಹೇಳಿ ಹೊಸದಾದ ಚಿತ್ರಕಥೆಯನ್ನು ತಯಾರು ಮಾಡುವಂತೆ ಹೇಳಿದರು. ಆತ ಮಹಾ ಚಾಲಾಕಿಯಾಗಿದ್ದ. ಅನಂತರಾಮರ ಮನಸ್ಸನ್ನು ಅರಿತ ಆತ ಅದ್ಭುತವಾದ ಚಿತ್ರಕಥೆಯನ್ನು ಬರೆದುಕೊಟ್ಟ. ಹೀಗೆ ತಯಾರಾದ ಹೊಸ ‘ಹಸಿರು ತೋರಣ'ದ ಕಥೆಯನ್ನು ರಾಜಕುಮಾರ್ ಮತ್ತು ಭಾರತಿಯವರೂ ಒಪ್ಪಿಕೊಂಡು ಅನಂತರಾಮರಿಗೆ ಸಾಥ್ ನೀಡಿದರು. ಇವರ ಜೊತೆ ನರಸಿಂಹರಾಜು, ಪಂಡರೀಬಾಯಿ, ಉದಯಕುಮಾರ್ ಸಹಾ ಚೆನ್ನಾಗಿ ನಟಿಸಿದರು. ‘ಒಂದು ದಿನ ಎಲ್ಲಿಂದಲೋ ನೀ ಬಂದೆ' ಎನ್ನುವ ಹಾಡು ಬಹಳ ಜನಪ್ರಿಯವಾಯಿತು. ಸಿಂಗ್ ಠಾಕೂರ್ ಅವರ ನಿರ್ದೇಶನವೂ ಮೆಚ್ಚುವಂತಿತ್ತು. ಪತ್ರಿಕೆಗಳಲ್ಲಿ, ಜನರಲ್ಲಿ ಉತ್ತಮ ಅಭಿಪ್ರಾಯ ಮೂಡಿಬಂತು. ಚಿತ್ರ ನೂರು ದಿನ ಓಡಿತು. ೧೯೭೦ರಲ್ಲಿ ೧೦ ಲಕ್ಷ ವೆಚ್ಚದಲ್ಲಿ ತೆಗೆದ ಚಿತ್ರ ೨ ಲಕ್ಷ ಲಾಭ ಗಳಿಸಿತು. ಈ ಚಿತ್ರದಿಂದಾಗಿ ದಿನ ಬೆಳಗಾಗುವಷ್ಟರಲ್ಲಿ ಅನಂತರಾಮ್ ಪ್ರತಿಷ್ಟಿತ ನಿರ್ಮಾಪಕನಾಗಿ ಬಿಟ್ಟಿದ್ದರು.
ಜಿ ವಿ ಅಯ್ಯರ್ ಕಾರಣದಿಂದ ‘ಹಸಿರು ತೋರಣ’ ಚಿತ್ರೀಕರಣ ನಿಂತು ಹೋದಾಗ ಪತ್ರಿಕೆಗಳು ಅನಂತರಾಮರಾವ್ ಮಾಡಿದ್ದು ಹಸಿರು ತೋರಣವಲ್ಲ, ‘ಒಣ ತೋರಣ' ಎಂದು ಬರೆದವು. ಇದನ್ನು ಅನಂತರಾಮ್ ಅವರು ಸವಾಲಾಗಿ ಸ್ವೀಕರಿಸಿ ಹಸಿರು ತೋರಣ ಮಾಡಿ ಗೆದ್ದರು. ಆದರೆ ಈ ಚಿತ್ರದ ಲಾಭವನ್ನು ಬಳಸಿಕೊಂಡು ಅವರು ‘ನ್ಯಾಯದ ಕಣ್ಣು' ಎಂಬ ಚಿತ್ರ ನಿರ್ಮಿಸಿದರು. ಈ ಚಿತ್ರ ಸೋತು ಅನಂತರಾಮರಿಗೆ ಅಪಾರವಾದ ನಷ್ಟವನ್ನುಂಟು ಮಾಡಿತು. ಹಸಿರು ತೋರಣದ ಲಾಭವೆಲ್ಲವೂ ಈ ಚಿತ್ರದಿಂದ ಮಣ್ಣುಪಾಲಾಯಿತು. ಈ ನಡುವೆ ತಮಿಳು ಚಿತ್ರವೊಂದಕ್ಕೂ ಹಣವನ್ನು ಹೂಡಿಕೆ ಮಾಡಿದ್ದರು. ಅಲ್ಲೂ ನಷ್ಟವೇ ಗತಿಯಾಯಿತು. ಆ ಚಿತ್ರ ಡಬ್ಬಾದಿಂದ ಹೊರಗೆ ಬರಲೇ ಇಲ್ಲ. ಹೀಗೆ ನಷ್ಟದ ಮೇಲೆ ನಷ್ಟ ಅನುಭವಿಸಿದ ಅನಂತರಾಮರು ಚಿತ್ರರಂಗದ ಸಹವಾಸವೇ ಬಿಟ್ಟು ಮದರಾಸಿನ ಸಾಲಿಗ್ರಾಮ ಎಂಬಲ್ಲಿ ‘ಹೋಟೇಲ್ ಅಕ್ಷಯ' ಪ್ರಾರಂಭಿಸಿದರು. ಚಿತ್ರೋದ್ಯಮಿಯಾಗಿ ಯಶಸ್ಸು ಕಾಣದೇ ಇದ್ದರೂ ಹೋಟೇಲ್ ಉದ್ಯಮಿಯಾಗಿ ಯಶಸ್ಸು ಕಂಡರು. ಇವರ ಹೋಟೇಲ್ ಎದುರುಗಡೆಯೇ ಪ್ರಸಾದ್ ಸ್ಟುಡಿಯೋ ಇರುವುದರಿಂದ ಅಲ್ಲಿಗೆ ಬರುವ ಖ್ಯಾತ ನಟ ನಟಿಯರು ಇವರ ಹೋಟೇಲ್ ಗೆ ಬಂದೇ ಬರುತ್ತಿದ್ದರು. ಕನ್ನಡದ ಖ್ಯಾತ ನಟ ಉಪೇಂದ್ರ ಅವರು ಚೆನ್ನೈಗೆ ಹೋದಾಗ ಇವರದ್ದೇ ಹೋಟೇಲ್ ನಲ್ಲಿ ಇಡ್ಲಿ ಸಾಂಬಾರ್ ತಿನ್ನುವುದಂತೆ.
ಈಗಲೂ ಕನ್ನಡ, ತಮಿಳು ಚಿತ್ರರಂಗದ ಗಣ್ಯಾತಿಗಣ್ಯರು ಇವರ ಹೋಟೇಲಿಗೆ ಬರುತ್ತಾರೆ. ಖ್ಯಾತ ಸಂಗೀತಕಾರ ಇಳಯರಾಜ ಅವರಿಗೆ ಮಸಾಲದೋಸೆ, ಸಂಗೀತಕಾರ ರೆಹಮಾನ್ ಗೆ ಕಾಫಿ, ಟೀ, ಸೂಪ್, ಅರ್ಜುನ್ ಸರ್ಜಾರಿಗೆ ರಾಗಿ ದೋಸೆ, ಅಜಿತ್ ಗೆ ಮೊಸರನ್ನ ಅನಂತರಾಮರ ಹೋಟೇಲಿನದ್ದೇ ಆಗಬೇಕಂತೆ. ಈಗ ಅನಂತರಾಮರಾಯರ ಮಗ ಸಾಯಿರಾಮ್ ಹೋಟೇಲ್ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ. ಅಂದು ‘ಹಸಿರು ತೋರಣ' ಗೆದ್ದ ಬಳಿಕ ಸಿಕ್ಕ ಲಾಭವು ನಷ್ಟವಾಗದೇ ಹೋಗಿದ್ದರೆ ಅನಂತರಾಮ್ ಇನ್ನಷ್ಟು ಉತ್ತಮವಾದ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುತ್ತಿದ್ದರೋ ಏನೋ? ಎಲ್ಲವೂ ವಿಧಿಲಿಖಿತ !
(ಆಧಾರ ಮಾಹಿತಿ: ಗಣೇಶ್ ಕಾಸರಗೋಡು ಅವರ ಬರಹವೊಂದರ ಪ್ರೇರಣೆ)
ಚಿತ್ರ ಕೃಪೆ: ಅಂತರ್ಜಾಲ ತಾಣ