‘ಹೆಸ್ಡಾಲನ್ ಲೈಟ್ಸ್' ಎಂಬ ಬೆಳಕಿನ ರಹಸ್ಯವೇನು ಗೊತ್ತಾ ?
ನಾವು ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಇನ್ನೂ ಈ ಆಧುನಿಕ ಪ್ರಪಂಚದಲ್ಲಿ ವಿಜ್ಞಾನಿಗಳ ನಿಲುಕಿಗೆ ಸಿಗದ ಹಲವಾರು ವಿಷಯಗಳು ಅಡಗಿವೆ. ಈಗಾಗಲೇ ನೀವು ‘ಡೆವಿಲ್ಸ್ ಕೆಟಲ್' ಎಂಬ ನಿಗೂಢ ಜಲಪಾತದ ಬಗ್ಗೆ ಓದಿರುವಿರಿ. ಅದೇ ಸಾಲಿಗೆ ಸೇರುವ ಇನ್ನೊಂದು ರಹಸ್ಯ ‘ಹೆಸ್ಡಾಲನ್ ಲೈಟ್ಸ್' (Hessdalen Lights). ಈ ಹೆಸ್ಡಾಲನ್ ಬೆಳಕು ಏನು? ಎಲ್ಲಿ, ಯಾವಾಗ ಕಂಡು ಬರುತ್ತದೆ? ಎಂಬುವುದರ ಬಗ್ಗೆ ನಾವು ತಿಳಿದುಕೊಳ್ಳೋಣ.
ನಾರ್ವೆ ದೇಶದ ಹೆಸ್ಡಾಲನ್ ವ್ಯಾಲಿ ಎಂಬ ಪ್ರದೇಶದಲ್ಲಿ ಕಳೆದ ೪-೫ ದಶಕಗಳಿಂದ ಈ ಬೆಳಕು ಕಾಣಿಸುತ್ತಿದೆ. ಹೆಸ್ಡಾಲನ್ ವ್ಯಾಲಿಯ ಆಕಾಶದಲ್ಲಿ ರಾತ್ರಿಯಲ್ಲಿ ಕಾಣಿಸಿಕೊಳ್ಳುವ ಈ ಬೆಳಕು ಕೆಲವೊಮ್ಮೆ ವೇಗವಾಗಿ ಒಂದು ಬದಿಯಿಂದ ಮತ್ತೊಂದೆಡೆಗೆ ಚಲಿಸುತ್ತದೆ. ಕೆಲವೊಮ್ಮೆ ಚುಕ್ಕಿಯಂತೆಯೂ, ಕೆಲವು ಸಲ ಚಂದ್ರನ ಗಾತ್ರದಲ್ಲೂ ಕಾಣಿಸುತ್ತದೆ. ಕೆಲವು ಸಲ ಹಲವು ಬೆಳಕಿನ ಪುಂಜಗಳೇ ಕಾಣಿಸುತ್ತವೆ. ೧೯೩೦-೪೦ರಿಂದಲೂ ಈ ರೀತಿಯಲ್ಲಿ ಬೆಳಕು ಕಾಣಿಸುತ್ತಿದೆ ಎಂದು ಹೇಳಲಾಗುತ್ತಿದ್ದರೂ ಸುಮಾರು ೧೯೮೧ರ ಆಸುಪಾಸಿನಲ್ಲಿ ಈ ವಿಷಯ ಧೃಢವಾಯಿತು.
ಡಿಸೆಂಬರ್ ೧೯೮೧ರಲ್ಲಿ ಅಂದರೆ ಸುಮಾರು ೪ ದಶಕಗಳ ಹಿಂದೆ ಹೆಸ್ಡಾಲನ್ ವ್ಯಾಲಿ ಪ್ರದೇಶದಲ್ಲಿ ನಿರಂತರವಾಗಿ ಈ ಬೆಳಕು ಕಾಣಿಸತೊಡಗಿತು. ಅಲ್ಲಿಂದ ೧೯೮೪ರವರೆಗೆ ನಿರಂತರವಾಗಿ ವಾರದಲ್ಲಿ ೧೫-೨೦ ಸಲ ಕಾಣಿಸತೊಡಗಿತು. ಈ ವಿಷಯ ಬಾಯಿಯಿಂದ ಬಾಯಿಗೆ ಹರಡಿ ಹೆಸ್ಡಾಲನ್ ವ್ಯಾಲಿಯತ್ತ ಪ್ರವಾಸಿಗರ ದಂಡೇ ಬರಲು ಪ್ರಾರಂಭವಾಯಿತು. ಆದರೆ ಈ ಬೆಳಕಿನ ಮೂಲ ಯಾವುದು ಎಂದು ತಿಳಿದುಕೊಳ್ಳಲು ವಿಜ್ಞಾನಿಗಳು ಹರಸಾಹಸ ಪಟ್ಟರು. ಆದರೆ ಅವರಿಗೆ ಯಾವುದೇ ಫಲ ದೊರೆಯಲಿಲ್ಲ. ಈ ಬೆಳಕು ಪ್ರಕಾಶಮಯವಾಗಿ ಬಿಳಿ-ಹಳದಿ ಮಿಶ್ರಿತ ಬಣ್ಣದಿಂದ ಅಧಿಕ ಸಮಯ ಕಾಣಿಸಿದರೂ ಕೆಲವೊಮ್ಮೆ ಕೆಂಪು, ಕೆಲವು ಸಲ ಕಿತ್ತಳೆ ಹಳದಿ ಬಣ್ಣದಲ್ಲಿ ಕಂಡದ್ದಿದೆ. ಈ ಬೆಳಕು ಕೆಲವೊಮ್ಮೆ ದೀಪದಂತೆ ಪ್ರಜ್ವಲಿಸಿ ದೀಪಗಳ ಪುಂಜಗಳಂತೆ ಕಾಣಿಸಿದ್ದೂ ಇದೆ. ಕೆಲವೊಮ್ಮೆ ನಿರಂತರ ಒಂದು ಗಂಟೆಗೂ ಕಾಲ ಈ ಬೆಳಕು ಕಾಣಿಸಿದ್ದಿದೆಯಂತೆ. ಬೆಳಕು ಕಣ್ಣಿಗೆ ಕಾಣಿಸುವಷ್ಟು ದೂರದಲ್ಲಿ ತೇಲುತ್ತಾ, ಚಲಿಸುತ್ತಾ ಇರುವಂತೆ ಕಾಣಿಸುತ್ತದೆ.
೨೦೧೦ರ ವೇಳೆಗೆ ಬೆಳಕು ಕಾಣಿಸಿಕೊಳ್ಳುವ ಅವಧಿ ಕ್ಷೀಣಿಸತೊಡಗಿತು. ವಾರಕ್ಕೆ ೧೫-೨೦ ಸಲ ಕಾಣಿಸುತ್ತಿದ್ದ ಈ ಬೆಳಕು ತಿಂಗಳಿಗೆ ಕೇವಲ ೧೦-೨೦ ಸಲ ಕಾಣತೊಡಗಿತು. ಇದರ ಬಗ್ಗೆ ಅಧಿಕ ಸಂಶೋಧನೆಯನ್ನು ನಡೆಸಲು ‘ಪ್ರಾಜೆಕ್ಟ್ ಹೆಸ್ಡಾಲನ್’ ಬಹಳ ವರ್ಷಗಳ ಹಿಂದೆಯೇ ಪ್ರಾರಂಭಿಸಲಾಗಿತ್ತು, ಆದರೆ ಇದರಲ್ಲಿ ಯಾವುದೇ ಫಲ ಕಂಡು ಬರಲಿಲ್ಲ. ಕೆಲವರು ಇದನ್ನು ಅನ್ಯಗ್ರಹದಿಂದ ಭೂಮಿಯತ್ತ ಬಂದ ಹಾರುವ ತಟ್ಟೆಗಳು ಎಂದು ಹೇಳಿದರು. ಕೆಲವರು ಭೂಮಿಯಲ್ಲಾಗುವ ರಾಸಾಯನಿಕಗಳ ಸಂಯೋಜನೆಯಿಂದ ಈ ರೀತಿಯ ಬೆಳಕು ಆಕಾಶದಲ್ಲಿ ಕಾಣಿಸುತ್ತದೆ ಎಂದು ವಾದ ಮಂಡಿಸಿದರು. ಅದಕ್ಕಾಗಿ ಹೆಸ್ಡಾಲನ್ ವ್ಯಾಲಿಗಳ ಬಳಿ ಇರುವ ನದಿ, ಸರೋವರಗಳ ನೀರಿನಲ್ಲಿದ್ದ ರಾಸಾಯನಿಕಗಳ ಅಂಶಗಳ ಮೇಲೆ ಪ್ರಯೋಗ ಮಾಡಿದರು. ಕೆಲವು ಕಡೆ ಗಂಧಕಾಮ್ಲದ ಅಂಶವು ಅತ್ಯಧಿಕವಾಗಿ ಕಂಡು ಬಂದರೂ ಇದೇ ಆ ಅದೃಶ್ಯ ಬೆಳಕಿನ ಮೂಲ ಎಂದು ಪ್ರಮಾಣೀಕರಿಸಲು ವಿಜ್ಞಾನಿಗಳು ಅಸಫಲರಾದರು.
೧೯೯೮ರಲ್ಲಿ ಹೆಸ್ಡಾಲನ್ ವ್ಯಾಲಿಯಲ್ಲಿ ‘ಬ್ಲೂ ಬಾಕ್ಸ್' ಎಂಬ ಸ್ವಯಂಚಾಲಿತ ವೈಜ್ಞಾನಿಕ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಯಿತು. ಇದು ಬೆಳಕು ಕಂಡಾಗಲೆಲ್ಲಾ ಸ್ವಯಂಚಾಲಿತವಾಗಿ ಕಾರ್ಯನಿರ್ವಹಣೆ ಮಾಡುತ್ತಿತ್ತು.
ಪ್ರಾಜೆಕ್ಟ್ ಹೆಸ್ಡಾಲನ್ ತಂಡದಲ್ಲಿದ್ದ ಎರ್ಲಿಂಗ್ ಪೀಟರ್ ಸ್ಟ್ರಾಂಡ್ ಎಂಬವರ ಪ್ರಕಾರ ಇದೇ ರೀತಿಯ ಬೆಳಕು ಆಸ್ಟ್ರೇಲಿಯಾದಲ್ಲೂ ಕಂಡು ಬಂದಿದೆಯಂತೆ. ಅಲ್ಲಿ ಇದಕ್ಕೆ ಮಿನ್ ಮಿನ್ ಲೈಟ್ಸ್ ಎಂದು ಕರೆಯುತ್ತಾರೆ. ಅದೇ ರೀತಿ ಯುರೋಪಿನ ಕೆಲವು ಪ್ರದೇಶಗಳಲ್ಲಿ, ದಕ್ಷಿಣ ಅಮೇರಿಕಾ, ಮೆಕ್ಸಿಕೋದ ಪರ್ವತ ಪ್ರದೇಶಗಳಲ್ಲಿ ಕಂಡು ಬಂದಿದೆಯಂತೆ. ಅದರೆ ಹೆಸ್ಡಾಲಿನ್ ವ್ಯಾಲಿಯಲ್ಲಿ ಕಂಡು ಬರುವಂತೆ ನಿರಂತರವಾಗಿ ಬೆಳಕು ಕಂಡು ಬರುವುದಿಲ್ಲ. ಕೆಲವೊಂದು ಅಪರೂಪದ ಪ್ರಕರಣಗಳು ನಮ್ಮ ಪರಿಸರದಲ್ಲಿ ನಡೆಯುತ್ತಲೇ ಇರುತ್ತವೆ. ಅದಕ್ಕೆ ವೈಜ್ಞಾನಿಕ ಆಧಾರಗಳು ಕೊಡಲು ಸಾಧ್ಯವಾಗುವುದೇ ಇಲ್ಲ, ಆದರೂ ಅವುಗಳು ಘಟಿಸುತ್ತಲೇ ಇರುತ್ತವೆ. ಇದೇ ಅಲ್ಲವೇ ಸೃಷ್ಟಿಯ ವೈಚಿತ್ರ.
ಮಾಹಿತಿ: ಹೆಸ್ಡಾಲನ್ ಲೈಟ್ಸ್ ಬಗ್ಗೆ ಮಾಹಿತಿ ಇರುವ ಹಲವಾರು ವಿಡಿಯೋಗಳು ಅಂತರ್ಜಾಲ ತಾಣ ಯೂಟ್ಯೂಬ್ ನಲ್ಲಿ ಲಭ್ಯವಿದೆ. ವಿಡಿಯೋಗಳಲ್ಲಿ ಇದನ್ನು ನೋಡಿದರೆ ನಿಮಗೆ ಈ ಬೆಳಕಿನ ಚಲನೆಯ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತದೆ. ಒಮ್ಮೆ ಬಿಡುವು ನೋಡಿ.
ಚಿತ್ರ ಕೃಪೆ: ಅಂತರ್ಜಾಲ ತಾಣ