‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೫) - ದಿನಕರ ದೇಸಾಯಿ
ಹೊಸಗನ್ನಡ ಸಾಹಿತ್ಯದಲ್ಲಿ ಶಿಶುಗೀತೆಗಳನ್ನು ಬರೆದ ಮೊದಲಿಗರಲ್ಲಿ ಇವರೊಬ್ಬರು. ದಿನಕರ ದೇಸಾಯಿಯವರು ಎಂ ಎ, ಎಲ್ ಎಲ್ ಬಿ ಪದವೀಧರರು. ಇವರು ‘ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ'ಯ ಸದಸ್ಯರಾಗಿದ್ದರು. ೧೯೨೮ರಿಂದ ಇವರು ಪದ್ಯರಚನೆಯನ್ನು ಪ್ರಾರಂಭಿಸಿದರು. ಕರ್ನಾಟಕದ ಇತಿಹಾಸ ಕುರಿತು ಆಂಗ್ಲದಲ್ಲಿ ದೊಡ್ದ ಗ್ರಂಥವನ್ನು ಪ್ರಕಟಿಸಿದ್ದಾರೆ. “ಗೀತಗಳು" ಎಂಬ ಕವನ ಸಂಗ್ರಹ ಪ್ರಕಟಿಸಿದ್ದಾರೆ. ಇವರ ಮಕ್ಕಳ ಕವಿತಾ ಪುಸ್ತಕಗಳಿಗೆ ಅಂದಿನ ಮುಂಬಯಿ ಸರಕಾರವು ಗೌರವ ಧನವಿತ್ತು ಗೌರವಿಸಿತ್ತು. ದಿನಕರ ದೇಸಾಯಿಯವರು ಕಾರ್ಮಿಕ ಮುಖಂಡರೂ ಆಗಿದ್ದರು. ಜಿನೀವಾದಲ್ಲಿ ನಡೆದ ಅಂತರಾಷ್ಟ್ರೀಯ ಕೂಲಿಕಾರ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು. “ದಿ ಕೆನರಾ ವೆಲ್ ಫೇರ್ ಟ್ರಸ್ಟ್" ಎಂಬ ಸೇವಾ ಸಂಸ್ಥೆಯನ್ನು ಸ್ಥಾಪಿಸಿ, ಅದರ ಮುಖಾಂತರ ಹಲವು ಶಾಲೆಗಳನ್ನು ನಡೆಸಿದ್ದಾರೆ.
ಇವರ ಒಂದು ಕವನ ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿ ಪ್ರಕಟವಾಗಿದೆ. ಅದನ್ನು ಸಂಗ್ರಹಿಸಿ ಇಲ್ಲಿ ಪ್ರಕಟಿಸಲಾಗಿದೆ. ಇವರನ್ನು ಚುಟುಕು ಬ್ರಹ್ಮ ಎಂದು ಕರೆಯುತ್ತಿದ್ದರು.
ನನ್ನ ದೇಹದ ಬೂದಿ
ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ
ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ
ಬೂದಿ ಗೊಬ್ಬರದಿಂದ ತೆನೆಯೊಂದು ನೆಗೆದುಬರೆ
ಧನ್ಯವಾಯಿತು ಹುಟ್ಟುಸಾವಿನಲ್ಲಿ
ನನ್ನ ದೇಹದ ಬೂದಿ ಹೊಳೆಯಲ್ಲಿ ಹರಿಯಬಿಡಿ
ತೇಲಿ ಬೀಳಲಿ ಮೀನ ಬಾಯಿಯಲ್ಲಿ
ಮುಷ್ಟಿ ಬೂದಿಯ ತಿಂದು ಪುಷ್ಟವಾಗಲು ಮೀನು
ಧನ್ಯವಾಯಿತು ಹುಟ್ಟುಸಾವಿನಲ್ಲಿ
ನನ್ನ ದೇಹದ ಬೂದಿ ಕೊಳದಲ್ಲಿ ಬೀರಿಬಿಡಿ
ತಾವರೆಯು ದಿನದಿನವು ಅರಳುವಲ್ಲಿ
ಬೂದಿ ಕೆಸರನು ಕೂಡಿ ಹೊಸ ಪಂಕಜವು ಮೂಡೆ
ಧನ್ಯವಾಯಿತು ಹುಟ್ಟುಸಾವಿನಲ್ಲಿ
ಸತ್ತ ಮೇಲಾದರೂ ದೇಹ ಸೇವೆಗೆ ನಿಲ್ಲಲಿ
ಇಂದಿಗೀ ನರಜನ್ಮ ಸೇವೆಯಂದು
ತನ್ನ ಸ್ವಾರ್ಥವ ನೆನೆದು ವ್ಯರ್ಥವಾಗಿದೆ ದೇಹ
ನಿಜಸೇವೆ ಮಾಡಲಿಕೆ ಬರಲಿ ಮುಂದು
(ಹೊಸಗನ್ನಡ ಕಾವ್ಯಶ್ರೀ ಕೃತಿಯಿಂದ ಆಯ್ದ ಕವನ)