‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೬) - ಮಧುರಚೆನ್ನ

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೬) - ಮಧುರಚೆನ್ನ

“ಮಧುರ ಚೆನ್ನ" ಎನ್ನುವುದು ಹಲಸಂಗಿ ಚೆನ್ನಮಲ್ಲಪ್ಪನವರ ಕಾವ್ಯನಾಮ. ಜಾನಪದ ಕಾವ್ಯದ ವಿಷಯವಾಗಿ ಇವರಷ್ಟು ಆಸ್ಥೆಯಿಂದ ಕಾರ್ಯಮಾಡಿದ ಹಿರಿಯ ಕನ್ನಡ ಕವಿ ಬೇರೊಬ್ಬರಿಲ್ಲದಿರಬಹುದು. “ಕಾಳರಾತ್ರಿ", “ಪೂರ್ವರಂಗ" ಮೊದಲಾದ ಆತ್ಮಚರಿತ್ರಾತ್ಮಕವಾದ ದೀರ್ಘ ಕಾವ್ಯಗಳನ್ನು ರಚಿಸಿದವರು. ಸಾಹಿತ್ಯ ಸಂಶೋಧನೆಗೆ ಸಂಬಂಧಪಟ್ಟ ಗದ್ಯ ಕಾವ್ಯಗಳನ್ನು ರಚಿಸಿದವರು. ಸಾಹಿತ್ಯ ಸಂಶೋಧನೆಗೆ ಸಂಬಂಧಪಟ್ಟ ಗದ್ಯ ಗ್ರಂಥವೊಂದನ್ನು ಪ್ರಕಟಿಸಿದ್ದಾರೆ. ಹೊಸಗನ್ನಡ ಕಾವ್ಯಲೋಕದಲ್ಲಿ “ಅನುಭವ" ವನ್ನೇ ವಸ್ತುವಾಗಿಟ್ಟುಕೊಂಡು ಕಾವ್ಯ ರಚಿಸಿದ ತೀರ ಕೆಲವರಲ್ಲಿ ಇವರೊಬ್ಬರು. ವಿದ್ಯಾರಣ್ಯರನ್ನು ಕುರಿತು, ಬಸವೇಶ್ವರರನ್ನು ಕುರಿತು, ಶ್ರೀ ಅರವಿಂದರನ್ನು ಕುರಿತು ಗ್ರಂಥ ರಚಿಸಿದ್ದಾರೆ. ಜಮಖಂಡಿಯಲ್ಲಿ ಜರುಗಿದ ಲೇಖಕರ ಗೋಷ್ಟಿಗೆ ಅಧ್ಯಕ್ಷರಾಗಿದ್ದರು.

‘ಮಧುರ ಚೆನ್ನ' ರ ಒಂದು ಕವನ ಹೊಸಗನ್ನಡ ಕಾವ್ಯಶ್ರೀ ಕೃತಿಯಲ್ಲಿ ಪ್ರಕಟವಾಗಿದೆ. ಅದನ್ನು ಆರಿಸಿ ಪ್ರಕಟಿಸಲಾಗಿದೆ. 

ದೇವತಾ ಪ್ರಥಿವೀ

ಮೊಲೆಹಾಲು ಸಾಕಮ್ಮಾ ಸವಿಲಾಲಿ ಬೇಕಮ್ಮಾ

ಮುದ್ದಾಡಿ ರಮಿಸಿ ಮೈದಡವ । ಏಳಮ್ಮಾ

ಮಲಗಿರುವ ತಾಯಿ ಪ್ರಥಿವೀ

 

ಹೊಟ್ಟೀಗೆ ಹಸಿವಿಲ್ಲ ಕರುಳೀಗೆ ಸೋಗಸಿಲ್ಲ

ಮೊಲೆ ಸಾಕು ಮುದ್ದು ಕೊಡು ತಾಯಿ । ಏಳಮ್ಮಾ

ಮಲಗಿರುವ ತಾಯಿ ಪ್ರಥಿವೀ

 

ಹಸಿವೀಗಿ ಮೊಲೆಯುಂಡೆ ಕಸವೀಸಿಗೇನುಳ್ಳೆ

ಹಾಲೊಲ್ಲೆ ಸಾಕು ಬಿಗಿದಪ್ಪಿ । ಏಳಮ್ಮಾ

ಮಲಗಿರುವ ತಾಯಿ ಪ್ರಥಿವೀ

 

ಮೊಲೆಹಾಲು ರುಚಿಗೊಂಡು ಮನದಾಲು ಬಯಸೇನ

ಗುಟುಗುಟುಕಿಗೊಮ್ಮೆ ಮಿಕಿ ಮಿಕಿ । ಏಳಮ್ಮಾ

ಮಲಗಿರುವ ತಾಯಿ ಪ್ರಥಿವೀ

 

ಹೂವೀನ ಮಕರಂದ ಹೆಣ್ಣೀನ ಮಾಧುರಿಯ

ಹಾಲೀಂಗ ಇನ್ನ ಮನ ಹ್ಯಾಂಗ । ಏಳಮ್ಮಾ

ಮಲಗಿರುವ ತಾಯಿ ಪ್ರಥಿವೀ

 

ಚಂದರನ ಚಲುವವೀಕೀ ಇಂದರನ ಹೋಲೀಕೀ

ಮೈ ಹೀಂಗ ನಿನ್ನ ಮನ ಹ್ಯಾಂಗ । ಏಳಮ್ಮಾ

ಮಲಗಿರುವ ತಾಯಿ ಪ್ರಥಿವೀ

 

ಹಿಂದಿತ್ತು ಕಾರಿರುಳೂ ಇಂಗೀಗಿ ಹೂಬಿಸಿಲು

ಅಂದಿಗಿಂದೀಗಿ ಒಂದೇನ ?। ಏಳಮ್ಮಾ

ಮಲಗಿರುವ ತಾಯಿ ಪ್ರಥಿವೀ

 

ಕಣ್ಣು ಅರಳದ ಕೂಸು ಮ್ಯಾಲೆ ಕತ್ತಲೆ ಗವಿಯ

ಆಗಲ್ಲ ಕಂಡೆ ನಾನೀಗ । ಏಳಮ್ಮಾ

ಮಲಗಿರುವ ತಾಯಿ ಪ್ರಥಿವೀ

 

ಮೊಲೆಹಾಲ ಧಾರೀಗಿ ಎಲ್ಲಿದೊ ಸೆಲೆಯಂದೆ

ಆಗೆಲ್ಲಿ ತಾಯೆ ಈ ನಲಿಯೆ । ಏಳಮ್ಮಾ

ಮಲಗಿರುವ ತಾಯಿ ಪ್ರಥಿವೀ

 

ಏನಂತೊ ಅಂದಿದ್ದ ತಾಯಂತ ಈಗಂದ

ಕಣ್ಣೀಲಿ ಕಂಡು ಮನಗಂಡು । ಏಳಮ್ಮಾ

ಮಲಗಿರುವ ತಾಯಿ ಪ್ರಥಿವೀ

 

ಉಂಡದ್ದು ಹೌದಮಾ ಕಂಡದ್ದು ನಿಜವಮ್ಮಾ

ಉಂಡೇನು ಈಗ ಕಂಡೇನು? । ಏಳಮ್ಮಾ

ಮಲಗಿರುವ ತಾಯಿ ಪ್ರಥಿವೀ

 

ಕತ್ತಲೆಯ ಆ ಸೋಂಕು ಹೂಬಿಸಿಲ ಈ ಮಂಕು

ಕಪ್ಪೇನು ಮತ್ತ ಬಿಳುಪೇನು । ಏಳಮ್ಮಾ 

ಮಲಗಿರುವ ತಾಯಿ ಪ್ರಥಿವೀ

 

ಕಾಣದ ಈ ಕುರುಡೂ ಕಾಣೂವ ಈ ಕುರುಡು

ಕಂಡೇನು ಕಾಣದಿದ್ದೇನು । ಏಳಮ್ಮಾ

ಮಲಗಿರುವ ತಾಯಿ ಪ್ರಥಿವೀ

 

ಆರುವಲ್ಲ ಮರವಲ್ಲ ಅರಿತದ್ದು ಸ್ಥಿರವಿಲ್ಲ

ಅರಿತೇನು ಆಶೆ ತೀರದೆ । ಏಳಮ್ಮಾ

ಮಲಗಿರುವ ತಾಯಿ ಪ್ರಥಿವೀ

 

ಇಲ್ಲಂಬು ಮರುಗಲ್ಲ । ಅಲ್ಲಂಬು ಅಳುಕಲ್ಲ

ಇದ್ದಿಲ್ಲದಂಥ ಪರಿ ಹೊಲ್ಲ । ಏಳಮ್ಮಾ

ಮಲಗಿರುವ ತಾಯಿ ಪ್ರಥಿವೀ

 

ಕಿಂಭೂತ ಕೊರಡೊಂದು ತುಂಬೀತು ಕೊನರಾಗಿ

ಹೂವಾಗಿ ಹಣ್ಣು ಬಿಡಲಿಲ್ಲ । ಏಳಮ್ಮಾ

ಮಲಗಿರುವ ತಾಯಿ ಪ್ರಥಿವೀ

 

ಹಾಲುನಿದ್ದೀ ತೊರೆಯೇ ಜೇನುನಿದ್ದೀ ತೊರೆಯ

ಸಕ್ಕರಿಯ ನಿದ್ದಿ ತೊರೆದೇಳು । ಏಳಮ್ಮಾ

ಮಲಗಿರುವ ತಾಯಿ ಪ್ರಥಿವೀ

 

ಕನಸೀನ ಕನ್ನಕ್ಕಿ ಮನಸಿನ ಮಾಯಮ್ಮಾ

ಎಚ್ಚೆತ್ತು ತಾಯಿ ಎಂವೆಬಿಚ್ಚ । ಏಳಮ್ಮಾ

ಮಲಗಿರುವ ತಾಯಿ ಪ್ರಥಿವೀ

 

ಏಳಮ್ಮಾ ಏಳಮ್ಮಾ ಏಳೆನ್ನ ತಾಯಾಮ್ಮಾ

ಏಳದೆ ಜೀವ ಕೇಳದ । ಏಳಮ್ಮಾ

ಮಲಗಿರುವ ತಾಯಿ ಪ್ರಥಿವೀ

 

ಈ ಗಾಳಿ ನಿನ್ನುಸಿರ ಈ ಬೆಂಕಿ ಮೈಗಾವ

ಮುದಡೀದ ಮೊಗ್ಗಿ ಅರಳೀಸ । ಏಳಮ್ಮಾ

ಮಲಗಿರುವ ತಾಯಿ ಪ್ರಥಿವೀ

 

ಮೊಲೆಹಾಲು ಸಾಕಮ್ಮ ಸವಿಲಾಲಿ ಬೇಕಮ್ಮಾ

ಮುದ್ದಾಡಿ ರಮಿಸಿ ಮೈದಡವ । ಏಳಮ್ಮಾ

ಮಲಗಿರುವ ತಾಯಿ ಪ್ರಥಿವೀ

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)