‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೮) - ರಂ.ಶ್ರೀ. ಮುಗುಳಿ
‘ಡಾಕ್ಟರ್ ಆಫ್ ಲಿಟರೇಚರ್' ಪದವಿ ಪಡೆದ ರಂಗನಾಥ ಮುಗುಳಿಯವರು ೧೯೨೫ರಿಂದಲೂ ಕಾವ್ಯ ರಚಿಸುತ್ತಾ ಬಂದ ಕವಿಗಳು. ಮುಗುಳಿಯವರು ಕೆಲವು ಕಾದಂಬರಿಗಳನ್ನೂ ಬರೆದಿದ್ದಾರೆ. ಸಾಂಗ್ಲಿಯ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಇವರು ಕನ್ನಡ ಆಚಾರ್ಯ ಎಂಬ ಮಹತ್ತರವಾದ ಸ್ಥಾನದಲ್ಲಿದ್ದರು. “ಕನ್ನಡ ಸಾಹಿತ್ಯ ಚರಿತ್ರೆ" ಎಂಬ ಇವರ ಗ್ರಂಥಕ್ಕೆ ೧೯೫೬ರಲ್ಲಿ ಭಾರತ ಸರಕಾರದ ಸಾಹಿತ್ಯ ಅಕಾಡೆಮಿಯು ೫೮೦೦ ರೂ.ಗಳ ಸಂಭಾವನೆಯನ್ನು ನೀಡಿ ಗೌರವಿಸಿದೆ. ಆರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಉತ್ತಮ ವಾಗ್ಮಿಗಳು. ೧೯೫೩ರಲ್ಲಿ ಕನ್ನಡ ಕವಿ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿಸಲ್ಪಟ್ಟಿದ್ದರು. ಕರ್ನಾಟಕ ಸಂಸ್ಕೃತಿಯ ಕುರಿತು ಇಂಗ್ಲಿಷ್ ನಲ್ಲಿ ಗಂಥ ರಚಿಸಿದ್ದಾರೆ.
ರಂ ಶ್ರೀ ಮುಗುಳಿಯವರ ಒಂದು ಕವನ ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿದೆ. ಅದನ್ನು ಆಯ್ದು ಪ್ರಕಟಿಸಲಾಗಿದೆ.
ಮಂದಾರ ಹೂವಾ !
ಬಂದಾರ ತಂದಾರ ಮಂದಾರ ಹೂವಾ
ಇಂದ್ರನ ನಂದನದ ಪೂವಾಡಗಿತ್ತೇರು
ಒಂದಾರ ಕೊಳ್ಳಿರೋ ಮಂದಾರ ಎಂದು
ಬಂದಾರ ಇಂದ್ರನ ನಂದನದ ಚೆನ್ನೇರು.
ಅಂದಾದ ಅಂದೂಗಿ ಒಂದಾಗಿ ಬಂದು
ನಿಂದಾರ ಗಿಲಿಗಿಲಿಯ ನಾದದಲಿ ನೀರೇರು
ಒಂದಾರ ಕೊಳ್ಳಿರೋ ಮಂದಾರ ಎಂದು
ನಿಂಬಾರ ನಂದನದ ಹೂವಾಡಗಿತ್ತೇರಿ-
ವಾಸರಾಯನ ಹಿರಿಹೂವು ಎಂದು
ದೇಶವ ತಿರುಗಿದರು ಪೂವಾಡಗಿತ್ತೇರು
ವಾಸವ ನೋಡಿಕ್ಕಿ ಬಿಡುವರು ಹೂವಾ
ಲೇಸೆಂದು ಕೊಳ್ಳುವರ್ಯಾರಿಲ್ಲೊ ಜಗದಾಗ
ಮುನಿದಾರ ಮನದಾಗ ತಿಂದಾರಹಲ್ಲಾ
ಮಂದಾರ ಹೂವಿನ ಪೂವಾಡಗಿತ್ತೇರು
ತಂದಾರ ಅಂದಾದ ಮಂದಾರ ಹೂವ
ಬಂದಾರ ಸುರುವ್ಯಾರ ನಂದನ ಕೇರಿಯಾಗ
ಅಂದಾರ ಇಂದ್ರನ ಬಳಿಗೋಡಿಹೋಗಿ
“ಮಂದಾರ ಹೂವನು ಒಂದಾರ ಕೊಳಲಿಲ್ಲ
ಒಂದಾರ ಕೊಳಲಿಲ್ಲ ಲೋಕದ ಮಂದಿ
ನಿಂದಾವ ಲೋಕದ ಬಲುಹೂವು" ಎಂದೇನೊ!
(‘ಹೊಸಗನ್ನಡ ಕಾವ್ಯಶ್ರೀ ಕೃತಿಯಿಂದ ಆಯ್ದ ಕವನ)