‘ಹೊಸಗನ್ನಡ ಕಾವ್ಯಶ್ರೀ’ (ಭಾಗ -೧೯) - ತೀ ನಂ ಶ್ರೀಕಂಠಯ್ಯ

‘ಹೊಸಗನ್ನಡ ಕಾವ್ಯಶ್ರೀ’ (ಭಾಗ -೧೯) - ತೀ ನಂ ಶ್ರೀಕಂಠಯ್ಯ

ತೀ ನಂ ಶ್ರೀಕಂಠಯ್ಯ ಇವರು ಎಂ ಎ ಪದವೀಧರರು. ಇವರು ೧೯೨೭ರಿಂದಲೂ ಕಾವ್ಯ ಪ್ರಪಂಚದಲ್ಲಿ ಗಣನೀಯವಾಗಿ ಬರೆಯುತ್ತಾ ಬಂದವರು. ಇವರು ಅಂದಿನ ಮೈಸೂರು ಶಿಕ್ಷಣ ಇಲಾಖೆಯಲ್ಲಿ ದೊಡ್ದ ಅಧಿಕಾರದಲ್ಲಿದ್ದು, ತರುವಾಯ ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ಪದವಿಯನ್ನು ವಹಿಸಿಕೊಂಡಿದ್ದರು. ಭಾಷಾ ಶಾಸ್ತ್ರದಲ್ಲಿ ಪಂಡಿತರು. ಉತ್ತಮ ವಾಗ್ಮಿಗಳು. “ಒಲವು" ಎಂಬ ಕಾವ್ಯ ಪ್ರಕಟಿಸಿದ್ದಾರೆ. “ಕಾವ್ಯ ಮೀಮಾಂಸೆ" ಎಂಬ ಉದ್ಗ್ರಂಥವನ್ನು ರಚಿಸಿದ್ದಾರೆ. ಇವರು ಉಚ್ಛಾರಣಾ ಶಾಸ್ತ್ರದ ವಿಶೇಷ ಅಧ್ಯಯನಕ್ಕಾಗಿ ಅಮೇರಿಕಕ್ಕೆ ಹೋಗಿ,ಶಿಕ್ಷಣ ಪಡೆದು ಬಂದಿದ್ದರು.

ಇವರ ಒಂದು ಕವನ “ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿ ಪ್ರಕಟವಾಗಿದೆ. ಅದನ್ನು ಆರಿಸಿ ಪ್ರಕಟ ಮಾಡಲಾಗಿದೆ.

ನೀಡು ಪಾಥೇಯವನು

ಬಲುದಿನದ ಪಯಣಕ್ಕೆ ನಾ ತೆರಳಲಿರುವೆ

ನಿಲುವ ಪಾಥೇಯವನು ನೀಡೆನಗೆ ಚೆಲುವೆ,

ಹಸಿವಿನಲಿ ಕಾತರಿಸಿದಂತೆ ನನ್ನೊಲವೆ !

 

ಚಿಗರೆಗಣ್ಣನು ನನ್ನ ಮೊಗದತ್ತ ಹರಿಸು

ಚಿಗುರು ಬೆರಳಲಿ ಕೆನ್ನೆಗಳನು ನೇವರಿಸು

ಸಕ್ಕರೆಯ ವಾಣಿಯಿಂದಕ್ಕರೆಯ ಸುರಿಸು

 

ದೀನೆ ಮುಂಬರಿದು ಮುತ್ತನು ತುಟಿಗೆ ಸಲಿಸು

ನಾಲ್ಕು ಸಾಲದೇ ? ಮತ್ತೆಕೋ ! ಎಂದು ನಲಿಸು

ನನ್ನೆದೆಯ ತುಡಿತಗಳನಪ್ಪಪ್ಪಿ ನಿಲಿಸು

 

ತಳಮಳಿಸೆ ನಾನು ವಿರಹದ ಭಯಕೆ ಸಂದು 

ಆಗಾಗ ಕನಸಲಿ ಕಾಣಬಹುದೆಂದು

ನುಡಿ, ಕಂದುಮೋರೆಯಲಿ ನಸುನಗೆಯ ತಂದು

 

ಎಂತೋ ಬೀಳ್ಕೊಂಡು, ಬೀದಿಯ ತಿರುವಿಗೇರಿ

ಹೊಸಿಲಕಡೆ ಹೊರಳೆ ನನ್ನರ್ತಿ ಕೊನೆ ಬಾರಿ

ಅದನು ಬಿಗಿಯಲಿ ನಿನ್ನದಿಟ್ಟ ಹನಿದೋರಿ

 

ಇಂತಿಂತು ಹದಗೊಳಿಸಿ ಬುತ್ತಿಯನು ಕಟ್ಟು 

ಜೊತೆಗೆ ನೀನೇ ನೆನೆದ ಸವಿಯೊಂದನಿಟ್ಟು

ನಿನ್ನ ರೂಢಿಯ ಲಜ್ಜೆ ಬಿಂಕವನು ಬಿಟ್ಟು

 

ಸ್ಮೃತಿಯ ಹಸುಬೆಗೆ ತುಂಬಿ ರಾಗದಲಿ ಸುತ್ತಿ

ಎದೆ ಹಸಿಯೆ ಬಗೆ ಬಯಸೆ ಒಂದೊಂದನೆತ್ತಿ

ಸವಿದು ನಡೆವೆನೆ ವಿರಹಪಥವ ಮುಂದೊತ್ತಿ

 

ನನ್ನಿಷ್ಟ ರುಚಿಯ ಬರೆಯನು ನೀನು ಬಲ್ಲೆ

ನೀಡು ಪಾಥೇಯವನು ಕಾಲವನು ಗೆಲ್ಲೆ

ಬಲುದಿನದ ಪಯಣಕ್ಕೆ ಹೊರಟಿರುವೆ ನಲ್ಲೆ !

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)