‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧) - ಶ್ರೀ

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧) - ಶ್ರೀ

ಕಳೆದ ವಾರ ತಿಳಿಸಿದ ಹಾಗೆ ನಾನು ಈ ವಾರದಿಂದ ೧೯೫೭ರಲ್ಲಿ ಪ್ರಕಟಿತ ದ ರಾ ಬೇಂದ್ರೆ ಹಾಗೂ ಎಂ ಎಂ ಭಟ್ ಸಂಗ್ರಹಿಸಿದ 'ಹೊಸಗನ್ನಡ ಕಾವ್ಯಶ್ರೀ’ ಎಂಬ ಕೃತಿಯಲ್ಲಿರುವ ಕವಿಗಳ ಆಯ್ದ ಕವನಗಳನ್ನು ಪ್ರಕಟಿಸಲಿದ್ದೇನೆ. ‘ಸುವರ್ಣ ಸಂಪುಟ'ದಲ್ಲಿದ್ದ ಈಗಾಗಲೇ ಸಂಪದದಲ್ಲಿ ಪ್ರಕಟವಾಗಿರುವ ಕವಿಗಳ ವಿವರಗಳನ್ನು ಮತ್ತೆ ಹಂಚಿಕೊಳ್ಳಲು ಹೋಗುವುದಿಲ್ಲ. ಹೊಸ ಕವಿಗಳ ಪರಿಚಯ ಮಾತ್ರ ಮಾಡಿಕೊಡಲಿದ್ದೇನೆ. ಕವನಗಳೂ ಸಹ. ಒಮ್ಮೆ ಪ್ರಕಟವಾದ ಕವನಗಳನ್ನು ಹೊರತು ಪಡಿಸಿ ಉಳಿದ ಕವನಗಳನ್ನು ಆಯ್ದು ಪ್ರಕಟ ಮಾಡಲಿದ್ದೇನೆ. ಈ ವಾರ ನಾವು ಆಯ್ದು ಕೊಂಡ ಕವಿ “ಶ್ರೀ” ಎಂಬ ಗುಪ್ತನಾಮವನ್ನಿರಿಸಿಕೊಂಡ ಖ್ಯಾತ ಸಾಹಿತಿ ಬಿ.ಎಂ ಶ್ರೀಕಂಠಯ್ಯನವರು.

ಶ್ರೀ

‘ಶ್ರೀ ಎಂಬುದು ಬೆಳ್ಳೂರ ಮೈಲಾರ ಶ್ರೀಕಂಠಯ್ಯ (ಬಿ ಎಂ ಶ್ರೀ) ಇವರು ಇರಿಸಿಕೊಂಡಿದ್ದ ಗುಪ್ತನಾಮ. ಹೊಸಗನ್ನಡ ಕಾವ್ಯದ ಆದ್ಯ ಪ್ರವರ್ತಕರಲ್ಲಿ ಇವರೊಬ್ಬರು. ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್-ಕನ್ನಡ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ವಿವಿಯ ರಿಜಿಸ್ಟ್ರಾರ್ ಆಗಿ ನಿವೃತ್ತಿಯಾದ ಬಳಿಕ ಧಾರವಾಡದ ಕೆ ಈ ಬೋರ್ಡ್ ಕಾಲೇಜಿನ ಪ್ರಾಂಶುಪಾಲರಾಗಿ ಕೆಲಕಾಲ ಧಾರವಾಡದಲ್ಲೇ ಸೇವೆ ಸಲ್ಲಿಸಿದ್ದರು. ಮೈಸೂರು ಸರಕಾರವು ಇವರಿಗೆ ‘ರಾಜ ಸೇವಾಸಕ್ತ' ಎಂಬ ಬಿರುದು ನೀಡು ಗೌರವಿಸಿತ್ತು. ಇವರು ೧೯೪೪ರಲ್ಲಿ ನಿಧನ ಹೊಂದಿದರು.

ಕಾವ್ಯಶ್ರೀಯಲ್ಲಿ ಇವರ ಒಂದು ಕವನ ಪ್ರಕಟವಾಗಿದೆ. ಅದರ ಹೆಸರು-

ಶುಕ್ರ ಗೀತೆ

ಓಂ, ಸಹನಾವವತು ; ಸಹನೌ ಭುನಕ್ತು ;

ಸಹವೀರ್ಯಂ ಕರವಾವಹೈ;

ತೇಜಸ್ವಿನಾವಧೀತಮಸ್ತು ;

ಮಾವಿದ್ವಿಷಾವಹೈ.

ಓಂ ಶಾಂತಿಃ ಶಾಂತಿಃ ಶಾಂತಿಃ

ಮೊತ್ತಮೊದಲ್, ಬೆಳಕಾಗಲೆಂದಾಗ, ಬೆಳಕಾಯ್ತು; ಬೆಳಕು ಚೆಲುವಾಯ್ತು;

ಕಿಡಿ ಸಿಡಿದು ಮಿನುಗಿದವು ಜ್ಯೋತಿಗಳ್ ; ಮೂಡಿದರು ಸೂರ್ಯಚಂದಿರರು

ಲೋಕ ಚಕ್ಷುಗಳೆನಿಸಿ, ಸತ್ಯ ಧರ್ಮಗಳಂತೆ, ಕ್ಷಮೆ ದಯೆಗಳಂತೆ.

ಹಸುರ ಸೊಬಗಂ ತೊಟ್ಟು, ಹಾಡುತ್ತ, ಬಾನ್ ಬಯಲೊಳಾಟವಾಡುತ್ತ,

ಸೌಂದರ್ಯದಿಂ ತೀವಿ, ಭೂದೇವಿ ಬೆಳಗಿದಳು, ಜೀವ ಪರಮಾತ್ಮರಿಂ ಕೊಳಗಿ

 

ಆ ದಿವ್ಯದರ್ಶನಂ ಕಣ್ತುಂಬೆ ನೋಡಿದರ್

ದಿವಿಜರುಂ, ಋಷಿಗಳುಂ ; ನಲಿದು ಕುಣಿದಾಡಿದರ್ ;

ಪಾಟಮಂ ಪಾಡಿದರ್-

ಓಂ, ತತ್ಸವಿತುರ್ ವರೇಣಿಯಂ

ಭರ್ಗೋದೇವಸ್ಯ ಧೀಮಹಿ,

ಧಿಯೋ ಯೋ ನಃ ಪ್ರಚೋದಯಾತ್,

ಮತ್ತವರಿಂತೆಂದು ಬೇಡಿದರ್-

 

ಹಿರಣ್ಮಯೇನ ಪಾತ್ರೇಣ

ಸತ್ಯಸ್ಯಾಪಿಹಿತಂ ಮುಖಂ ;

ತತ್ ತ್ವಂ ಫೂಷನ್ ಅಪಾವೃಣು

ಸತ್ಯ ಧರ್ಮಾಯ ದೃಷ್ಟಯೇ;

 

ಇನ್ನುಮೊಂದಂ ಬಯಸಿ ಪೂಟಮಂ ಪೂಡಿದರ್-

ಅಸತೋ ಮಾ ಸದ್ಗಮಯ

ತಮಸೋ ಮಾ ಜ್ಯೋತಿರ್ ಗಮಯ,

ಮೃತ್ಯೋರ್ ಮಾ ಅಮೃತಂ ಗಮಯ.

ಇಂದಿಂಗಮೆಮಗದುವೆ ದರ್ಶನಂ, ಬಯಸಿದುದೆ ಆ ಅಮೃತ ಪುತ್ರರ್,

ಬ್ರಹ್ಮಮಿ ವಿಶ್ವಂ, ಬ್ರಹ್ಮಮುಂ ಮೂರ್ಣಮೆನೆ ಏನ್ ಚೆಲುವೊ

ನಮ್ಮ ಬಾಳ್ ಚೆಲುವು,

ಏನ್ ನಲಿವೊ ನಮ್ಮ ನಲಿವಾತ್ಮಕಾನಂದಂ !

೨. 

ಆನಂದವರಿಯದರ್,

ಆತ್ಮವನೆ ಒಲ್ಲದರ್,

ಬಾನಗಡಿಯಲಿ ಗಿಡಿದ ಕತ್ತಲೆಯ ಗುಹೆಯೊಳಡಗಿದ್ದರಾ ಅಸುರರ್

ಕೇಳ್ದರಾಪಾತಮಂ ಪಲ್ಮೊರೆದು, ಕಣ್ಣಿರಿಯೆ ಕಂಡರಾ ಬಿಡುಗಣ್ಣ ಬೆಳಕನ್,

ಪೊಳೆದು ಪೊಳೆಯಿಸುತಿರ್ಪ ಬಿಳಿಯ ಬಾನ್ ಬೆಳಕನ್

ಮೆಲ್ಲಮೆಲ್ಲನೆ ನುಸುಳಿ ದೇವರಾವಣದಲಿ, ಆಳ ತೋಟದಲಿ,

ತೆಕ್ಕೆತೆಕ್ಕೆಯೊಳೆದ್ದು ಹೊರಬಿದ್ದು, ಕಾರಿರುಳ ಮೊತ್ತಂಗಳಾಗಿ,

ಪೊಗೆಯಾಗಿ, ನೊಣೆವ ಪಿಡಿನೆಳಲಾಗಿ, ನಂಜಾಗಿ, ಕಣ್ಣುಮಂಜಾಗಿ,

ಮುತ್ತಿಮರುಳ್ಗೊಳಿಸಿದರ್ ಸಂಶಯಂಗಳನೊತ್ತಿ, ಪಾಪಂ ಬಿತ್ತಿ,

ಅಲ್ಲಯದನಹುದೆಂದು, ಅಹುದನಲ್ಲೆಂದು,

ಇಲ್ಲದುದನಿಹುದೆಂದು, ಇಹುದನಿಲ್ಲೆಂದು,

ನಲ್ಲದಂ ಪೊಲೆಯೆಂದು, ಪೊಲೆನಲ್ಲದೆಂದು,

ತಿಳಿಸಿದರ್ ಮಾಯಾವಿಗಳ್ ಬಾಳ್ವ ಮಕ್ಕಳಂ ಸಾವ ಸಂಸಾರಸುತ್ತಿ

ಪಲ ಪೆಸರ್ ಪುರುಳೊಂದು,

ಪಲ ತೆರನ್, ನೆರನೊಂದು -

ಆಹಿ, ವೃತ್ರ, ಮಾರ, ಕಲಿ, ಅಹ್ರಿಮನ್, ಸೈತಾನ್ !

(ಹೊಸಗನ್ನಡ ಕಾವ್ಯಶ್ರೀ ಕೃತಿಯಿಂದ ಆಯ್ದ ಕವನ)