‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೧) - ಜಿ.ಎಸ್.ಶಿವರುದ್ರಪ್ಪ

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೧) - ಜಿ.ಎಸ್.ಶಿವರುದ್ರಪ್ಪ

ಜಿ ಎಸ್ ಶಿವರುದ್ರಪ್ಪನವರು ಎಂ ಎ ಪದವೀಧರರು. ಇವರು ೧೯೪೦ರಿಂದ ತಮ್ಮ ಬರಹಗಳನ್ನು ರಚನೆ ಮಾಡುತ್ತಿದ್ದಾರೆ. ತರುಣ ಕವಿಗಳಲ್ಲಿ ಹಿರಿಮೆಯ ಸ್ಥಾನವನ್ನು ಗಳಿಸಿದವರು. ಇವರು ಬರೆದ “ಚೆಲುವು ಒಲವು" ಮೊದಲಾದ ನಾಲ್ಕು ಕವನ ಸಂಕಲನಗಳು ಜನ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಪ್ರತಿಭೆ ಅಸಾಧಾರಣವಾದುದೆಂದು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ. ಮೈಸೂರು ಶಿಕ್ಷಣ ಇಲಾಖೆಯ ನೌಕರಿಯಲ್ಲಿದ್ದು ನಿವೃತ್ತರಾಗಿದ್ದಾರೆ.

ಜಿ ಎಸ್ ಶಿವರುದ್ರಪ್ಪನವರ ಒಂದು ಕವನ ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿದೆ. ಅದನ್ನು ಆರಿಸಿ ಪ್ರಕಟಿಸಲಾಗಿದೆ.

ಕ್ರಾಂತಿಕಾರ

ಅದೊ ಬಂದ ಇವದೊಂಡು ಕಿರಿಯ ಬಿರುಗಾಳಿ !

ಮನೆಯ ಒಳಗೂ ಹೊರಗೂ ಇವನದೆ ಧಾಳಿ !

ಇದ್ದುದೊಂದೆಡೆ ಇರದು ಇವರ ರಜ್ಯದಲಿ

ತುಂಟತನಕಿನ್ನೆರಡು ಕಾಲ್ ಬಂದ ತೆರದಿ

ಬಂದುದಿವನಿಗೆ ಎರಡು ಪುಟ್ಟ ಕಾಲು !

ಮನೆಯ ವಸ್ತುಗಳೆಲ್ಲ ದಿಕ್ಕುಪಾಲು !

ತುಂಬುಕಿತ್ತಲೆ ಕನ್ನೆ ನಗೆ ಮಿಂಚುಗಳ ಕುವರ 

ಕ್ರಾಂತಿಕಾರ!

ಹೊಳೆವೆಳೆಯ ಕಂಗಳಲಿ ಬೆಳುದಿಂಗಳನು ತುಂಬಿ

ತಂದು ಮನೆಯಂಗಣಕೆ ಸುರಿವ ಧೀರ

ಇವನು ಎದ್ದರೆ ಮನೆಯ ಮೈಯೆಲ್ಲ ಎಚ್ಚರ 

ಇವನು ಮಲಗಲು ಮನೆಗೆ ಕವಿಯುವುದು ಮಂಪರ !

ಕೊಳಲಿನಿದು ವೀಣೆಯು ಇನಿದು ಎನ್ನುವರು

ಮಕ್ಕಳ ಸೊಲ್ಲನಾಲಿಸದ ಜನರು

ಎಂದೊರೆದ ತಮಿಳು ಕವಿ ; ಅವನ ಮಾತಿನ ಸತ್ಯ.

ಅನುಭವಕೆ ಬರುತಿಹುದು ಇವನ ಎದುರು !

ಇವರ ಮಾತಿನ ಅರ್ಥ ದೇವರೇ ಬಲ್ಲ

ಭಾವಗೀತೆಗಳಂತೆ ಅಸ್ಪಷ್ಟವೆಲ್ಲ !

ಚಂದ್ರಮಾಮನ ಅಳಿಯ, ಬೆಕ್ಕು ನಾಯಿಯ ಗೆಳೆಯ

ನಮ್ಮ ಲೋಕದ ತಿಳಿವಿನಾಚೆಯವನು

ಅವನ ನೀತಿಯೆ ಬೇರೆ ಅವನ ನಿಯತಿಯೆ ಬೇರೆ

ದೇವಲೋಕದ ಬೆಳಕ ಹಿಡಿಯುವವನು

ಮಹಾ ಮಹಾ ಪಂಡಿತರ ಉದ್ಗ್ರಂಥಗಳೆಲ್ಲ 

ನೆಕ್ಕಿರುಚಿ ನೋಡುವನು, ರಸನೆಯಿಂದ !

ಎಷ್ಟಾದರೂ ಎಲ್ಲ ಬರಿಯ ನೀರಸವೆಂದು

ಹರಿದೆಸೆದು ಬಿಡುವನು ತಾತ್ಸಾರದಿಂದ !

ಮನೆಗೆ ಮನೆಯೇ ಇವನ ಜೊತೆಗೂಡಿ ಆಡುವುದು

ಒಲವಿನಿಂದ

ನಮಗಡ್ಡವಾಗಿರುವ ವರುಷಗಳ ಕರಿತೆರೆಯು

ಸರಿಸಿ ಬಾಲ್ಯದ ಚೆಲುವ ತಂದುಕೊಡುವನು ಇವನು

ತನ್ನ ಒಂದೇ ಒಂದು ಮೃದುಹಾಸದಿಂದ.

ಸಿಟ್ಟು ಬಂದರೆ ಇವನ ತಡೆಯುವವರಾರುಂಟು?

ರುದ್ರಾವತಾರ!

ನಕ್ಕುನಗಿಸುವ ಚಿಣ್ಣ ಎದೆಯ ಒಲವಿನ ಹಿರಿಯ

ಸೂರೆಕಾರ !

ನನಗೂ ಅವಳಿಗೂ ನಡುವೆ ವ್ಯಕ್ತ ಪ್ರೇಮದ ಸೇತು

ಇವಮಾಯಕಾರ

ಎರಡು ಬಾಳನು ಬೆಸೆದ ಸೂತ್ರಧಾರ !

('ಹೊಸಗನ್ನಡ ಕಾವ್ಯಶ್ರೀ ಕೃತಿಯಿಂದ ಆಯ್ದ ಕವನ)