‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೨) - ವಿ ಜಿ ಭಟ್
ವಿಷ್ಣು ಗೋವಿಂದ ಭಟ್ (ವಿ ಜಿ ಭಟ್) ಇವರು ಎಂ ಎ ಪದವೀಧರರು . ಇವರು ಚುಟುಕುಗಳನ್ನು ರಚಿಸಿದ ಹೊಸಗನ್ನಡ ಕವಿಗಳಲ್ಲಿ ಅಗ್ರಪಂಕ್ತಿಯವರು. “ಪಲಾಯನ", “ಕಾವ್ಯನಿವೇದನೆ", “ತುಂಟನ ಪದ್ಯಗಳು" ಎಂಬ ಮೂರು ಅತ್ಯಂತ ಮಾರ್ಮಿಕವಾದ ರಸವದ್ವಿಡಂಬನ “ಚುಟುಕುಗಳನ್ನು" ಹೊರತಂದಿದ್ದಾರೆ. ಸಾಮಾಜಿಕ ಜೀವನದ ಲೋಪದೋಷಗಳನ್ನು ಕಟು-ಹಾಸ್ಯ ರೀತಿಯಿಂದ ಅಣಕಿಸುವ ಅನೇಕ ಗದ್ಯ ಪ್ರಬಂಧಗಳನ್ನೂ, ಸಣ್ಣ ಕಥೆಗಳನ್ನೂ ಪ್ರಕಟಿಸಿದ್ದಾರೆ. ಹೊಸಗನ್ನಡ ಸಾಹಿತ್ಯದಲ್ಲಿ ಇವರ “ಚುಟುಕ" ಗಳು ಸರ್ವಜ್ಞನ ತ್ರಿಪದಿಗಳಂತಿವೆ. ಮುಂಬಯಿ ಸರಕಾರದ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಅಧಿಕಾರಿಗಳಾಗಿದ್ದು ನಿವೃತ್ತರಾಗಿದ್ದಾರೆ.
ಇವರ ಒಂದು ಕವನ ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿದೆ. ಅದನ್ನು ಆರಿಸಿ ಪ್ರಕಟಿಸಲಾಗಿದೆ.
ಅವತಾರ
ಹೆತ್ತವತಾರದ ಹೇಡಿತನಕ್ಕೆ
ಮನ ಗೊಣಗುಟ್ಟುತಿದೆ
ಪರಮಾತ್ಮನ ಕಿಡಿಗೇಡಿತನಕ್ಕೆ
ತಲೆ ರಣಗುಟ್ಟುತಿದೆ.
ಯುಗ ಯುಗವೂ ಹೊಸ-
ಹೊಸ ಅವತಾರ
ಕೀಳಲಿಕಾಗದೆ
ಕೀಳಿನ ಬೇರೆ?
ಲೀಲೆಯ ಸೋಗೇ
ಜಗದುದ್ದಾರ?
ಒಂದೊಂದವತಾರದ ತಲೆ ಮೇಲೂ
ಅಣಬೆಯು ಹುಟ್ಟುತಿದೆ !
ವಿಶ್ವನಿಯಮಕಗೆಲ್ಲಿದೆ ಹೇತು?
ಬರಿಬರಿಕಿಟಧಿತ್ತ
ಆ ಹಗರಣಕೀ ಜೀವವು ಸೋತು
ಮಿಡುಕುವುದತ್ತಿತ್ತ
ಎಲ್ಲಿಹುದವನಿಗೆ ಎರಗುತ ಕೇತು
ಅವನಿದೆ ಘನಚಿತ್ತ !
ಯಾತಕೆ ದೇವನು ಮಾತೆಯ ಅವತಾ-
ರವಮಾಡುವುದಿಲ್ಲ?
ಕತ್ತಲೆಯನು ಬೆಳಕಾಗಿಸುವಾ ಜೋ-
ಗುಳ ಹಾಡುವುದಿಲ್ಲ?
ಅವತಾರವೆ ಬೇಕಾಗದ ಬಗೆಯನು
ಅವ ನೋಡುವುದಿಲ್ಲ?
ಎಲ್ಲವ ಬಲ್ಲ
ಆಗುವುದಿಲ್ಲ
ಎನ್ನುವುದಿಲ್ಲ
ಆದರೂ ಹೀಗೆ ಬೀಳೇಳುತ ಬಾಳ್
ನಡೆಯುತಲಿರಬೇಕು
ಜೀವ ಜೀವಿಯೂ ಜೀ ಜೀ ಎಂದು
ತನ್ನೆಡೆ ಬರಬೇಕು
ಏನೋ ಮಹಾ ಮಾಡುವ ಹಾಗೆ ಯುಗ
ಪುರುಷರ ಹೆರಬೇಕು !
ಎಂತ ಜಂಬ
ಲೀಲೆಯು ಎಂಬ
ಪರಮಾತ್ಮನ ಈ ಕಿಡಿಗೇಡಿತನಕ್ಕೆ
ತಲೆ ರಣಗುಟ್ಟುತಿದೆ,
ಒಂದೊಂದವತಾರದ ತಲೆಮೇಲೂ
ಅಣಬೆಯು ಹುಟ್ಟುತಿದೆ !
(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)