‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೩) - ಎಸ್ ವೆಂಕಟರಾಜ
ಉಡುಪಿಯ ಎಸ್. (ಸಾಂತ್ಯಾರು) ವೆಂಕಟರಾಜ (೧೯೧೩ – ೧೯೮೮) ಕನ್ನಡ ನಾಡು ನುಡಿಗಾಗಿ ದುಡಿದ ಒಬ್ಬ ಬಹುಮುಖ್ಯ ಸಾಹಿತಿ ಮತ್ತು ಪತ್ರಕರ್ತ. ವೆಂಕಟರಾಜರು ತಮ್ಮನ್ನು ಮುಖ್ಯವಾಗಿ ಒಬ್ಬ ಕವಿ ಎಂದು ಕರೆದುಕೊಂಡಿದ್ದರೂ ಕಾದಂಬರಿ, ಸಣ್ಣಕತೆ, ನಾಟಕ, ವಿಮರ್ಶೆ, ವೈಚಾರಿಕ ಲೇಖನ ಹಾಗೂ ವಿಡಂಬನಾತ್ಮಕ ಚೌಪದಿ ಮುಂತಾಗಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಮೇಲ್ಮಟ್ಟದ ಕೃತಿಗಳನ್ನು ರಚಿಸಿ ನವೋದಯದ ಒಬ್ಬ ಮೇರು ಸಾಹಿತಿಯಾಗಿ ನಿಂತವರು.
ಏಳು ಪ್ರಕಟಿತ ಮತ್ತು ಎರಡು ಅಪ್ರಕಟಿತ ಕವನ ಸಂಕಲನಗಳು; ಮೂರು ಕಾದಂಬರಿಗಳು; ಎಂಟು ಪ್ರಕಟಿತ ಮತ್ತು ಎರಡು ಅಪ್ರಕಟಿತ ನಾಟಕಗಳು; ನಾಲ್ಕು ಪ್ರಕಟಿತ ಮತ್ತು ಎರಡು ಅಪ್ರಕಟಿತ ಕಥಾಸಂಕಲನಗಳು; ೧೯ ಅನುವಾದಿತ ಕತೆಗಳುಳ್ಳ ಅಪ್ರಕಟಿತ ಅನುವಾದಿತ ಕತೆಗಳ ಸಂಕಲನ; ಎರಡು ಅಪ್ರಕಟಿತ ಲಘು ಬರಹಗಳ ಸಂಕಲನಗಳು; ಎರಡು ಅಂಕಣ ಬರಹಗಳ ಮಾಲಿಕೆ; ಸಾಕಷ್ಟು ಸಂಖ್ಯೆಯ ಸಾಹಿತ್ಯ ಮತ್ತು ಸಂಸ್ಕೃತಿ ವಿಮರ್ಶೆಯ ಲೇಖನಗಳು; ಅವರ ‘ವೀರಭೂಮಿ’ ಪತ್ರಿಕೆಯ ಸಂಪಾದಕೀಯ ಬರಹಗಳು; ಹಲವು ವೈಜ್ಞಾನಿಕ ಮತ್ತು ಪ್ರಪಂಚಜ್ಞಾನದ ಲೇಖನಗಳು – ಇವು ವೆಂಕಟರಾಜರ ಸಾಹಿತ್ಯ ಸೃಷ್ಟಿಯ ಆಳ ಹರಹುಗಳನ್ನು ಸೂಚಿಸುತ್ತವೆ. ವೆಂಕಟರಾಜರು ಉಡುಪಿಯ ಗಾಂಧಿ ಎಂದು ಪ್ರಸಿದ್ಧರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಸಾಂತ್ಯಾರು ಅನಂತ ಪದ್ಮನಾಭ ಭಟ್ಟರ ಪುತ್ರ.
ವೆಂಕಟರಾಜ ಇವರ ಒಂದು ಕವನ ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿ ಪ್ರಕಟವಾಗಿದೆ. ಅದನ್ನು ಆಯ್ದು ಪ್ರಕಟಿಸಲಾಗಿದೆ.
ಬೆಳದಿಂಗಳಲಿ
೧.
ಮುಗ್ಧಮನಃ ಪ್ರಣಯದ ಮೇಲ್ಗೆರಗನು
ಹೊದ್ಧಂತಿಹುದೀ ರಾತ್ರಿ
ಸ್ನಿಗ್ಧ ಶರತ್ಕಾಲದ ರಸಗಂಗೆಯೊ
ಳೆದ್ದಿದೆ ಪುಣ್ಯ ಧರಿತ್ರಿ !
ಆ ಕಡೆ ಬೆಳ್ಮೋಡದ ಬಾಣಂತಿ
ಬಯಕೆಯಲೇನೋ ಬರೆದ ಕಸೂತಿ
ನೀಲಾಕಾಶದ ತೆಳುಸೀರೆಯಲಿ
ಕಂಬಂತಿದೆ ಸೆಳೆಮಿಂಚಿನ ರೀತಿ.
ಶೃಂಗಾರದ ಹೂ ಹುಡಿಗಳ ಚೆಲ್ಲಿ
ಪನ್ನೀರನು ಸೂಸಿದೆ ತಂಗಾಳಿ-
ಸಂಗೀತದ ಸಮಯೋಚಿತ ಸೇವೆಯು
ಲೋಲೈಸಿದೆ ಮಧುಮತ್ತಮದಾಳಿ !
ಓ ಚೆಲುಗಂಗಳ ಸೊಬಗಿನ ಜಿಂಕೆ
ಬಾ ಬೆಳದಿಂಗಳಿನುಪವನಕೆ !
೨.
ತೊರೆಗಳಲೆಲ್ಲಾ ಹರಿದಿದೆ ಜೇನ್ ನದಿ
ರೆದ್ದಿದೆ ಪರ್ವತಸಾನು
ತನತನಗೇ ಬ್ರಹ್ಮಾಂಡದ ಭಾಂಡಕೆ
ಹಾಲ್ಸುರಿಸಿದೆ ಸುರಧೇನು !
ಪಿಸುಪಿಸುಮಾತಿನ ಮಮತೆಯ ಮಾಟಕೆ
ಆಕಾಶವೆ ಕಿವಿಗೊಟ್ಟಿದೆ ಬಾಗಿ
ಗುಸುಗುಸುಗೆಯ್ಮೆಯ ಹೃದಯೋನ್ಮಾದಕ
ನಾಲ್ದೆಸೆನಗೆಯ್ಯೆಸಿದೆ ತಲೆದೂಗಿ !
ಹೊಸದೇನೋ ಹೊಂಗನಸಿನ ಬಯಕೆ
ಹೊಸೆದಿತೆ ಯೌವನದಾಗಮಕೆ
ಬಿಸಿರಕುತದ ಭಾವನೆಗಳನೆಲ್ಲಾ
ಉಸಿರೆರೆದಿದೆ ತನ ಮೃದುಪದಕೆ !
ಓ ಚೆಂದುಟಿಗಳ ಚೆಲುವಿಕೆಯಾಕೆ
ಬಾ ಬೆಳದಿಂಗಳ ಬಿನ್ನಣಕೆ !
೩.
ಹಸಿದಿದೆ ಹರಣ, ಎಸರಿಟ್ಟಿದೆ ಮನ
ಕುದಿ ಕುದಿದಿಹುದೀ ಹೃದಯ
ಒಣವೇದಾಂತದ ಜೀವನ ಮರಣ
ಬರಿ ತಲೆ ಸುತ್ತುವ ವಿಷಯ !
ಮಾಯಾಬಂಧನ ಮಧುರ ಸಮೀಕ್ಷೆಗೆ
ಸಿಡಿದೆದ್ದಿದೆ ಸಂತೋಷದ ಲಹರಿ,
ಕಾಯದ ರಸಕಲ್ಲೋಲದ ಕದನಕೆ
ಹೊಡೆದಿದೆ ಚಿರಕಲ್ಯಾಣದ ಭೇರಿ !
ಮೌನದ ಬಯಕೆ - ತಾವೇ ಕೂಡುವ
ಕಾಮನೆಗಳ ಸುಖಸಾಫಲ್ಯ
ಮಾಣದ ಮಿಡಿತಕೆ ಮೈಮನಸೊಪ್ಪಿಸಿ
ಮಣಿಯುವ ಮೆಚ್ಚಿನ ಕೈವಲ್ಯ !
ಓ ನಳಿದೋಳ್ಗಳ ನೆಚ್ಚಿನ ಬೆಳಕೆ
ಬಾ ಬೆಳದಿಂಗಳ ಮಂಟಪಕೆ
(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)