‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೬) - ಜಿ ವರದರಾಜ ರಾವ್

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೬) - ಜಿ ವರದರಾಜ ರಾವ್

ಕವಿ ಜಿ.ವರದರಾಜರಾವ್‌ ಅವರು ೧೯೧೮ ಜನವರಿ ೩ರಂದು ಬೆಂಗಳೂರಿನಲ್ಲಿ ಜನಿಸಿದರು. ಆದರೆ ಇವರು ಶಿಕ್ಷಣ ಪಡೆದಿದ್ದು ಮೈಸೂರಿನಲ್ಲಿ, ನಂತರ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕರ್ನಾಟಕ ರಾಜ್ಯ ಸರ್ಕಾರದ  ಕನ್ನಡ ಭಾಷಾಂತರ ಕಚೇರಿಯಲ್ಲಿ ವೃತ್ತಿ ಆರಂಭಿಸಿದ ಇವರು ನಂತರ ಮೈಸೂರು ವಿಶ್ವವಿದ್ಯಾಲಯ ಹಾಗೂ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. 

ಪುರಂದರ ದಾಸರ ಕೀರ್ತನೆಗಳು, ಸೀತಾ ಪರಿತ್ಯಾಗ ಸಮಸ್ಯೆಗಳು, ಕಲಿಕರ್ಣ, ಮಹಾಸತಿ ಕಸ್ತೂರಿ ಬಾ, ಕುಮ್ಮಟ ಕೇಸರಿ, ತೊರಣ, ಸೆರೆಯಾಳು, ತೊಟ್ಟಿಲು, ವಿಜಯದಶಮಿ, (ಕವನ ಸಂಗ್ರಹಗಳು), ಪಡಿನುಡಿ, ಸಾಹಿತ್ಯ ಸಾನಿಧ್ಯ, ಅಪ್ರತಿಮ ವೀರ ಚರಿತಂ, ಕುಮಾರ ರಾಮನ ಸಾಂಗತ್ಯ, ಓಬವ್ವ, ಜಗನ್ನಾಥದಾಸರು, ಬುಡುಬುಡುಕೆ (ಬಾಲಸಾಹಿತ್ಯ), ತೋಟ್ಟಿಲು, ಕುಮ್ಮಟ ದುರ್ಗ ಮುಂತಾದ ಕೃತಿಗಳನ್ನು ಬರೆದಿದ್ದಾರೆ. ಇವರಿಗೆ ದೇವರಾಜ ಬಹದ್ದೂರ್ ಬಹುಮಾನ, ಹರಿದಾಸ ಸಾಹಿತ್ಯ ಪ್ರಶಸ್ತಿ, ರಜತೋತ್ಸವ ಸ್ವರ್ಣ ಪದಕ ಪ್ರಶಸ್ತಿಗಳು ಲಭಿಸಿವೆ. ೧೯೮೭ ನವೆಂಬರ್ ೧೩ ರಂದು ನಿಧನರಾದರು.

ವರದರಾಜ ರಾವ್ ಅವರ ಒಂದು ಕವನ ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿ ಪ್ರಕಟವಾಗಿದೆ. ಅದನ್ನು ಆಯ್ದು ಪ್ರಕಟ ಮಾಡಲಾಗಿದೆ.

ನಗುನಗುತ ಹಗುರವಾಗು

ನಗುನಗುತ ಹಗುರವಾಗು...ಓ ಮನವೇ !

ನಗುನಗುತ ಹಗುರವಾಗು !

 

ವಿಷಗಳಿಗೆ ಬಂದೀತು ರಸಗಳಿಗೆ ಸಂದೀತು

ನಗುನಗುತ ಹಗುರವಾಗು !

 

ಬೆಳಕು ನೆಳಲುಗಳಂತೆ ಸುಖ ದುಃಖ ಬಂದೀತು

ನಗುನಗುತ ಹಗುರವಾಗು

 

ಮೇರು ಪರ್ವತ ಗಾತ್ರ ಸುಖ ಕಳೆದುಹೋತು

ಕಣ್ಮುಚ್ಚಿ ತೆರೆವ ಮುನ್ನ !

 

ಸಾಸಿವೆಯ ಕಾಳನಿತು ಅಳಲಕರೆ ನಿಂತೀತು

ಕೊಂದು ಕಾಡುತಲಿ ನಿನ್ನ !

 

ವಿಷಗಳಿಗೆ ಬಂದಾಗ ಕೊರಗನೀ ಕುಗ್ಗದಿರು

ನಗುನಗುತ ಹಗುರವಾಗು

 

ರಸಗಳಿಗೆ ಬಂದಾಗ ಹಿಗ್ಗಿ, ಮೈಮರೆಯದಿರು

ಸಂಯಮದಿ ಭೋಗಿಯಾಗು

 

ಹಂಬಲಿಸಿ ಹಲುಬುತಿರೆ ಭುಗಿಭುಗಿಲು ಭುಗಿಲೆಂದು

ಹೆಚ್ಚೀತು ನಿನ್ನ ಅಳಲು

 

ಧೃತಿಗೆಡದೆ ನೀನಿರಲು ಹತ್ತಿರಕೆ ಬರಲಂದು

ನಾಚೀತು ನಿನ್ನ ಅಳಲು

 

ಕಾಲಚಕ್ರವನೊತ್ತಿ ಮುಂದುಮುಂದಕೆ ನೂಕಿ

ಹಗಲಿರುಳು ಬರುವವೋಲು

 

ಜೀವನದ ನೌಕೆಯನು ಮುಂದುಮುಂದಕೆ ನೂಕಿ

ಬಂದಾವು ಗೆಲುವು ಸೋಲು !

 

ಸುಖದ ಹಾಲ್ಗಡಲಲ್ಲಿ ಮೆಲುಮೆಲನೆ ನಡೆದೀತು

ರಾಜಹಂಸನನು ಹೋಲಿ !

 

ದುಃಖದಾಳಿಯನಿಡಲು ಎಡವಿ ಮುಗ್ಗರಿಸೀತು,

ಎಂತೋ ಸೇರುವುದು ತೇಲಿ !

 

ನಗೆಯ ಕಾಲಂದುಗೆಯು ಝಣಝಣರು ಎಂದೀತು,

ಹರುಷದಲಿ ಮನವು ಉಕ್ಕಿ !

 

ಸತ್ವವುಡುಗುತ ದುಃಖ ಹೆಸರಳಿಸಿ ಹೋದೀತು

ನಗೆಯ ಸುಳಿಯೊಳಗೆ ಸಿಕ್ಕಿ !

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)