‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೭) - ಬಿ ಎಚ್ ಶ್ರೀಧರ್
ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ. ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ ಹೈಸ್ಕೂಲು ವರೆಗೆ ಸೊರಬ, ಸಾಗರದಲ್ಲಿ ವಿದ್ಯಾಭ್ಯಾಸ, ಇಂಟರ್ ಮೀಡಿಯೆಟ್‌ಗೆ ಸೇರಿದ್ದು ಮೈಸೂರು. ಊಟಕ್ಕೆ ವಾರಾನ್ನ, ಪುಸ್ತಕಗಳಿಗೆ ಗ್ರಂಥಾಲಯ, ಫೀಸಿಗೆ ಸ್ಕಾಲರ್‌ಶಿಪ್, ಇಂಟರ್ ಮೀಡಿಯೆಟ್ ಮುಗಿಸಿದರು. ದೊರೆತ ಶಿಷ್ಯ ವೇತನ, ಮನೆ ಪಾಠ ಹೇಳಿ ತಂದೆಗೂ ಹಣ ಸಹಾಯ. ಬಿ.ಎ. ಆನರ್ಸ್ ಪಾಸು. ಹಲವಾರು ಪದಕ ಬಹುಮಾನ ಗಳಿಕೆ ಸಂತಸ. ಆದರೆ ಎಂ.ಎ. ಓದಲು ಹಣದ ಅಡಚಣೆಯಿಂದ ಬೆಂಗಳೂರಿನ ಪ್ರೆಸ್ ಒಂದರಲ್ಲಿ ಕೆಲಸ. ಎ.ಆರ್. ಕೃಷ್ಣಶಾಸ್ತ್ರಿ, ಎ.ಎನ್. ನರಸಿಂಹಯ್ಯ, ಸಿ.ಆರ್. ನರಸಿಂಹಶಾಸ್ತ್ರಿಗಳ ನೆರವಿನಿಂದ ಓದಿ ಎಂ.ಎ. ಪದವಿ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿ ರಚನೆ. ಹದಿನಾಲ್ಕನೇ ವಯಸ್ಸಿನಲ್ಲಿ ಪದ್ಯ ಬರೆದು ಸೈ ಎನ್ನಿಸಿಕೊಂಡವರು.
ಅವರ ಮೊದಲ ಕವನ ಸಂಕಲನ ಮೇಘನಾದ, ನಂತರ ಕನ್ನಡ ಗೀತ, ಅಮೃತಬಿಂದು, ಮಂಜುಗೀತ, ರಸಯಜ್ಞ ಮುಂತಾದುವು. ವಿಮರ್ಶೆ- ಬೇಂದ್ರೆ, ಹೊಸಗನ್ನಡ ಸಾಹಿತ್ಯ ಶೈಲಿ, ಕವೀಂದ್ರ ರವೀಂದ್ರ, ಕಾವ್ಯಸೂತ್ರ, ಪ್ರತಿಭೆ, ಸಂಸ್ಕೃತ ಕನ್ನಡಗಳ ಬಾಂಧವ್ಯ. ವಿನೋದ-ವಿಡಂಬನೆ-ಬೇತಾಳ ಕುಣಿತ, ಭಾಷಣ ಭೈರವರ ಒಡ್ಡೋಲಗ. ವೈಚಾರಿಕ ಕೃತಿಗಳು-ಭಾರತೀಯ ವಾಙ್ಞಯ, ಸ್ವಾತಂತ್ರ ಮೀಮಾಂಸೆ, ಮಾತೃಶ್ರೀ, ವೇದ ರಹಸ್ಯ, ನೆಹರೂ ಉವಾಚ, ರಮಣ ಮಾರ್ಗ, ಕಾಳಿದಾಸನ ಕಾವ್ಯ ಸೌರಭ ಮುಂತಾದುವಲ್ಲದೆ ಯಕ್ಷಗಾನ, ಸಂಪಾದಿತ, ನಾಟಕ, ಆತ್ಮಕಥೆ, ಇತಿಹಾಸ ಕೃತಿ ರಚನೆ. ಸಂದ ಪ್ರಶಸ್ತಿ ಗೌರವಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ತೀನಂಶ್ರೀ ಸ್ಮಾರಕ ಬಹುಮಾನ, ಮೈಸೂರು. ವಿ.ವಿ. ಸುವರ್ಣ ಮಹೋತ್ಸವ, ಮೂರು ಸಾವಿರ ಮಠ ಹುಬ್ಬಳ್ಳಿ, ಲೋಕ ಶಿಕ್ಷಣ ಟ್ರಸ್ಟ್, ಕೇಂದ್ರ ಸರಕಾರದ ರಕ್ಷಣಾ ಶಾಖೆ, ದೇವರಾಜ ಬಹದ್ದೂರ್ ಬಹುಮಾನಗಳು, ಹಲವಾರು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆ. ತಂದೆಯ ಹೆಸರನ್ನು ಶಾಶ್ವತಗೊಳಿಸುವಲ್ಲಿ ಮಗ ರಾಜಶೇಖರ ಹೆಬ್ಬಾರರು ಇತರರೊಡಗೂಡಿ ಬಿ.ಎಚ್. ಶ್ರೀಧರ ಪ್ರಶಸ್ತಿ ಸ್ಥಾಪಿಸಿ ಪ್ರತಿವರ್ಷ ಕನ್ನಡದ ಉತ್ತಮ ಕೃತಿಗೆ ಬಹುಮಾನ ನೀಡುವ ವ್ಯವಸ್ಥೆ ಮಾಡಿದ್ದಾರೆ.
‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿ ಬಿ ಎಚ್ ಶ್ರೀಧರ್ ಅವರ ಒಂದು ಕವನ ಮುದ್ರಿತವಾಗಿದೆ. ಅದನ್ನು ಆರಿಸಿ ಪ್ರಕಟ ಮಾಡಿದ್ದೇವೆ.
ನರನಾದೆನೇಕೆ?
ನರನಾದೆನೇಕೆ ಅಯ್ಯಯ್ಯೊ ನಾನು ಹರನಾಗಲಿಲ್ಲವೇಕೆ?
ಶರಶಾಪಶಕ್ತಿಗಳನಲ್ಲೆ ಬಿಟ್ಟು ನಾ ಬಂದೆ ಬಂದೆನೇಕೆ? ॥ಪಲ್ಲ॥
ನೌಕಾಲಿಯಲ್ಲಿ ಕಣ್ಣಾಲಿಯಲ್ಲಿ ಪಡಿಮೂಡಿದಳಲ ಕಂಡು
ಬೊಂಬಾಯಿಯಲ್ಲಿ ಬಡಹೃದಯ ದುಃಖಿಸುವ ಬಗೆಯ ನೋಡಿಕೊಂಡು
ಜಿನತತ್ವ ಬೆಳಗಿದೀ ಭರತಖಂಡದಲ್ಲನ್ಯ ತತ್ತ್ವ ಬಂದು
ಕೊನೆಯಿರದ ನರಕವೆಸಗಿಹುದ ತಿಳಿದು ನಾ ಬದುಕಲೇತಕೆಂದು?
ಬಿಂಗಿಯಪ್ಪೆನೇ
ಸಿಂಗಿಯಪ್ಪೆನೇ
ಆ ಹರನ ಹಣೆಯ ಹೊಸ ಹಗಿ ಆಗಿ ಭುಗ್ಗೆಂದು ನಿಲ್ಲಲೇನು?
ಈ ದುರುಳತನದ ಸುಟ್ಟೊಗೆಯುವುಲ್ಕವನು ನಭದಿ ಎತ್ತಲೇನು
ಎಂಟು ಗೇಣಿನೀ ದೇಹ ಸಾಲದೋ
ಕುಂಟು ಕೈಗಳಿವು ಬಂಟರಾಗವೋ
ಅಲ್ಪವಾಯ್ತು ನರಶಕ್ತಿಯಿಂದು ಹಾ!
ಜಲ್ಪಿಸುವರ ಬಾಯ್ಬಡಿವ ಶಕ್ತಿ ಬಾ
ತಡವೆ, ತಡವೆ, ತಡವೆ ?
ನಾ ತಡೆಯೆ, ತಡೆಯೆ, ಪಡೆಯೆ !
ಅಹಃ ಮಾನಧನರ ಅಭಿಮಾನ ಮಣಿಯ ಕಿತ್ತೆಸೆದು ತುಳಿಯುವಂಥ
ಆ ಹೀನ ಚೆಲುವ ಬಣ್ಣಿಸಲು ಬರದು ಸೈತಾನ ನಾಚುವಂಥ
ಹಸುಗೂಸು ಹಡೆದ ತಾಯಂದಿರೆಳೆದು ಮೊಲೆ ತರಿವ ಹೀನ ಬಗೆಯ
ಹಸಿ ಪುಂಡತನದ ಘೋರ ಪ್ರಕಾರಗಳ ಕೇಳೀ ಬಿಟ್ಟೆಡಗೆಯ !
ನೆತ್ತುರುರಿಯಿತೋ
ರೋಮ ನಿಮಿರಿತೋ
ಧಮನಿ ಧಮನಿಯಲಿ ಧೂಮಕೇತುಗಳು ದಾಳಿಯಿಟ್ಟ ಹಾಗೆ,
ಸಮನಿಸಿತ್ತು ಸರ್ವಾಂಗದಲ್ಲಿ ಸುಟ್ಟುರಿಯುವಂಥ ಹೇಗೆ?
ಗಗನದಗಲ ಹೊತ್ತಗೆಯು ಸಾಲದೋ
ಬರೆಯ, ನಗ್ನ ಭೂತಪ್ರಕೋಪವೋ
ಬರಿ ನರತ್ವವಿದ ನಿಲಿಸಲಾರದೋ !
ತೆರಿಯದೇಕೆ ಬಾಯ್ ತೆರೆಯು ನಿಂದುದೋ?
ಸಹಿಸೆ, ಸಹಿಸೆ, ಸಹಿಸೆ
ಹಾಯ್ ದುರ್ಮದಾಗ್ನಿ ದಹಿಸೆ !
ಯಮಲೀಲೆಯಲ್ಲ, ನರಸತ್ವ ಹೋದ ಅನ್ಯಾಯ ನಡೆಯಿತಣ್ಣ !
ಸುಮಕೋಮಲೆಯರ ಮರ್ಮಗಳ ಭೇದಿಪರ ಸುಡಿಸಬೇಕು ಕಣ್ಣ
ಮನುಜತ್ವವಿರದ ಕಲ್ಲೆದೆಯ ಕಾಳತನ ಕಂಡಿತೀಗಲೋಕ
ಮನದಲ್ಲಿ ಚಿತ್ರಿಸಲಶಕ್ಯ ಕವಿಗು ಈ ದುರ್ನಿವಾರ್ಯಶೋಕ !
ವಿಷವ ನುಂಗಲೇ
ವಿಲಯವೆಸಗಲೇ
ಕ್ಷುದ್ರನಾಗಿ ಅವತರಿಸಿ ಬಂದನಾ ರುದ್ರನಾಗಲೆಂತು?
ಅದ್ರಿಯನ್ನೆ ಪುಡಿಯೆಸಗುವಂಥ ವರ ವಜ್ರ ದೊರೆವುದೆಂತು ?
ಮಾವಿನಂಥ ಈ ಹೃದಯ ಸಾಲದೋ
ಸಾವಿಗಂಜುವೀ ಬುದ್ಧಿ ಬೇಡವೋ
ಏಳಬೇಕು ಪಾತಾಳ ಸಗ್ಗಗಳ
ಮೇಳವಿಟ್ಟ ದೀರ್ಘ ಸ್ವರೂಪದೊಳ್ !
ಏಕೆ ತಡವು ತಡವು ?
ನಿನಗಿಲ್ಲ ಆತ್ಮ ಬಿಡುವು !
(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)