‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೯) - ಎಸ್ ಡಿ ಇಂಚಲ

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೯) - ಎಸ್ ಡಿ ಇಂಚಲ

ಎಸ್.ಡಿ. ಇಂಚಲ ಎಂದೇ ಖ್ಯಾತಿಯ ಶಿವಶರಣಪ್ಪ ದೇವಪ್ಪ ಇಂಚಲ ಅವರು ಧಾರವಾಡ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದವರು. ಆದರೆ ಇವರ ತಂದೆ ದೇವಪ್ಪ ತಾಯಿ ಬಸವಂತವ್ವ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಗೆ ಬಂದು ನೆಲೆಸಿದ್ದರು. ಮುಗುಟಗಾನ ಹುಬ್ಬಳ್ಳಿಯಲ್ಲಿ ತದನಂತರ ಬೆಳಗಾವಿ ಜಿಲ್ಲೆಯ ಗಿಲಗಂಜಿಯ ಅರಟಾಳ ಪ್ರೌಢಶಾಲೆಯಲ್ಲಿ ಶಿಕ್ಷಣ ಮುಂದುವರಿಸಿದರು. ಮೆಟ್ರಿಕ್ ನಂತರ ಅವರು ಕೊಲ್ಹಾಪುರದ ರಾಜಾರಾಮ ಕಾಲೇಜು. ೧೯೩೮ ರಲ್ಲಿ ಬಿ.ಎ. ಪದವೀಧರರು. ಶಿಕ್ಷಕರಾಗಿ ವೃತ್ತಿ ಆರಂಭಿಸಿ ಬೆಳಗಾವಿ ಹಾಗೂ ಹುಬ್ಬಳ್ಳಿಯ ವಿವಿಧ ಕಾಲೇಜುಗಳ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿ, ಬೆಳಗಾವಿಯ ಜಿ.ಎ. ಜ್ಯೂನಿಯರ್‌ ಕಾಲೇಜಿನ ಪ್ರಿನ್ಸಿಪಾಲರಾಗಿ ನಿವೃತ್ತರಾದರು. 

ನಾಡುನುಡಿಗೆ ಸಂಬಂಧಿಸಿ ಬರೆದ ಕವನಗಳ ಸಂಕಲನ-ತರಂಗಿಣಿ. ಎರಡನೇ ಕವನ ಸಂಕಲನ-ಸ್ನೇಹ ಸೌರಭ. ಮೂರನೇ ಕವನ ಸಂಕಲನ-ಡಿಂಡಿಮ. ಕಿತ್ತೂರ ರಾಣಿ ಚೆನ್ನಮ್ಮ ಸ್ಮಾರಕೋತ್ಸವ ಸಮಿತಿಗಾಗಿ ಬರೆದ ಲಾವಣಿ-ಕಿತ್ತೂರು ರಾಣಿ, ಮಹಾಂತೇಶ ಮಹಿಮೆ (ಜಾನಪದ ಗೀತೆಗಳ ಸಂಕಲನ), ಡಾ.ಡಿ.ಎಸ್. ಕರ್ಕಿ ಅವರೊಡನೆ ಮಕ್ಕಳಿಗಾಗಿ ರಚಿಸಿದ ಕವನಗಳ ಸಂಕಲನ ‘ಬಣ್ಣದ ಚೆಂಡು’. ಇವರ ಅಪ್ರಕಟಿತ ಕವನಗಳ (೧೯೯೩) ಸಂಗ್ರಹ-ಭಾವಶ್ರೀ,   ‘ಕರ್ನಾಟಕ ದರ್ಶನ’ ಮತ್ತು ಸಮಗ್ರಕಾವ್ಯ ‘ಇಂಚರ’- ಇವು ಸಂಪಾದಿತ ಕವನ ಸಂಕಲನಗಳು. 

ಕ.ವಿ.ವಿ.ಸೆನೆಟ್ ಸದಸ್ಯ, ಧಾರವಾಡದ ಆಕಾಶವಾಣಿ ಕೇಂದ್ರ ಸಲಹಾ ಸಮಿತಿ ಸದಸ್ಯ, ಎಸ್.ಎಸ್.ಎಲ್.ಸಿ. ಪರೀಕ್ಷಾಮಂಡಳಿಯ ಸದಸ್ಯ, ಬೆಳಗಾವಿ ಜಿಲ್ಲಾ ಮುಖ್ಯ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 

ಪ್ರಶಸ್ತಿಗಳು: ಆದರ್ಶ ಶಿಕ್ಷಕ ರಾಜ್ಯ (೧೯೬೪)  ಪ್ರಶಸ್ತಿ ಹಾಗೂ ಆದರ್ಶ ಶಿಕ್ಷಕ (೧೯೬೬) ರಾಷ್ಟ್ರಪ್ರಶಸ್ತಿ ಲಭಿಸಿವೆ. ೦೭-೦೪-೧೯೭೪ ರಂದು ನಿಧನರಾದರು. 

ಇಂಚಲ ಇವರ ಒಂದು ಕವನ ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿ ಪ್ರಕಟವಾಗಿದೆ. ಅದನ್ನು ಆಯ್ದು ಇಲ್ಲಿ ಪ್ರಕಟಿಸಲಾಗಿದೆ. ಅಪರೂಪದ ಕವಿಯೊಬ್ಬರ ಅಪರೂಪದ ಕವನವನ್ನು ತಪ್ಪದೇ ಓದಿ.

ನವಯುಗ

ಧಾವಿಸುತಿದೆ ನವಯುಗ ಹೊಸ ಚರಣಂಗಳ ಚೆಲ್ಲಿ

ತೀವ್ರತೆ ಹೊಂಗಿರಣಗಳ ಮನದಾಂಗಣದಲ್ಲಿ !

 

ಬರುತಿದೆ ನವ ಮನ್ವಂತರ ದಾಂಪತ್ಯವ ತೋರಿ

ತರುತಿದೆ ಹೊಸ ಹೊಂಬಯಕೆಯ ಹೂದಿಂಗಳತೂರಿ !

 

ಬಾಳಿನ ಕಹಿ ಮಾಗಿಯ ಚಳಿ ಹಿಂಗಿಸಿ ಕಂಗೊಳಿಸಿ

ನಾಳಿನ ಹೊಸ ಬಾಳಿಗೆ ಸನ್ಮಂಗಳವನೆ ಬಯಸಿ

 

ಕಳೆದಿಹ ಸವಿಗನಸಿನ ನೆನಹಂಗಳ ಸಂಗ್ರಹಿಸಿ

ಮೆಲುಕಾಡಿಸಿ ಮೈಗೂಡಿಸಿ ನವರಸವನು ಸೂಸಿ !

 

ಬನಬನಗಳು ನಸುಗಂಪಿನ ತಳಿರುಡೆಯನು ಧರಿಸಿ

ಕುಸುಮಂಗಳು ತಂಗಾಳಿಗೆ ತನಿಂಗಪನು ಬೆರೆಸಿ

 

ಪ್ರಕೃತಿಯ ರಂಗಾಂಗದಿ ಶೃಂಗಾರವೇ ಮೈದಾಳಿ

ಪುರುಷನ ವ್ರತಭಂಗಕೆ ಅದೋ ಮುಂದಾಗಿದೆ ಧಾಳಿ !

 

ಮಿಂಚುತಲಿದೆ ತಾರುಣ್ಯದ ಸೌಂದರ್ಯದ ಕಾಂತಿ

ಸಂಚಯಿಸಿದೆ ನವಜೀವನ ದಾಂಪತ್ಯದ ಶಾಂತಿ !

 

ಮನಮನದಲಿ ಮಿಡಿಯುತಲಿದೆ ನವಭಾವ ಮೃದಂಗ

ತನುಮನದಲಿ ಚಿಮ್ಮುತಲಿದೆ ಅನುರಾಗದ ರಂಗ !

 

ನರ್ತಿಸುತಿದೆ ನಿರ್ಭಯಂ ಹೊಸಗಾಲದ ನವಿಲು,

ಮೇಳೈಸಿದೆ ಭೃಂಗದ ಸವಿ ಸಂಗೀತದ ಹೊನಲು

 

ವಿಹಗಂಗಳು ಪೇಳುತಲಿವೆ ಪ್ರಸ್ಥಾನದ ಗೀತಾ

ಉರುಳುತಲಿವೆ ಕಾಲನ ರಥ ಚಕ್ರಂಗಳು ನಿರುತಾ !

 

ಏರುತಲಿದೆ ಇಳಿಯುತಲಿದೆ, ದಾರಿಯು ಬಲುದೂರ

ಬಿರುಗಾಳಿಯ ನೆರೆದಾಳಿಯ ಅನುಭವಿಸುತನೂರ !

 

ಸಾಗಿದೆ ಬಾಸ್ ಸಾವಿನ ತೋಳ್ ತೊಟ್ಟಿಲದಲಿ ತೂಗಿ

ತಂಗಿದೆ ಮನ ಸ್ನೇಹದ ಘನ ತಾನಕೆ ತಲೆದೂಗಿ !

 

ಮಧುಮಾಸದ ಮಂದಹಾಸ ಸೂಸಿದೆ ಜಗಕಿಂದು

ಬೇವಿನ ಕಹಿಯಲ್ಲಿ ಸವಿಯುತ ನಿರಸವನು ತಂದು ?

 

ಮಾನವ ಲೋಕದಲಿ ಮಾಗಿ ತೊಲಗದೆ ತಾನಿಂದು ?

ಮಾನವತೆಯ ಬೆಳಗದೆ ನವಸಂಸ್ಕರಣಕೆ ಸಂದು ?

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)