‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨) - ಎಂ. ಗೋವಿಂದ ಪೈ
ಗೋವಿಂದ ಪೈ ಇವರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಎಂಬ ಊರಿನವರು. ಅವರು ಕಳೆದ ಶತಮಾನದ ಆರಂಭದಿಂದಲೂ ಪ್ರಾಸ ಬಿಟ್ಟು ಕವನ ಕಟ್ಟುವ ಹೊಸ ಹಾದಿ ಹಿಡಿದು ಬಂದ ಸಾಹಿತ್ಯಾಚಾರ್ಯರು. “ಗಿಳಿವಿಂಡು", “ಗೋಲ್ಗೋಥಾ”, “ವೈಶಾಖಿ", "ಹೆಬ್ಬೆರಳು" ಅವರ ಪ್ರಕಟಿತ ಕಾವ್ಯಕೃತಿಗಳು. ಅನೇಕ ಭಾಷೆಗಳನ್ನು ಬಲ್ಲ ಬಹುಭಾಷಾ ವಿಶಾರದರು. ಇತಿಹಾಸ ಸಂಶೋಧನಾ ಕ್ಷೇತ್ರದಲ್ಲಿಯೂ ಅವರ ಸ್ಥಾನ ಹಿರಿದು. ಅವರ ಲೇಖನಗಳು ಅನೇಕ ಸಾವಿರ ಪುಟಗಳಷ್ಟು ವಿಫುಲವಾಗಿದೆ. ೧೯೫೦ರಲ್ಲಿ ಮುಂಬಯಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ೧೯೪೭ರಿಂದ ೫೨ರವರೆಗೆ ಅವರು ಮದ್ರಾಸ್ ರಾಜ್ಯದ ಕನ್ನಡ “ರಾಷ್ಟ್ರಕವಿ" ಗಳೆಂದು ಗುರುತಿಸಲ್ಪಟ್ಟಿದ್ದರು.
ಹೊಸಗನ್ನಡ ಕಾವ್ಯಶ್ರೀ ಕೃತಿಯಲ್ಲಿ ಇವರ ಒಂದು ಕವನ ಪ್ರಕಟವಾಗಿದೆ. ಅದನ್ನು ಪ್ರಕಟಿಸಿದ್ಡೇವೆ.
ಕನ್ನಡಿಗರ ತಾಯಿ
ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯ !
ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ!
ನಮ್ಮ ತಪ್ಪನೆನಿತೊ ತಾಳ್ವೆ,
ಅಕ್ಕರೆಯಿಂದೆಮ್ಮನಾಳ್ವೆ;
ನೀನೆ ಕಣಾ ನಮ್ಮ ಬಾಳ್ವೆ,
ನಿನ್ನ ಮರೆಯಲಮ್ಮೆವು-
ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವೆಮ್ಮವು,
ಹಣ್ನ ನೀವ ಕಾಯನೀವ ಪರಿಪರಿಯ ಮರಂಗಳೊ
ಪತ್ರಮೀನ ಪುಷ್ಪಮೀನ ಲತೆಯ ತರತರಂಗಗಳೊ,
ತೆನೆಯ ಕೆನೆಯ ಗಾಳಿಯೊ,
ಖಮೃಗೋರಗಾಳಿಯೊ,
ನದಿ ನಗರ ನಗಾಳಿಯೊ!
ಇಲ್ಲಿಲ್ಲದುದುಳಿದುದೆ?-
ಜೇನು ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ?
ಬುಗರಿಯೀಯೆ ಶಬರಿ ಕಾಯೆ ರಾಮನಿಲ್ಲಿ ಬಂದನೆ?
ಕನ್ನಡ ದಳ ಕೂಡಿಸಿ ಖಳ ದಶಾಸ್ಯನಂ ಕೊಂದನೆ ?
ಪಾಂಡವರಜ್ಞಾತಮಿದ್ದ,
ವಲಲಂ ಕೀಚಕನ ಗೆದ್ದ,
ಕುರುಕುಲ ಮುಂಗದನಮೆದ್ದ
ನಾಡು ನೋಡಿದಲ್ಲವೇ?
ನಂದನಂದನನಿಲ್ಲಿಂದ ಸಂದಿಗಯ್ದನಲ್ಲವೇ?
ಶಕವಿಜೇತನಮರ ತಾತವಾಹನಾಖ್ಯನೀ ಶಕಂ
ನಿನ್ನೊಳಂದು ತೊಡಗಿ ಸಂದುವರ್ಧ ಭರತದೇಶಕಂ !
ಚಳುಕ್ಯ ರಾಷ್ಟ್ರಕೂಟರೆಲ್ಲಿ,
ಗಂಗರಾ ಕದಂಬರೆಲ್ಲಿ,
ಹೊಯ್ಸಳ ಕಳಚುರ್ಯರೆಲ್ಲಿ,
ವಿಜಯನಗರ ಭೂಪರು
ಆಳ್ದರಿಲ್ಲಿಯಲ್ಲದೆಲ್ಲಿ ತಾಯೆ ಮೇಣಲೂಪರು?
ಜೈನರಾದ ಪೂಜ್ಯರಾದ ಕೊಂಡಕುಂದವರ್ಯರ
ಮಧ್ವಯತಿಯೆ ಬಸವಪತಿಯೆ ಮುಖ್ಯಮತಾಚಾರ್ಯರ
ಶರ್ವ ಪಂಪ ರನ್ನರ,
ಲಕ್ಷ್ಮೀಪತಿ ಜನ್ನರ,
ಷಡಕ್ಷರಿ ಮುದ್ದಣ್ಣರ,
ಪುರಂದರವರೇಣ್ಯರ
ತಾಯೆ, ನಿನ್ನ ಬಸಿರೆ ಹೊನ್ನಗನಿ ವಿದ್ಯಾರಣ್ಯರ !
ಹಳೆಯಬೀಡ ಬೇಲನಾಡ ಮಾಡಮೆನಿತೊ ಸುಂದರಂ !
ಬಿಳಿಯ ಕೊಳದ ಕಾರಕಳದ ನಿಡುಕರೆನಿತೊ ಬಂಧುರಂ !
ಇನ್ನಿಲ್ಲದ ಶಿಲ್ಪಮಿಲ್ಲ;
ನಿನ್ನ ಕಲ್ಲೆ ನುಡಿವುದಲ್ಲ !
ಹಿಂಗತೆಯಿನಿವಾಲ ಸೊಲ್ಲ
ನೆಮ್ಮ ತೃಷೆಗೆ ದಕ್ಕಿಸು-
ಹೊಸತು ಕಿನ್ನರಿಯಲಿ ನಿನ್ನೆ ಹಳೆಯ ಹಾಡನುಕ್ಕಿಸು !
ಆರ್ಯರಿಲ್ಲಿ ಬಾರದಲ್ಲಿ ಬಾಸೆ ಎಲ್ಲಿ ಸಕ್ಕದು ?
ನಿನ್ನ ನುಡಿಯಿನಚ್ಚು ಪಡಿಯನಾಂತರನಿತೊ ತಕ್ಕುದಂ !
ಎನಿತೊ ಹಳೆಯ ಕಾಲದಿಂದ
ಬರ್ದಿಲಮೀ ಬಾಸೆಯಿಂದ
ಕಾಲನ ಮೂದಲಿಸಿ ನಿಂದ
ನಿನಗೆ ಮರವೆ ಹೊದೆವುದೆ?
ನಿನ್ನ ನುಡಿಗೆ ನಿನ್ನ ನಡೆಗೆ ಮುದುಪುಮೆಂದುಮೊದೆವುದೆ?
ತನ್ನ ಮರೆಯ ಕಂಪನರಿಯದನೆ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡುಕುವ !
ಕನ್ನಡ ಕಸ್ತೂರಿಯನ್ನ
ಹೊಸತುಸಿರಿಂ ತೀಡದನ್ನ
ಸುರಭಿ ಎಲ್ಲಿ? ನೀನದನ್ನ
ನವಶಕ್ತಿಯಿನೆಬ್ಬಿಸು -
ಹೊಸ ಸುಗಂಧದೊಸಗೆಯಿಂದ ಜಗದಿ ಹೆಸರ ಹಬ್ಬಿಸು !
ನಿನ್ನ ಪಡೆಯ ಕತೆಯ ಕಡೆಯ ನುಡಿಯೆ ತಾಳಿಕೋಟೆಯು ?
ಕಡಲಿನೊರತೆಗೊಳವೆ ಕೊರತೆ? ಬತ್ತದು ನಿನ್ನೊಟೆಯು !
ಸೋಲಗೆಲ್ಲವಾರಿಗಿಲ್ಲ?
ಸೋತು ನೀನೆ ಗೆದ್ದೆಯಲ್ಲ ?
ನಿನ್ನನಳಿವು ತಟ್ಟಲೊಲ್ಲ !
ತಾಳಿಕೋಟೆ ಸಾಸಿರಂ
ಬಾಹುಬಲದಿ ಮನೋಬಲದಿ ತಾಯೆ ಗೆಲುವೆ ಭಾಸುರಂ !
ಕುಗ್ಗದಂತೆ ಹಿಗ್ಗಿನಂತೆ ನಿನ್ನ ಹೆಸರ ಟೆಕ್ಕೆಯಂ,
ನೀಗದಂತೆ ಸಾಗಿಪಂತೆ ನಿನ್ನ ನುಡಿಯ ಢಕ್ಕೆಯಂ;
ನಮ್ಮೆದೆಯಂ ತಾಯೆ ಬಲಿಸು,
ಎಲ್ಲರ ಬಾಯಲ್ಲಿ ನೆಲಸು,
ನಮ್ಮ ಮನನೊಂದೆ ಕಲಸು !
ಇದನೊಂದನೆ ಕೋರುವೆ-
ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮಗೆ ತೋರುವೆ?
***
(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯ ಕೃಪೆಯಿಂದ)