‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೩೪) - ಹೇಮಂತ

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೩೪) - ಹೇಮಂತ

ಕನ್ನಡ ಮತ್ತು ಇಂಗ್ಲಿಷಿನಲ್ಲಿ ಪ್ರಸಿದ್ಧ ಬರಹಗಾರರಾದ ಹೇಮಂತ ಬಲವಂತರಾವ್ ಕುಲಕರ್ಣಿ ಅವರು ನವೆಂಬರ್ ೨೫, ೧೯೧೬ರಲ್ಲಿ ಬಿಜಾಪುರದಲ್ಲಿ ಜನಿಸಿದರು. ಅವರು ಕನ್ನಡಕ್ಕಿಂತ ಇಂಗ್ಲಿಷ್‌ನಲ್ಲಿಯೇ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ್ದವರು. ಹೇಮಂತ ಕುಲಕರ್ಣಿಯವರು ತಮ್ಮ ಪ್ರಾರಂಭಿಕ ವರ್ಷಗಳನ್ನು ಬಿಜಾಪುರ, ಹೈದರಾಬಾದ್, ಮುಂಬಯಿಗಳಲ್ಲಿ ಕಳೆದರು.ಮುಂದೆ ೧೯೬೦ರ ವೇಳೆಯಲ್ಲಿ ಅವರು ಅಮೆರಿಕದಲ್ಲಿ ನೆಲೆಸಿದರು ವಾಸ. ಇಂಗ್ಲಿಷ್ ಸಾಹಿತ್ಯದಲ್ಲಿ  ಎಂ.ಎ. ಪದವಿ ಪಡೆದಿದ್ದ ಕುಲಕರ್ಣಿಯವರು ಅಮೆರಿಕದಲ್ಲಿ ಅನೇಕ ವರ್ಷಗಳವರೆಗೆ  ಅಧ್ಯಾಪಕ ವೃತ್ತಿ  ಕೈಗೊಂಡಿದ್ದರು.

ಹೇಮಂತ ಕುಲಕರ್ಣಿಯವರು ಕನ್ನಡದಲ್ಲಿ ಬರೆದ ಮೊದಲ ಕಾದಂಬರಿ ೧೯೫೨ರಲ್ಲಿ ಪ್ರಕಟಗೊಂಡ ‘ಭಗ್ನಮಂದಿರ’.   ಅದು ಹಲವಾರು  ಮರುಮುದ್ರಣಗಳನ್ನು ಕಂಡಿದೆ.  ಕನ್ನಡದಲ್ಲಿ ಅವರ ಮೊದಲ ಕವನ ಸಂಕಲನ ‘ಸ್ನೇಹ ಸೂಕ್ತ’.  ಮುಂದೆ ೧೯೬೯ರಲ್ಲಿ ‘ಗೋಪುರ’, ೧೯೮೭ರಲ್ಲಿ   ‘ಹಿಮವೃಷ್ಟಿ’ ಕವನ ಸಂಕಲನಗಳನ್ನು ಪ್ರಕಟಿಸಿದರು. ತಪ್ಪಿದ ಹೆಜ್ಜೆ ಅವರ ಅನುವಾದಿತ ನಾಟಕ. ಕೊನರಿದ ಕೊರಡು ಅವರ ಮತ್ತೊಂದು ಕಾದಂಬರಿ.

ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ಹೇಮಂತ ಕುಲಕರ್ಣಿಯವರ  ಹಲವಾರು ಉಪನ್ಯಾಸಗಳು ವ್ಯವಸ್ಥಿತಗೊಂಡಿದ್ದವು. ಈ ಮೂಲಕ  ‘ಕಾವ್ಯದಲ್ಲಿ ನವ್ಯತೆ’ ಎಂಬ ಉಪನ್ಯಾಸ ಸರಣಿಯು  ಪ್ರಸಾರಾಂಗದಿಂದ ಪ್ರಕಟಿತಗೊಂಡಿದೆ. ಕನ್ನಡದಲ್ಲಿ ನವ್ಯತೆಯನ್ನು ಕುರಿತು ಬರೆದವರೆಲ್ಲರೂ ಇಂಗ್ಲೆಂಡ್, ಫ್ರಾನ್ಸ್, ಅಮೆರಿಕ ಕಾವ್ಯದಿಂದ ಪ್ರಭಾವಿತರಾಗಿದ್ದರೆ ಕುಲಕರ್ಣಿಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೆಕ್ಸಿಕೊ, ಚಿಲಿ, ಜಪಾನ್ ಮೊದಲಾದ ದೇಶಗಳ ಕಾವ್ಯವನ್ನು ಅಧ್ಯಯನಮಾಡಿ  ವಿವೇಚನೆ ನಡೆಸಿದವರು.

೧೯೮೪ರ ಸುಮಾರಿನಲ್ಲಿ ಭಾರತಕ್ಕೆ ಬಂದ ಹೇಮಂತ ಕುಲಕರ್ಣಿಯವರು  ‘ಸೃಜನವೇದಿ’ ಎಂಬ ನಿಯತ ಕಾಲಿಕವನ್ನು ಸಿದ್ಧಲಿಂಗ ಪಟ್ಟಣಶೆಟ್ಟಿ, ಅರವಿಂದ ನಾಡಕರ್ಣಿಯವರೊಡನೆ ಪ್ರಾರಂಭಿಸಿ ಹಲವಾರು ವರ್ಷಗಳ ಕಾಲ ಅದನ್ನು ನಡೆಸಿದರು. ಹೇಮಂತ ಕುಲಕರ್ಣಿಯವರಿಗೆ ಹಲವಾರು ಅಂತಾರಾಷ್ಟ್ರೀಯ ಮನ್ನಣೆಗಳು ಸಂದಿದ್ದವು. ಫ್ಲಾರೆನ್ಸಿನಲ್ಲಿ  ನಡೆದ ಜಾಗತಿಕ ಕವಿ ಸಮ್ಮೇಳನಕ್ಕೆ ಆಹ್ವಾನ, ಅಮೆರಿಕದ ಫ್ಲಾರಿಡಾ ಕವಿ ಸಮ್ಮೇಳನದಲ್ಲಿ ಬಹುಮಾನ, ಫ್ರೆಂಚ್ ಅಕಾಡಮಿಯಿಂದ ದೊರೆತ ಕಂಚಿನ ಪದಕ, ನ್ಯಾಷನಲ್ ಅಕಾಡಮಿ ಆಫ್ ನ್ಯೂಯಾರ್ಕ್ ಸಂಸ್ಥೆಯಿಂದ ಗೌರವ ಡಾಕ್ಟರೇಟ್, ಚೀನಾದಿಂದ ಹೋಚೌ ಸೆಂಚುರಿ ಆಫ್ ಪೊಯಟ್ಸ್ ಪ್ರಶಸ್ತಿ, ಕಾವ್ಯದ ಮೂಲಕ ಶಾಂತಿ ಸೇವೆಗಾಗಿ ಅಂತಾರಾಷ್ಟ್ರೀಯ ಪದಕ, ಉಟ್ಹಾ ವಿಶ್ವವಿದ್ಯಾಲಯದಿಂದ ‘ಮಾನವತಾವಾದಿ’ ಪ್ರಶಸ್ತಿ. ಇಂಟರ್ ನ್ಯಾಷನಲ್ ಅಕಾಡಮಿ ಆಫ್ ಪೊಯೆಟ್ಸ್ ವತಿಯಿಂದ  ಫೆಲೋಷಿಪ್ ಮುಂತಾದ ಅನೇಕ ಅಂತಾರಾಷ್ಟ್ರೀಯ ಗೌರವಗಳು ಸಂದವು. ಕವಿ ಹೇಮಂತ ಕುಲಕರ್ಣಿಯವರು ಜುಲೈ ೨೨, ೧೯೯೪ರಲ್ಲಿ ಈ ಲೋಕವನ್ನಗಲಿದರು. 

ಹೇಮಂತ ಇವರ ಒಂದು ನೀಳ ಕವನ ‘ಹೊಸಗನ್ನಡ ಕಾವ್ಯಶ್ರೀ’ ಯಲ್ಲಿದೆ. ಇದನ್ನು ಆರಿಸಿ ಪ್ರಕಟ ಮಾಡಲಾಗಿದೆ.

ವಸುಂಧರಾ ಗೀತ

ಪ್ರೀತಿ ಮತ್ತ ಸಾಗರಾ,

ಬಾರೋ ಭವ್ಯ ಸುಂದರಾ

ಕರೆವೆನಾ ವಸುಂದರಾ !

ನಿನ್ನಡಿಗಳಲಿಂದು ನಾನು ಹುಡಿಯೆನಿಸುತ ಕೆಡದಿಹೆ

ಬಾಳೆಲ್ಲವು ಕಲ್ಲಾಯಿತು ಉದ್ಧಾರಕೆ ತಪಮಿಹೆ

ಉಕ್ಕಿಬಾರೊ ಎಲ್ಲೆಡೆಯಲಿ

ಸೊಕ್ಕಿಬಾರೊ ನನ್ನೆಡೆಯಲಿ

ಉಳಿಯಿತೊಂದೆ ಮನ್ಮಾನಸಕುವಲಯದಲಿ ಆಸೆಯು

ನೀನೊರ್ವನೆ ಮನದನ್ನನೆ ಇಂಗಿಸುವ ಪಿಪಾಸೆಯು

 

ಪ್ರೀತಿಮತ್ತ ಸಾಗರಾ,

ಬಾರೋ ಭವ್ಯಸುಂದರಾ

ಕರೆವೆನಾ ವಸುಂದರಾ !

ನನ್ನೆದೆಯಲಿ ಮಾಗಿದಂಥ ಹಾಲೊಲವಿನ ಸೆಲೆಗಳು

ತಾರುಣ್ಯದ ಕಾಮೋದ್ಭವ ಆಮೋದದ ತೊರೆಗಳು

ಕಲ್ಲೊಡೆಯುತ ಸಿಡಿದೆದ್ದವು

ಗಿರಿಯಿಳಿಯುತ ಅಲೆಯದೆದವು

ಹಾತೊರೆಯುತ ತೆರೆತೆರೆಯಲಿ ನಿನ್ನನ್ನೇ ಕರೆದವು

ಎಲ್ಲೆಲ್ಲೋ ಸುತ್ತಿಳಿದರು ನಿನ್ನಲ್ಲೇ ಬೆರೆದವು !

 

ಪ್ರೀತಿಮತ್ತ ಸಾಗರಾ

ಬಾರೋ ಭವ್ಯಸುಂದರಾ

ಕರೆವೆನಾ ವಸುಂದರಾ !

ಏಕೊ ಏನೊ ಮರೆತಿದ್ದೆನು ನಿನ್ನ ನಾನು ಬಹುದಿನ 

ನೀನು ಮಾತ್ರ ಯೋಚಿಸಿರುವೆ ನನ್ನೊಲುಮೆಯನನುದಿನ

ಬೆಳ್ನೊರೆಯಲಿ ಕುಸುಮವ್ರಾತ

ತೆರೆತೆರೆಯಲಿ ಭೃಂಗಗೀತ

ಮೆರೆಯ ನೀನು ಮೇಘನೀಲ, ಕಾಡಿಬೇಡಿ ಹಾಡಿಯೇ

ಮಾರುಲಿಯದ ನನ್ನ ನೋಡಿ ಬೇಗುದಿಯನು ಕಳೆದಿಹೆ !

 

ಪ್ರೀತಿ ಮತ್ತ ಸಾಗರಾ

ಬಾರೋ ಭವ್ಯಸುಂದರಾ

ಕರೆವೆನಾ ವಸುಂದರಾ !

ಮರ್ತ್ಯಲೋಕದಲ್ಲಿ ಜನಿಸಿದವಳು ನಾನು ಮುಗ್ಧಳು 

ದಿವ್ಯಲೋಕ ಸ್ವಪ್ನಸುಖಕೆ ಸೋತೆವೆನ್ನ ಕಂಗಳು

ರವಿಯತೇಜ ಕಂಡುಮರಳು

ಶಶಿಯ ಶಾಂತಿಯುಂಡ ಕರುಳು

ಹಗಲೆನ್ನದೆ ಇರುಳೆನ್ನದೆ ಮನೆಬಯಲುಗಳೆನ್ನದೆ

ಮುಗಿಯದಿರುವ ಮುಗಿಲ ದಾರಿಯಲ್ಲಿ ನಾನು ಸುತ್ತಿದೆ.

 

ಪ್ರೀತಿ ಮತ್ತ ಸಾಗರಾ

ಬಾರೋ ಭವ್ಯಸುಂದರಾ

ಕರೆವೆನಾ ವಸುಂದರಾ !

ಮುಗಿಲ ಮೊಲ್ಲೆಯಘ್ರಾಣಕೆ ತಲೆಯನ್ನದು ತಿರುಗಿ

ಸ್ವಪ್ನಜೀವಿಯಂಥ ಜೀವಿಯಂತೆ ನಾನು ಮರುಗಿದೆ

ಹುಸಿಗನಸಿನ ಆಹ್ವಾನಕೆ

ಕಲ್ಪನೆಗಳ ಆವಾಸನೆ

ಬಿಸಿಲುಗುದುರೆಯೇರಿ ಹೊರಟೆ ಬಯಕೆಯುರಿಗೆ ಬೆಂದೆನು

ಬಂಜವಟವ ಸುತ್ತುವಂತೆ ಬಯಲ ಸುತ್ತಿ ನೊಂದೆನು.

 

ಪ್ರೀತಿ ಮತ್ತ ಸಾಗರಾ

ಬಾರೋ ಭವ್ಯಸುಂದರಾ

ಕರೆವೆನಾ ವಸುಂದರಾ !

ತಪೋಭೂಮಿ ಹರನಿಗಾನು ಶ್ಯಾಮನ ವೃಂದಾವನ

ಅಮರಾಂಗನೆಯರಿಗೆ ನಾನು ರತಿವಿಲಾಸದುಪವನ

ನನ್ನ ಗಿರಿಯ ಗಹ್ವರದಲಿ

ಹರಿದ ಹಳ್ಳ ಹೊಳೆಯಲ್ಲಿ

ದೇವತೆಗಳ ಚಿರನಿವಾಸವೆಂದು ನಾನು ಸೊಕ್ಕಿದೆ

ಪ್ರೀತಿಯನ್ನು ಬೇಡಿದವಳು ಕೀರ್ತಿಯನ್ನು ಹೊಂದಿದೆ.

('ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)