‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೩೫) - ಸಿದ್ದಣ್ಣ ಮಸಳಿ

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೩೫) - ಸಿದ್ದಣ್ಣ ಮಸಳಿ

ಸಿದ್ದಣ್ಣ ಮಸಳಿ ೧೯೨೭ರ ಏಪ್ರಿಲ್ ೬ರಂದು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಮಸಳಿಯಲ್ಲಿ ಜನಿಸಿದರು.  ತಂದೆ ಗಿರಿಮಲ್ಲಪ್ಪ. ತಾಯಿ ತಂಗೆಮ್ಮ. ಹಿರೇಮಸಳಿಯಲ್ಲಿ ಪ್ರಾಥಮಿಕ ಶಿಕ್ಷಣ, ವಿಜಯಪುರದಲ್ಲಿ ಮಾಧ್ಯಮಿಕ ಶಿಕ್ಷಣ,  ಬಿ.ಎ.ಪದವಿ, ಬಿ.ಎಡ್. ಪದವಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿಗಳನ್ನು ಗಳಿಸಿದರು. ೧೯೫೩ರ ಜೂನ್ ೨೫ರಂದು ಪ್ರಭಾವತಿಯವರೊಂದಿಗೆ ಅವರ ವಿವಾಹವಾಯಿತು.

ಸಿದ್ದಣ್ಣ ಮಸಳಿ ೧೯೫೨-೧೯೬೫ರ ಅವಧಿಯಲ್ಲಿ ಕೆಎಲ್‌ಇ ಸಂಸ್ಥೆಯ ಆರ್. ಎಲ್. ಎಸ್. ಹೈಸ್ಕೂಲ್‌ನಲ್ಲಿ ಸಹಶಿಕ್ಷಕರಾಗಿ, ೧೯೬೫-೭೧ರ ಅವಧಿಯಲ್ಲಿ ಚಿಕ್ಕೋಡಿ ತಾಲೂಕಿನ ಗಳಗತಿಯ ಪಿ. ಆರ್.ಚಿಕ್ಕೋಡಿ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯರಾಗಿ,  ೧೯೭೧-೮೦ರ ಅವಧಿಯಲ್ಲಿ ಕೆಎಲ್‌ಇ ಎಸ್.ಕೆ. ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ, ೧೯೮೦-೮೨ರ ಅವಧಿಯಲ್ಲಿ ಬೆಳಗಾವಿಯ ಕೆಎಲ್‌ಇ ಜಿ.ಎ.ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.

ಸಿದ್ದಣ್ಣ ಮಸಳಿ ಅವರು ೧೯೮೨-೨೦೦೦ರ ಅವಧಿಯಲ್ಲಿ ಬೆಳಗಾವಿಯ ‘ಕನ್ನಡಮ್ಮ’ ದಿನಪತ್ರಿಕೆಯಲ್ಲಿ ಸಹಸಂಪಾದಕರಾಗಿಯೂ ಸೇವೆ ಸಲ್ಲಿಸಿದರು. ಸಿದ್ದಣ ಮಸಳಿ ಅವರು ೧೯೫೪ರಲ್ಲಿ ‘ಮನೆತುಂಬಿದ ಬೆಳಕು’, ೧೯೬೧ರಲ್ಲಿ ದೀಪಾವತಾರ, ೨೦೦೩ರಲ್ಲಿ ಪಂಜರದ ಪಕ್ಷಿ ಕಾವ್ಯ ಸಂಕಲನ ಪ್ರಕಟಿಸಿದರು. ಸಂಚಾರಿ ಅಪ್ರಕಟಿತ ಕೃತಿ. ಇದಲ್ಲದೆ ರೇಡಿಯೋ ನಾಟಕಗಳು, ವಿವಿಧ ಪತ್ರಿಕೆಗಳಲ್ಲಿ ಕಥೆಗಳು, ವಿಮರ್ಶಾ ಲೇಖನಗಳು, ಬಸವರಾಜ ಕಟ್ಟಿಮನಿ ಬದುಕು ಬರೆಹ ಹಾಗೂ ಸಂಪಾದಿತ ಕೃತಿಯಾದ 'ಕವಿ ಗಂಗಾವತಿಯವರ ಚೈತ್ರ ಪಕ್ಷಿ' ಕೃತಿಗಳನ್ನು ಪ್ರಕಟಿಸಿದ್ದರು.

ಸಿದ್ದಣ್ಣ ಮಸಳಿ ಅವರಿಗೆ ೧೯೫೮ರಲ್ಲಿ ಮನೆತುಂಬಿದ ಬೆಳಕು ಕಾವ್ಯ ಕೃತಿಗೆ ಮೈಸೂರು ಸರ್ಕಾರದಿಂದ ಒಂದು ಸಾವಿರ  ರೂಪಾಯಿಗಳ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೬೨ರಲ್ಲಿ ದೀಪಾವತಾರ ಕಾವ್ಯಕೃತಿಗೆ ಆಕಾಶವಾಣಿ ಕೇಂದ್ರದಿಂದ ಮನ್ನಣೆ, ದೆಹಲಿಯಲ್ಲಿ ನಡೆದ ಸರ್ವ ಭಾಷಾ ಕವಿಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಆಹ್ವಾನ, ಪ್ರತಿಷ್ಠಿತ ಕೆಎಲ್‌ಇ ಸಂಸ್ಥೆಯಿಂದ ಗೌರವ ಮುಂತಾದ ಅನೇಕ ಗೌರವಗಳು ಸಂದಿದ್ದವು. ಸಿದ್ದಣ್ಣ ಮಸಳಿ ೨೦೧೭ರ ಜನವರಿ ೪ರಂದು ಈ ಲೋಕವನ್ನಗಲಿದರು.

ಹೊಸಗನ್ನಡ ಕಾವ್ಯಶ್ರೀ ಕೃತಿಯಲ್ಲಿ ಸಿದ್ದಣ್ಣ ಮಸಳಿ ಅವರ ಒಂದು ಕವನ ಪ್ರಕಟವಾಗಿದೆ. ಅದನ್ನು ಆರಿಸಿ ಪ್ರಕಟ ಮಾಡಿದ್ದೇವೆ.

ಢಣ್... ಢಣಾ ... ಢಣ್ …

೧.

ಢಣ್... ಢಣಾ ... ಢಣ್ …

ಗಡಿಯಾರದಲಿ ಗಂಟೆ ಹೊಡೆಯುತಿದೆ ಎಂಟು

ನನಗು ಅದಕೂ ಇಹುದು ನಿತ್ಯಗಂಟು ;

ದೇಹದಲಿ ಆಲಸಿಕೆ

ಮನಸಿನಲಿ ಬೇಸರಿಕೆ

ಕಣ್ಣಿನಲಿ ತೂಗುತಿದೆ ಇನ್ನೂನು ತೂಕಡಿಕೆ

ಏಳಲಾರದ ಮನಸು

ಹಾಸಿಗೆಯ ಮನಸು

ಹಾಸಿಗೆಯ ಬಿಟ್ಟು -

ಪಾಪ ! ಸೆರೆಮನೆಯಲಳುತಿದೆ ಕೂಸು

ಕಿಟಕಿಟಯ ಕೊಟ್ಟು -!

೨.

ಎದ್ದು ಹಾಸಿಗೆ ಮಡಿಸಿ

ಕಸಗುಡಿಸಿ

ಕನ್ನಡಿಗೆ ಎದುರಾಗಿ ನಿಂತು ತಲೆಗೂದಲಲಿ

ಬೆರಳಿರಿಸಿ-

ನನ್ನ ನಾನೇ ಕಂಡು

ಹೂ ನಗೆಯ ಸವಿಯುಂಡು- ಅಂತೆ ನಿಂತೆ

ಎದೆಯ ಆಗಸದಲ್ಲಿ

ಮುಗಿಲು ಮುಗಿಲಿಗೆ ತಾಕಿ ಗಗನವೇ ಹರಿವಂತೆ

ಹೊಳೆಯಿತದೊ ಕೋಲ್ -ಮಿಂಚು !

ಇದ್ದುರಿರುವಂತೆಯೇ -

ನಿಂತ ನೆಲ, ಮೇಜು ಕುರ್ಚಿ ಟಿಪಾಯಿ ಸೆಲ್ರು

ಅಟ್ಟಹಾಸದ ಕುಣಿತ !

ಮೈ ಕೈಯ ಕುಣಿತ.

೩.

ಕತ್ತಲೆಯ ಕೋಣೆಯಲಿ

ಮೂಕವಾಗಿಯೆ ಯಾರೊ ಮೇಲ್ವಾಯ್ದು ಬಿದ್ದಂತೆ

ಬಡಸಿಕೊಳ್ಳುವ ಮುನ್ನ ಯಾರಿಲ್ಲವೆಂಬಂತೆ

ಮನಕೆ ಕವಿಯಿತು ಮಂಕು

ಅಣಕು ಮಿಣುಕು,

ಹೊರಳಿ ನೋಡಿದೆ ಮತ್ತೆ ಕೋಣೆತುಂಬ

ಹರಿದು ಹೋಯಿತು ಸುತ್ತು ಕಣ್ಣ ಬಿಂಬ

ಹ್ಯಾಂಗರಿಗೆ ತೂಗುತಿವೆ ಕೋಟು ಪ್ಯಾಂಟು

ಇತ್ತ ಒಂದೆರಡು ಶರ್ಟು

ಮೇಜು ಶೆಲ್ಫು ಕಪಾಟಿನಲಿ ಪುಸ್ತಕದ ರಾಶಿ

ಸೌಭಾಗ್ಯದಾ ನನ್ನ ಜೀವಕಾಶಿ

ಸರ್ವಸ್ವಕೂ ನನಗೆ ಇದುವೆ ಆಸ್ತಿ

ಮತ್ತೆ ತಲೆಯೊಳಿದೆ ಈ-ಇದಕು ಜಾಸ್ತಿ.

ಏನಿದೆ ಈ ಹೃದಯ ಸಮ

ಉಳಿದೆಲ್ಲವು ಬಿಸಿಲ ಹಿಮ

ಕರೆಯುತಿದೆ ಕರ್ತವ್ಯ ಕೈಯ ಬೀಸಿ

ಉಸಿರು ಉಸಿರಿಗು ತನ್ನ ನೆನಪು ಸೂಸಿ

ದಾರಿಯುದ್ದಕು-ಬರಿಯ ಧೂಳೆ ಧೂಳು

ಬಸ್ಸು ಬಂದರೆ ಬಟ್ಟೆ -ಎಲ್ಲ ಹಾಳು !

೫. 

ಢಣ್... ಢಣಾ ... ಢಣ್ …

ಸಿಪಾಯಿ ಹೊಡೆದನೊ ಗಂಟೆ

ನಿತ್ಯದಂತೆ

ಇದೆ ನೋಡು ಹಾಯ್ -ಸ್ಕೂಲು

ನಾ ಮೇಸ್ಟ್ರು

ತಾಸು ತಾಸಿಗು ಗಂಟೆ ಹೊಡೆದವರಂತೆ

ಅದಕಾದರೂನು ಬಿಡುವಿಲ್ಲವಂತೆ !

ಉಳಿದವರ ಜೊತೆಗೂಡಿ

ಗಾಣದೆತ್ತಿನ ಜೋಡಿ

ಕ್ಲಾಸು ಕ್ಲಾಸಿಗು ಸುತ್ತಿ ಹೋಗಬೇಕು

ಆ ವಿಷಯ ಈ ವಿಷಯ ಯಾವುದಾದರೂ ಏನು?

ಬರುತಿರಲಿ ಬರದಿರಲಿ ಕಲಿಸಬೇಕು.

ಕಲಿಸದಿದ್ದರೆ ಹೇಗೆ ಸಾಗಬೇಕು !

೬. 

ಇರುವ ಶಕ್ತಿಯನೆಲ್ಲ ಹಿಡಿದು ನಿಲಿಸು

ಹುಡುಗರೊಡಗೂಡುತಲಿ ಮತ್ತೆ ಬೆರೆಸು

“ತಿನಬೇಕು ಹಾಕಿದಷ್ಟು

ಹೊರಬೇಕು ಹೇರಿದಷ್ಟು"

ಎನ್ನುವದೆ ಈ ಬಾಳ ಹಾಳಾದ ನೀತಿ

ಹೊಲಸು ಪಿಶಾಚಿ.

***

ಸಿಪಾಯಿ ಹೊಡೆದನೊ ನಿಂತಿ ಕೊನೆಯ ಗಂಟೆ

ದೇವರಂತೆ !

ಢಣ್ ... ಢಣಾ ... ಢಣ್ …

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆರಿಸಿದ ಕವನ)