‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೩೭) - ಕೆ ಎಸ್ ನರಸಿಂಹಸ್ವಾಮಿ
‘ಮೈಸೂರ ಮಲ್ಲಿಗೆ’ಯ ಕವಿಯೆಂದು ಪ್ರಖ್ಯಾತರಾಗಿ ಮನೆಮಾತಾದ ಕೆ.ಎಸ್. ನರಸಿಂಹಸ್ವಾಮಿ ಅವರು (ಕಿಕ್ಕೇರಿ ಸುಬ್ಬರಾಯ ನರಸಿಂಹಸ್ವಾಮಿ) ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ೧೯೧೫ರ ಜನವರಿ ೨೬ರಂದು ಜನಿಸಿದರು. ತಂದೆ ಸುಬ್ಬರಾಯ, ತಾಯಿ ನಾಗಮ್ಮ. ಮೈಸೂರಿನ ಮಹಾರಾಜ ಹೈಸ್ಕೂಲು, ಇಂಟರ್ ಮೀಡಿಯೇಟ್ ಕಾಲೇಜ್ ಮತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜುಗಳಲ್ಲಿ ಓದಿದ ಅವರು ಆರ್ಥಿಕ ತೊಂದರೆಗಳಿಂದ ಡಿಗ್ರಿ ವ್ಯಾಸಂಗವನ್ನು ಪೂರ್ಣ ಮಾಡಲಾಗಲಿಲ್ಲ. ೨೨ನೇ ವಯಸ್ಸಿನಲ್ಲಿ ಗುಮಾಸ್ತೆ ಹುದ್ದೆಗೆ ಸೇರಿದ್ದರು. ಆ ವೇಳೆಗೆ ತಿಪಟೂರಿನ ವೆಂಕಮ್ಮನವರೊಂದಿಗೆ ವಿವಾಹವಾಗಿತ್ತು. ತಮ್ಮ ವೃತ್ತಿಜೀವನದ ಕಾಲದಲ್ಲಿ ಮೈಸೂರು, ನಂಜನಗೂಡು, ಬೆಂಗಳೂರುಗಳಲ್ಲಿ ಬೇರೆ ಬೇರೆ ಇಲಾಖೆಗಳಲ್ಲಿ ಸರಕಾರಿ ನೌಕರರಾಗಿ ದುಡಿದು ೧೯೭೦ರ ಜನವರಿ ೨೬ರಂದು ನಿವೃತ್ತರಾಗಿದ್ದರು.
ಮೈಸೂರ ಮಲ್ಲಿಗೆ (೧೯೪೨) ಪ್ರಕಟವಾದಾಗಿನಿಂದ ೨೫ಕ್ಕೂ ಹೆಚ್ಚು ಮುದ್ರಣ ಕಂಡಿದೆ. ಅನಂತರ ಹತ್ತಾರು ಕವನ ಸಂಕಲನಗಳ ಮೂಲಕ ನವೋದಯ ಮತ್ತು ನವ್ಯಕವಿತೆಗಳನ್ನು ತಮ್ಮದೇ ಆದ ಛಾಪಿನಲ್ಲಿ ಕನ್ನಡಕ್ಕೆ ಕೊಟ್ಟಿದ್ದಾರೆ. ಕೆ.ಎಸ್.ನ ಅವರ ಮೈಸೂರ ಮಲ್ಲಿಗೆ ಕೃತಿಗೆ ದೇವರಾಜ ಬಹಾದ್ದೂರ್ ಬಹುಮಾನ (೧೯೪೩), ಮೈಸೂರು ರಾಜ್ಯದ ಸಂಸ್ಕೃತಿ ಪ್ರಸಾರ ಇಲಾಖೆಯ ಬಹುಮಾನ (೧೯೫೭), ತೆರೆದ ಬಾಗಿಲು ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೭೭), ‘ದುಂಡು ಮಲ್ಲಿಗೆ’ ಕವನ ಸಂಕಲನಕ್ಕೆ ಪ್ರತಿಷ್ಠಿತ ಪಂಪ ಪ್ರಶಸ್ತಿ (೧೯೬೬), ಕೇರಳದ ಕವಿ ಕುಮಾರನ್ ಆಶಾನ್ ಪ್ರಶಸ್ತಿ (೧೯೮೭) ದೊರೆತಿದ್ದವು. ಬೆಂಗಳೂರು ವಿಶ್ವವಿದ್ಯಾಲಯವು ೧೯೯೨ರಲ್ಲಿ ಇವರಿಗೆ ಗೌರವ ಡಾಕ್ಟರೇಟ್, ೧೯೯೬ರಲ್ಲಿ ಮಾಸ್ತಿ ಸಾಹಿತ್ಯ ಪ್ರಶಸ್ತಿ ಸಂದಿದ್ದವು. ಮೈಸೂರಿನಲ್ಲಿ ನಡೆದ ೬೦ನೇ ಕನ್ನಡ ಸಾಹಿತ್ಯ ಸಮ್ಮೇಳನ (೧೯೯೨) ಅಧ್ಯಕ್ಷರಾಗಿದ್ದರು. ಕೆ.ಎಸ್. ನರಸಿಂಹಸ್ವಾಮಿ ಅವರು ೨೦೦೩ರ ಡಿಸೆಂಬರ್ ೨೮ರಂದು ಬೆಂಗಳೂರಿನಲ್ಲಿ ನಿಧನರಾದರು.
ಕೆ ಎಸ್ ನ ಇವರ ಕವನ ಸಂಕಲನಗಳು: ಮೈಸೂರ ಮಲ್ಲಿಗೆ, ದೀಪದಮಲ್ಲಿ (೧೯೪೭), ಉಂಗುರ (೧೯೪೯), ಇರುವಂತಿಗೆ (೧೯೫೨), ಮನೆಯಿಂದ ಮನೆಗೆ (೧೯೬೦), ತೆರೆದ ಬಾಗಿಲು (೧೯೭೭), ದುಂಡು ಮಲ್ಲಿಗೆ (೧೯೯೩), ನೆಲದನಿ (೧೯೯೯), ಸಂಜೆಹಾಡು (೨೦೦೦)
ಗದ್ಯಕೃತಿಗಳು : ಮಾದರಿಯ ಕಲ್ಲು (೧೯೪೨), ಉಪವನ (೧೯೫೮), ದಮಯಂತಿ (೧೯೭೦). ಇಂಗ್ಲಿಷಿನಿಂದ ಅನುವಾದಗಳು : ಯೂರಿಪಿಡೀಸಿನ ಮೀಡಿಯಾ (೧೯೬೬), ಸುಬ್ರಹ್ಮಣ್ಯ ಭಾರತಿ (೧೯೭೧), ಮಾಯಾಶಂಖ ಮತ್ತು ಇತರ ಕಥೆಗಳು (೧೯೭೨), ರಾಣಿಯ ಗಿಳಿ ಮತ್ತು ರಾಜನ ಮಂಗ (೧೯೭೨), ಹಕಲ್‍ಬರಿಫಿನ್ನನ ಸಾಹಸಗಳು (೧೯೬೯) ಇತ್ಯಾದಿ.
ಕೆ ಎಸ್ ನರಸಿಂಹಸ್ವಾಮಿ ಅವರ ಒಂದು ಕವನ ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿ ಪ್ರಕಟವಾಗಿದೆ. ಅದನ್ನು ಆರಿಸಿ ಪ್ರಕಟಿಸಲಾಗಿದೆ.
ಅನ್ನಪೂರ್ಣೆಗೆ
ಅನ್ನಪೂರ್ಣೆ, ಅನ್ನಪೂರ್ಣೆ
ತಾಯೇ, ಬಾ, ತಾಯೇ!
ಚಂದ್ರವರ್ಣೆ, ಸುಧಾಪೂರ್ಣೆ
ಬಾ ತಾಯೆ, ತಾಯೆ !
ಆ ದೇವರು, ಈ ದೇವರು
ಉಳಿವರೆ ಈಗಿಲ್ಲಿ?
ಇಂದೆಲ್ಲರು ಕೈಮುಗಿವರು
ನಿನಗೊಬ್ಬಳಿಗಿಲ್ಲಿ.
ಕತ್ತಲೆಯಲಿ ಬತ್ತಲೆಯಲಿ
ತಲೆಗೆದರಿದೆ ಬದುಕು ;
ಕಣ್ಣೆಲ್ಲೋ ಎತ್ತರದಲಿ ;
ತುಟ ದುಃಖದ ಬಿರುಕು .
ಗಂಡಿಲ್ಲವೆ? ಇಹುದಿಹುದು,
ಹೆಣ್ಣಿಗೆ ಗಂಡಾಗಿ ;
ಹೆಣ್ಣಿಲ್ಲವೆ? ಇಹುದಿಹುದು,
ಬೆಳ್ಳಗೆ ಬೆಂಡಾಗಿ.
ಪೇರೊಕ್ಕಲು ! ಈ ಮಕ್ಕಳು
ಬಡವರ ಮೈಸಾಲ
ನೆಲದೇದೆಯೆ ಉಸ್ಸೆನುವಳು;
ಕಂಗೆಟ್ಟಿತು ಕಾಲ.
ಹನಿಯಿಲ್ಲದ ಪಾಳ್ಮುಗಿಲಿನ
ಸುಡುಗಾಡದು ಬಾನು.
ನೀರಿಂಗಿದೆ ಕೆರೆಯಂಗಳ,
ಉಸಿರಿಲ್ಲದ ‘ನಾನು' !
ನಿಡುಸುಯ್ಲಿನ ಗುಡಿಗೋಪುರ,
ಕಂಬನಿಯಭಿಷೇಕ,
ಬೆಂದೊಡಲಿನ ಆರ್ತಸ್ವರ-
ಬಳು-ಸಾವು ಏಕ.
ತುಟಿ-ತುತ್ತಿನ ಅಂತರದಲಿ
ಹೆಡೆಯೆತ್ತಿದೆ ಹಾವು ;
ಇಂಪೊಗೆಯುವ ಸವಿಗೊರಲಲಿ
ಕುಡಿಯೊಡೆದಿದೆ ನೋವು.
ಬೆಳ್ದಿಂಗಳ ಸುರಿಮಳೆಯಲಿ
ಮೊಗವನು ಮೇಲೆತ್ತಿ,
ಕಾಮಾಕ್ಷಿಯ ಚೆಂದುಟಿಯಲಿ
ಸುಖ ಮುದ್ರೆಯನೊತ್ತಿ
ಆನಂದದ ಸಂಭ್ರಮದಲಿ
ನಿನ್ನೊಬ್ಬಳ ಮರೆತು ;
ಸೌಂದರ್ಯದ ಉತ್ಸವದಲಿ
ಒಳದೇವರ ತೊರೆದು ;
ಹಿರಿದಾಯಿತು ನೋಟದ ಗುರಿ,
ಕಿರಿದಾಯಿತು ಕಣ್ಣು.
ಬರಿದಾಯಿತು ಹಾಡಿನ ಸಿರಿ,
ರಸವಿಲ್ಲದ ಹಣ್ಣು.
ಧೃತಿಗೆಟ್ಟೆನು ಇದೊ ! ಮನ್ನಿಸು,
ಕರುಣಿಸು ಕಣ್ತೆರೆದು
ನಿನ್ನೊಲುಮೆಗೆ ಕಾದಿರುವೆನು,
ಹೊಸದನಿಯನು ಕರೆದು.
ನೀನಿಲ್ಲದ ಮನೆಮನೆಯಲಿ
ಏನಿದ್ದೂ ವ್ಯರ್ಥ.
ಹಸಿದೊಡಲಿನ ಕಗ್ಗವಿಯಲಿ
ಹಾಡೆಲ್ಲ ಅನರ್ಥ.
ಅನ್ನಪೂರ್ಣೆ, ಅನ್ನಪೂರ್ಣೆ
ತಾಯೇ, ಬಾ, ತಾಯೇ!
ಚಂದ್ರವರ್ಣೆ, ಸುಧಾಪೂರ್ಣೆ
ಬಾ ತಾಯೆ, ತಾಯೆ !
(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)