‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೩೯) - ಈಶ್ವರ ಸಣಕಲ್ಲ

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೩೯) - ಈಶ್ವರ ಸಣಕಲ್ಲ

ಜಗವೆಲ್ಲಾ ನಗುತಿರಲಿ; ಜಗದಳವು ನನಗಿರಲಿ’ ಎಂಬ ಕವನದ ಸಾಲುಗಳ ಕವಿ ಈಶ್ವರ ಸಣಕಲ್ಲ ಅವರು ಜನಿಸಿದ್ದು ೧೯೦೬ ಡಿಸೆಂಬರ್ ೨೦ರಂದು. ಹುಟ್ಟೂರು ಬೆಳಗಾವಿ ಜಿಲ್ಲೆಯಗೋಕಾಕ್‌ ತಾಲ್ಲೂಕಿನ ಯಾದವಾಡ. ಅಧ್ಯಾಪಕರಾಗಿ, ಸಂಶೋಧನಾ ಸಹಾಯಕರಾಗಿ ಸೇವೆ ಸಲ್ಲಿಸಿರುವ ಬಾಲ್ಯದಿಂದಲೇ ಸಾಹಿತ್ಯಾಸಕ್ತಿ ಇದ್ದ ಸಣಕಲ್ಲ ಅವರು ಬರೆದಿರುವ ಕೃತಿಗಳೆಂದರೆ ಕೋರಿಕೆ, ಹುಲ್ಕಲ್ಗೆಕಿಡಿ(ಕವನ ಸಂಕಲನ), ಬಟ್ಟೆ (ಕಥಾ ಸಂಕಲನ), ಸಂಸಾರ ಸಮರ (ಕಾದಂಬರಿ), ಗ್ರಾಮೋದ್ಧಾರ (ಅನುವಾದಿತ ಕೃತಿ). 

ಸಹಕಾರ ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡಿರುವ ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸಂದಿದೆ. ಇವರ ‘ಬಟ್ಟೆ’ ಸಂಕಲನಕ್ಕೆ ರಾಜ್ಯ ಸರಕಾರದ ಪ್ರಥಮ ಬಹುಮಾನ ಸಂದಿದೆ. ೧೯೮೦ರಲ್ಲಿ ಬೆಳಗಾವಿಯಲ್ಲಿ ನಡೆದ ೫೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷರಾಗಿದ್ದರು. ಇವರು ಡಿಸೆಂಬರ್ ೩, ೧೯೮೪ರಲ್ಲಿ ನಮ್ಮನ್ನು ಅಗಲಿದರು.

ಈಶ್ವರ ಸಣಕಲ್ಲ ಅವರ ಒಂದು ಕವನ ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿದೆ. ಅದನ್ನು ಆರಿಸಿ ನಿಮ್ಮ ಓದಿಗಾಗಿ ಪ್ರಕಟ ಮಾಡಿದ್ದೇವೆ.

ಕೋರಿಕೆ

೧. 

ಜಗವೆಲ್ಲ ನಗುತಿರಲಿ !

ಜಗದಳವು ನನಗಿರಲಿ !

ನಾನಳಲು, ಜಗವನೆತ್ತಿಕೊಳದೇ ?

ನಾ ನಕ್ಕು, ಜಗವಳಲು, ನೋಡಬಹುದೇ?

೨.

ತೆರವಾಗಿ ನನ್ನೆದೆಯು,

ಧರೆಯೆದೆಯು ಉಕ್ಕಿರಲಿ

ಧರೆಯೊಳಗೆ ತೇಲಿಸುವೆನೆನ್ನದೆಯನು !

ಧರೆ ಒತ್ತಿ, ಎನ್ನೆದೆಯು ಉಕ್ಕಲೇನು?

೩.

ಪೊಡವಿಯೈಸಿರಿವಡೆದು

ಬಡತನವು ನನಗಿರಲಿ !

ಕೈಯೊಡ್ಡೆ, ಪೊಡವಿಯೆನಗಿಕ್ಕದೇನು?

ಪೊಡವಿಯೇ ಮೈಯಳಿಯೆ, ಮಾಡಲೇನು?

೪.

ವಿಶ್ವವನು ತುಂಬಿರುವ 

ಈಶ್ವರನೆ ಅಳತೊಡಗೆ,

ಸೈತಿಡಲು, ಸೈಪಿಡಲು, ಬರುವನಾವಂ?

‘ಹೇ ತಂದೆ' ಎನಲೆನ್ನನವನೆ ಕಾವಂ !

(ಹೊಸಗನ್ನಡ ಕಾವ್ಯಶ್ರೀ ಕೃತಿಯಿಂದ ಆಯ್ದ ಕವನ)