‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೩) - ಪಂಜೆ ಮಂಗೇಶ ರಾವ್

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೩) - ಪಂಜೆ ಮಂಗೇಶ ರಾವ್

ಪಂಜೆ ಮಂಗೇಶರಾಯರು ೨೦ನೇ ಶತಮಾನದ ಆದಿಯಿಂದಲೇ ಹೊಸಗನ್ನಡ ಸಾಹಿತ್ಯದಲ್ಲೊಂದು ಅಭೂತಪೂರ್ವ ಪರಿವರ್ತನವನ್ನುಂಟುಮಾಡಿದ ಹಿರಿಯ ಸಾಹಿತ್ಯಾಚಾರ್ಯರು. ಕನ್ನಡದಲ್ಲಿ ಸಣ್ಣ ಕತೆ, ಹರಟೆ, ಈ ಸಾಹಿತ್ಯದ ಪ್ರಕಾರವನ್ನು ಆರಂಭಿಸಿದವರೆಂಬ ಹಿರಿಮೆ ಇವರಿಗೆ ಸಂದಿದೆ. ‘ಕವಿಶಿಷ್ಯ' ಎಂಬ ಗುಪ್ತನಾಮದಿಂದ ಇವರು ಅನೇಕ ಕವನಗಳನ್ನು ರಚಿಸಿದ್ದರು. ಬಾಲಕರಿಗೆ ಬೇಕಾಗುವ ಕಿರುಕತೆ ಮತ್ತು ಕವನಗಳನ್ನು ಮೊತ್ತಮೊದಲು ರಚಿಸಿ ಪ್ರಕಟಪಡಿಸಿದ ಪುಣ್ಯ ಇವರದ್ದು. ಶ್ರೀಯುತರು ಮದ್ರಾಸ್ ಕರ್ನಾಟಕದ ದೊಡ್ಡ ಶಿಕ್ಷಣ ತಜ್ಞರಾಗಿದ್ದರು. ಮಡಿಕೇರಿ ಗೌರ್ನಮೆಂಟ್ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವಾ ನಿವೃತ್ತಿಯನ್ನು ಪಡೆದವರು. ೧೯೩೪ರಲ್ಲಿ ರಾಯಚೂರಿನಲ್ಲಿ ಜರುಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮೆಕ್ಮಿಲನ್ ಕಂಪೆನಿಯವರ ಕನ್ನಡ ಪಠ್ಯಪುಸ್ತಕ ಮಾಲೆಗೆ ಇವರು ಜನಕರಂತಿದ್ದರು. ಒಂದು ಇಂಗ್ಲಿಷ್-ಕನ್ನಡ ನಿಘಂಟನ್ನು ಪ್ರಕಟಿಸಿದ್ದರು. ಹಾಗೆಯೇ ‘ಶಬ್ದ ಮಣಿದರ್ಪಣ'ವನ್ನು ಪರಿಷ್ಕರಿಸಿ ಪ್ರಕಟಿಸಿದ್ದರು. “ಕೋಟಿ ಚೆನ್ನಯ್ಯ" ಎಂಬ ಇವರ ನೀಳ್ಗತೆಯು ಹೊಸಗನ್ನಡ ಸಾಹಿತ್ಯದ ಒಂದು ಅಮೂಲ್ಯ ರತ್ನವೆಂದು ಪಂಡಿತರಿಂದ ಪರಿಗಣಿತವಾಗಿದೆ.

ಪಂಜೆ ಮಂಗೇಶ ರಾವ್ ಇವರ ಎರಡು ಕವನಗಳು ‘ಕಾವ್ಯಶ್ರೀ’ ಕೃತಿಯಲ್ಲಿ ಪ್ರಕಟವಾಗಿವೆ. ಹುತ್ತರಿ ಹಾಡು ಮತ್ತು ತೆಂಕಣ ಗಾಳಿಯಾಟ. ಈ ಕವನಗಳಲ್ಲಿ ತೆಂಕಣ ಗಾಳಿಯಾಟವನ್ನು ನಾವು ಈಗಾಗಲೇ ಪ್ರಕಟ ಮಾಡಿದ್ದೇವೆ. (‘ಸುವರ್ಣ ಸಂಪುಟ' ಕೃತಿಯಿಂದ ಆಯ್ದು) ಈ ಕಾರಣದಿಂದ ಮತ್ತೊಂದು ಕವನ ‘ಹುತ್ತರಿಯ ಹಾಡ’ನ್ನು ಪ್ರಕಟಿಸುತ್ತಿದ್ದೇವೆ.

ಹುತ್ತರಿ ಹಾಡು

ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ?

ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ?

ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ?

ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆಕಳೆ ಕಳೆವಳೋ?

ಅಲ್ಲೆ ಆ ಕಡೆ ನೋಡಲಾ !

ಅಲ್ಲೆ ಕೊಡವರ ನಾಡಲಾ

ಅಲ್ಲೆ ಕೊಡವರ ಬೀಡಲಾ !

 

ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು?

ಕವಣೆ ತಿರಿಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು?

ಸವರಿ ಆನೆಯ ಸೊಂಡಿಲಿನ ರಣಕೊಂಬನಾರ್ ಭೋರ್ಗರೆದರೋ?

ಸವೆದು ಸವೆಯದ ಸಾಹಸತ್ವದ ಕ್ಷಾತ್ರ ಬೇಟೆಯ ಮೆರೆದರೋ?

ಅವರು ಸೋಲ್ ಸಾವರಿಯರು !

ಅವರು ಕಡುಗಲಿ ಗರಿಯರು !

ಅವರೆ ಕೊಡಗಿನ ಹಿರಿಯರು !

 

ತಮ್ಮ ನಾಡಿನ ಕೊರಳು ದಾಸ್ಯದ ನೊಗದ ಭಾರಕೆ ಬಗ್ಗದೋಲ್,

ಹೆಮ್ಮೆಹಗೆಗಳ ಹೊಡೆದು ಹಿರಿಯರು ಹಸಿರು ಹಾರುವ ಬಗ್ಗದೋಲ್,

ಬೊಮ್ಮಗಿರಿಯಂ ಪುಷ್ಪಗಿರಿ ಪರ್ಯಂತ ಬೆಳೆದೀ ದೇಶವು

ಧರ್ಮದಾನದ ಕಟ್ಟು ಕಟ್ಟಳೆ ರೀತಿ ನೀತಿಯ ಕೋಶವು !

ನಮ್ಮ ಕೊಡಗಿದು ಜಮ್ಮದು;

ಜಮ್ಮ ಕೊಡಗಿದು ನಮ್ಮದು;

ನಮ್ಮೊಡಲ್ ಬಿಡಲಮ್ಮದು !

 

ಇದು ಅಗಸ್ತ್ಯನ ತಪದ ಮಣೆ, ಕಾವೇರಿತಾಯ ತಮರ್ಮನೆ,

ಕದನ ಸಿರಿಗುಯ್ಯಾಲೆ ತೂಗಿದನಿಲ್ಲಿ ಚಂದಿರವರ್ಮನೆ !

ಇದಕೊ ! ಚೆಂಗಳ್ವರಸರಾಡಂಬರವು ಕುಣಿದ ಶ್ರೀರಂಗವು !

ಇದೊ ! ಇದೊ ! ಇಲ್ಲುರುಳ್ದ ಹಾಲೇರಿಯರ ಬಲಗಿರಿಶೃಂಗವು !

ವಿಧಿಯ ಮಾಟದ ಕೊಡಗಿದು !

ಮೊದಲೆ ನಮ್ಮದು, ಕಡೆಗಿದು

ಕದಲದೆಮ್ಮನು ; ಬೆಡಗಿದು

 

ಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ ?

ಸುಮ್ಮನಿತ್ತರೊ ದಟ್ಟ ಕುಪ್ಪಸ? ಹಾಡು ಹುತ್ತರಿಗೇಳಿರಿ !

ಚಿಮ್ಮಿ ಪಾತುರೆ ಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಲಿ !

ಅಮ್ಮೆ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ !

ನೆಮ್ಮದಿಯನಿದು ತಾಳಲಿ !

ಅಮ್ಮೆಯಾ ಬಲತೋಳಲಿ !

ನಮ್ಮ ಕೊಡಗಿದು ಬಾಳಲಿ !

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)