‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೦) - ಆನಂದಕಂದ

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೦) - ಆನಂದಕಂದ

ಬೆಟಗೇರಿ ಕೃಷ್ಣಶರ್ಮರ ಕಾವ್ಯನಾಮ-ಆನಂದಕಂದ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ೧೯೦೦ರ ಏಪ್ರಿಲ್ ೧೬ರಂದು ಜನಿಸಿದರು. ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ. ಕೃಷ್ಣಶರ್ಮರು ೧೨ನೇ  ವರ್ಷದವನಿರುವಾಗ ತಂದೆ, ೧೫ನೇ ವರ್ಷಕ್ಕೆ ಅಣ್ಣ ಹಣಮಂತರಾಯ, ೧೮ನೇ ವರ್ಷಕ್ಕೆ ತಾಯಿ ತೀರಿಕೊಂಡರು. ಸ್ವತಃ ಕೃಷ್ಣಶರ್ಮರೆ ತಮ್ಮ ೧೪ನೇ ವಯಸ್ಸಿನಲ್ಲಿ ವಿಷಮಶೀತ ಜ್ವರ ಹಾಗೂ ೧೫ನೇ ವಯಸ್ಸಿಗೆ ಪ್ಲೇಗ್ ನಿಂದ ಬಳಲಿ ಜೀವನುದ್ದಕ್ಕೂ ದುರ್ಬಲ ಕೈ-ಕಾಲುಗಳನ್ನು ಹೊಂದಬೇಕಾಯಿತು. ೧೯೨೮ರಲ್ಲಿ ತುಳಸೀಬಾಯಿಯೊಂದಿಗೆ ಮದುವೆ. ಕೃಷ್ಣಶರ್ಮರು ೫೬ ವಯಸ್ಸಿನವರಿದ್ದಾಗ ಮಗಳು ಹಾಗೂ ಮರು ವರ್ಷವೇ ಪತ್ನಿ ತೀರಿ ಹೋದರು.

೫ನೇ ತರಗತಿವರೆಗೆ ಬೆಟಗೇರಿಯಲ್ಲಿ ಪ್ರಾಥಮಿಕ ಶಿಕ್ಷಣ ನಂತರ, ಕಂಪಿಸುವ ಕೈ-ಕಾಲುಗಳೊಂದಿಗೆ ೫ ಕಿ.ಮೀ. ದೂರದ ಮುಮದಾಪುರಕ್ಕೆ ದಿನಾಲು ತೆರಳಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದರು. ಮುಂದೆ ಬೆಳಗಾವಿಯಲ್ಲಿ ಮುಲ್ಕಿ ಪರೀಕ್ಷೆ ತೇರ್ಗಡೆಯಾದರು. ೧೯೧೮ರಲ್ಲಿ ಬೆಳಗಾವಿಯ ಮುನಸಿಪಾಲಿಟಿಯಲ್ಲಿ ಕೆಲಸ ಸಿಕ್ಕಿತು. ಅದು-ಮನೆಮನೆಗಳಿಗೆ ಹೋಗಿ ಇಲಿ ಹಿಡಿಯುವುದು. ನಂತರ, ಈ ಕೆಲಸ ತೊರೆದು ಕಿತ್ತೂರಿನಲ್ಲಿ ಸಂಸ್ಕೃತ ಅಧ್ಯಯನ ಮಾಡಿ ಶಿಕ್ಷಕರಾದರು. ಮತ್ತೆ ಕೆಲಸ ತೊರೆದು ಧಾರವಾಡ ನಂತರ ಬೆಂಗಳೂರಿನಲ್ಲಿ ಕೆಲಸ ಮಾಡಿ, ಮತ್ತೆ ಧಾರವಾಡಕ್ಕೆ ಮರಳಿ ಜಯಂತಿ ಪತ್ರಿಕೆಯ ಸಂಪಾದಕರಾದರು.

ಭಾವಗೀತ, ನಲ್ವಾಡುಗಳು ಸೇರಿದಂತೆ ಒಟ್ಟು ೧೪ ಕವನ ಸಂಕಲನಗಳು, ಸಂಸಾರದ ಚಿತ್ರ ಹಾಗೂ ಬಡತನದ ಬಾಳು ಸೇರಿದಂತೆ ಒಟ್ಟು ೮ ಕಥಾ ಸಂಕಲನಗಳು, ಸುದರ್ಶನ, ರಾಜಯೋಗಿ ಸೇರಿದಂತೆ ಒಟ್ಟು ೫ ಕಾದಂಬರಿಗಳು, ಬೆಳವಡಿ ಮಲ್ಲಮ್ಮ, ಬೆಂದ ಹೃದಯ, ಮುಂಡರಗಿಯ ಗಂಡುಗಲಿ, ಪಂಚಗಂಗಾ (ಆಕಾಶವಾಣಿ ತರಂಗ ರೂಪಕಗಳು) ಕನ್ನಡ ರಾಜ್ಯ ರಮಾರಮಣ-ಚರಿತ್ರೆ, ಕನ್ನಡ ಜನಪದ ಸಾಹಿತ್ಯ ಹಾಗೂ ಬೀಸುಕಲ್ಲಿನ ಪದಗಳು -ಕೃತಿಗಳು, ಪೂಜಾತತ್ವ, ಲೋಕನೀತಿ ಸೇರಿದಂತೆ ಒಟ್ಟು ೧೧ ಸಂಪಾದಿತ ಕೃತಿಗಳು, ನನ್ನ ನೆನಪುಗಳು-ಆತ್ಮಚರಿತ್ರೆ, ಮಕ್ಕಳ ಸಾಹಿತ್ಯ, ವಿಮರ್ಶೆ-ಸಂಶೋಧನೆ ವಲಯದಲ್ಲೂ ಹತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ. 

ಕರ್ನಾಟಕ ವಿಶ್ವವಿದ್ಯಾಲಯವು ಕೃಷ್ಣಶರ್ಮರಿಗೆ ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ಸಮ್ಮೇಳನದ ಅಧ್ಯಕ್ಷತೆ, ವೈದ್ಯಕೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಗೌರವಗಳು ಸಂದಿವೆ. ಧಾರವಾಡದ ತಮ್ಮ ಮನೆಯಲ್ಲಿ ೧೯೮೨ರ ಅಕ್ಟೋಬರ್ ೩೦ರಂದು ನಿಧನರಾದರು.

ಆನಂದಕಂದ ಇವರ ಒಂದು ನೀಳ್ಗವನ ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿ ಪ್ರಕಟವಾಗಿದೆ. ಅದರ ಆಯ್ದ ಭಾಗವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. 

ಒಡನಾಡಿ !

ಒಡನಾಡಿ ಬೇಕೆಂದು

ಮಿಡುಕಿಯೇ ಮಿಡುಕಿದೆನು,

ಕಡೆಗೆ ನೀ ಬಂದೆನ್ನ ಮಿಡುಕ ಕಳೆದೆ ;

ಕೆಡಿಸಿ ಜೀವನಕೆ ಬಂ

ದಡಸಿರುವ ಕಾರಿರುಳ

ಬೆಡಗುಗಾತಿಯೆ ! ಬೆಳಕ ಮೊಗತೋರಿದೆ ;

 

ಕಿರಿಯ ನಾನಿರಲಂದು

ನೆರೆದು ನಲಿನಲಿದಾಡಿ

ಬೆರತು ಒಂದಾಗಿದ್ದ ಗೆಳೆಯರೆಲ್ಲಾ

ಹರೆಯ ಬರೆ ತಮ್ಮೊಲವ.

ನಿರಿಸಿ ಇನ್ನೆಲ್ಲಿಯೋ !

ಬೆರೆತದೇತಕೊ ! ನನ್ನ ತೊರೆದರೆಲ್ಲಾ !

 

ತೊರೆಯಲೆಲ್ಲರು ನನ್ನ

ಮರುಳನಂತಾಗಿ ನಾ

ಅರಸತೊಡಗಿದೆ ಬಲವನಿರಿಸಲೆಡೆಯ,

ಇರದಿರಲು ಕೆಳೆಯೊಂದು

ಬರಿಯಲದಿದು ಬದುಕೆಂದು

ಅರಿತರಿತು ಬಯಸಿದೆನು ಒಡನಾಡಿಯ ;

 

ಬೇವಿನಾ ಕಹಿಗಿಡವೆ

ತೀವಿರುವ ಕಾಡಿನೊಳು 

ಮಾವ ಹುಡುಕುತ ಬಂದೆ ತಿರುಗಾಡಿದೆ,

ಒರತೆ ಹೊರಡುವುದೆಂದು

ಮರುಳ ನೆಲವನ್ನಗಿದೆ

ಕೊರಡು ಕೊನರುವುದೆಂದು ನೀರನೆರೆದೆ ;

 

ಚಿಂಬೊನ್ನ ತಂಬಿಗೆಗೆ

ಹಂಬಲಿಪ ಹುಂಬನವ

ಕುಂಬರರ ಮನೆಗಳಲಿ ಹುಡುಕಿದಂತೆ-

ತುಂಬಿರಲು ಕೆಳೆಯಾಸೆ

ನಂಚಿ ಕಂಡವರನ್ನು

ಬೆಂಬಳಿಸಿ ಅಲೆದು ಬಾಯ್ ಬಿಡುತ ನಿಂತೆ ;

 

ಬರೆಯೆ ಬಣ್ಣದಿ ಕಣ್ಣ

ಸೆರೆ ಹಿಡಿವ... ಹುರುಳಿರದ…

ಬರಡು ಹೂಗಳಿಗೊಲಿದ ತುಂಬಿಯಾದೆ,

ಉರಿಯ ಮರೆಯುತ ದೀಪ…

ಕೆರಗಿ ಮೈಯ್ಯಲ್ಲವನು

ಉಳಿದುಕೊಳ್ಳುವ ಮರುಳು-ಚೆಟ್ಟೆಯಾದೆ;

 

ನೀರ ಹನಿಗಳ ಕಂಡು 

ತೋರ ಮುತ್ತುಗಳೆಂದು

ಆರಿಸಲು ನನ್ನ ಮನ ತಾರಾಡಿತು

ಹುಳುವೆಂದು ತಿಳಿಯದರೆ

ಬೆಳಕಿಗೊಲಿಯುತ ಮಿಣುಕು-

ಹುಳುವಿನೊಡನೆಯೆ ಜೀವ ಹಾರಾಡಿತು ;

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)