‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೧) - ದಿನಕರ ದೇಸಾಯಿ
ಚುಟುಕು ಬ್ರಹ್ಮ ಎಂದೇ ಪ್ರಸಿದ್ಧರಾಗಿರುವ ದಿನಕರ ದೇಸಾಯಿ ಅವರು ಜನಿಸಿದ್ದು ೧೯೦೯ ಸೆಪ್ಟೆಂಬರ್ ೧೦ರಂದು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಅಲಗೇರಿ. ಬೆಂಗಳೂರಿನಲ್ಲಿ ಇಂಟರ್ ಮೀಡಿಯೇಟ್ ಶಿಕ್ಷಣ ಪಡೆದಿದ್ದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಸ್ನಾತಕೊತ್ತರ ಪದವಿ ಹಾಗೂ ಎಲ್ಎಲ್ಬಿ ಪದವಿ ಪಡೆದಿದ್ದರು.
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಇವರು ಭಾರತ ಸೇವಕ ಸಮಾಜದ ಸದಸ್ಯರಾಗಿದ್ದರು. ಜನ ನಾಯಕ ಎಂಬ ಪತ್ರಿಕೆಯನ್ನು ಸ್ಪಲ್ಪಕಾಲ ನಡೆಸಿದರು. ಕಾರ್ಮಿಕ ನಾಯಕರು ಆಗಿದ್ದ ಇವರು ಗೋಕಾಕ್ ಹತ್ತಿ ಗಿರಣಿಯ ಕಾರ್ಮಿಕರ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಈ ಹೋರಾಟದಿಂದ ಅನುಭವ ಪಡೆದು ಮುಂಬೈನಲ್ಲಿ ಕಡಲ ಕೆಲಸಗಾರರ ಸಂಘವನ್ನು ಕಟ್ಟಿದ್ದರು. ಹಾಗೆಯೇ ಉತ್ತರ ಕನ್ನಡ ಜಿಲ್ಲೆಯ ರೈತರನ್ನು ಸಂಘಟಿಸಿದ್ದರು.
ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದ ಇವರ ಕೃತಿಗಳೆಂದರೆ ಮಕ್ಕಳ ಗೀತೆಗಳು, ಮಕ್ಕಳ ಪದ್ಯಗಳು, ಹೂಗೊಂಚಲು, ಮಕ್ಕಳ ಪದ್ಯ, ದಿನಕರನ ಚೌಪದಿ, ನಾ ಕಂಡ ಪಡುವಣ, Primary Education in India, Mahamandaleshwaras under Chalukyas, Maritime Labour in India ಮುಂತಾದವು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಮುಂತಾದ ಗೌರವ ಪ್ರಶಸ್ತಿಗಳನ್ನು ನೀಡಲಾಗಿದೆ. ಇವರು ನವೆಂಬರ್ ೭, ೧೯೮೨ರಲ್ಲಿ ನಮ್ಮನ್ನು ಅಗಲಿದರು.
ದಿನಕರ ದೇಸಾಯಿಯವರ ಎರಡು ಕವನಗಳು ಈ ಕೃತಿಯಲ್ಲಿವೆ. ಒಂದು ಕವನವನ್ನು ನಾವು ಈಗಾಗಲೇ ಪ್ರಕಟಿಸಿದ್ದು. ಇನ್ನೊಂದು ಕವನವನ್ನು ಪ್ರಕಟಿಸಲಿದ್ದೇವೆ. ಓದಿ ಅಭಿಪ್ರಾಯಗಳನ್ನು ತಿಳಿಸಿ.
ಉತ್ತರ ಕನ್ನಡದ ಕಚ್ಚೆ
ಯಾರಪ್ಪನ ಯಾರವ್ವನ ಇಚ್ಛೆ?
ಉತ್ತರ ಕನ್ನಡ ಜಿಲ್ಹೆಗೆ ಜಚ್ಚೆ !
ಇದುವೇ ನಮ್ಮ ಪತಾಕೆಯ ವಸ್ತ್ರಾ !
ಬಡತನದಲಿ ಹೋರಾಡುವ ಶಸ್ತ್ರಾ !
ಅಪಜಯವಾಗುವ ಹೆದರಿಕೆಯಿಲ್ಲಾ !
ಇಡಿ ಮೈ ಮುಳುಗಲು ಚಳಿಯೇನಿಲ್ಲಾ !
ಕಚ್ಚೆಯ ಸುಖವೇ ಬಡವರ ಮಾರ್ಗ !
ಅನ್ನುವ ಜಾಣರಿಗಾವುದು ಸ್ವರ್ಗಾ?
ಆಚೆಗೆ ತೋರಲು ಎರಡೂ ಕುಂಡೆ
ನಾಚುವುದೇತಕೆ ದೇವರ ರಂಡೆ?
ಲಂಗೋಟಿಯೊಳೇ ಗಾಂಧಿಮಹಾತ್ಮ !
ಉತ್ತರ ಕನ್ನಡ ಜಿಲ್ಹೆಯ ಆತ್ಮಾ!
ಬೆವರಹನಿಯೊರಸಲು ಕಚ್ಚೆಯ ವಸ್ತ್ರಾ !
ಅದುವೇ ಧೋತ್ರವು ಅದು ಕರವಸ್ತ್ರಾ !
ಕಚ್ಚೆಗು ನಮಗೂ ಜೀವದ ದೋಸ್ತಿ !
ಕಚ್ಚೆ ರುಮಾಲೆ ಜೀವನದಾಸ್ತಿ !
ಕನ್ನಡ ಕಡಲಿನ ವೈಭವದೇವಾ !
ಕಚ್ಚೆ ಹೆದರುವದೇನೋ ದೆವ್ವಾ ?
ಬಡ ಕಂಗಾಲರ ಭಾಗ್ಯದ ಚಿಹ್ನಾ !
ಉಡಿದಾರಕೆ ನೇತಾಡುವದಮ್ಮಾ !
ನೇತಾಡಲು ಜೋತಾಡಲು ಚಿಂದೆ
ಕನ್ನಡ ಸಂಸ್ಕೃತಿ ಮೆರೆವುದು ಮುಂದೆ !
ಉತ್ತರ ಕನ್ನಡ ಜನತೆಯ ಭಾಗ್ಯ !
ಕಚ್ಚೆಗು ಬಂದಿದೆಯೋ ವೈರಾಗ್ಯ?
ಕಚ್ಚೆ ಪತಾಕೆಯು ಗಾಳಿಗೆ ತೇಲೆ
ನೀಲ ದಿಗಂತಕೆ ಹಾರಲಿ ಮೇಲೆ !
ಸ್ವರ್ಗವನೇರಲಿ ಬಡವರ ಚಿಂದಿ !
ನೋಡಲಿ ಇಂದ್ರನ ಲೋಕದ ಮಂದಿ !
ದೇವರಿಗರ್ಪಣವಾಗಲಿ ಕಚ್ಚೆ !
ಇದುವೇ ಯುವಕರ ಹೊಸಯುಗದಿಚ್ಛೆ !
ಸಾಕಾಯಿತು ಪಶುಪಕ್ಷಿಯ ನಿಂದೆ !
ಮಾನವರಂತೆಯೆ ಮೆರೆವೆವು ಮುಂದೆ !
ಹೂಡೇ ಬಿಡಿ ಕಂಗಾಲರ ಬಂಡಾ
ಉರುಳಿಸಿ ಬರಿ ದಾರಿದ್ರ್ಯದ ರುಂಡಾ!
ಯಾರಪ್ಪನ ಯಾರವ್ವನ ಹಂಗು ?
ಕಾಸಿದ ಕಬ್ಬಿಣ ಕೆಲ್ಲಿಯ ಚಂಗು ?
(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)