‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೨) - ರಂ ಶ್ರೀ ಮುಗಳಿ

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೨) - ರಂ ಶ್ರೀ ಮುಗಳಿ

ಕನ್ನಡ ಸಾಹಿತ್ಯ ಚರಿತ್ರೆಯ ಮೂಲಕ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾದ ರಂಗನಾಥ ಶ್ರೀನಿವಾಸ ಮುಗಳಿ ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರು. ೧೯೦೬ರ ಜುಲೈ ೧೫ರಂದು ಜನಿಸಿದರು. ತಂದೆ ಶ್ರೀನಿವಾಸರಾವ್ ಮತ್ತು ತಾಯಿ ಕಮಲಕ್ಕ. ಬಾಗಲಕೋಟೆ, ಬಿಜಾಪುರಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. (೧೯೨೮) ಎಂ.ಎ. (೧೯೩೦) ಮಾಡಿದರು. ೧೯೩೨ರಲ್ಲಿ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಶಿಕ್ಷಕರಾಗಿ ಸೇರಿದರು. ೧೯೩೩ರಲ್ಲಿ ಸಾಂಗ್ಲಿಯ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ ೧೯೬೬ರಲ್ಲಿ ನಿವೃತ್ತರಾದರು. ಕೆಲವು ಕಾಲ ಸರಕಾರದ ಸಾಹಿತ್ಯ ಸಂಸ್ಕೃತಿ ಇಲಾಖೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅನಂತರ ಬೆಂಗಳೂರಿನಲ್ಲಿ ೧೯೬೯-೭೦ರ ಅವಧಿಯಲ್ಲಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಮುಗಳಿಯವರು ೧೯೪೦-೪೩ರಲ್ಲಿ ‘ಜೀವನ’ ಪತ್ರಿಕೆಯ ಸಂಪಾದಕರಾಗಿ ಸೇವೆಸಲ್ಲಿಸಿದರು.

ಕರ್ನಾಟಕದ ಗಡಿನಾಡಿನ ಕನ್ನಡ ದೀಪ, ಕನ್ನಡದ ಪಾರಿಜಾತ ಎಂದು ಅವರಿಗೆ ಬಿರುದು ನೀಡಲಾಗಿತ್ತು. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ (೧೯೫೬) ಇವರ ಕನ್ನಡ ಸಾಹಿತ್ಯ ಚರಿತ್ರೆ ಗ್ರಂಥಕ್ಕೆ ದೊರೆಯಿತು. ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ (೧೯೫೫) ದಲ್ಲಿ ವಿಮರ್ಶಾ ಗೋಷ್ಠಿಯ ಅಧ್ಯಕ್ಷತೆ, ೧೯೫೭ರಲ್ಲಿ ಧಾರವಾಡದಲ್ಲಿ ೧೯ನೇ ಶತಮಾನದ ಸಾಹಿತ್ಯ ವಿಮರ್ಶೆಯ ಗೋಷ್ಠಿಯ ಅಧ್ಯಕ್ಷತೆಗಳನ್ನು ವಹಿಸಿದ್ದರು. ತುಮಕೂರು ಸಿದ್ಧಗಂಗಾ ಕ್ಷೇತ್ರದಲ್ಲಿ ನಡೆದ ೪೪ನೇ ಕನ್ನಡ ಸಾಹಿತ್ಯ ಸಮ್ಮೇಳನ (೧೯೬೩) ಅಧ್ಯಕ್ಷತೆ ವಹಿಸಿದ್ದರು. ರಂ.ಶ್ರೀ ಮುಗಳಿ ಅವರು ೧೯೯೩ರ ಫೆಬ್ರುವರಿ ೨೦ರಂದು ಬೆಂಗಳೂರಿನಲ್ಲಿ ನಿಧನರಾದರು.

ಪ್ರಮುಖ ಕೃತಿಗಳು: ಕನ್ನಡ ಸಾಹಿತ್ಯ ಚರಿತ್ರೆ, ಹೆರಿಟೇಜ್ ಆಫ್ ಕರ್ನಾಟಕ (ಇಂಗ್ಲಿಷ್), ಕನ್ನಡ ಕೃತಿರತ್ನ, ಕನ್ನಡ ಕಾವ್ಯ ಸಂಚಯ, ಅನ್ನ (ಕಾದಂಬರಿ), ಸಾಹಿತ್ಯ ವಿಮರ್ಶೆಯ ಮಾರ್ಗದರ್ಶನ ಸೂತ್ರಗಳು (ವಿಮರ್ಶೆ). ರಂ ಶ್ರೀ ಮುಗಳಿ ಇವರ ಎರಡು ಕವನಗಳು ಹೊಸಗನ್ನಡ ಕಾವ್ಯಶ್ರೀ ಕೃತಿಯಲ್ಲಿ ಪ್ರಕಟವಾಗಿದೆ. ಈಗಾಗಲೇ ಒಂದು ಕವನವನ್ನು ಆರಿಸಿ ಪ್ರಕಟಿಸಲಾಗಿದೆ. ಮತ್ತೊಂದು ಕವನವನ್ನು ಈ ಬಾರಿ ಆಯ್ದು ಪ್ರಕಟಿಸಲಾಗಿದೆ.

ಬಯಲ ಮಾವು

(ಮುಕ್ತ ಛಂದದಲ್ಲಿ)

ಉರಿವುರಿವ ಬಿಸಿಲಲ್ಲಿ ಹಸರು ಮುರಿಯುತ ಮೆರೆದುದಕೊ

ಬಯಲು ಸೀಮೆಯ ಮಾವು

ಎಂಥ ರಣರಣ ಬಿಸಿಲು

ನಡು ಬೇಸಗೆ ನಡುಹಗಲ ಸಮಯದಿ

ತೆರೆದ ಭೂಮಿಯ ಎದೆಗೆ ತಟ್ಟುತ, ಕಿರಣಗಳು ಕೋಟ್ಯವಧಿಯಾಗಿ ಬಂದೆರಗಿ

ಅಗ್ನಿ ಬಾಣದ ಹಾಗೆ ಹುಚ್ಚುತಿದೆ ಮುಚ್ಚುತಿದೆ

ಕಾಣಬಾರದ ಬಿಳುಪು ಹೊಳಪು ನೆಲದಲ್ಲಿ ಮುಗಿಲಲ್ಲಿ

ಸೂರ್ಯ ಸುಡುಸುಡುವ ಉರಿಗೊಂಡ

ಕಂಡವರ ಕಣ್ಣ ಕಳೆಯುವ ಮೂರನೆಯ ಕಣ್ಣಕೆಂಡ

ನೆಲವೆಲ್ಲ ಉರಿಯ ಮೇಲಿನ ಹಂಚುಕಾದ ಮಳಲು

ಬಯಲೇ ಬಯಲು ಬಟಾಬಯಲು !

ಬೀದಿ ಕಂಟಿ ಬೇವುಗಳ ಬುಡದಲ್ಲಿ ಬಿಸಿಲಿಗೆ ಅದುರಿ ಮುದುರಿ

ನೆರಳು ನಿಂತಿದೆ ಕಪ್ಪು ಮುಸುಡಿಯ ತೋರಿ ತೋರಲಾರದೆ

ಗಾಳಿ ಸತ್ತ ಹೆಣ ಎನ್ನುತಿದೆ

ಆಗಾಗ ಚಿತೆಯ ಉರಿನಾಲಿಗೆಯಂತೆ ಸುಡುಸುಡತ ಬೀಸುತಿದೆ

‘ಗಾಳಿಯನು ಬೇಡುವಿರಾ ಇನ್ನೊಮ್ಮೆ' ಎದು ಕೇಳುವ ಕಿಡಿಗೇಡಿಯಂತೆ

ಮೊರೆಮೊರೆಗೆ ತಿಳಿದು ಉರಿಪಂಜು ಹಿಡಿದು

ಮರದ ಹಸಿರುಮೊಗ ಕಂದಿದೆ ಬಳ್ಳಿ ಬಾಡಿ ಸುರುಸುರುಟಿದೆ

ಬೆವರು ಸುರಿವ ಮೈಯ, ಉಸ್ಸೆಂದು ಉಸುರ್ಗರೆವ 

ಜನವೆಲ್ಲ ಸಾಕು ಸಾಕಾಗಿ ಸೋತು ಸೊಲ್ಲಡಗಿ ಹೋಗಿದೆ,

ಇಂಥ ಕಡುಬಿಸಿಲಲ್ಲಿ ಎಂಥ ಚೆಲುವ ನೋಟ ಈ ಮಾವುಮರವು !

ಉರಿ ಉಗ್ರ ಬಿಸಿಲಲ್ಲಿ ಅಕೊ ಒಂಟಿ ಕಾಲಿನ ಮೇಲೆ

ಹಸರು ಬಟ್ಟೆಯ ಹೊದೆದು ನಿಂತ ವೀರಧೀರ ತಪಸಿಯಂತೆ ತೋರುವುದು

ಬಾಡಿಲ್ಲ ಇದರ ಎಲೆ ಎಲೆಯಚ್ಚ ಹಸಿರು

ನಾಲ್ಕು ದಿಕ್ಕಿಗೆ ತುಂಬಿ ನಿಂತಿದೆ ರಸರಸವರುಚಣಿಕೆಯಾಗಿ

ಏನಿದರ ತುಂಬುಕಳೆ ! ನೋಟಕ್ಕೆ ಹಿರಿಹಬ್ಬ !

ಯಾರು ತಿದ್ದಿ ಮಾಡಿದರಿದರ ದುಂಡುತನದಂದವನ್ನು ?

ಭೂರಮಣಿಯ ತಲೆತುರುಬಿನಂತೆ ದೂರದಿಂದ ತಲೆದೂಗುವುದ 

ಹತ್ತಿರಕೆ ಬರೆ ಹೂ ಕಾಯಿಗಳ ಹೊರೆಹೊರೆಯ ಅಲಂಕಾರವನ್ನು ಗೈದು

ಪ್ರಸಾಧನ ಕಲೆಯ ಪರಮಸಿಕೆ ಭೂರಮಣಿಯೇ

ಕಣ್ಣಿದಿರು ಎದ್ದು ನಿಂತಂತೆ ತೋರುವುದು

ಬಿಸಿಲು ಹೆಚ್ಚಿದಂತಿದರ ಹಸಿರು ಹೆಚ್ಚುವುದು,

ಕಣಿಕಣಿಯಾಗಿ ಹೂಗೊಂಚಲು ಹೊರೆಯೇರುವುದು.

ಕಾಯಿಗಳ ಗೊನೆಗೊನೆಯ ಹಿರಿಹಿಗ್ಗಿ ತೂಗುವುದು,

ಮೈಯ ರಸತುಂಬಿ ತುಳುಕಾಡಿ ಹಸುರೆಲೆಯ ನಾಳನಾಳದಿ

ಹರಿಯುವುದು ಚಿಮ್ಮಿ ಚಿಮ್ಮಿ

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)