‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೩) - ಜಿ ಪಿ ರಾಜರತ್ನಂ

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೩) - ಜಿ ಪಿ ರಾಜರತ್ನಂ

ಕನ್ನಡ ಪರಿಚಾರಕರಾಗಿ, ಸಂಸ್ಕೃತಿ ಪ್ರಸಾರಕರಾಗಿ ಕಾವ್ಯ, ನಾಟಕ, ಶಿಶುಸಾಹಿತ್ಯ, ಹಾಸ್ಯ ಸಾಹಿತ್ಯ ಹೀಗೆ ಹಲವಾರು ಪ್ರಕಾರಗಳಲ್ಲಿ ದುಡಿದ ರಾಜರತ್ನಂರವರು ಹುಟ್ಟಿದ್ದು ೫-೧೨-೧೯೦೮ರಂದು ರಾಮನಗರದಲ್ಲಿ. ತಂದೆ ಪಿ.ಗೋಪಾಲಕೃಷ್ಣ ಅಯ್ಯಂಗಾರ್, ನಾಲ್ಕರ ವಯಸ್ಸಿನಲ್ಲಿಯೇ ತಾಯಿಯ ಪ್ರೀತಿಯಿಂದ ವಂಚಿತರು. ಪ್ರಾರಂಭಿಕ ಶಿಕ್ಷಣ, ತಂದೆ ಉಪಾಧ್ಯಾಯರಾಗಿದ್ದರಿಂದ ಅವರು ಮಾಡುವ ತರಗತಿಗಳಲ್ಲೆಲ್ಲಾ ರಾಜರತ್ನಂಗೆ ಪ್ರವೇಶ, ಕಲಿಕೆ. ೧೯೨೮ರಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎ. ಪದವಿ. ೧೯೩೧ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ.ಎ. ಪದವಿ. ಮೈಸೂರಿನ ‘ಶಿಶುವಿಹಾರ’ ವಿದ್ಯಾಸಂಸ್ಥೆಯಲ್ಲಿ ಉಪಾಧ್ಯಾಯರಾಗಿ ಕೆಲಕಾಲ. ನಂತರ ಮಹಾರಾಜ ಕಾಲೇಜಿನಲ್ಲಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ, ತುಮಕೂರು, ಶಿವಮೊಗ್ಗಗಳಲ್ಲಿ ಅಧ್ಯಾಪಕರಾಗಿ ಸೇವೆ. ಬೆಂಗಳೂರಿಗೆ ಬಂದು ರೀಡರ್ ಆಗಿ ನಿವೃತ್ತಿ. ರಾತ್ರಿ ಎರಡನೆ ಆಟ (ಸಿನಿಮಾ) ನೋಡಲು ಹೋದ ರತ್ನನಿಗೆ ಹೆಂಡದಂಗಡಿಯ ದರ್ಶನ. ಮುಂದೆ ಬೆಳೆದದ್ದೆ ರತ್ನನ ಪದಗಳಿಗೆ ಮೂಲಾಧಾರ. ನಂತರ ರಚಿಸಿದ್ದು ಹಲವಾರು ಪದ್ಯಗಳು. 

ಎಂಡ ಕುಡುಕ ರತ್ನ, ಪುಟ್ನಂಜಿ ಪದಗಳು, ಮುನಿಯನ ಪದಗಳು, ಹಲವಾರು ಶಿಶುಗೀತೆಗಳ ಸಂಗ್ರಹ ಪ್ರಕಟಿತ-ಕಂದನ ಕಾವ್ಯಮಾಲೆ, ಕಡಲೆಪುರಿ, ಕಲ್ಲು ಸಕ್ಕರೆ, ಕೆನೆಹಾಲು, ಚುಟುಕ, ತಾರೆ, ತುಂಟಗಣಪತಿ, ತುತ್ತೂರಿ, ಮುದ್ದುಕೃಷ್ಣ, ರಸಗವಳ. ಕಥೆಗಳು-ಅಣ್ಣತಮ್ಮ, ಅಯ್ಯಪ್ಪನ ಕಥೆಗಳು, ಆಲಿವರ್ ಟ್ವಿಸ್ಟ್ (ಅನುವಾದ), ಆಳ್ವಾರರ ಕಥೆಗಳು, ಆರು ಕೊಂಬಿನ ಆನೆ, ಏಕಲವ್ಯನ ಕಥೆಗಳು, ಕಥೆಗಳ ಬುಟ್ಟಿ, ಕಥಾಕೋಶ, ಕಥೆ ಬದಲು ಕಥೆ ಮೊದಲಾದುವು. ವಿಡಂಬನೆ-ಅಪಕಥಾವಲ್ಲರಿ, ಪರಗತಿ ಪಕ್ಷಿ, ರಾಘವಾಂಕನ ಹಲ್ಲು, ನಿರ್ಭಯಾಗ್ರಫಿ, ಪುರುಷ ಸರಸ್ವತಿ. ನಾಟಕ-ಕಂಬಳಿ ಸೇವೆ, ಗಂಡುಗೊಡಲಿ, ನರಕದ ನ್ಯಾಯ, ನೆನಪು, ಮಹಾಕವಿಮೇಳ, ಶಕಾರನ ಸಾರೋಟು, ಸೋಲಿಗರ ಸಿದ್ಧ, ಹೆಂಡದ ಹಣ ಮುಂತಾದುವು. ಇತರ-ಚೀನಾದೇಶದ ಬೌದ್ಧ ಯಾತ್ರಿಕರು, ತೀರ್ಥಕರೂ, ತೀರ್ಥಂಕರರೂ, ಧರ್ಮಪದ ಮೊದಲ್ಗೊಂಡು ೨೫೦ಕ್ಕೂ ಹೆಚ್ಚು ಕೃತಿ ಪ್ರಕಟಿತ. ಪಡೆದ ಪ್ರಶಸ್ತಿ ಗೌರವಗಳು. ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ (ನವದೆಹಲಿ-೧೯೭೮), ದೇವರಾಜ ಬಹದ್ದೂರ್ ಪ್ರಶಸ್ತಿ, ಮೈಸೂರು ವಿ.ವಿ.ದ ಗೌರವ ಡಾಕ್ಟರೇಟ್ ಮುಂತಾದುವು. ‘ರಾಜಮಾರ್ಗ’ದಿಂದ ಹಿಡಿದು ಐದು ಗೌರವ/ಸಂಸ್ಮರಣ ಗ್ರಂಥಗಳ ಅರ್ಪಣೆ. ರಾಜರತ್ನಂ ಅವರು ೧೩-೩-೧೯೭೯ ನಿಧನಹೊಂದಿದರು.

‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿ ರಾಜರತ್ನಂ ಅವರ ಎರಡು ಕವನಗಳು ಪ್ರಕಟವಾಗಿವೆ ಮತ್ತು ಈಗಾಗಲೇ ಒಂದು ಕವನವನ್ನು ಪ್ರಕಟ ಮಾಡಲಾಗಿದೆ. ಮತ್ತೊಂದು ಕವನವನ್ನು ಈಗ ಪ್ರಕಟಿಸುತ್ತಿದ್ದೇವೆ.

ನನ್ ಪುಟ್ನಂಜೀ ರೂಪ

ಬೇವಾರ್ಸಿ ! ನನ್ ಪುಟ್ನಂಜೀನ

ರೂಪಾನ್ ಆಡ್ತಿನ್ ಬಾಪ್ಪಾ !

ನಂಗ್ ಆಗಾಗ್ಗೆ ಆಡೀಸ್ತೈತೆ

ನನ್ ಪುಟ್ನಂಜೀ ರೂಪ !

 

ಆಲ್ನಲ್ ಕಮಲದ್ ಊತೇಲ್ಬುಟ್ಟಿ

ಮೇಲ್ ಒಂದ್ ತೆಳ್ನೆ ಲೇಪ

ಚಿನ್ನದ್ ನೀರ್ನಲ್ ಕೊಟ್ಟಂಗೈತೆ

ನನ್ ಪುಟ್ನಂಜೀ ರೂಪ !

 

ಅಮಾಸೇಲಿ ಅತ್ತಿಸ್ದಂಗೆ

ಒಂದ್ ಅತ್ ನೂರ್ ಮತಾಪ

ಬೆಳಗಾಗ್ತೈತೆ ಕಂಡ್ರೆ ನಂಗೆ

ನನ್ ಪುಟ್ನಂಜೀ ರೂಪ !

 

ಔಸ್ದೀಗ್ ಇಂಕ್ರ ಬೇಕಂದ್ರೂನೆ

ಔಳ್ ತಾವ್ ಇಲ್ಲ ಕೋಪ !

ಅದಕೆ ಅಷ್ಟೊಂದ್ ಚೆಂದಾಗೈತೆ

ನನ್ ಪುಟ್ನಂಜೀ ರೂಪ !

 

ನನಗೇನಾರ ಕೋಪ ಬಂದ್ರೆ

ನಂ ನಂ ಪ್ರೀತಿ ನೆಪ್ಪ

ಕರಕೊಂಡ್ ಬಂದಿ ಕೋಪಾನ್ ಇಕ್ತೈತ್

ನನ್ ಪುಟ್ನಂಜೀ ರೂಪ !

 

ಬಟ್ಟೀ ಕಪ್ಪೀನ್ ತೊಳಿಯಾಕ್ ನಾವು

ಯುಂಗಾಕ್ತೀವಿ ಸೋಪ

ಮನಸಿನ್ ಕೆಟ್ ಬಾವನೇಗೊಳ್ಗಂಗೆ

ನನ್ ಪುಟ್ನಂಜೀ ರೂಪ !

 

ದೇವರ್ ತಾಕ್ ನಾನ್ ಒಯ್ಯಾಕಿಲ್ಲ

ಅಣ್ಣು ಕಾಯಿ ದೂಪ

ದೇವರ್ಗ್ ಅಣ್ ಕಾಯಿ ದೂಪ ಎಲ್ಲಾ

ನನ್ ಪುಟ್ನಂಜೀ ರೂಪ !

 

ಸಿಡಿಯೋ ಮದ್ದಿನ್ ಸುಟ್ಟಾಕ್ದಂಗೆ

ಮಡಗಿದ್ದೀನ್ ಕೇಪ -

ನನ್ ತಾಪತ್ರೇನ್ ಉಡಾಯ್ಸತೈತೆ

ನನ್ ಪುಟ್ನಂಜೀ ರೂಪ !

 

ಚಿನ್ನದ್ ಬರಣೀಲ್ ತುಂಬಿಟ್ಟಂಗೆ

ಆಲು ಸಕ್ರೆ ತುಪ್ಪ -

ಒಳ್ಳೆ ಗುಣಗೊಳ್ನ್ ಒಳಗಿಟ್ಟೈತೆ

ನನ್ ಪುಟ್ನಂಜೀ ರೂಪ !

 

ಪುಟ್ನಂಜೀನ ಕೈ ಇಡದೋನು

ನೀನೆ ಭಲೆ ! ಭೂಪ !

ಅಂತ ನಂಗೆ ಬೆನ್ ತಟ್ತೈತೆ

ನನ್ ಪುಟ್ನಂಜೀ ರೂಪ !

 

ದೇವಸ್ತಾನ್ ದಾಗ ಎಂಗಿರತೈತೆ

ಚಿನ್ನದ್ ನಂದಾದೀಪ

ಅಂಗ್ ನನ್ ಅಟ್ಟೀನ್ ಬೆಳಗಿಸ್ತೈತೆ 

ನನ್ ಪುಟ್ನಂಜೀ ರೂಪ !

 

ಇದನ್ ಕೇಳ್ದೋರ್ ಯಾರಾರ್ ಅಯ್ಯೊ

ಇವನ್ ಒಬ್ ಉಚ್ಚ ! ಪಾಪ !

ಅಂದೋರ್ಗ್ ‘ಅಯ್ಯೋ ಪಾಪಾಂತೈತೆ

ನನ್ ಪುಟ್ನಂಜೀ ರೂಪ !

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)