‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೪) - ವಿನಾಯಕ

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೪) - ವಿನಾಯಕ

‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ ೧೯೦೯ರ ಆಗಸ್ಟ್ ೯ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್  ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು.

ಉನ್ನತ ಶಿಕ್ಷಣ ಪಡೆದು ವಿದೇಶದಿಂದ ಬಂದ ಮೇಲೆ ಸಾಂಗ್ಲಿಯ ವಿಲ್ಲಿಂಗ್‍ಟನ್ ಕಾಲೇಜಿನಲ್ಲಿ, ಅನಂತರ ಕೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ (೧೯೫೨) ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ (೧೯೬೬) ಗಳಾಗಿ ಮತ್ತು ಸಿಮ್ಲಾದ ಇನ್ಸ್ಟಿಟ್ಯೂಟ್ ಆಫ್ ಸ್ಟಡೀಸ್ ನಿರ್ದೇಶಕ (೧೯೭೦) ಆಗಿ ಕಾರ್ಯ ನಿರ್ವಹಿಸಿದ್ದರು.

ಆಂಧ್ರದ ಪುಟ್ಟಪರ್ತಿಯ ಸತ್ಯಸಾಯಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಗೋಕಾಕರು, ಪಿ. ಇ. ಎನ್. ಅಧಿವೇಶನಕ್ಕೆ ಜಪಾನಿಗೆ ತೆರಳಿದರು. ಬೆಲ್ಜಿಯಂನಲ್ಲಿ ಕವಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಜ್ಞಾನಪೀಠ ಪ್ರಶಸ್ತಿಯೂ ಸೇರಿದಂತೆ ಗೋಕಾಕರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ (೧೯೫೮), ಅಮೆರಿಕಾದ ಫೆಸಿಫಿಕ್ ವಿಶ್ವವಿದ್ಯಾಲಯ, ಕರ್ನಾಟಕ, ಮೈಸೂರು, ಬೆಂಗಳೂರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಗಳನ್ನು ನೀಡಿವೆ. ಪರಿಷತ್ತು ಬಳ್ಳಾರಿಯಲ್ಲಿ ನಡೆದ 40ನೇ ಕನ್ನಡ ಸಾಹಿತ್ಯ ಸಮ್ಮೇಳನ (೧೯೫೮) ಅಧ್ಯಕ್ಷ ಪದವಿಗೆ ಆಯ್ಕೆ ಮಾಡಿ ಗೌರವಿಸಿದೆ. ದ್ಯಾವಾ ಪೃಥಿವಿ ಖಂಡಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಭಾಷಾ ಆಯೋಗದ ಅಧ್ಯಕ್ಷರಾಗಿ ಸಲ್ಲಿಸಿದ ಗೋಕಾಕ ವರದಿ ಕರ್ನಾಟಕದಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿತು ಅರವಿಂದ ಭಕ್ತರೂ, ಬೇಂದ್ರೆ ಆರಾಧಕರೂ ಆಗಿದ್ದ ಗೋಕಾಕರು ೧೯೯೨ರ ಏಪ್ರಿಲ್ ೨೮ರಂದು ಮುಂಬಯಿಯಲ್ಲಿ ನಿಧನರಾದರು

ಸಮರಸವೇ ಜೀವನ (ಇಜ್ಜೋಡು) ಬೃಹತ್ ಕಾದಂಬರಿ, ನವ್ಯತೆ ಹಾಗೂ ಕಾವ್ಯ ಜೀವನ, ವಿಶ್ವಮಾನವ ದೃಷ್ಟಿ, ಸೌಂದರ್ಯಮೀಮಾಂಸೆ, ಆಂಗ್ಲ ಸಾಹಿತ್ಯಕ್ಕೆ ನೀಡಿದ ಸ್ಫೂರ್ತಿ ಇತ್ಯಾದಿ ವಿಮರ್ಶಾಗ್ರಂಥಗಳು, ಜನನಾಯಕ, ವಿಮರ್ಶಕ ವೈದ್ಯ, ಯುಗಾಂತರ, ಮುಂತಾದ ನಾಟಕಗಳು ಇವರಿಂದ ರಚಿತವಾಗಿವೆ.

ಕೃತಿಗಳು: ಕಲೋಪಾಸಕ, ಪಯಣ, ತ್ರಿವಿಕ್ರಮರ ಅಕಾಶಗಂಗೆ, ಅಭ್ಯುದಯ, ವಿನಾಯಕರ ಸುನೀತಗಳು, ನವ್ಯ ಕವಿತಗಳು, ಉಗಮ, ದ್ಯಾವಪೃಥಿವೀ,ಊರ್ಣನಾಭ, ಕಾಶ್ಮೀರ, ಚಿಂತನ, ಇಂದಲ್ಲ ನಾಳೆ, ತ್ರಿಶಂಕುವಿನ ಪ್ರಜ್ಞಾ ಪ್ರಭಾತ, ಪುಣ್ಯಭೂಮಿ, ಬಾಳದೇಗುಲದಲ್ಲಿ, ಸಮುದ್ರಗೀತೆಗಳು, ಭಾವರಾಗ, ಹಿಗ್ಗು, ಸಿಮ್ಲಾಸಿಂಫನಿ,ಭಾಗವತ ನಿಮಿಷಗಳು, ಕೊನೆಯ ದಿನ, ಸೆಳೆವು, ಸಸ್ಯ ಸೃಷ್ಟಿ ಪಾರಿಜಾತದಡಿಯಲ್ಲಿ (ಕವನ ಸಂಕಲನಗಳು) ಭಾರತ ಸಿಂಧು ರಶ್ಮಿ (ಮಹಾಕಾವ್ಯ) ನವಧ್ವನಿ (ಸಂಪಾದನೆ) ಜನನಾಯಕ, ಯುಗಾಂತರ, ವಿಮರ್ಶಕ ವೈದ್ಯ, ಮುನಿದ ಮಾರಿ (ನಾಟಕಗಳು) ಚೆಲುವಿನ ನಿಲುವು, ಜೀವನ ಪಾಠಗಳು (ಪ್ರಭಂದ) ಸಮರಸವೇ ಜೀವನ (ಕಾದಂಬರಿ) ಕವಿಕಾವ್ಯ ಮಹೋನ್ನತಿ, ನವ್ಯತೆ ಹಾಗು ಕಾವ್ಯ ಜೀವನ, ಸಾಹಿತ್ಯದಲ್ಲಿ ಪ್ರಗತಿ, ಇಂದಿನ ಕನ್ನಡ ಕಾವ್ಯದ ಗೊತ್ತು ಗುರಿಗಳು, ಕಲೆಯ ನೆಲೆ (ವಿಮರ್ಶೆಗಳು) ಸಮುದ್ರದೀಚೆಯಿಂದ, ಪಯಣಿಗ (ಪ್ರವಾಸ ಕಥನ).

‘ವಿನಾಯಕ' ಇವರ ಎರಡು ಕವನಗಳು ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿವೆ. ಒಂದನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಮತ್ತೊಂದು ಕವನವನ್ನು ಇಲ್ಲಿ ಪ್ರಕಟ ಮಾಡಲಾಗಿದೆ.

ಸಮರ್ಪಣೆ

ಸರಸತಿಯು ಕರುಣೆಯಿಂದೆನಗಿತ್ತ ಮುರಲಿಯನು ನುಡಿಸಿರಲು ರಾಗವಾಗಿ

ತುಳುಕಿರುವ ಗಾನದ ವಿತಾನದಲಿ ಮೂಡಿತ್ತು ನನ್ನಿರವು ಯೋಗವಾಗಿ, 

ವಿಶ್ವಮೋಹಿನಿ ತೋರಿದಂಥ ಮಾಣಿಕ ಮುತ್ತುಗಳನು ಪರಿಕಿರಲು ನಡೆದು

ಒರೆದು ನೋಡಿದೆ ನನ್ನ ತಿಳಿವೆಂಬ ಚೆನ್ನವನ್ನೆಸೆಯಲದು ಕಾಂತಿವಡೆದು.

ಶಿಶುವಿನೆಳೆನೋಟದಲ್ಲಿಂಬುಗೊಳ್ಳುತ ಕೊನೆಗೆ ಮುನಿವರರ ದೃಷ್ಟಿಯಲ್ಲಿ

ತುಂಬಿ ಹೊಳೆಯುತಿಹ ಸೆಳೆಮಿಂಚುಗಳನಾಡಿಸಿದೆ ನಿನ್ನ ಮೃತವೃಷ್ಟಿಯಲ್ಲಿ

ಘನರ ಚಾರಣನೆಂದು ಲೇಖನಿಯ ಕೆಳಗಿಡಲು ನಿಜದಯಾಘನನ ಕಂಡೆ.

ಸಂಕ್ರಾಂತಿ ಪುರುಷರನು ಗೀತಿಸುತ ವಿರಮಿಸಲು ಕ್ರಾಂತಿದರ್ಶನವನುಂಡೆ

ನಿನ್ನ ಆಶೀರ್ವಚನವಹುದೆನ್ನ ಚೆಂದಿಗೆಯು; ಜೀವಬಿಂದಿಗೆಯ ತುಂಬಿ, 

ನಿಂದೆ ಶ್ರಮಣೋತ್ತಮನೆ ! ಬಂದು ಶ್ರಾಣದಂತೆ . ನೀನೆನ್ನ ಕಣ್ಣಗೊಂಬಿ.

 

ಬಾಳ ದೇಗುಲದಲ್ಲಿ ಕೈ ಮುಗಿದು ನಿಂತಿದ್ದೆ ಇರವಿಗರಿವಾಗಲೆಂದು,

ಕಂಡೆ ಮಾನವ ಕುಲನೆ ಕಡಲಿನಂತೈತಂದುದನು ಬಾಳಿಗೆರಲೆಂದು

ಜನನ-ಮರಣಕೆ ನೊಂದು ಸಂಸಾರವೊಡ್ಡಿರುವ ತಾಪತ್ರಯಗಳಿಗೆ ಬೆಂದು,

ಕುಲಕೆ ಕುಲವೇ ಮುಂದುಗಾಣದೆರೆ ಮೊರೆಯಿಟ್ಟಿತಿದರಿಂದ ಮುಕ್ತಿಯೆಂದು !

ದೇಗುಲದ ಪ್ರಕಾರವೆನುಗೆ ಹೊರತಾಗಿರಲು ದೈವತವ ಕಾಣ್ಣುದೆಂತು?

ಉದರವು ಬಕಾಸುರನ ತೆರದಿ ಬಾಯ್ಬಿಡುತಿರಲು ಮಿಕ್ಕುದನು ನೆನೆವುದೆಂತು ?

ಕಂಡರೂ ಕಾಣದೊಲು ಸೋಗಿನಲಿ ಗುಂಗಿನಲಿ ಗರ್ಭಮಂದಿರದೊಳಿದ್ದು

ಬಾಲ್ ಬರಳು ಹೊರಗಿಲ್ಲಿ, ಬುವಿಯ ವಿಪರೀತಗಳಿಗವಳ ಬರವೊಂದೆ ಮದ್ದು

ಬಾಳಾದರೂ ಬರಲಿ ; ನಾವಾದರೂ ನಿಲಲಿ ಬಾಳ ಬೆಳಿಗೊಡೆಯ ಕೆಳಗೆ ;

ಬಾಳ ಹೃದಯದಲಾವು ; ಇಲ್ಲ ಬಾಳಿರೆಲೆಮ್ಮ ಹೃತ್ ಚಿತ್ತದೊಳಗೆ ಒಳಗೆ.

 

ಇಂತು ಪ್ರಾರ್ಥಿಸಿ ನಿಂತೆ ಲೋಕದಾರ್ತಸ್ವರವು ತುಂಬಿರಲು ಕರ್ಣಗಳನು

ಆಗ ಜನಸಂದಣಿಯ ನಡುವೆ ಕಂಡೆನು ಸುಳಿಯುತಿಹ ವಿವಿಧ ವರ್ಣಗಳನು

ಮಾದರಿಯ ಮಾನವರು ತಮ್ಮಾಟಗಳ ಹೂಡಿ ನಿಂತಿಹರು ಗುಡಿಯ ಮುಂದೆ;

ಅವರ ನಾಗಸ್ವರದ ನಲುಮೆಯಿಂದಾಲಿಸಲು ಕೋಟಿ ಮಾನವರು ಹಿಂದೆ.

ನಾವ್ ಬಳಿಗೆ ಸುಳಿದಂತೆ ಗರ್ಭಮಂದಿರದಲ್ಲಿ ಚೆಳಕು ಕಳೆಯೇರುತಿಹದು.

ನಾವು ಶುಚಿಯಾದಂತೆ ಮಾಯೆ ಮರೆಯಾಗುತ್ತ ತಾಯ ಮೊಗ ತೋರುತಿಹುದು.

ಕಣ್ಣಿನಳವಿದ್ದಂತೆ ಮೂರುತಿಯ ಸುಳಿವಿಹುದು ; ಕಂಗಳಿರೆ ಭಿನ್ನ ಭಿನ್ನ

ದರ್ಶನವು ಭಿನ್ನವಿದೆ ; ಭಿನ್ನವಿರಲೇನಂತೆ? ಅವರವರಿಗದುವೆ ಚಿನ್ನ.

ಎಲ್ಲ ದರ್ಶನಗಳಾ ಸಾರಸಂಗ್ರಹವೆ ನಾನರ್ಚಿಸುವ ಸತ್ಯವೆಂದೆ.

ಈ ಯುಗದ, ಈ ಜಗದ ಕಾಣ್ಕೆಗಳ ಮೊಗಸಾಲೆ ಕವನ ಮಂದಿರವೆಂದೆ.

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)