‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೫) - ಪಂಜೆ ಮಂಗೇಶರಾವ್
ಪಂಜೆ ಮಂಗೇಶರಾಯರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ೧೮೭೪ ಫೆಬ್ರುವರಿ ೨೨ ರಂದು ಜನಿಸಿದರು. ತಾಯಿ ಸೀತಮ್ಮ. ತಂದೆ ರಾಮಪಯ್ಯ. ಬಂಟ್ವಾಳದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮಂಗಳೂರಿನಲ್ಲಿ ಇಂಟರ್ ಮೀಡಿಯೇಟ್ ಶಿಕ್ಷಣ ಪಡೆದರು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಹರಟೇಮಲ್ಲ, ರಾಮಪಂ, ಕವಿಶಿಷ್ಯ ಮುಂತಾದ ಹೆಸರುಗಳಲ್ಲಿ ಬರಹಗಳನ್ನು ರಚಿಸಿದ್ದರು. ಇವರು ಬರೆದ ಹುತ್ತರಿ ಹಾಡು ಕೊಡಗಿನ ನಾಡಗೀತೆಯಾಯಿತು.
ಮಕ್ಕಳ ಸಾಹಿತ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದ ಇವರು ಬಾಲ ಸಾಹಿತ್ಯಮಂಡಲ ಸಂಸ್ಥೆಯನ್ನು ರಚಿಸಿ ಬಾಲಸಾಹಿತ್ಯ ಪ್ರಕಟಣೆಯಲ್ಲಿ ತೊಡಗಿದರು. ಮಂಗೇಶರಾಯರ ಪ್ರಮುಖ ಕೃತಿಗಳೆಂದರೆ ಪಂಚಕಜ್ಜಾಯ, ತೂಗುವ ತೊಟ್ಟಿಲು, ಜೋಗುಳ, ಸಂಜೆಯ ಹಾಡು, ಆಡಿನಾಮರಿ, ಹೊಗೆಯ ಬಂಡಿ ಮುಂತಾದ ಉಕ್ತಿಗೀತೆಗಳು. ಚಮದ್ರೋದಯ, ಭೀಷ್ಮ, ನಿರ್‍ಯಾಣ, ಕಮಲ, ಲಕ್ಷ್ಮೀಶಕವಿ ಹಳಗನ್ನಡ ಕಾವ್ಯಗಳು, ಹುತ್ತರಿಹಾಡು, ತೆಂಕಣಗಾಳಿಯಾಟ (ಕವನ ಸಂಕಲನ), ಐತಿಹಾಸಿಕ ಕಥಾವಳಿ, ಕೋಟಿ ಚನ್ನಯ, ಅಜ್ಜಿ ಸಾಕಿದ ಮಗ, ಕೋಟಿ ಚೆನ್ನಯ, ವೈದ್ಯರ ಒಗ್ಗರಣೆ (ಹಾಸ್ಯ ಪ್ರಧಾನ ಕತೆ)ಶಬ್ದಮಣಿ ದರ್ಪಣ (ಸಂಪಾದಿತ ಕೃತಿ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರು ರಾಯಚೂರಿನಲ್ಲಿ ನಡೆದ ೨೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಇವರು ೧೯೩೭ ಅಕ್ಟೋಬರ್ ೨೪ ರಂದು ನಿಧನರಾದರು.
ಪಂಜೆ ಮಂಗೇಶರಾವ್ ಅವರ ಎರಡು ಕವನಗಳು ಹೊಸಗನ್ನಡ ಕಾವ್ಯಶ್ರೀ ಕೃತಿಯಲ್ಲಿ ಪ್ರಕಟವಾಗಿವೆ. ಈಗಾಗಲೇ ಒಂದನ್ನು ಪ್ರಕಟಿಸಲಾಗಿದ್ದು, ಇನ್ನೊಂದು ಕವನವನ್ನು ಇಲ್ಲಿ ಪ್ರಕಟಿಸಲಾಗಿದೆ. ಓದಿ ಅಭಿಪ್ರಾಯ ತಿಳಿಸಿ.
ತೆಂಕಣ ಗಾಳಿಯಾಟ
ಬರಲಿದೆ ! ಅಹಹಾ ! ದೂರದಿ ಬರಲಿದೆ -
ಬುಸುಗುಟ್ಟುವ ಪಾತಾಳದ ಹಾವು ?
ಹಸಿವಿನ ಭೂತವು ಕೂಯುವ ಕೂವೊ?
ಹೊಸತಿದು ಕಾಲನ ಕೋಣನ -ಓವೊ !
ಉಸುರಿನ ಸುಯ್ಯೋ ? ಸೂಸೂಕರಿಸುತ,
ಬರುವುದು ! ಬರಬರ ಭರದಲಿ ಬರುವುದು -
ಬೊಬ್ಬೆಯ ಹಬ್ಬಿಸಿ, ಒಂದೇ ಬಾರಿಗೆ
ಉಬ್ಬರ ಎಬ್ಬಿಸಿ ಕಡಲಿನ ನೀರಿಗೆ,
ಬೊಬ್ಬುಳಿ ತೆರೆಯನು ದಡಕ್ಕೆ ಹೊಮ್ಮಿಸಿ,
ಅಬ್ಬರದಲಿ ಭೋರ್ ಬೋರೆನೆ ಗುಮ್ಮಿಸಿ,
ಬರುತಿದೆ ! ಮೈತೋರದೆ ಬರುತಿದೆ ! ಆದೆ -
ನಡು ಮುರಿಯುತ ನಗನಾವೆಗೆ, ಕೂವೆಗೆ
ಉಡಿಸಿದ ಹಾಯಿಯ ಹರಿಯುತ ಬಿರಿಯುತ,
ಹಡಗನು ಕೀಲಿಸಿ, ತುಮುರನು ತೇಲಿಸಿ,
ದಡದಲಿ ಝೂಡಿಸಿ, ದೋಣಿಯನಾಡಿಸಿ,
ಇದೆ ! ಇದೆ ! ಬರುತಿದೆ ! ಇದೆ ! ಇದೆ ! ಬರುತಿದೆ _
ಹಕ್ಕಿಯ ಕಣ್ಣಿಗೆ ಧೂಳಿನ ಕಾಡಿಗೆ
ಇಕ್ಕುತ ಹೊಲದೆತ್ತಿಗೆ ದನಕಾಡಿಗೆ
ಫಕ್ಕನೆ ಹಟ್ಟಿಗೆ ಅಟ್ಟಿಸಿ, ಕಾಡಿಗೆ
ಸಿಕ್ಕಿದ ಕಿಚ್ಚನು ಊದಲು ಹಾರುತ,
ಬರುತಿದೆ ! ಇದೆ ! ಇದೆ ! ಇದೆ ! ಇದೆ ! ಬರುತಿದೆ !_
ಸಡಲಿಸಿ ಮಡದಿಯರುಡಿಯನು ಮುಡಿಯನು,
ಬಡ ಮುದಕರ ಕೊಡೆಗರಿ ಹರಿದಾಡಿಸಿ,
ಹುಡುಗರ ತಲೆ ತಲೆ ಟೊಪ್ಪಿಯ ಆಟವ
ದಡಬಡನಾಡಿಸಿ ಮನೆ ಮನೆ ತೋಟವ
ಅಡಿ ಮೇಲಾಗಿಸಿ, ತೆಂಗನು ಲಾಗಿಸಿ,
ಅಡಕೆಯ ಬಾಗಿಸಿ, ಪನೆ ಇಬ್ಬಾಗಿಸಿ,
ಬುಡದೂಟಾಡಿಸಿ, ತಲೆ ತಾಟಾಡಿಸಿ,
ಗುಡಿಸಲ ಮಾಡನು ಹುಲುಹುಲುಮಾಡಿಸಿ,
ಬಂತೈ ! ಬಂತೈ ! ಇದೆ ! ಇದೆ ! ಬಂತೈ !-
ಗಿಡ ಗಿಡದಿಂ-ಚೆಲುಗೊಂಚಲು ಮಿಂಚಲು
ಮಿಡಿಯನು ಹಣ್ಣನು, ಉದುರಿಸಿ ಕೆದರಿಸಿ,
ಎಡದಲಿ ಬಲದಲಿ ಕೆಲದಲಿ ನೆಲದಲಿ,
ಪಡುವಣ ಮೋಡವ ಬೆಟ್ಟಕೆ ಗಟ್ಟಿಕೆ
ಹೊಡೆದಟ್ಟುತ, ಕೋಲ್ ಮಿಂಚನು ಮಿರುಗಿಸಿ,
ಗುಡುಗನು ಗುಡುಗಿಸಿ, ನೆಲವನು ನಡುಗಿಸಿ,
ಸಿಡಿಲನು ತಾಳೆಗೆ ಬಾಳೆಗೆ ಎರಗಿಸಿ,
ಜಡಿಮಳೆ ಸುರಿವೋಲ್, ಬಿರುಮಳೆ ಬರುವೋಲ್,
ಕುಡಿ ನೀರನು ಒಣಗಿದ ನೆಲ ಕರೆವೋಲ್
ಬಂತೈ ಬೀಸುತ ! ಬೀಸುತ ಬಂತೈ !
ತೆಂಕಣ ಗಾಳಿಯು ಕೊಂಕಣ ಸೀಮೆಗೆ
ಬಂತೈ ! ಬಂತೈ ! ಬಂತೈ ! ಬಂತೈ !
(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)